'ಜೇಮ್ಸ್' ಕಾರ್ಯಕ್ರಮಕ್ಕೆ ಭಾಗವಹಿಸಲಿರುವ ಅಪ್ಪು ಫ್ಯಾನ್ಸ್ ಸಂಖ್ಯೆ ಎಷ್ಟು? ಸೇಲ್ ಆಗಿದ್ದು ಎಷ್ಟು ಪಾಸ್?
'ಜೇಮ್ಸ್' ಕಾರ್ಯಕ್ರಮ ಇಂದು (ಮಾರ್ಚ್ 13)ರಂದು ಭಾನುವಾರ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯಲಿದೆ. ರಾತ್ರಿ 7ಗಂಟೆಯಿಂದ ಈ ಅದ್ದೂರಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. 'ಜೇಮ್ಸ್' ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ, ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಜೊತೆ ದೊಡ್ಮನೆ ಬಳಗ ಸೇರಲಿದೆ. ಅಪ್ಪು ಅಭಿಮಾನಿಗಳಿಗಾಗಿಯೇ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿಯೇ ಅಭಿಮಾನಿಗಳು ಸೇರಲಿದ್ದಾರೆ.
'ಜೇಮ್ಸ್' ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೇ ಅಭಿಮಾನಿಗಳು. ಹೀಗಾಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗಾಗಿ ಪಾಸ್ ಅನ್ನು ವಿತರಣೆ ಮಾಡಲಾಗಿದೆ. ಈ ಕಾರ್ಯಕ್ರಮ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಡೆಯುತ್ತಿರುವುದರಿಂದ ಮೊದಲು ಅಭಿಮಾನಿಗಳಿಗೆ ಪಾಸ್ ಬೇಕಿಲ್ಲ ಎನ್ನಲಾಗಿತ್ತು. ಆದ್ರೀಗ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಸೇರುತ್ತಿರುವುದರಿಂದ ಕೆಲವು ಪಾಸ್‌ಗಳನ್ನು ಮಾತ್ರ ವಿತರಣೆ ಮಾಡಲಾಗಿದೆ ಎನ್ನಲಾಗಿದೆ.

ಅಭಿಮಾನಿಗಳ ಸಂಖ್ಯೆ ಎಷ್ಟು?
'ಜೇಮ್ಸ್' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆಂದೇ ಅಭಿಮಾನಿಗಳಿಗೆ ವಿಶೇಷ ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ. ಇದೂವರೆಗೂ ಸುಮಾರು 2500 ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ. ಒಂದು ಪಾಸ್‌ನಲ್ಲಿ ಇಬ್ಬರು ಅಭಿಮಾನಿಗಳು ಒಳಗೆ ಬರಲು ಅವಕಾಶ ನೀಡಿಲಾಗಿದ್ದು, ಅಂದಾಜು 5 ಸಾವಿರ ಅಪ್ಪು ಅಭಿಮಾನಿಗಳು 'ಜೇಮ್ಸ್' ಪ್ರೀ- ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿದೆ. ಕೊನೆಯ ಕ್ಷಣದಲ್ಲಿ ಮತ್ತಷ್ಟು ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸೇರಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಅಭಿಮಾನಿಗಳಿಗಾಗಿ ಬೃಹತ್ ಸೆಟ್ಟು
ಅಪ್ಪು ಅಭಿನಯದ ಕೊನೆಯ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾದು ಕೂತಿದ್ದಾರೋ, ಹಾಗೇ ಈ ಇವೆಂಟ್ ಅನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದರು. ಒಂದಿಷ್ಟು ಗೊಂದಲಗಳ ನಡುವೆ 'ಜೇಮ್ಸ್' ಪ್ರಿ-ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ಇಂದು ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಅಪ್ಪು ಅಭಿಮಾನಿಗಳು ಈ ಇವೆಂಟ್ ಅನ್ನು ಕಣ್ತುಂಬಿಕೊಳ್ಳಲು ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ. 100/40 ಅಳತೆಯ ಬೃಹತ್ ಸೆಟ್ ಅನ್ನು ಅಳವಡಿಸಲಾಗಿದೆ. ಸೀ ಮೂಲಕ ಪಾಸ್ ಸಿಗದೆ ಇದ್ದವರೂ ಕಾರ್ಯಕ್ರಮ ವೀಕ್ಷಿಸಲು ಅವಕಾಶ ನೀಡಲಾಗಿದೆ.

18 ಎಲ್‌ಇಡಿ ಸ್ಕ್ರೀನ್
ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಪ್ರಿ ರಿಲೀಸ್ ಇವೆಂಟ್‌ಗೆ ಭರ್ಜರಿ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಪ್ಯಾಲೇಸ್ ಗ್ರೌಂಡ್‌ನಲ್ಲಿ ಬೃಹತ್ ಸೆಟ್ ಜೊತೆಗೆ ಕಾರ್ಯಕ್ರಮ ವೀಕ್ಷಿಸಲು ಸುಮಾರು 18 ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಜನರು ಕಾರ್ಯಕ್ರಮವನ್ನು ವೀಕ್ಷಿಸಬಹುದು. ಸುರಕ್ಷತೆಯ ದೃಷ್ಟಿಯಿಂದ ಡಾಗ್ ಸ್ಕ್ವಾಡ್ ಅನ್ನು ನಿಯೋಜಿಸಲಾಗಿದೆ. ಈ ಮೂಲಕ ಪ್ರತಿಯೊಬ್ಬರನ್ನು ಚೆಕ್ ಮಾಡಿ ಬಿಡುಗಡೆ ಮಾಡಲಾಗುತ್ತೆ.

ಜೇಮ್ಸ್ ನಟಿ ಹೇಳಿದ್ದೇನು?
'ಜೇಮ್ಸ್' ಸಿನಿಮಾದ ನಾಯಕಿ ಪ್ರಿಯಾ ಆನಂದ್ ಪ್ರಿ ರಿಲೀಸ್ ಇವೆಂಟ್‌ಗೆ ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಾ ಆನಂದ್ ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ನೆನೆದು ಪ್ರಿಯಾ ಆನಂದ್ ಭಾವುಕರಾಗಿದ್ದಾರೆ. ಅಲ್ಲದೆ ಇದು ಅದ್ಧೂರಿ ಸಿನಿಮಾ, ಡ್ಯಾನ್ಸ್, ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಇದೆ. ಇದು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಖಂಡಿತಾ ಇಷ್ಟ ಆಗುತ್ತೆ ಎಂದು ಪ್ರಿಯಾ ಆನಂದ್ ಹೇಳಿದ್ದಾರೆ.


Click it and Unblock the Notifications











