ಅಪ್ಪು ಹಾಡು ಹಾಡಿ ಕಣ್ಣೀರಿಟ್ಟ ಶಿವಣ್ಣ: ಪುನೀತ್ ಕಂಠದಲ್ಲೇ ಆ ಹಾಡು ಕೇಳಿ!
ನಿನ್ನೆ ( ನವೆಂಬರ್ 16) ಅಪ್ಪು ಅಗಲಿಕೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ 'ಪುನೀತ್ ನಮನ' ಕಾರ್ಯಕ್ರಮವನ್ನು ಆಯೋಜಿಸಿತ್ತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಪುನೀತ್ ನಮನ ಕಾರ್ಯಕ್ರಮಕ್ಕೆ ಆಗಮಿಸಿ, ಪುನೀತ್‌ಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಶಿವರಾಜ್‌ಕುಮಾರ್ ತಮ್ಮನನ್ನು ನೆನೆದು ಭಾವುಕರಾದರು. ಇಷ್ಟು ದಿನ ಅಪ್ಪು ಅಗಲಿಕೆಯ ನೋವನ್ನು ತಡೆದುಕೊಂಡಿದ್ದ ಶಿವಣ್ಣ ವೇದಿಕೆ ಮೇಲೆ ಏರುತ್ತಿದ್ದಂತೆ ಕಣ್ಣೀರಿನ ಕಟ್ಟೆ ಒಡೆದಿತ್ತು.
ಪುನೀತ್ ರಾಜ್‌ಕುಮಾರ್ ಇಷ್ಟ ಕಷ್ಟಗಳ ಬಗ್ಗೆ ಶಿವಣ್ಣ ವೇದಿಕೆಯಲ್ಲಿ ಹಂಚಿಕೊಂಡರು. ಇದೇ ವೇಳೆ ಪುನೀತ್ ರಾಜ್‌ಕುಮಾರ್ ಕೆಲವು ವಿಶೇಷ ಸಂದರ್ಭಗಳಲ್ಲಿ ಶಿವಣ್ಣನ ಮನೆಗೆ ಬಂದಾಗ ಹಾಡುತ್ತಿದ್ದರು. ಅಪ್ಪುಗೆ ಹಿಂದಿ ಸಿನಿಮಾದ ಹಳೆಯ ಹಾಡು ತುಂಬಾನೇ ಇಷ್ಟವಿತ್ತು. ಕೈಗೆ ಮೈಕ್ ಸಿಕ್ಕರೆ 'ಮೇ ಶಾಯರ್ ತೋ ನಹಿ.. ಮಗರ್ ಹೇ ಹಸಿ' ಹಾಡಲು ಶುರುವಿಟ್ಟುಕೊಳ್ಳುತ್ತಿದ್ದರು. ಶಿವಣ್ಣ ವೇದಿಕೆ ಮೇಲೆ ಹಾಡಿದ ಇದೇ ಹಾಡನ್ನು ಅಪ್ಪು ಹಾಡಿದ್ದರು. ಆ ಹಾಡು ಕೇಳಿದರೆ, ಅಪ್ಪು ಜೀವಂತವಾಗೇ ಇದ್ದಾರೆ ಅನಿಸುತ್ತೆ.

'ಮೇ ಶಾಯರ್ ತೋ ನಹಿ' ಅಪ್ಪು ಮೆಚ್ಚಿದ ಹಾಡು
ಪುನೀತ್ ನಮನ ಕಾರ್ಯಕ್ರಮದಲ್ಲಿ ಅಪ್ಪು ನೆನೆದು ಶಿವಣ್ಣನ ಕಣ್ಣುಗಳು ಒದ್ದೆಯಾಗಿದ್ದವು. "ನನ್ನ ತಮ್ಮ ರಾಯಲ್ ಆಗಿ ಹುಟ್ಟಿ, ರಾಯಲ್ ಆಗಿಯೇ ಹೋದ. ಅಪ್ಪು ಮಾಡಬೇಕಾಗಿದ್ದು ಇನ್ನೂ ಸಾಕಷ್ಟು ಇತ್ತು. ಆ ದೇವರು ಒಳ್ಳೆಯವರನ್ನು ಇರುವುದಕ್ಕೆ ಬಿಡುವುದಿಲ್ಲ ಅನಿಸುತ್ತೆ. ಅದಕ್ಕೆ ಇಷ್ಟು ಬೇಗ ಕರೆದುಕೊಂಡು ಹೋಗಿದ್ದಾನೆ. ಅಪ್ಪು ನಮ್ಮಲ್ಲಿ ಇದ್ದಾನೆ. ಅವನನ್ನು ಜೀವಂತವಾಗಿ ಇಡಲು ನಾವು ಪ್ರಯತ್ನ ಪಡಬೇಕು. ಧ್ರುವ, ಸುದೀಪ್, ಯಶ್, ದರ್ಶನ್, ಗಣೇಶ್, ವಿಜಯ್ ಇವರಲ್ಲಿ ನನ್ನ ತಮ್ಮನನ್ನು ನೋಡುತ್ತೇನೆ. ವಿಶಾಲ್ ಅವರನ್ನು ನೋಡಿದಾಗಲೆಲ್ಲಾ ಅಪ್ಪು ನೋಡಿದ ಹಾಗೆ ಆಗುತ್ತೆ." ಎಂದು ಭಾವುಕರಾಗಿದ್ದರು. ಈ ವೇಳೆ ಅಪ್ಪು ತುಂಬಾನೇ ಇಷ್ಟ ಪಟ್ಟು ಹಾಡುತ್ತಿದ್ದ ಹಾಡು 'ಮೇ ಶಾಯರ್ ತೋ ನಹಿ' ಹಾಡನ್ನು ಶಿವಣ್ಣ ಹಾಡಿದ್ದರು.
ಅಪ್ಪು ಮನಬಿಚ್ಚಿ ಹಾಡಿದ್ದ ಹಾಡು ಹೇಗಿದೆ?
ಶಿವಣ್ಣನ ಮನೆ ಪುನೀತ್ ರಾಜ್‌ಕುಮಾರ್ ಭೇಟಿ ಕೊಟ್ಟಾಗ ಸಹೋದರರು ಸಂಗೀತ ಕೂಟವನ್ನು ಏರ್ಪಾಡು ಮಾಡುತ್ತಿದ್ದರು. ಶಿವಣ್ಣ, ಪುನೀತ್ ರಾಜ್ ಸೇರಿದಂತೆ ಆಪ್ತರೆಲ್ಲರೂ ಸೇರಿಕೊಂಡು ಸಂಗೀತ ಸಂಜೆಯನ್ನೇ ಆಯೋಜಿಸುತ್ತಿದ್ದರು. ಈ ವೇಳೆ ಅಪ್ಪು ತನಗೆ ಇಷ್ಟವಾದ 'ಮೇ ಶಾಯರ್ ತೋ ನಹಿ' ಹಿಂದಿ ಹಾಡನ್ನು ಹಾಡಿ ರಂಜಿಸಿದ್ದರು. ಇದೇ ಹಾಡನ್ನು ಶಿವಣ್ಣ 'ಪುನೀತ್ ನಮನ' ವೇದಿಕೆ ಮೇಲೆ ನೆನಪಿಸಿಕೊಂಡು ಹಾಡಿದ್ದರು. ಅಂದು ಪುನೀತ್ ಇದೇ ಹಾಡನ್ನು ಹಾಡಿ ರಂಜಿಸಿದ್ದರು. ಆ ವಿಡಿಯೋ ಇಲ್ಲಿದೆ ನೋಡಿ.

ರಿಷಿ ಕಪೂರ್ ನಟಿಸಿದ 'ಬಾಬಿ' ಸಿನಿಮಾದ ಹಾಡಿದು
'ಮೇ ಶಾಯರ್ ತೋ ನಹಿ' ಇದು 1973ರಲ್ಲಿ ತೆರೆಕಂಡ 'ಬಾಬಿ' ಸಿನಿಮಾದ ಹಾಡು. ರಿಷಿ ಕಪೂರ್, ಡಿಂಪಲ್ ಕಪಾಡಿಯಾ ನಟಿಸಿದ ಈ ಚಿತ್ರದ ಹಾಡನ್ನು ಶೈಲೆಂದ್ರ ಸಿಂಗ್ ಹಾಡಿದ್ದರು. ಲಕ್ಷ್ಮಿಕಾಂತ್ ಪ್ಯಾರೆಲಾಲ್ ರಾಗ ಸಂಯೋಜಿಸಿದ್ದರು. ಇದು ಬಾಲಿವುಡ್ ನಟ ರಿಷಿಕಪೂರ್ ನಟಿಸಿದ ಮೊದಲ ಸಿನಿಮಾ ಆಗಿತ್ತು.

ಹಾಡಿನಿಂದಲೇ ಅಪ್ಪು ಸಮಾಜಸೇವೆ
ಪುನೀತ್ ರಾಜ್‌ಕುಮಾರ್ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿದ್ದು ಸ್ವತಃ ಅಣ್ಣಾವ್ರ ಕುಟುಂಬಕ್ಕೆ ಗೊತ್ತಿರಲಿಲ್ಲ. " ಇಷ್ಟೊಂದು ಸಾಮಾಜಿಕ ಕಾರ್ಯ ಮಾಡಿದ್ದಾನೆ. ಅವನಿಗೆ ಈ ದೊಡ್ಡ ಬುದ್ಧಿ ಅದೆಲ್ಲಿಂದ ಬಂತೋ ಗೊತ್ತಿಲ್ಲ" ಎಂದು ಶಿವಣ್ಣ ವೇದಿಕೆ ಮೇಲೆ ಹೇಳಿದ್ದರು. ಹೌದು.. ಪುನೀತ್ ರಾಜ್‌ಕುಮಾರ್ ನಟನೆ ಜೊತೆ ಹಾಡುಗಳನ್ನೂ ಹಾಡುತ್ತಿದ್ದರು. ಕೇವಲ ತಮ್ಮ ಸಿನಿಮಾಗಷ್ಟೇ ಅಲ್ಲ. ಬೇರೆ ನಟರ ಚಿತ್ರಗಳಿಗೂ ಧ್ವನಿ ನೀಡುತ್ತಿದ್ದರು. ಅದರಿಂದ ಬಂದ ಹಣವನ್ನು ಸಮಾಜ ಮುಖಿ ಕೆಲಸಗಳಿಗೆ ಬಳಸುತ್ತಿದ್ದರು. ಹಾಡಿನಲ್ಲೂ ಸಮಾಜ ಸೇವೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.


Click it and Unblock the Notifications











