ಗಜನ ಮುಂದೆ ಅಪ್ಪು ಪ್ರತ್ಯಕ್ಷ: ಚತುರ್ಥಿಗೆ 'ಗಂಧದ ಗುಡಿ' ಹೊಸ ಪೋಸ್ಟರ್!
ಈ ಬಾರಿಯ ಗಣೇಶ ಚತುರ್ಥಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ತುಂಬಾನೇ ಸ್ಪೆಷಲ್. ಗಣೇಶನ ಜೊತೆ ಜೊತೆಗೆ ಅಪ್ಪು ಚತುರ್ಥಿಯನ್ನು ಜೋರಾಗೇ ಆಚರಿಸಲಾಗುತ್ತಿದೆ. ಕಳೆದೊಂದು ತಿಂಗಳಿನಿಂದ ಗಣೇಶ ಚತುರ್ಥಿಗಾಗಿ ತಯಾರಿ ನಡೆಯುತ್ತಿತ್ತು. ಅದರಂತೆ ಯುವರತ್ನನ ಅಭಿಮಾನಿಗಳು ಗಣೇಶ ಹಬ್ಬ ಆಚರಿಸುವುದಕ್ಕೆ ಸಜ್ಜಾಗಿದ್ದಾರೆ.
ರಾಜ್ಯದ ಮೂಲೆ ಮೂಲೆಯಲ್ಲಿ ಗಣೇಶ ಚತುರ್ಥಿ ಹಬ್ಬ ಆಚರಿಸಲಾಗುತ್ತಿದೆ. ಅಂತೆಯೇ ಸ್ಯಾಂಡಲ್‌ವುಡ್ ಮಂದಿ ಕೂಡ ಗಣೇಶ ಹಬ್ಬ ಆಚರಣೆ ಮಾಡುತ್ತಿದೆ. ಟೀಸರ್, ಟ್ರೈಲರ್ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಹಾಗೆಯೇ ಅಪ್ಪು ಕೊನೆಯ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ.
ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಗಂಧದ ಗುಡಿ' ಹೊಸ ಪೋಸ್ಟರ್ ಹಬ್ಬಕ್ಕೆಂದೇ ಬಿಡುಗಡೆ ಮಾಡಲಾಗಿದೆ. ಒಂದ್ಕಡೆ ಗಣೇಶ ಮೂರ್ತಿ ಜೊತೆ ಅಪ್ಪು ಮೂರ್ತಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಮಾಡುತ್ತಿದ್ದಾರೆ. ಇದೇ ವೇಳೆ ಪಿಆರ್‌ಕೆ 'ಗಂಧದ ಗುಡಿ' ಹೊಸ ಪೋಸ್ಟರ್ ಅಭಿಮಾನಿಗಳನ್ನು ಸಂಭ್ರಮವನ್ನು ದುಪ್ಪಟ್ಟು ಮಾಡಿದೆ.

ಆನೆ ಮುಂದೆ ನಿಂತ ಪುನೀತ್
ಪವರ್‌ಸ್ಟಾರ್ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ'. ಅವರದ್ದೇ ಪಿಆರ್‌ಕೆ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿತ್ತು. ಆದರೆ, ಈ ಸಿನಿಮಾವನ್ನು ನೋಡುವ ಮೊದಲೇ ಅಪ್ಪು ಅಗಲಿದ್ದಾರೆ. ಆದರೆ, ಅವರ ಕನಸಿಗೆ ಮತ್ತಷ್ಟು ಶ್ರೀಮಂತಿಕೆಯನ್ನು ತುಂಬಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಮಧ್ಯೆ ಗಣೇಶನ ಹಬ್ಬಕ್ಕೆ ಗಜಮುಖನ ಮುಂದೆ ಪವರ್‌ಸ್ಟಾರ್ ನಿಂತಿರೋ ಫೋಟೊವನ್ನು ಪಿಆರ್‌ಕೆ ಸಂಸ್ಥೆ ರಿಲೀಸ್ ಮಾಡಿದೆ. ಗಂಧದ ಗುಡಿಯ ಈ ಪೋಸ್ಟರ್ ಅಪ್ಪು ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ.

ಅಪ್ಪು ಮೊದಲ ಪುಣ್ಯ ತಿಥಿಗೆ ಸಿನಿಮಾ
'ಗಂಧದ ಗುಡಿ' ಸಿನಿಮಾ ಅಕ್ಟೋಬರ್ 28ಕ್ಕೆ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಈಗಾಗಲೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಇದೇ ಅಕ್ಟೋಬರ್ 29ಕ್ಕೆ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಒಂದು ವರ್ಷ ಆಗಲಿದೆ. ಅದಕ್ಕೂ ಒಂದು ದಿನ ಮೊದಲೇ ಪವರ್‌ಸ್ಟಾರ್ ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಹಾಗೂ ಪ್ರಕೃತಿ ಸೌಂದರ್ಯ ಆರಾಧಕರ ಕಣ್ಮುಂದೆ ಬರಲಿದೆ.

ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ
ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಕಮರ್ಷಿಯಲ್ ಸಿನಿಮಾ 'ಜೇಮ್ಸ್' ಈಗಾಗಲೇ ರಿಲೀಸ್ ಆಗಿದೆ. ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದ್ದು, ಹೊಸ ದಾಖಲೆಯನ್ನು ಬರೆದಿದೆ. ಇನ್ನೊಂದು ಕಡೆ ವಿಶೇಷ ಪಾತ್ರದಲ್ಲಿ ಅಭಿನಯಿಸಿರೋ 'ಲಕ್ಕಿ ಮ್ಯಾನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದರ ಹಿಂದೆನೇ 'ಗಂಧದ ಗುಡಿ' ಕೊನೆಯ ಸಿನಿಮಾವಾಗಿ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.

'ಗಂಧದ ಗುಡಿ'ಯ ಅನಾವರಣ
'ಗಂಧದ ಗುಡಿ' ಸಿನಿಮಾ ಪ್ರಕೃತಿ ಹಾಗೂ ಸಾಹಸಮಯ ಸಿನಿಮಾ. ಆರಂಭದಲ್ಲಿ ಡಾಕ್ಯೂಮೆಂಟರಿ ಎನಿಸಿದ್ದರೂ, ಇದು ಸಿನಿಮಾ ಎಂದೇ ಚಿತ್ರತಂಡ ಹೇಳಿಕೊಂಡಿದೆ. ಇದು ಕರ್ನಾಟಕದ ದಟ್ಟ ಕಾಡಿನಲ್ಲಿರುವ ವನ್ಯಜೀವಿಗಳ ಬಗ್ಗೆ ತನಿಖೆ ನಡೆಸುವ ಸಿನಿಮಾ. ಅಮೋಘವರ್ಷ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ಆರಂಭದಿಂದಲೂ ಕುತೂಹಲ ಕೆರಳಿಸಿದ್ದು, ಪ್ರೇಕ್ಷಕರು ಕುತೂಹಲದಿಂದ ಕಾದು ಕೂತಿದ್ದಾರೆ.


Click it and Unblock the Notifications











