ಪಾರ್ವತಮ್ಮ ಹುಟ್ಟುಹಬ್ಬದಂದೇ ಅಪ್ಪು ಕನಸಿನ ಅನಾವರಣ: ಇದು ಡಾಕ್ಯೂಮೆಂಟರಿ ಅಲ್ಲ ಸಿನಿಮಾ
ಪುನೀತ್ ಅಗಲಿಕೆಗೂ ಮುನ್ನ ಒಂದು ಸಮುದ್ರದಾಳದಲ್ಲಿ ಸ್ಕೂಬಾ ಡೈವ್ ಮಾಡಿದ ಒಂದು ಫೋಟೊ ಹಾಕಿ ಟ್ವೀಟ್ ಮಾಡಿದ್ದರು. ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್‌ಕುಮಾರ್ ಕಂಡ ಕನಸಿನ ಟೈಟಲ್ ಅನಾವರಣ ಆಗಬೇಕಿತ್ತು. " ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ." ಎಂದು ಹೇಳಿದ್ದರು. ಆದರೆ, ಎರಡು ದಿನ ಮುನ್ನವೇ ಅಪಾರ ಅಭಿಮಾನಿಗಳನ್ನು ಅಗಲಿ ದೂರವಾದರು.
ಪುನೀತ್ ರಾಜ್‌ಕುಮಾರ್ ಕಂಡ ಕನಸುಗಳಲ್ಲಿ ಡಾಕ್ಯೂಮೆಂಟರಿ ಕೂಡ ಒಂದಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಭಾಗಗಳ ಕಡಲ ತೀರಗಳಲ್ಲಿ ಕಾಡುಮೇಡುಗಳಲ್ಲಿ ಪುನೀತ್ ರಾಜ್‌ಕುಮಾರ್ ಅಲೆದಾಡಿದ್ದರು. ಕರ್ನಾಟಕದ ಸಮುದ್ರದಾಳಕ್ಕೆ ಹೋಗಿ ಅಲ್ಲಿನ ಸೌಂದರ್ಯವನ್ನು ಚಿತ್ರೀಕರಿಸಿದ್ದರು. ಆ ಡಾಕ್ಯೂಮೆಂಟರಿಯನ್ನೇ ಕನ್ನಡಿಗರಿ ತೋರಿಸಬೇಕು ಎಂದು ಆಸೆ ಇತ್ತು. ಅಪ್ಪು ಅರ್ಧದಲ್ಲಿಯೇ ಬಿಟ್ಟು ಹೋದ ಆ ಆಸೆಯನ್ನು ಈಗ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಈಡೇರಿಸುತ್ತಿದ್ದಾರೆ.

ಅಪ್ಪು ಕಾಣದ ರೋಮಾಂಚಕ ಅನುಭವದ ಟೈಟಲ್ ಟೀಸರ್
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ರಾಜ್ಯೋತ್ಸವಕ್ಕೆ 'ವೈಲ್ಡ್ ಕರ್ನಾಟಕ' ಡಾಕ್ಯೂಮೆಂಟರಿಯ ಶೀರ್ಷಿಕೆಯನ್ನು ಅನೌನ್ಸ್ ಮಾಡುವ ಆಲೋಚನೆ ಇತ್ತು. ಇದರೊಂದಿಗೆ ಟೈಟಲ್ ಟೀಸರ್ ಕೂಡ ರಿಲೀಸ್ ಮಾಡುವುದರಲ್ಲಿದ್ದರು. ಆದರೆ, ವಿಧಿ ಬಿಡಲಿಲ್ಲ. ಈಗ ಅಪ್ಪು ಕನಸನ್ನು ಅಪ್ಪು ಪತ್ನಿ ಅಶ್ವಿನಿ ನೆರವೇರಿಸಲು ಮುಂದಾಗಿದ್ದಾರೆ. ಇದೇ ಡಿಸೆಂಬರ್ 06ರಂದು ಈ ಡಾಕ್ಯೂಮೆಂಟರಿಗೆ ಟೈಟಲ್ ಟೀಸರ್ ಬಿಡುಗಡೆಯಾಗಲಿದೆ. ಈ ವಿಷಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಸ್ವತ: ಅಶ್ವಿನಿಯವರೇ ಅನೌನ್ಸ್ ಮಾಡಿದ್ದಾರೆ.
ಅಪ್ಪು ಕನಸು ಥಿಯೇಟರ್‌ನಲ್ಲಿ ರಿಲೀಸ್
ಅಭಿಮಾನಿಗಳಿಗೆ ಇನ್ನೂ ಒಂದು ಸಿಹಿ ಸುದ್ದಿಯಿದೆ. ಡಿಸೆಂಬರ್ 6ರಂದು ಪಾರ್ವತಮ್ಮ ರಾಜ್‌ಕುಮಾರ್ ಅವರ ಜನ್ಮದಿನ. ಆ ದಿನದಂದೇ ಟೈಟಲ್ ಟೀಸರ್ ರಿಲೀಸ್ ಮಾಡಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದಾರೆ. ಖುಷಿ ವಿಷಯ ಏನೆಂದರೆ, ಅಪ್ಪು ಕನಸು ತೆರೆಮೇಲೆ ಮೂಡಲಿದೆ. ಅಂದರೆ, ಈ ಡಾಕ್ಯೂಮೆಂಟರಿಯನ್ನು ಸಿನಿಮಾ ರೂಪದಲ್ಲೇ ತೆರೆಮೇಲೆ ತರಲಾಗುತ್ತದೆ. ಸಿನಿಮಾ ರಿಲೀಸ್ ಆದಂತೆ ಥಿಯೇಟರ್‌ಗಳಲ್ಲಿ ರಿಲೀಸ್ ಮಾಡಲು ಅಪ್ಪು ಪತ್ನಿ ಅಶ್ವಿನಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಡ್ಯಾಕ್ಯೂಮೆಂಟರಿಗೆ ಅಪ್ಪು ಇಟ್ಟ ಹೆಸರೇನು?
ಈ ಡಾಕ್ಯುಮೆಂಟರಿಯನ್ನು ಪಿಆರ್‌ಕೆ ಪ್ರೊಡಕ್ಷನ್ ಹಾಗೂ ಮಡ್ ಸ್ಕಿಪ್ಪರ್ ಸಂಸ್ಥೆ ಜಂಟಿಯಾಗಿ ಸೇರಿ ನಿರ್ಮಿಸಿದೆ. ಈ ಡಾಕ್ಯೂಮೆಂಟರಿಗೆ ಅಪ್ಪು ಯಾವ ಶೀರ್ಷಿಕೆ ಫೈನಲ್ ಮಾಡಿದ್ದರು? ಅನ್ನುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಮೂಲಗಳ ಪ್ರಕಾರ, ಒಂದು ಮುತ್ತಿನ ಕಥೆ ಅಥವಾ ಗಂಧದ ಗುಡಿ ಎಂಬ ಎರಡು ಶೀರ್ಷಿಕೆಗಳನ್ನು ಪುನೀತ್ ತುಂಬಾನೇ ಇಷ್ಟ ಪಟ್ಟಿದ್ದರು. ಹೀಗಾಗಿ ಇವೆರಡಲ್ಲಿ ಯಾವುದಾದರೂ ಒಂದು ಶೀರ್ಷಿಕೆ ಫೈನಲ್ ಆಗಬಹುದು ಎನ್ನಲಾಗಿದೆ. ಆದರೆ, ಈ ಬಗ್ಗೆ ತಂಡ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಸ್ಕೂಬಾ ಡೈವ್ ಮಾಡಿ ಮೂಕ ವಿಸ್ಮಿತರಾಗಿದ್ದರು
ಪುನೀತ್ ರಾಜ್‌ಕುಮಾರ್ ಈ ಡಾಕ್ಯೂಮೆಂಟರಿಗಾಗಿ ಮುರುಡೇಶ್ವರ, ಗೋಕರ್ಣ, ಕುಮಟಾ, ಸೇರಿದಂತೆ ಕರ್ನಾಟಕದ ಕರಾವಳಿಯ ಕಡಲೊಳಗೆ ಈಜಾಡಿದ್ದರು. ಅದೇ ಕಡಲೊಳಗಿನ ಸೌಂದರ್ಯ ಕಂಡು ಮೂಕ ವಿಸ್ಮಿತರಾಗಿದ್ದರು. ಸಿನಿಮಾದ ಜೊತೆ ಜೊತೆಗೇ ಡ್ಯಾಕ್ಯೂಮೆಂಟರಿ ಮಾಡಿ ಅದನ್ನು ಬೆಳ್ಳಿ ಪರದೆ ಮೂಡಿಸಲು ಸಾಕಷ್ಟು ಶ್ರಮಿಸಿದ್ದರು. ಅದು ಇನ್ನು ಕೆಲವು ದಿನಗಳಲ್ಲಿ ರಿಲೀಸ್ ಆಗಲಿದೆ.


Click it and Unblock the Notifications











