ಯುವಕರನ್ನೂ ನಾಚಿಸುತ್ತದೆ ಪುನೀತ್ ರಾಜ್‌ಕುಮಾರ್ ಫಿಟ್ನೆಸ್: ವೈರಲ್ ವಿಡಿಯೋ
ದೇಹ ಮಾಗಿದಂತೆಯೂ ಅದರಲ್ಲಿನ ಯೌವನ, ಗಡಸುತನ ಕಾಯ್ದುಕೊಳ್ಳುವುದು ಸಿನಿಮಾ ನಟರಿಗೆ ಇರುವ ಸವಾಲು. ವಯಸ್ಸು ಹೆಚ್ಚಾದಂತೆ ದೇಹದ ಸ್ವರೂಪದಲ್ಲಿ, ಸಾಮರ್ಥ್ಯದಲ್ಲಿ ಬದಲಾವಣೆಗಳಾಗುವುದು ಸಹಜ. ಆದರೆ ಅನೇಕ ನಟರು ತಮ್ಮ ವಾಸ್ತವ ವಯಸ್ಸಿಗಿಂತಲೂ ಚಿಕ್ಕವರಂತೆ ಕಾಣಿಸುತ್ತಾರೆ. ಅದಕ್ಕಾಗಿಯೇ ಅವರು ಈಗಲೂ ಕಾಲೇಜು ವಿದ್ಯಾರ್ಥಿಗಳ ಪಾತ್ರ ಮಾಡಿದರೂ ಆಭಾಸ ಎನಿಸುವುದಿಲ್ಲ.
ಅನೇಕ ಸೆಲೆಬ್ರಿಟಿಗಳು ತೀವ್ರ ದೇಹದಂಡನೆಯಿಂದ ಸಿಕ್ಸ್ ಪ್ಯಾಕ್, ಉಬ್ಬಿದ ಮಸಲ್‌ಗಳನ್ನು ತೋರಿಸುತ್ತಾರೆ. ಇದಕ್ಕೆ ವಿಪರೀತ ಶ್ರಮ ಬೇಕು. ಇದೆಲ್ಲವೂ ಅಭಿಮಾನಿಗಳನ್ನು ಮೆಚ್ಚಿಸುವುದಕ್ಕಾಗಿ. ಆದರೆ ಅಭಿಮಾನಿಗಳನ್ನು ಮೋಹಗೊಳಿಸುವ ದೇಹದಾರ್ಢ್ಯ ಹೊಂದಿರುವವರಲ್ಲಿ ನೃತ್ಯ, ಹೊಡೆದಾಟದ ಸನ್ನಿವೇಶಗಳಿಗೆ ಬೇಕಾದ ಬಾಗುವ, ಚಲನೆಯ ಗುಣ ಇರುವುದಿಲ್ಲ. ಆದರೆ ಪುನೀತ್ ರಾಜ್ ಕುಮಾರ್ ಅವರ ದೇಹ ಎಲ್ಲ ರೀತಿಯ ಸಂದರ್ಭಗಳಿಗೂ ಹೊಂದಿಕೊಳ್ಳುವಂತಿದೆ. ಮುಂದೆ ಓದಿ...

ಅಣ್ಣಾವ್ರು ಮಾದರಿ
ಡಾ. ರಾಜ್ ಕುಮಾರ್ ಕೊನೆಯವರೆಗೂ ವ್ಯಾಯಾಮ, ಯೋಗದ ಮೂಲಕ ತಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಂಡಿದ್ದರು. ಆಗ ಇಂದಿನಂತೆ ಜಿಮ್, ಡಯೆಟ್‌ಗಳಿರಲಿಲ್ಲ. ತಮಗೆ ಇಷ್ಟವಾದುದ್ದನ್ನು ತಿನ್ನುತ್ತಿದ್ದ ರಾಜ್‌ಕುಮಾರ್, ವ್ಯಾಯಾಮದ ಮೂಲಕ ದೇಹದ ಸೊಗಸನ್ನು ಉಳಿಸಿಕೊಂಡಿದ್ದರು. ಆ ಕಾರಣಕ್ಕಾಗಿಯೇ ಅವರು ತಮ್ಮ ಕೊನೆಯ ಚಿತ್ರ 'ಶಬ್ಧವೇದಿ'ಯಲ್ಲಿನ ಪೊಲೀಸ್ ಪಾತ್ರದಲ್ಲಿ ಕೂಡ ಫಿಟ್ ಆಗಿ ಕಾಣಿಸಿಕೊಂಡಿದ್ದರು.

ಸಂತೋಷ್ ಅನಂದ್ ರಾಮ್ ವಿಡಿಯೋ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕಸರತ್ತು ಮಾಡುವ ವಿಡಿಯೋವೊಂದನ್ನು 'ಯುವರತ್ನ' ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೂರಾರು ಮಂದಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಪುನೀತ್ ಅವರ ದೇಹ ಚಲನೆಯ ಸಾಮರ್ಥ್ಯ ಅಚ್ಚರಿ ಮೂಡಿಸುತ್ತದೆ.
ಪವರ್ ಸ್ಟಾರ್ ಬಿರುದು ಸಾರ್ಥಕ
'ಪವರ್ ಸ್ಟಾರ್' ಎಂಬ ಬಿರುದನ್ನು 'ಶಿವಣ್ಣ' ಕೊಟ್ಟಿದ್ದಕ್ಕೂ.. ಅಭಿಮಾನಿಗಳು ಎದೆಯಲ್ಲಿಟ್ಟುಕೊಂಡು ಹಚ್ಚೆ ಹಾಕಿಸಿಕೊಂಡಿದ್ದಕ್ಕೂ... ಕರ್ನಾಟಕ ಜನತೆಯು ಪ್ರೀತಿಯಿಂದ ಕರೆಯುವುದಕ್ಕೂ ಸಾರ್ಥಕ ಎಂದು ಸಂತೋಷ್ ಆನಂದ್ ರಾಮ್, ಪುನೀತ್ ಅವರಿಗೆ 'ಪವರ್ ಸ್ಟಾರ್' ಬಿರುದು ಅತ್ಯಂತ ಆಪ್ತವಾಗಿದೆ ಎಂಬುದನ್ನು ವಿವರಿಸಿದ್ದಾರೆ.

ಮತ್ತೆ 'ಅಪ್ಪು' ಗೆಟಪ್‌ನಲ್ಲಿ ಪುನೀತ್
'ಯುವರತ್ನ' ಚಿತ್ರದಲ್ಲಿ ಪುನೀತ್ ದೈಹಿಕ ಕಸರತ್ತು ನಡೆಸುವ ದೃಶ್ಯಗಳಿವೆ. ಅದರಲ್ಲಿ ಸಹ ಅವರ ಶಕ್ತಿ ಮತ್ತು ಬದ್ಧತೆಯನ್ನು ಕಾಣಬಹುದು. ತಾವು ನಾಯಕರಾಗಿ ನಟಿಸಿದ ಮೊದಲ ಚಿತ್ರ 'ಅಪ್ಪು'ನಲ್ಲಿ ಕಾಲೇಜ್ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದ ಪುನೀತ್, 'ಯುವರತ್ನ'ದ ಮೂಲಕ ಮತ್ತೆ ವಿದ್ಯಾರ್ಥಿಯಾಗುತ್ತಿದ್ದಾರೆ. ತಮ್ಮ 45ನೇ ವಯಸ್ಸಿನಲ್ಲಿಯೂ ಪವರ್ ಸ್ಟಾರ್ ಕಾಲೇಜು ವಿದ್ಯಾರ್ಥಿಯಾಗಿ ನಟಿಸಬಲ್ಲರು ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.

ಶಿವಣ್ಣ ಕೂಡ ಬೆರಗು ಮೂಡಿಸುತ್ತಾರೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ತಮ್ಮ 57ನೇ ವಯಸ್ಸಿನಲ್ಲಿಯೂ ಫಿಟ್ನೆಸ್‌ನಿಂದ ಗಮನ ಸೆಳೆಯುತ್ತಾರೆ. ಆಕ್ಷನ್ ದೃಶ್ಯಗಳಲ್ಲಿ, ನೃತ್ಯದಲ್ಲಿ ಶಿವರಾಜ್ ಕುಮಾರ್ ನಿಜಕ್ಕೂ ಯುವಕರನ್ನು ನಾಚಿಸುವಂತೆ ಲೀಲಾಜಾಲವಾಗಿ ಅಭಿನಯಿಸುತ್ತಾರೆ. ಅವರ ದೇಹದ ವಯಸ್ಸನ್ನು ಗುರುತಿಸುವುದು ಸುಲಭವಲ್ಲ. ಅಷ್ಟರಮಟ್ಟಿಗೆ ಅವರು ಫಿಟ್ನೆಸ್ ಕಾಪಾಡಿಕೊಂಡು ಬಂದಿದ್ದಾರೆ.


Click it and Unblock the Notifications











