"ವೀರಪ್ಪನ್ ಕಿಡ್ನಾಪ್‌ನಿಂದ ಪ್ರತಿಯೊಂದು ಡೀಲ್ ಮಾಡಿದ್ದು ನಾನೇ"; ಸಂಚಲನ ಸೃಷ್ಟಿಸಿದ ಪುನೀತ್ ಆಪ್ತ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಿಂದ ಇನ್ನೂ ಅವರ ಅಭಿಮಾನಿಗಳು ಹೊರ ಬಂದಿಲ್ಲ. ಇನ್ನು ಅವರೊಂದಿಗೆ ಇದ್ದವರ ಪಾಡು ಏನಾಗಿರಬಹುದು? ಊಹಿಸುವುದಕ್ಕೂ ಕಷ್ಟ. ಅಪ್ಪು ಆರಂಭದ ದಿನಗಳಿಂದ ಹೆಚ್ಚು ಕಡಿಮೆ ಕೊನೆಯ ದಿನಗಳವರೆಗೂ ಜೊತೆಯಲ್ಲಿ ಇದ್ದವರು ಎನ್‌ಎಸ್ ರಾಜ್‌ಕುಮಾರ್. ಪುನೀತ್ ಒಪ್ಪಿಕೊಂಡ ಪ್ರತಿಯೊಂದು ಸಿನಿಮಾದ ಹಿಂದೆನೂ ಅವರೇ ಇರುತ್ತಿದ್ದರು.
ಯಾರೇ ನಿರ್ಮಾಪಕರು ಇರಲಿ, ನಿರ್ದೇಶಕರು ಇರಲಿ ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಮಾಡಬೇಕು ಅಂತ ಬಯಸಿದರೆ, ಮೊದಲು ಎನ್‌ಎಸ್ ರಾಜ್‌ಕುಮಾರ್ ಅವರನ್ನೇ ಸಂಪರ್ಕ ಮಾಡಬೇಕು. ಅಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ, ಅಲ್ಲಿಂದ ಪುನೀತ್ ಬಳಿಗೆ ಬರುತ್ತಿತ್ತು. ಇದು ಕಥೆಯಷ್ಟೇ ಅಲ್ಲ, ವ್ಯವಹಾರದ ವಿಷಯದಲ್ಲೂ ಕೂಡ ಇವರೇ ಮುಂದಿರುತ್ತಿದ್ದರು.

ಹೀಗಿದ್ದವರು ಪುನೀತ್ ರಾಜ್‌ಕುಮಾರ್ ಅವರ ಕೊನೆಯ ದಿನಗಳಲ್ಲಿ ಅವರಿಂದ ದೂರ ಆಗಿದ್ದರು. ಅಪ್ಪು ಜೊತೆಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅಷ್ಟಕ್ಕೂ ಇಬ್ಬರ ನಡುವೆ ಏನಾಯ್ತು? ಅನ್ನೋದು ಸಿನಿಮಾ ಮಂದಿಗೂ ಗೊತ್ತಿಲ್ಲ. ಈಗ ಪುನೀತ್ ಜೊತೆ ಕಳೆದ ನೆನಪುಗಳನ್ನೆಲ್ಲ ಪುಸ್ತಕ ರೂಪದಲ್ಲಿ ಹೊರತರುವುದಕ್ಕೆ ಹೊರಟಿದ್ದಾರೆ. ಈ ಸಂಬಂಧ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರೊಂದಿಗೆ ಪೋನ್ ಸಂಭಾಷಣೆಯ ಆಡಿಯೋ ತುಣುಕು ಬಿಯಾಂಡ್ ಲಿಮಿಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಆಗುತ್ತಿದೆ. ಆ ಆಡಿಯೋದಲ್ಲಿ ಪುನೀತ್ ಹಾಗೂ ತಮ್ಮ ಸಿನಿಮಾ ಜರ್ನಿ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರ ಹಾಕಿದ್ದಾರೆ.
ವೀರಪ್ಪನ್ ಕಿಡ್ನಾಪ್ ಡೀಲ್ ಮಾಡಿದ್ದು ನಾನೇ
ಎನ್‌ಎಸ್ ರಾಜಕುಮಾರ್ ಅವರೊಂದಿಗೆ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಸಂಭಾಷಣೆಯಲ್ಲಿ ವೀರಪ್ಪನ್ ಕಿಡ್ನಾಪ್ ಹಾಗೂ ಡೀಲ್ ಬಗ್ಗೆ ಮಾತಾಡಿದ್ದಾರೆ. "ಪುನೀತ್ ಅವರೊಂದಿಗೆ ನಾನು ಕಳೆದ ಪ್ರತಿಯೊಂದು ಕ್ಷಣವೂ ನನ್ನ ಜೊತೇನೆ ಇರಲಿ. ವೀರಪ್ಪನ್ ಕಿಡ್ನಾಪ್‌ಯಿಂದ ಹಿಡಿದು ಪ್ರತಿಯೊಂದನ್ನು ನಾನೇ ಡೀಲ್ ಮಾಡಿದ್ದೆ. ಇಲ್ಲಿವರೆಗೂ ನಾನು ಎಲ್ಲಾ ಬಾಯಿಬಿಟ್ಟಿಲ್ಲ. ಅದು ಫ್ಯಾಮಿಲಿಯವರಿಗೂ ಗೊತ್ತು. ಅದು ಶಿವಣ್ಣನಿಗೆ ಗೊತ್ತು. ರಾಘಣ್ಣನಿಗೆ ಗೊತ್ತು. ಈ ಮನೆಯ ಅಣ್ಣ ತಿಂದಿದ್ದೀನಿ. ನಾನು ಈ ಮಟ್ಟಕ್ಕೆ ಬೆಳೆದ್ದೀನಿ ಅಂದರೆ, ಅದು ರಾಜ್‌ಕುಮಾರ್ ಫ್ಯಾಮಿಲಿಯ ನೆರಳಿನಿಂದ ಅಷ್ಟೇ." ಎಂದು ಹೇಳಿದ್ದಾರೆ.
"ಪುನೀತ್‌ರನ್ನೇ ನಾನೇ ಬಿಟ್ಟು ಬಂದೆ"
ಪುನೀತ್ ರಾಜ್‌ಕುಮಾರ್ ಒಪ್ಪಿಕೊಂಡ ಪ್ರತಿಯೊಂದು ಸಿನಿಮಾದ ಹಿಂದೆ ಎನ್‌ಎಸ್ ರಾಜ್‌ಕುಮಾರ್ ಇದ್ದರು. ಆದರೆ, ಕೊನೆಯ ದಿನಗಳಲ್ಲಿ ಅವರಿಂದ ಹೊರ ಬಂದಿದ್ದರು. ಆ ಬಗ್ಗೆನೂ ಮಾತಾಡಿದ್ದಾರೆ. "ನನ್ನ ಹಾಗೂ ಪುನೀತ್ ಅವರ ಸಂಬಂಧ ಹೇಗಿತ್ತು ಅನ್ನೋದು ನನಗೆ ಚೆನ್ನಾಗಿ ಗೊತ್ತು. ಕೊನೆ ಕೊನೆಯಲ್ಲಿ ಮಾತ್ರ ನಾನು ಅವರನ್ನು ಬಿಟ್ಟು ಬಂದಿದ್ದೇನೆ. ಅದು ನಾನಾಗಿ ಅವರನ್ನು ಬಿಟ್ಟು ಬಂದಿದ್ದೇನೆ. ಪುನೀತ್ ಯಾವತ್ತೂ ನನ್ನನ್ನು ಬಿಟ್ಟು ಹೋಗುವಂತೆ ಹೇಳಿಲ್ಲ" ಎಂದು ಹೇಳಿದ್ದಾರೆ.

ಎಲ್ಲಾ ನಿಜವನ್ನೇ ಬರೆದಿದ್ದೇನೆ?
ಹಾಗೇ ತನ್ನ ಹಾಗೂ ಪುನೀತ್ ಸಂಬಂಧದ ಬಗ್ಗೆ ನಿಜವನ್ನೇ ಬರೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ಈ ಪುಸ್ತಕದಲ್ಲಿ ನನ್ನ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸಂಬಂಧ ಹೇಗಿತ್ತು? ನಮ್ಮಿಬ್ಬರ ಭೇಟಿ, ನಮ್ಮಿಬ್ಬರ ಜರ್ನಿ.. ಎಲ್ಲವೂ ನಿಜವನ್ನೇ ಬರೆದಿದ್ದೇನೆ. ಈಗಾಗಲೇ ಪುಸ್ತಕ ಬರೆಯುವುದಕ್ಕೆ ಶುರು ಮಾಡಿದ್ದೇವೆ. ಇನ್ನೂ ಪ್ರಿಂಟ್ ಆಗಿಲ್ಲ. ಚೆನ್ನೈನ ಪತ್ರಕರ್ತರೊಬ್ಬರು ಬರೆಯುತ್ತಿದ್ದಾರೆ. ನನಗೆ ಈ ಪುಸ್ತಕವನ್ನು ಪ್ರಿಂಟ್ ಮಾಡಲಾ ಬೇಡ್ವಾ? ಅನ್ನೋ ಗೊಂದಲವಿದೆ. ಯಾಕಂದ್ರೆ ಎಲ್ಲವೂ ಸತ್ಯವೇ ಇರುತ್ತದೆ. ವಿವಾದ ಏನೂ ಆಗುವುದಿಲ್ಲ. ಯಾಕಂದ್ರೆ, ಎಲ್ಲಾ ಸತ್ಯವನ್ನೇ ಹೇಳುತ್ತಿದ್ದೇನೆ. ಇನ್ನೊಂದು ಬುಕ್ ಬರುತ್ತಿದೆ. ಆ ಬುಕ್ ಬರುವುದಕ್ಕೆ ಕಾಯುತ್ತಿದ್ದೇನೆ. ಅದು ಬಂದಮೇಲೆ ನಾನು ಈ ಬುಕ್ ಅನ್ನು ಬಿಡೋಣ ಅಂತ ಇದ್ದೀನಿ." ಎಂದಿದ್ದಾರೆ.
ಮೈನಾ ಲಾಸ್ 9 ಎಕರೆ ಸೇಲ್
"ಸದ್ಯಕ್ಕೆ ನಾನು ಏನೂ ಮಾಡುತ್ತಿಲ್ಲ. ಶಿವಣ್ಣನ ಹತ್ತಿರವೂ ಹೋಗುತ್ತಿಲ್ಲ. ನನ್ನ ಹತ್ತಿರ ನರ್ತಕಿ ಹಾಗೂ ಸ್ವಪ್ನಾ ಚಿತ್ರಮಂದಿರಗಳ ಲೀಸ್ ಇದೆ. ಏನೂ ಮಾಡುತ್ತಿಲ್ಲ. ಥಿಯೇಟರ್‌ಗಳನ್ನು ರನ್ ಮಾಡಿಕೊಂಡು ನನ್ನ ತೋಟ ಉಂಟು, ನಾನುಂಟು ಅಷ್ಟೇ ಅಂತ ಇದ್ದೀನಿ. ಆ ಟೈಮ್‌ನಲ್ಲಿ ಮಾಡಿದ್ದು, ಈಗ ಸಾಧ್ಯವೇ ಇರುತ್ತಿರಲಿಲ್ಲ. ನನ್ನ ಹತ್ತಿರ 20 ಎಕರೆ ಇತ್ತು. ಮೈನಾ ಲಾಸ್ ಆಗಿದ್ದರಿಂದ 9 ಎಕರೆ ಮಾಡಿಬಿಟ್ಟೆ. ಮೈನಾದಲ್ಲಿ ನನಗೆ ಒಂದೂವರೆ ಕೋಟಿ ಲಾಸ್ ಆಯ್ತು. ಅದಕ್ಕೆ ಪುನೀತ್ ನನಗೆ ಮೈತ್ರಿಗೆ ಪ್ರೀ ಕಾಲ್‌ಶೀಟ್ ಕೊಟ್ಟರು. ಅದೆಲ್ಲವೂ ನನ್ನ ಪುಸ್ತಕದಲ್ಲಿ ಇದೆ." ಎಂದು ಪುಸ್ತಕದಲ್ಲಿ ಏನಿರುತ್ತೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.


Click it and Unblock the Notifications











