ವಿಶ್ವದಾದ್ಯಂತ 4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಜಾತ್ರೆ: ಚಿತ್ರಮಂದಿರದ ಮುಂದೆ ಹೇಗಿದೆ ಸಂಭ್ರಮ?
ಎಲ್ಲಿ ನೋಡಿದರೂ 'ಜೇಮ್ಸ್'. ಅಪ್ಪು ಕೊನೆಯ ಸಿನಿಮಾ ರಿಲೀಸ್‌ಗೆ ತಯಾರಿ ನಡೆಯುತ್ತಿದೆ. ಪ್ರತಿಯೊಂದು ಚಿತ್ರಮಂದಿರದ ಮುಂದೆನೂ 'ಜೇಮ್ಸ್' ಜಾತ್ರೆಗೆ ವೇದಿಕೆ ಸಜ್ಜಾಗುತ್ತಿದೆ. ಮಾರ್ಚ್ 17ರಂದು ವಿಶ್ವದಾದ್ಯಂತ 'ಜೇಮ್ಸ್' ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಹಿಂದೆಂದೂ ಕನ್ನಡ ಸಿನಿಮಾವೊಂದು ಈ ಮಟ್ಟಕ್ಕೆ ರಿಲೀಸ್ ಆಗಿಲ್ಲ. ಆದರೆ, ಜೇಮ್ಸ್ ಸಿನಿಮಾ ಬಿಡುಗಡೆಯಲ್ಲೂ ದಾಖಲೆ ಬರೆಯಲು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.
ಒಂದ್ಕಡೆ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನೊಂದ್ಕಡೆ ಅಭಿಮಾನಿಗಳೇ ಸ್ವಂತ ಹಣದಿಂದ ಅಪ್ಪು ಕೊನೆಯ ಸಿನಿಮಾಗೆ ಗೌರವ ನೀಡಲು ಸಜ್ಜಾಗಿದ್ದಾರೆ. ಚಿತ್ರಮಂದಿರದ ಮುಂದೆ ಇಡೀ ದಿನ ಸಂಭ್ರಮಿಸಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಸದ್ಯ 'ಜೇಮ್ಸ್'ಗೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೇಟ್ ನೀಡಿದ್ದು, ಟೀಮ್ ಮೊದಲ ಹಂತದ ಥಿಯೇಟರ್ ಲಿಸ್ಟ್ ಬಿಡುಗಡೆ ಮಾಡಿದೆ. ಈ ಗ್ಯಾಪ್‌ನಲ್ಲೇ ಕನ್ನಡ ಸಿನಿಮಾವೊಂದು ಹಿಂದೆಂದಿಗಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದೆ.

4 ಸಾವಿರ ಸ್ಕ್ರೀನ್‌ಗಳಲ್ಲಿ 'ಜೇಮ್ಸ್'
'ಜೇಮ್ಸ್' ಸಿನಿಮಾ ಕರ್ನಾಟಕದಲ್ಲಿ ಅಷ್ಟೇ ರಿಲೀಸ್ ಆಗುತ್ತಿಲ್ಲ. ಇಡೀ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಮೊದಲ ದಿನ 'ಜೇಮ್ಸ್' ಟೀಮ್ ಬಿಡುಗಡೆ ವಿಚಾರಕ್ಕೆ ದಾಖಲೆ ಬರೆಯಲಿದೆ. ನಿರ್ಮಾಪಕ ಕಿಶೋರ್ ಪಾಥಿಕೊಂಡ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ಮಾರ್ಚ್ 17ರಂದು ರಿಲೀಸ್ ಆಗುತ್ತಿರುವ 'ಜೇಮ್ಸ್' ಬರೋಬ್ಬರಿ 4 ಸಾವಿರ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ. ಇದು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ವಿಚಾರದಲ್ಲಿ ದಾಖಲೆ ಅಂತಲೇ ಹೇಳಬಹುದು.

ಕರ್ನಾಟಕದಲ್ಲೆಷ್ಟು ಚಿತ್ರಮಂದಿರ?
ಈಗಾಗಲೇ ಯೂರೋಪ್‌ನಲ್ಲಿ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ರಿಲೀಸ್ ಆಗಿದೆ. ಕರ್ನಾಟಕದಲ್ಲೂ ಮೊದಲ ಹಂತದ ಥಿಯೇಟರ್ ಲಿಸ್ಟ್ ಕೂಡ ರಿಲೀಸ್ ಆಗಿದೆ. ಸದ್ಯ ಕರ್ನಾಟಕದಲ್ಲೂ ಸುಮಾರು 400ಕ್ಕೂಅಧಿಕ ಚಿತ್ರಮಂದಿರಗಳಲ್ಲಿ ಜೇಮ್ಸ್ ಬಿಡುಗಡೆಯಾಗಲಿದೆ. ಒಂದು ವಾರ ಈ ಎಲ್ಲಾ ಚಿತ್ರಮಂದಿರಗಳಲ್ಲಿ ಪುನೀತ್ ರಾಜ್‌ಕುಮಾರ್‌ಗೆ ಗೌರವ ಸಲ್ಲಿಸಲಾಗುತ್ತಿದೆ. ಪ್ರತಿ ಚಿತ್ರಮಂದಿರದ ಮುಂದೆನೂ ಅಭಿಮಾನಿಗಳು 'ಜೇಮ್ಸ್' ಜಾತ್ರೆ ಮಾಡಲಿದ್ದಾರೆ.

ಸೀಟ್ ನಂ 17 ರಿಸರ್ವೆಷನ್
ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಬೆಂಗಳೂರಿನ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಸಂಭ್ರಮಿಸಲು ಸಜ್ಜಾಗಿದ್ದಾರೆ. ಬೆಳಗಿನ ಜಾವದಿಂದಲೇ 'ಜೇಮ್ಸ್' ಸಿನಿಮಾದ ಸ್ಪೆಷಲ್ ಶೋಗಳು ಆರಂಭ ಆಗಲಿವೆ. ವಿಶೇಷ ಅಂದರೆ, ಚಿತ್ರಮಂದಿರಲ್ಲಿ ಎ ಸಾಲಿನಲ್ಲಿ 17ನೇ ಸೀಟ್ ನಂಬರ್ ಅನ್ನು ಅಪ್ಪುಗಾಗಿ ಮೀಸಲಿಟ್ಟಿದ್ದಾರೆ. ಪುನೀತ್ ರಾಜ್‌ಕುಮಾರ್ 17ನೇ ಸೀಟ್‌ನಲ್ಲಿ ಫ್ಯಾನ್ಸ್ ಜೊತೆ ಕೂತು ತಮ್ಮ ಸಿನಿಮಾವನ್ನು ನೋಡುತ್ತಾರೆ ಎಂದು ನಂಬಿದ್ದಾರೆ. ಈ ಕಾರಣಕ್ಕೆ ಒಂದು ಸೀಟ್ ಅನ್ನು ಮೀಸಲಿರಿಸಿದ್ದಾರೆ.

ಅಣ್ಣಾವ್ರು, ಪಾರ್ವತಮ್ಮ, ಪುನೀತ್ ಕಟೌಟ್
ಬೆಂಗಳೂರಿನ ಕಮಲಾನಗರದಲ್ಲಿರುವ ವೀರಭದ್ರೇಶ್ವ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳು ಬೃಹತ್ ಕಟೌಟ್‌ಗಳನ್ನು ಹಾಗಲಿದ್ದಾರೆ. ಡಾ. ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಕಟೌಟ್‌ಗಳನ್ನು ನಿಲ್ಲಿಸಲಿದ್ದಾರೆ. ಬೆಳಗ್ಗೆಯಿಂದಲೇ ಚಿತ್ರಮಂದಿರಕ್ಕೆ ಬರುವ ಅಭಿಮಾನಿಗಳಿಗೆ ಕಾಫಿ, ಟೀ, ಬಿಸ್ಕೆಟ್, ಮಸಾಲ ದೋಸೆ, ಚಿಕಿನ್ ಬಿರಿಯಾನಿ, ಸಮೋಸ ಟೀ, ಗೋಬಿ ಮಂಚೂರಿಯನ್ನು ಒಂದೊಂದು ಶೋಗೆ ನೀಡಲಿದ್ದಾರೆ.


Click it and Unblock the Notifications











