Jackie Box Office: 'ಜಾಕಿ' ರೀ-ರಿಲೀಸ್ ಸಕ್ಸಸ್.. ಆದರೆ, 3 ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?
ಪವರ್‌ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ರೀ- ರಿಲೀಸ್ ಆಗಿದ್ದು ಗೊತ್ತೇ ಇದೆ. ಮಾರ್ಚ್ 15 ರಂದು ಬಿಡುಗಡೆಯಾಗಿದ್ದ ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ ಹೊಸ ಸಿನಿಮಾಗಳಿಗೂ ಸಿಕ್ಕಿರಲಿಲ್ಲ. ಹೊಸ ಸಿನಿಮಾಗಳು ರಿಲೀಸ್ ಆದಷ್ಟೇ ಅದ್ಧೂರಿಯಾಗಿಯೇ ಬಿಡುಗಡೆ ಮಾಡಲಾಗಿತ್ತು. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ರೀ-ರಿಲೀಸ್ ಸಿನಿಮಾ ಬೆಳ್ಳಂಬೆಳಗ್ಗೆ 4.30ಕ್ಕೆ ಶೋ ಕಂಡಿತ್ತು. ಹೀಗಿದ್ದರೂ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು.
ಕೆಆರ್‌ಜಿ ಸ್ಟುಡಿಯೋ 'ಜಾಕಿ' ಸಿನಿಮಾವನ್ನು ರೀ-ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿತ್ತು. 175 ಸ್ಕ್ರೀನ್‌ಗಳಲ್ಲಿ 'ಜಾಕಿ' ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಬೆಂಗಳೂರು, ಮಂಡ್ಯ, ಹೊಸಪೇಟೆ, ಬಳ್ಳಾರಿ, ಸೇರಿದಂತೆ ಹಲವು ಕಡೆಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮರು ಬಿಡುಗಡೆ ಲೆಕ್ಕಾಚಾರದಲ್ಲಿ 'ಜಾಕಿ' ಸಿನಿಮಾ ಹಿಟ್ ಲಿಸ್ಟ್ ಸೇರಿದೆ.

'ಜಾಕಿ' ರೀ-ರಿಲೀಸ್ ವಿಷಯದಲ್ಲಿ ಕೆಆರ್‌ಜಿ ಲೆಕ್ಕಾಚಾರ ಗೆದ್ದಿದೆ. ಮೊದಲ ದಿನವೇ ಸಿನಿಮಾಗೆ ಹಾಕಿದ ದುಡ್ಡು ಬಂದಾಗಿದೆ. ಆದರೆ, ಉಳಿದ ಎರಡು ದಿನಗಳ ಕಲೆಕ್ಷನ್ ಹೇಗಿತ್ತು? ಮೂರು ದಿನಗಳ ಒಟ್ಟು ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ..
ಮೊದಲ ದಿನ ಕಲೆಕ್ಷನ್ ಎಷ್ಟು?
'ಜಾಕಿ' ಮೊದಲ ದಿನ ಫ್ಯಾನ್ಸ್ ಶೋಗಳನ್ನು ಸೇರಿಸಿ ಹೆಚ್ಚು ಪ್ರದರ್ಶನ ಕಂಡಿತ್ತು. ರೀ- ರಿಲೀಸ್ ಕ್ರೇಜ್ ಹೆಚ್ಚಿದ್ದರಿಂದ ಆರಂಭದ ದಿನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಮುಗಿಬಿದ್ದು ಸಿನಿಮಾವನ್ನು ನೋಡಿದ್ದರು. ಹೀಗಾಗಿ ಚಿತ್ರತಂಡದ ಮೂಲಗಳ ಪ್ರಕಾರ, ಮೊದಲ ದಿನ ಹೆಚ್ಚು ಕಡಿಮೆ 1 ಕೋಟಿ ರೂಪಾಯಿ ಆಸು ಪಾಸಿನಲ್ಲಿ ಕಲೆಕ್ಷನ್ ಆಗಿತ್ತು. ಇತ್ತೀಚೆಗೆ ರೀ-ರಿಲೀಸ್ ಆದ ಸಿನಿಮಾಗಳ ಪೈಕಿ ಮೊದಲ ದಿನ ಅತೀ ಹೆಚ್ಚು ಕಲೆಕ್ಷನ್ ಆಗಿದೆ ಎನ್ನಲಾಗಿದೆ.
3 ದಿನಗಳ ಒಟ್ಟು ಕಲೆಕ್ಷನ್ ಎಷ್ಟು?
'ಜಾಕಿ' ಕಲೆಕ್ಷನ್ ಸಿನಿಮಾ ಮಂದಿಗೆ ಹೊಸ ಭರವಸೆ ಕೊಟ್ಟಿದೆ. ಶುಕ್ರವಾರ (ಮಾರ್ಚ್ 15) 1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ರೆ, ಎರಡನೇ ದಿನ (ಮಾರ್ಚ್ 16) 'ಜಾಕಿ' ಕಲೆಕ್ಷನ್ 43 ರಿಂದ 50 ಲಕ್ಷ ರೂಪಾಯಿ ಕಲೆಕ್ಷನ್, ಹಾಗೇ ಮೂರನೇ ದಿನ ಅಂದರೆ ಅಪ್ಪು ಹುಟ್ಟಿದ ದಿನ (ಮಾರ್ಚ್ 17) ಮತ್ತೆ ಕಲೆಕ್ಷನ್‌ನಲ್ಲಿ ಏರಿಕೆಯಾಗಿದ್ದು, 61 ಲಕ್ಷದಿಂದ 70 ಲಕ್ಷ ರೂಪಾಯಿ ಆಸು ಪಾಸಿನಲ್ಲಿ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಒಟ್ಟು ಮೂರು ದಿನಗಳಲ್ಲಿ 2 ಕೋಟಿ ರೂಪಾಯಿಯಿಂದ 2.50 ಕೋಟಿ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕಿದ್ದಾರೆ.

ನರ್ತಕಿ, ಪ್ರಸನ್ನ ಥಿಯೇಟರ್ ಕಲೆಕ್ಷನ್?
'ಜಾಕಿ' ಕಲೆಕ್ಷನ್ ಬಗ್ಗೆ ವಿತರಕರ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿಯಲ್ಲಿ 10 ಲಕ್ಷ, ಪ್ರಸನ್ನ ಚಿತ್ರಮಂದಿರದಲ್ಲಿ 11 ಲಕ್ಷ ರೂಪಾಯಿ ಕಲೆಕ್ಷನ್ ಆಗಿರಬಹುದೆಂದು ಅಂದಾಜು ಮಾಡಲಾಗಿದೆ. ಹಾಗೇ ಮಂಡ್ಯ, ಹಾಸನ, ದಾವಣಗೆರೆ, ಬಳ್ಳಾರಿ ಭಾಗಗಳಲ್ಲಿ 'ಜಾಕಿ' ಸಿನಿಮಾ ಕಲೆಕ್ಷನ್ ಜೋರಾಗಿದೆ. ಆದರೆ, ಇದು ವಿತರಕರ ವಲಯದಲ್ಲಿ ಹರಿದಾಡುತ್ತಿರುವ ಲೆಕ್ಕಾಚಾರಗಳು. ಈ ಬಗ್ಗೆ ಕೆಆರ್‌ಜಿ ಸ್ಟುಡಿಯೋ ಅಧಿಕೃತವಾಗಿ ಕಲೆಕ್ಷನ್ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.
'ಜಾಕಿ' ನೋಡಿ ಶಿವಣ್ಣ ಫಿದಾ
ಶಿವಣ್ಣ ಕೂಡ ಜಾಕಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನಿನ್ನೆ (ಮಾರ್ಚ್ 17) ಅಪ್ಪು ಹುಟ್ಟುಹಬ್ಬದಂದು ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಈಗಾಗಲೇ 20 ಬಾರಿ ಜಾಕಿ ಸಿನಿಮಾ ನೋಡಿದ್ದೀನಿ. ರಿಲೀಸ್ ಆದಾಗ 10 ಬಾರಿ ನೋಡಿದ್ದೆ. ಓಟಿಟಿಯಲ್ಲಿ ಒಂದು ಹತ್ತು ಬಾರಿ ನೋಡಿದ್ದೆ. ಈಗ ಕೂಡ ಫ್ರೆಶ್ ಆಗಿ ಸಿನಿಮಾ ನೋಡಿದ್ದೀನಿ ಅಂತ ಅನಿಸುತ್ತಿದೆ. ಈ ವೇಳೆ ಅಪ್ಪು ಇಲ್ಲಾ ಅನ್ನೋ ಫೀಲಿಂಗ್ ಬಂದಿಲ್ಲ. ಇಲ್ಲೇ ಎಲ್ಲೋ ಇದ್ದಾನೆ ಅನಿಸುತ್ತೆ." ಎಂದು ಶಿವಣ್ಣ ಹೇಳಿದ್ದರು.


Click it and Unblock the Notifications











