Jackie Movie: 14 ವರ್ಷಗಳ ಹಿಂದೆ ಹೇಗಿತ್ತು 'ಜಾಕಿ' ಹವಾ; 2010 ಅಥವಾ 2024.. ಯಾವ ವರ್ಷದಲ್ಲಿ ಕ್ರೇಜ್ ಹೇಗಿದೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ವೃತ್ತಿ ಬದುಕಿನ ಅತ್ಯುತ್ತಮ ಸಿನಿಮಾಗಳಲ್ಲಿ 'ಜಾಕಿ' ಕೂಡ ಒಂದು. ಮಾಸ್ ಪ್ರೇಕ್ಷಕರಿಗೆ ಕಿಕ್ ಕೊಟ್ಟ ಸಿನಿಮಾವಿದು. 14 ವರ್ಷಗಳ ಬಳಿಕ ಈ ಸಿನಿಮಾ ಮರು ಬಿಡುಗಡೆಯಾಗಿದ್ದೇ ಆ ಕ್ರೇಜ್‌ಗೆ ಸಾಕ್ಷಿ. ಅಪ್ಪು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ 'ಜಾಕಿ' ಸಿನಿಮಾವನ್ನು ರೀ- ರಿಲೀಸ್ ಮಾಡಲಾಗಿದೆ. ಮೊದಲ ದಿನವೇ ಈ ಸಿನಿಮಾಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ.
ದುನಿಯಾ ಸೂರಿ ಹಾಗೂ ಪುನೀತ್ ರಾಜ್‌ಕುಮಾರ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ ಸಿನಿಮಾ 14 ವರ್ಷಗಳ ಹಿಂದೇನೆ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. 2010ರಲ್ಲಿ ಮೊದಲ ಬಾರಿಗೆ ರಿಲೀಸ್ ಆದಾಗಲೂ ಥಿಯೇಟರ್ ತುಂಬಿ ತುಳುಕಿತ್ತು. 2024ರಲ್ಲೂ ಅದೇ ಕ್ರೇಜ್ ಇದೆ. ಥಿಯೇಟರ್‌ಗಳ ಮುಂದೆ ಅಭಿಮಾನಿಗಳ ಜನಸಾಗರ, ಅವರ ಸಂಭ್ರಮ ಮುಗಿಲು ಮುಟ್ಟಿದೆ.

ಈಗ 'ಜಾಕಿ' ಕ್ರೇಜ್ ನೋಡುತ್ತಿರುವವರಿಗೆ 2010ರಲ್ಲಿ ಹೇಗಿದ್ದಿರಬಹುದು? ಥಿಯೇಟರ್ ಮುಂದೆ ಸೆಲೆಬ್ರೆಷನ್ ಹೇಗಿತ್ತು? ಎಷ್ಟು ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಆಗಿತ್ತು? ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಸಿತ್ತು? 14 ವರ್ಷಗಳ ಬಳಿಕ ಈ ಸಿನಿಮಾ ರಿಲೀಸ್ ಆದಾಗ ಕ್ರೇಜ್ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
2010ರಲ್ಲಿ 'ಜಾಕಿ' ಸಾಂಗ್ ಲೀಕ್
ಒಂದ್ಕಡೆ ಪುನೀತ್ ರಾಜ್‌ಕುಮಾರ್, ಇನ್ನೊಂದ್ಕಡೆ ದುನಿಯಾ ಸೂರಿ. ಇಬ್ಬರ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಹುಚ್ಚು ಹಿಡಿಸಿತ್ತು. ಅದರಲ್ಲೂ 'ಜಾಕಿ' ಸಿನಿಮಾದ ಹಾಡು "ಎಕ್ಕ ರಾಜ ರಾಣಿ.." ಹಾಡು ಬಿಡುಗಡೆಗೂ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಈ ಹಾಡು ಪರೋಕ್ಷವಾಗಿ ಸಿನಿಮಾದ ಕ್ರೇಜ್ ಅನ್ನು ಹೆಚ್ಚಿಸಿತ್ತು. "ಎಕ್ಕ ರಾಜ ರಾಣಿ" ಹಾಡು ವೈರಲ್ ಆಗುತ್ತಿದ್ದಂತೆ 'ಜಾಕಿ' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು.
2010-2014 ಎರಡರಲ್ಲೂ ಸೇಮ್ ಕ್ರೇಜ್
'ಜಾಕಿ' ಸಿನಿಮಾ 2010ರಲ್ಲಿ ರಿಲೀಸ್ ಆದಾಗಲೂ ಥಿಯೇಟರ್ ಮುಂದೆ ಅದೇ ಕ್ರೇಜ್ ಇತ್ತು. 2024ರಲ್ಲಿ ಹಾಕಿದ್ದ ಕಟೌಟ್ ಅನ್ನೇ ಹೋಲುವಂತೆ 2010ರಲ್ಲೂ ಹಾಕಲಾಗಿತ್ತು. ಕಟೌಟ್‌ಗಳಿಗೆ ಅಭಿಮಾನಿಗಳಿಂದ ಹೂವಿ ಹಾರ ಬಿದ್ದಿತ್ತು. ಪುನೀತ್ ರಾಜ್‌ಕುಮಾರ್ ಆಕ್ಷನ್ ಮೂಡನಲ್ಲಿ ನಿಂತಿರುವ ಸೇಟು ಸೇಮ್ ಕಟೌಟ್ ಅನ್ನು 2010 ಹಾಗೂ 2024ರಲ್ಲಿ ನಿಲ್ಲಿಸಲಾಗಿತ್ತು.
'ಜಾಕಿ' ಕ್ರೇಜ್ ಕಮ್ಮಿ ಆಗೇ ಇಲ್ಲ
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಡ್ಯಾನ್ಸ್ , ಆಕ್ಷನ್ ಸೀನ್‌ಗಳನ್ನು ನೋಡುವುದಕ್ಕೆ ಅಭಿಮಾನಿಗಳು ಅಂದೂ ಥ್ರಿಲ್ ಆಗಿದ್ದರು. ಇದೂ ಕೂಡ ಅಷ್ಟೇ ಥ್ರಿಲ್ ಆಗಿದ್ದಾರೆ. 14 ವರ್ಷದ ಹಿಂದೆ ಹಾಗೂ ಇಂದು ಅಭಿಮಾನಿಗಳ ಸಂಭ್ರಮ ಹೇಗಿದೆ ಅನ್ನೋದನ್ನು ಅಭಿಮಾನಿಗಳೇ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ 7 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸಿನಿಮಾ ಬರೋಬ್ಬರಿ 30 ಕೋಟಿ ರೂಪಾಯಿ ಕಲೆ ಹಾಕಿತ್ತು ಎಂದು ವರದಿಯಾಗಿವೆ. 14 ವರ್ಷಗಳ ಬಳಿಕ ರಿಲೀಸ್ ಆಗಿರೋ ಸಿನಿಮಾಗೂ ಅದೇ ಕ್ರೇಜ್ ಇದ್ದು, ರೀ ರಿಲೀಸ್ ಆದ ಮೊದಲ ದಿನ (ಮಾರ್ಚ್ 15) ಸುಮಾರು 1 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ ಎನ್ನಲಾಗಿದೆ.
ರೀ- ರಿಲೀಸ್ ಆದ್ಮೇಲೂ ಅದೇ ಕ್ರೇಜ್
ಅಪ್ಪು ಹುಟ್ಟುಹಬ್ಬದ ಅಂಗವಾಗಿ 'ಜಾಕಿ' ಸಿನಿಮಾವನ್ನು ಸುಮಾರು 120ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ ಬಹುತೇಕ ಕಡೆಗಳಲ್ಲಿ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಸ್ಟಾರ್ ಸಿನಿಮಾಗಳಿಗೆ ಮೊದಲ ದಿನ ಸಿಕ್ಕಿದ ರೆಸ್ಪಾನ್ಸ್ ಈ ಸಿನಿಮಾಗೂ ಸಿಗುತ್ತಿದೆ. ಅಪ್ಪು ನಟಿಸಿದ ಬೇರೆ ಬೇರೆ ಸಿನಿಮಾಗಳನ್ನೂ ರಿಲೀಸ್ ಮಾಡುವಂತೆ ಅಭಿಮಾನಿಗಳು ಬೇಡಿಕೆ ಇಡುತ್ತಿದ್ದಾರೆ.


Click it and Unblock the Notifications











