'ಅಪ್ಪು' 100 ದಿನಗಳ ಸಂಭ್ರಮದ ವೇಳೆ ಅಣ್ಣಾವ್ರು, ರಜನಿ ಏನು ಹೇಳಿದ್ರು? ಈ ಅಪರೂಪದ ವಿಡಿಯೋ ನೋಡಿ
ಅಣ್ಣಾವ್ರ ಕಿರಿಯ ಮಗ ಪುನೀತ್ ರಾಜ್‌ಕುಮಾರ್ ಹೀರೋ ಆಗಿ ಎಂಟ್ರಿ ಕೊಟ್ಟಿದ್ದ ಚೊಚ್ಚಲ ಸಿನಿಮಾದಲ್ಲಿಯೇ ಪವರ್‌ಸ್ಟಾರ್ ಆಗಿದ್ದರು. 'ಅಪ್ಪು' ಸಿನಿಮಾ ಕನ್ನಡಿಗರ ಮನಗೆದ್ದಿತ್ತು. ದೊಡ್ಮನೆಯ ಮತ್ತೊಂದು ಕುಡಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುವ ಸೂಚನೆ ನೀಡಿತ್ತು. ಸಿನಿಮಾವೇ ಬೇಡ ಅಂತ ದೂರವಿದ್ದ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗಕ್ಕೆ ಪವರ್ ಸ್ಟಾರ್ ಆಗಿದ್ದರು.
ಶಿವಣ್ಣ ನಟಿಸಬೇಕಿದ್ದ ಸಿನಿಮಾ ಪುನೀತ್ ರಾಜ್‌ಕುಮಾರ್ ಪಾಲಾಯ್ತು. ಕನ್ನಡ ಚಿತ್ರರಂಗಕ್ಕೆ 'ಅಪ್ಪು' ಎಂಟ್ರಿನೂ ಆಯ್ತು. ಪುನೀತ್ ರಾಜ್‌ಕುಮಾರ್ ಚಿತ್ರರಂಗಕ್ಕೆ ಹೇಗೆ ಬರಬೇಕು ಅಂತ ಅಣ್ಣಾವ್ರು, ವರದಣ್ಣ, ಪಾರ್ವತಮ್ಮ ರಾಜ್‌ಕುಮಾರ್, ಶಿವಣ್ಣ ನಿರ್ಧರಿದ್ದರೋ ಹಾಗೆನೇ ಪವರ್‌ಫುಲ್ ಎಂಟ್ರಿ ಆಗಿತ್ತು. ಸಿನಿಮಾ 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿತ್ತು. ಇದೇ ಖುಷಿಯಲ್ಲಿ ಒಂದು ಕಾರ್ಯಕ್ರಮವನ್ನು ದೊಡ್ಮೆನೆ ಹಮ್ಮಿಕೊಂಡಿತ್ತು.

ಬೆಂಗಳೂರಿನ ವಸಂತ್ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ 'ಅಪ್ಪು' 100 ದಿನಗಳ ಸಂಭ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ದಕ್ಷಿಣ ಭಾರತದ ದಿಗ್ಗಜರು ಆಗಮಿಸಿದ್ದರು. ಸೂಪರ್‌ಸ್ಟಾರ್ ರಜನಿಕಾಂತ್, ಹಿರಿಯ ನಟಿ ಬಿ.ಸರೋಜಾದೇವಿ, ಜಯಂತಿ ಸೇರಿದಂತೆ ಹಲವು ಮಂದಿ ಗಣ್ಯರು ವಿಶೇಷ ಅಥಿತಿಗಳಾಗಿ ವೇದಿಕೆ ಮೇಲೆ ಇದ್ದರು. ಈ ಅಪರೂಪದ ವಿಡಿಯೋವನ್ನು ಪಿಆರ್‌ಕೆ ಪ್ರೊಡಕ್ಷನ್ ಯುಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ. ಅದರಲ್ಲಿ ಡಾ.ರಾಜ್‌ಕುಮಾರ್, ಸೂಪರ್‌ಸ್ಟಾರ್ ರಜನಿಕಾಂತ್ ಅಪ್ಪು ಬಗ್ಗೆ ಆಡಿದ ಮಾತುಗಳು ಝಲಕ್ ಇವೆ.
ಅಣ್ಣಾವ್ರ ಮತ್ತೊಬ್ಬ ಮಗ ನಾಯಕನಾದ ಚೊಚ್ಚಲ ಚಿತ್ರದಲ್ಲಿಯೇ ಗೆದ್ದಿದ್ದು ಟಾಕ್ ಆಫ್ ದಿ ಟೌನ್ ಆಗಿತ್ತು. ಕನ್ನಡಕ್ಕೆ ಮತ್ತೊಬ್ಬ ಹೀರೋ ಸಿಕ್ಕಿದ ಖುಷಿಯಲ್ಲಿದ್ದರು. ಇನ್ನೊಂದು ಕಡೆ ಅಣ್ಣಾವ್ರ ಅಭಿಮಾನಿಗಳ ಖುಷಿಗಂತೂ ಎಲ್ಲೆಯೇ ಇರಲಿಲ್ಲ. ಹೀಗಾಗಿ ಅಪ್ಪು ಶತದಿನವನ್ನು ಕಂಡ ಸಂಭ್ರಮದಲ್ಲಿ ಅದ್ಧೂರಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ದಿಗ್ಗಜರನ್ನೇ ಅತಿಥಿಗಳಾಗಿ ಕರೆತರಲಾಗಿತ್ತು.
"ಅಪ್ಪು ಚಿತ್ರ ಶತಮಾನೋತ್ಸವ. ಇದು ಬಂದು ಸಿಂಹದ ಮರಿಯಿದು. ಈಗ ತಾನೆ ಎದ್ದಿದೆ. ಘರ್ಜನೆ ಮಾಡುತ್ತಿದೆ. ಇನ್ನು ಏನೇನು ಮಾಡುತ್ತೋ ಅನ್ನೋದನ್ನು ನೋಡಬೇಕು ಅಂತ ಖಂಡಿತವಾಗಿಯೂ ನನಗೆ ಅನಿಸುತ್ತಿದೆ. ಆ ಫೈಟ್ ಏನು? ನಿನ್ನ ತಂದೆಗೆ ಹುಟ್ಟಿದರೆ ಬಿಡಬೇಡ ಹೊಡಿ..ಬಿಡಬೇಡ ಬಿಡಬೇಡ.. ಆ ಸೀನ್ ಅಂತೂ ಸೂಪರ್." ಎಂದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆ, ಆಕ್ಷನ್ ಅನ್ನು ಸೂಪರ್‌ಸ್ಟಾರ್ ರಜನಿಕಾಂತ್ ಅವರೇ ಮೆಚ್ಚಿಕೊಂಡಿದ್ದರು.
ಇನ್ನು ಅಣ್ಣಾವ್ರು ಕೂಡ 'ಅಪ್ಪು' ಸಿನಿಮಾ ಶತ ದಿನೋತ್ಸವ ಕಂಡ ಸಮಯದಲ್ಲಿ ಮಾತಾಡಿದ್ದರು. "ಆನಂದ ಆಗುತ್ತೆ. ರಜನಿಕಾಂತ್ ಅವರು, ವಾಣಿಜ್ಯ ಮಂಡಳಿ ಅಧ್ಯಕ್ಷರು, ಜಯಂತಿಯವರು, ಪದ್ಮಭೂಷಣ ಸರೋಜಾದೇವಿಯವರು ಬಂದು ಈ ಸಮಾರಂಭದಲ್ಲಿ ಪಾಲ್ಗೊಂಡು ಅಪ್ಪು ಅನ್ನು ಆಶೀರ್ವಾದ ಮಾಡಿದ್ದಾರೆ. ಈ ಕಾರ್ಯಕ್ರಮವನ್ನು ಇಷ್ಟು ಅದ್ಧೂರಿಯಾಗಿ ನಡೆಸಿದ್ದಕೆ ತುಂಬಾನೇ ಸಂತೋಷ ಆಗುತ್ತಿದೆ. " ಎಂದು ಹೇಳಿ ಅಣ್ಣಾವ್ರು ಅಭಿಮಾನಿಗಳಿಗಾಗಿ ಹಾಡೊಂದನ್ನು ಹಾಡಿದ್ದರು.
ಇದೇ ಸಂಭ್ರಮದಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಇದ್ದರು. ಪುನೀತ್ ರಾಜ್‌ಕುಮಾರ್‌ಗೆ ಸ್ಪೆಷಲ್ ಇಂಟ್ರುಡಕ್ಷನ್ ಕೊಟ್ಟು ವೇದಿಕೆ ಮೇಲೆ ಬರಮಾಡಿಕೊಂಡಿದ್ದರು ರಮೇಶ್ ಅರವಿಂದ್. ಈ ಕಾರ್ಯಕ್ರಮ ನಡೆದ ಬಳಿಕ 200 ದಿನಗಳನ್ನು ಪೂರೈಸಿತ್ತು. ಹಾಗೇ 25 ವಾರ ಪ್ರದರ್ಶನ ಕಂಡು ಸಿಲ್ವರ್ ಜುಬಿಲಿ ಸಿನಿಮಾ ಎನಿಸಿಕೊಂಡಿತ್ತು. ಅಂದು ದಾಖಲೆ ಬರೆದಿದ್ದ ಈ ಸಿನಿಮಾ ಇಂದು ಪುನೀತ್ 50ನೇ ಹುಟ್ಟುಹಬ್ಬಕ್ಕೆ ಮತ್ತೆ ರೀ ರಿಲೀಸ್ ಆಗುತ್ತಿದೆ.


Click it and Unblock the Notifications











