23 ವರ್ಷಗಳ ಹಿಂದೆ ತೆರೆಕಂಡಿದ್ದ ಪುನೀತ್ ರಾಜ್‌ಕುಮಾರ್ ಸಿನಿಮಾ 'ಅಪ್ಪು'; ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಾಗಿತ್ತು?
ಪುನೀತ್ ರಾಜ್‌ಕುಮಾರ್ ನಾಯಕನಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟ 'ಅಪ್ಪು' ಸಿನಿಮಾ ರಿ-ರಿಲೀಸ್ ಆಗುತ್ತಿದೆ. ಪುನೀತ್ 50ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳ ಕೋರಿಕೆಯ ಮೇರೆಗೆ 'ಅಪ್ಪು' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. ಚೊಚ್ಚಲ ಸಿನಿಮಾದಲ್ಲಿಯೇ ಜನರ ಮನಸ್ಸನ್ನು ಗೆದ್ದ ಸಿನಿಮಾವಿದು. ಕೇವಲ ಸಿಂಗಲ್ ಸ್ಕ್ರೀನ್‌ಗಳಿದ್ದ ಕಾಲದಲ್ಲಿ ಮೆಗಾಬ್ಲಾಕ್ ಬಸ್ಟರ್ ಲಿಸ್ಟ್ ಸೇರಿಕೊಂಡಿತ್ತು.
ಅಣ್ಣಾವ್ರ ಮೂರನೇ ಮಗ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾನೆ ಅನ್ನೋ ಸುದ್ದಿ ಸಿನಿಮಾರಂಗದಲ್ಲಿ ಹೊಸ ಹುರುಷು ತಂದಿತ್ತು. ಅದರಲ್ಲೂ ತೆಲುಗಿನ ಮಾಸ್ ಡೈರೆಕ್ಟರ್ ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಮೊದಲೇ ನಿರೀಕ್ಷೆ ಮಾಡಿದಂತೆ 'ಅಪ್ಪು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಪುನೀತ್ ರಾಜ್‌ಕುಮಾರ್ ಹೀರೋ ಆಗಿ ನಟಿಸಿದ ಮೊದಲ 'ಅಪ್ಪು' ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸಿತ್ತು? 23 ವರ್ಷಗಳ ಹಿಂದೆ ಗಳಿಸಿದ ಮೊತ್ತಇಂದು ಎಷ್ಟಕ್ಕೆ ಸಮ? ಎಷ್ಟು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು? ಅಪ್ಪು ಸಿನಿಮಾ ಕ್ರೇಜ್ ಹೇಗಿತ್ತು? ಅಂದು ಸಿನಿಮಾ ನೋಡಿದವರು ಅಪ್ಪು ಬಗ್ಗೆ ಏನು ಹೇಳಿದ್ದರು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಪುನೀತ್ ರಾಜ್‌ಕುಮಾರ್ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವುದಕ್ಕೆ ದೊಡ್ಮೆನೆ ನಿರ್ಧರಿಸಿತ್ತು. 'ಅಪ್ಪು' ಸಿನಿಮಾ ಮಾಡುವುದಕ್ಕೆ ಅಣ್ಣಾವ್ರ ಕುಟುಂಬ ಸಿಕ್ಕಾಪಟ್ಟೆ ತಯಾರಿ ನಡೆಸಿತ್ತು. ಅಲ್ಲಿವರೆಗೂ ಅವರ ನಿರ್ಮಾಣ ಕಂಪನಿಯಲ್ಲಿ ತಯಾರಾದ ಸಿನಿಮಾಗಳಿಗೆ ಹೋಲಿಸಿದರೆ, 'ಅಪ್ಪು' ಮಾಡರ್ನ್ ಸಿನಿಮಾ ಆಗಿತ್ತು. ಪುನೀತ್ ಸ್ಯಾಂಡಲ್‌ವುಡ್ ಎಂಟ್ರಿಗೆ ಇದೇ ಸರಿಯಾದ ಸಿನಿಮಾ ಅಂತ ಒಕ್ಕೊರಲಿನಿಂದ ನಿರ್ಧರಿಸಲಾಗಿತ್ತು.

ಹೇಳಿ ಕೇಳಿ ಅಂದಿನ ಕಾಲಕ್ಕೆ ತೆಲುಗು ಚಿತ್ರರಂಗಕ್ಕೆ ಟಾಪ್ ಡೈರೆಕ್ಟರ್ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದರು. ಇತ್ತ ಪುನೀತ್ ರಾಜ್‌ಕುಮಾರ್ ಸಿನಿಮಾ ಎಂಟ್ರಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅಲ್ಲಿವರೆಗೂ ಕನ್ನಡ ಚಿತ್ರರಂಗದಲ್ಲಿ ಹೀರೋ ಕಾಣಿಸಿಕೊಳ್ಳದ ಹಾಗೆ ಎಂಟ್ರಿ ಕೊಡಬೇಕು ಎಂದು ನಿರ್ಧರಿಸಿದ್ದರು. ಅದಕ್ಕೆ ಆಕ್ಷನ್ ಹಾಗೂ ಡ್ಯಾನ್ಸ್ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಈ ಸಿನಿಮಾ ಶುರುವಾಗುವುದಕ್ಕೂ ಮುನ್ನ ಹಾಕಿದ್ದ ಲೆಕ್ಕಾಚಾರವೆಲ್ಲ ಸರಿಯಾಗಿತ್ತು. ಅಪ್ಪು ಆಕ್ಷನ್‌ಗೆ, ಡ್ಯಾನ್ಸ್‌ಗೆ ಕನ್ನಡಿಗರು ಹಾಗೂ ದೊಡ್ಮನೆ ಅಭಿಮಾನಿಗಳು ಬಹುಪರಾಕ್ ಹೇಳಿದ್ದರು. ಇಲ್ಲಿಂದ 'ಅಪ್ಪು' ಪರ್ವ ಶುರುವಾಗಿತ್ತು.
ಅಭಿಮಾನಿಗಳು ಅಣ್ಣಾವ್ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುವಾಗಲೇ 'ಅಪ್ಪು' ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. 2002, ಏಪ್ರಿಲ್ 26 ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ವಿತರಕರ ವಲಯದಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಅಂದಿನ ಕಾಲಕ್ಕೆ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾವನ್ನು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು.
'ಅಪ್ಪು' ಸಿನಿಮಾ ರಿಲೀಸ್‌ಗೂ ಮುನ್ನವೇ ಗುರುಕಿರಣ್ ಕಂಪೋಸ್ ಮಾಡಿದ ಹಾಡುಗಳು ಸಿಕ್ಕಾಪಟ್ಟೆ ಹಿಟ್ ಆಗಿದ್ದವು. ಅದರಲ್ಲೂ "ತಾಲಿಬಾನ್ ಅಲ್ಲ ಅಲ್ಲ.. ಬಿನ್ ಲಾಡನ್ ಅಲ್ವೇ ಅಲ್ಲ" ಸಾಂಗ್ ಯುವಕರ ಬಾಯಲ್ಲಿ ಹರಿದಾಡುವುದಕ್ಕೆ ಶುರುವಾಗಿತ್ತು. ಹೀಗಾಗಿ 'ಅಪ್ಪು' ಸಿನಿಮಾಗೆ ಫಸ್ಟ್ ಡೇ ಫಸ್ಟ್ ಶೋಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿತ್ತು. ರಿಲೀಸ್ ಆದ ಥಿಯೇಟರ್‌ಗಳಲ್ಲೆಲ್ಲ ಹೌಸ್‌ಫುಲ್ ಆದವು. ಪುನೀತ್ ರಾಜ್‌ಕುಮಾರ್ ಎಂಟ್ರಿ ಗ್ರ್ಯಾಂಡ್ ಆಗಿ ಆಗಿತ್ತು.
'ಅಪ್ಪು' ಸಿನಿಮಾ ಒಂದ್ಕಡೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬಂದಿತ್ತು. ಫಸ್ಟ್ ಡೇ ಫಸ್ಟ್ ಶೋ ಬಳಿಕ ಒಳ್ಳೆಯ ಅಭಿಪ್ರಾಯ ಹೇಳಿ ಬಂದಿದ್ದರಿಂದ ಫ್ಯಾಮಿಲಿ ಆಡಿಯನ್ಸ್ ಕೂಡ ಥಿಯೇಟರ್‌ಗೆ ನುಗ್ಗುವುದಕ್ಕೆ ಶುರು ಮಾಡಿದ್ದರು. ಹೀಗಾಗಿ ಮೊದಲ ಸಿನಿಮಾ ಮೆಗಾ ಬ್ಲಾಕ್ ಬಸ್ಟರ್ ಆಗಿತ್ತು. ವಿತರಕರು ಹೇಳುವ ಪ್ರಕಾರ, 'ಅಪ್ಪು' ಅಂದಿನ ಕಾಲಕ್ಕೆ ಸುಮಾರು 11 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.


Click it and Unblock the Notifications











