Appu Box Office Day 4: 4ನೇ ದಿನ 'ಅಪ್ಪು' ಕಲೆಕ್ಷನ್ ಎಷ್ಟು? ಬರ್ತ್‌ಡೇ ದಿನ ಹೇಗಿತ್ತು ಕ್ರೇಜ್?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ 50ನೇ ಬರ್ತ್‌ಡೇಯನ್ನು ಅಭಿಮಾನಿಗಳು ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿದ್ದಾರೆ. ರಾಜ್ಯ ಪ್ರತಿಯೊಂದು ಊರಿನಲ್ಲೂ ನಗುವಿನ ರಾಜಕುಮಾರನನ್ನು ನೆನೆದು ದಾಖಲೆ ಬರೆದಿದ್ದಾರೆ. ಅಗಲಿ ನಾಲ್ಕು ವರ್ಷಗಳಾದರೂ ಪುನೀತ್ ರಾಜ್‌ಕುಮಾರ್ ಕನ್ನಡಿಗರ ಮನಸ್ಸಿನಿಂದ ಇನ್ನೂ ಮರೆಯಾಗಿಲ್ಲ ಅನ್ನೋದಕ್ಕೆ ಈ ಬಾರಿಯ ಹುಟ್ಟುಹಬ್ಬವೇ ಸಾಕ್ಷಿ.
ಪುನೀತ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗಾಗಿ 'ಅಪ್ಪು' ಸಿನಿಮಾ ರಿಲೀಸ್ ಮಾಡಲಾಗಿತ್ತು. ಪವರ್‌ಸ್ಟಾರ್ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಕರ್ನಾಟಕದಾದ್ಯಂತ 100ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಆಗಿತ್ತು.

ಪುನೀತ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ 'ಅಪ್ಪು' ನೋಡುವುದಕ್ಕೆ ಫ್ಯಾನ್ಸ್ ಬೇಡಿಕೆ ಇಟ್ಟಿದ್ದರು. ಅವರ ಆಸೆಯಂತೆಯೇ 'ಅಪ್ಪು' ರಿಲೀಸ್ ಆಗಿತ್ತು. ಹಾಗಿದ್ದರೆ, ಬರ್ತ್‌ಡೇ ದಿನ ಈ ಸಿನಿಮಾದ ಕಲೆಕ್ಷನ್ ಹೇಗಿತ್ತು? ನಾಲ್ಕು ದಿನಗಳಲ್ಲಿ 'ಅಪ್ಪು' ಕಲೆಕ್ಷನ್ ಹೇಗಿದೆ? ತಿಳಿಯುವುದಕ್ಕೆ ಮುಂದೆ ಓದಿ.
'ಅಪ್ಪು' ರಿ ರಿಲೀಸ್‌ಗೆ ಪ್ರತಿಕ್ರಿಯೆ ಹೇಗಿತ್ತು?
ಕನ್ನಡದಲ್ಲಿ ಒಳ್ಳೊಳ್ಳೆ ಸಿನಿಮಾ ರಿಲೀಸ್ ಆಗುತ್ತಿಲ್ಲ. ಒಂದು ವೇಳೆ ರಿಲೀಸ್ ಆದರೂ, ಆ ಸಿನಿಮಾವನ್ನು ನೋಡುವುದಕ್ಕೆ ಥಿಯೇಟರ್‌ಗೆ ಜನರು ಬರುತ್ತಿಲ್ಲ. ಕನ್ನಡ ಚಿತ್ರರಂಗ ತೀರಾ ಸಂಕಷ್ಟದಲ್ಲಿ ಇರುವಾಗ ಮರು ಬಿಡುಗಡೆಯಾದ ಸಿನಿಮಾ 'ಅಪ್ಪು'. ಪುನೀತ್ ಬರ್ತ್‌ಡೇ ಹಿನ್ನೆಲೆಯಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅದಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ಮೂರು ದಿನ 'ಅಪ್ಪು' ಕಲೆಕ್ಷನ್ ಸಖತ್ ಆಗಿದೆ ಎಂದು ವಿತರಕರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ದರೆ, ನಾಲ್ಕನೇ ದಿನದ ಕಲೆಕ್ಷನ್ ಹೇಗಿದೆ?

4ನೇ ದಿನ ಕಲೆಕ್ಷನ್ ಹೇಗಿದೆ?
'ಅಪ್ಪು' ರಿ-ರಿಲೀಸ್ ಆದ ನಾಲ್ಕನೇ ದಿನ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಇತ್ತು. ಜೊತೆ ಸೋಮವಾರ ಬೇರೆ. ಹೊಚ್ಚ ಹೊಸ ಸಿನಿಮಾಗಳೇ ಸೋಮವಾರದಂದು ಥಿಯೇಟರ್‌ಗೆ ಜನರನ್ನು ಕರೆದುಕೊಂಡು ಬರುವುದಕ್ಕೆ ಪರದಾಡುತ್ತವೆ. ಹಾಗೇ 'ಅಪ್ಪು'ಗೂ ಈ ಎಫೆಕ್ಟ್ ಆಗಿತ್ತು. ನಾಲ್ಕನೇ ದಿನ ಪುನೀತ್ ಅಭಿಮಾನಿಗಳು ಸೆಲೆಬ್ರೆಷನ್ ಮೂಡ್‌ನಲ್ಲಿ ಇದ್ದಿದ್ದರಿಂದ 'ಅಪ್ಪು' ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ. 4ನೇ ದಿನ 15 ರಿಂದ 20 ಲಕ್ಷ ರೂ. ಕಲೆಕ್ಷನ್ ಆಗಿರಬಹುದೆಂದು ವಿತರಕರಿಂದ ಸಿಕ್ಕಿರುವ ಲೆಕ್ಕ.
ಇದೂವರೆಗೂ ಗಳಿಸಿದ್ದೆಷ್ಟು?
ಮೊದಲ ಮೂರು ದಿನ ಅಪ್ಪು ಸಿನಿಮಾದ ಕಲೆಕ್ಷನ್ ಸಖತ್ ಆಗಿ ಆಗಿದೆ. ಒಂದು ರಿ ರಿಲೀಸ್ ಸಿನಿಮಾಗೆ ಎಷ್ಟು ರೆಸ್ಪಾನ್ಸ್ ಸಿಗಬೇಕೋ ಅಷ್ಟಂತೂ ಸಿಕ್ಕಿದೆ. 23 ವರ್ಷಗಳ ಹಿಂದಿನ ಸಿನಿಮಾ ಮರು ಬಿಡುಗಡೆಯಾದ ನಾಲ್ಕು ದಿನಗಳಿಗೆ 1.25 ಕೋಟಿ ಹತ್ತಿರ ಕಲೆಕ್ಷನ್ ಮಾಡಿದ್ದು ದೊಡ್ಡ ವಿಚಾರವೇ. ಹೊಚ್ಚ ಹೊಸ ಸಿನಿಮಾಗಳೇ ಇಷ್ಟೊಂದು ಕಲೆಕ್ಷನ್ ಮಾಡುವುದಕ್ಕೆ ಹಿಂದೇಟು ಹಾಕುತ್ತವೆ. ಅಂತಹದ್ದರಲ್ಲಿ 'ಅಪ್ಪು' ಕಲೆಕ್ಷನ್‌ಗೆ ಪ್ರದರ್ಶಕರು ಖುಷಿಯಾಗಿದ್ದಾರೆ.
ಕಿರುತೆರೆಯಲ್ಲಿ 'ಅಪ್ಪು' ಪ್ರಸಾರ
ಪುನೀತ್ ರಾಜ್‌ಕುಮಾರ್ 'ಅಪ್ಪು' ಸಿನಿಮಾವನ್ನು ಈಗಾಗಲೇ ಸಾಕಷ್ಟು ಬಾರಿ ಕಿರುತೆರೆಯಲ್ಲಿ ಪ್ರಸಾರ ಮಾಡಲಾಗಿದೆ. ರಿಲೀಸ್ ಆದ ದಿನದಿಂದ ಇಲ್ಲಿವರೆಗೂ ಲೆಕ್ಕವಿಲ್ಲದಷ್ಟು ಬಾರಿ ಪ್ರೇಕ್ಷಕರು ನೋಡಿದ್ದಾರೆ. ಹಾಗಿದ್ದರೂ, ಪುನೀತ್ ಬರ್ತ್‌ಡೇ ಮೂಡ್‌ನಲ್ಲಿ ಅಭಿಮಾನಿಗಳು ಥಿಯೇಟರ್‌ಗೆ ಬಂದು ಈ ಸಿನಿಮಾವನ್ನು ತೆರೆಮೇಲೆ ನೋಡಿ ಎಂಜಾಯ್ ಮಾಡಿದ್ದಾರೆ. ಪುನೀತ್ ಡ್ಯಾನ್ಸ್‌ಗೆ, ಫೈಟ್‌ಗೆ, ಡೈಲಾಗ್‌ಗಳನ್ನು ಕೇಳಿ ಖುಷಿ ಪಟ್ಟಿದ್ದಾರೆ.


Click it and Unblock the Notifications











