ಯುವ ರಾಜ್‌ಕುಮಾರ್ ಹುಟ್ಟುಹಬ್ಬ ಆಚರಿಸಿದ ಪುನೀತ್ ಫ್ಯಾನ್ಸ್: ವಿಶೇಷತೆಯೇನು?
ಪುನೀತ್ ರಾಜ್‌ಕುಮಾರ್ ಅಗಲಿಕೆಯ ಬಳಿಕ ಯುವರಾಜ್‌ಕುಮಾರ್ ಅವರಲ್ಲಿ ಅಪ್ಪುವನ್ನು ಕಾಣುತ್ತಿದ್ದಾರೆ. ಈಗಾಗಲೇ ದೊಡ್ಮನೆ ಕುಟುಂಬದಿಂದ ಯುವರಾಜ್‌ಕುಮಾರ್ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಅಭಿಮಾನಿಗಳೇ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲೂ ಯುವರಾಜ್‌ಕುಮಾರ್ ಕ್ರೇಜ್ ಜೋರಾಗಿಯೇ ಇದೆ.
ದೊಡ್ಮನೆ ಕುಟುಂಬದ ಮತ್ತೊಬ್ಬ ನಟ, ರಾಘವೇಂದ್ರ ರಾಜ್‌ಕುಮಾರ್ ದ್ವಿತೀಯ ಪುತ್ರ ಯುವರಾಜ್‌ಕುಮಾರ್‌ಗೆ ಇಂದು (ಏಪ್ರಿಲ್ 23) ಹುಟ್ಟುಹಬ್ಬ. ಡಾ.ರಾಜ್‌ಕುಮಾರ್ ಜನಿಸಿದ ತಿಂಗಳಿನಲ್ಲೇ, ಅದೂ ಒಂದು ದಿನ ಮುನ್ನವೇ ಜನಿಸಿರುವ ಯುವಗೆ ಪುನೀತ್ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇದೇ ವೇಳೆ ಅಪ್ಪು ಅಭಿಮಾನಿಗಳು ಸಮಾಜಮುಖಿ ಕೆಲಸದ ಮೂಲಕ ಯುವ ರಾಜ್‌ಕುಮಾರ್ ಬರ್ತ್‌ಡೇಯನ್ನು ಆಚರಿಸುತ್ತಿದ್ದಾರೆ.

ಯುವರಾಜ್‌ಕುಮಾರ್ ಯೂತ್ ಐಕಾನ್ ಪಟ್ಟ
ಅಪ್ಪು ಅಗಲಿದ ಬಳಿಕ ಆ ಸ್ಥಾನದಲ್ಲಿ ಯುವರಾಜ್‌ಕುಮಾರ್ ಎಂಟ್ರಿಕೊಡುತ್ತಿದ್ದಾರೆ. ಸಿನಿಮಾದಲ್ಲಿ ಇನ್ನೂ ನಟಿಸುವುದಕ್ಕೂ ಮುನ್ನವೇ ಯುವರಾಜ್‌ಕುಮಾರ್‌ಗೆ ಅಭಿಮಾನಿಗಳೇ ಯೂತ್ ಐಕಾನ್ ಎಂಬ ಪಟ್ಟವನ್ನೂ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಅಭಿಮಾನಿಗಳೇ ಯುವರಾಜ್‌ಕುಮಾರ್‌ಗೆ ಸಿನಿಮಾ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಯುವ ಚೊಚ್ಚಲ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನವೇ ಅಭಿಮಾನಿಗಳ ಬಳಗ ಹೊಂದಿದ್ದಾರೆ.

ವೃದ್ಧಾಶ್ರಮದಲ್ಲಿ ಯುವ ಹುಟ್ಟುಹಬ್ಬ
ಯುವರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಗಳೇ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇಡೀ ವಿವಿಧ ವೃದ್ಧಾಶ್ರಮಗಳಿಗೆ ತೆರಳಿ ಒಂದು ಹೊತ್ತಿನ ಭೋಜನ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಪ್ರಶಾಂತ್ ಚಕ್ರವರ್ತಿ ನಿರಾಶ್ರಿತರ ಆಶ್ರಮದಲ್ಲಿ ಬೆಳಗ್ಗೆಯ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಲಯನ್ ಜಯರಾಜ್ ನಾಯ್ಡು ವೃದ್ಧಾಶ್ರಾಮದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆ, ಶಂಕರಮಠದ ಬಾಂಧವ್ಯ ಸೇವಾಶ್ರಮದಲ್ಲಿ ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಯುವರಾಜ್‌ಕುಮಾರ್ ಬರ್ತ್‌ಡೇ ಆಚರಣೆ ಇಲ್ಲ
ಅಣ್ಣಾವ್ರ ಕುಟುಂಬ ಪುನೀತ್ ರಾಜ್‌ಕುಮಾರ್ ಅಗಲಿದ ನೋವಿನಲ್ಲಿದೆ. ಈ ಕಾರಣಕ್ಕೆ ಯುವರಾಜ್‌ಕುಮಾರ್ ಈ ವರ್ಷ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ. ಆದರೂ ಅಭಿಮಾನಿಗಳು ತಮ್ಮದೇ ರೀತಿಯಲ್ಲಿ ಯುವ ರಾಜ್‌ಕುಮಾರ್ ಬರ್ತ್‌ಡೇ ಆಚರಿಸುತ್ತಿದ್ದಾರೆ. ಈ ವಿಶೇಷ ದಿನದಂದು ಹೊಸ ಸಿನಿಮಾ ಅನೌನ್ಸ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಚೊಚ್ಚಲ ಸಿನಿಮಾದ ಘೋಷಣೆ ಆಗದೆ ಹೋದರೂ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಒಂದು ಸುಳಿವು ನೀಡಿದ್ದಾರೆ.

ತಮಿಳುನಾಡಿನಲ್ಲೂ ಯುವ ಕ್ರೇಜ್
ಯುವರಾಜ್‌ಕುಮಾರ್ ಕ್ರೇಜ್ ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ. ತಮಿಳುನಾಡಿನಲ್ಲೂ ಇದೆ. ತಮಿಳುನಾಡಿನಲ್ಲಿ ಯುವ ರಾಜ್‌ಕುಮಾರ್ ಅಭಿಮಾನಿಗಳ ಸಂಘ ತಲೆಎತ್ತಿದೆ. ಹೀಗಾಗಿ ಯುವರಾಜ್‌ಕುಮಾರ್ ಮೊದಲ ಸಿನಿಮಾ, ಕನ್ನಡ ಹಾಗೂ ತಮಿಳು ಎರಡು ಭಾಷೆಗಳಲ್ಲಿ ಬಿಡುಗಡೆಯಾಗಬಹುದೆಂದು ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











