'ಅಪ್ಪು' ಅಂತ ಟೈಟಲ್ ಕೊಟ್ಟಿದ್ದೇ ಶಿವಣ್ಣ; ಪುರಿ ಜಗನ್ನಾಥ್ ಶೀರ್ಷಿಕೆ ರಿಜೆಕ್ಟ್ ಅಂದು ಮಾಡಿದ್ದೇಕೆ?
ನಿನ್ನೆ (ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾ ಆಚರಣೆ ಮಾಡಿದ್ದಾರೆ. ಅಪ್ಪು ಪುಣ್ಯಭೂಮಿ ಬಳಿ ಅಭಿಮಾನಿಗಳು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದರು. ಕಳೆದ ಮೂರು ದಿನಗಳಿಂದ ಥಿಯೇಟರ್‌ನಲ್ಲಿ 'ಜಾಕಿ' ಸಿನಿಮಾ ಬೇಜಾನ್ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನು ಬರೆಯುತ್ತಿದೆ.
ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ವೇಳೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೆಲವು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಟ್ಟುಕೊಟ್ಟಿದ್ದಾರೆ. 'ಅಪ್ಪು' ಟೈಟಲ್‌ನಿಂದ ಹಿಡಿದು ಪುನೀತ್ ಸೂಪರ್‌ಸ್ಟಾರ್ ಆಗಿದ್ದು ಹೇಗೆ? 'ಜಾಕಿ' ಸಿನಿಮಾ ಯಶಸ್ಸಿನ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಶಿವಣ್ಣ ಅವರ ಕುಟುಂಬದೊಂದಿಗೆ ನಿನ್ನೆ (ಮಾರ್ಚ್ 17) ಅಪ್ಪು ಪುಣ್ಯಭೂಮಿಗೆ ಬಂದು ಪೂಜೆಯನ್ನು ಸಲ್ಲಿಸಿದರು. ಬಳಿಕ ಪುನೀತ್ ರಾಜ್‌ಕುಮಾರ್ ಜರ್ನಿಯನ್ನು ಮೆಲುಕು ಹಾಕಿದ್ದರು. ಪುನೀತ್ ಮೊದಲ ಸಿನಿಮಾದ ಟೈಟಲ್, ಯುವ ರಾಜ್‌ಕುಮಾರ್ ಎಂಟ್ರಿ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ 'ಅಪ್ಪು' ಅಂತ ಟೈಟಲ್ ಕೊಡುವುದಕ್ಕಿಂತ ಮುನ್ನ ಯಾವ ಶೀರ್ಷಿಕೆ ಇತ್ತು? ಅದನ್ಯಾಕೆ ಬದಲಾಯಿಸಲಾಯ್ತು? ಅನ್ನೋದನ್ನೂ ಶಿವಣ್ಣ ಹೇಳಿಕೊಂಡಿದ್ದಾರೆ.
"ಅಣ್ಣಾವ್ರ ಮಗ ಅನ್ನೋ ಟ್ಯಾಗ್ ಇತ್ತು"
ಪವರ್‌ಸ್ಟಾರ್ ಬಗ್ಗೆ ಶಿವಣ್ಣ ಎಂದಿನಂತೆ ಪಾಸಿಟಿವ್ ಆಗಿ ಮಾತು ಶುರು ಮಾಡಿದ್ದರು. ಎಲ್ಲೂ ಹೋಗಿಲ್ಲ. ಇಲ್ಲೇ ಎಲ್ಲೋ ಇದ್ದಾರೆ ಅಂತ ಅಂದುಕೊಳ್ಳಬೇಕು ಎಂದಿದ್ದಾರೆ. ಇದೇ ವೇಳೆ ಅವರು ಅಣ್ಣಾವ್ರ ಮಗ ಅನ್ನುವ ಟ್ಯಾಗ್ ಇಟ್ಟುಕೊಂಡೇ ಸಿನಿಮಾಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. "ನಾವೆಲ್ಲ ಏನನ್ನೂ ನಿರೀಕ್ಷೆ ಇಟ್ಟುಕೊಂಡು ಬಂದಿಲ್ಲ. ನಾನು ಬರಬೇಕಾದರೆ ಅಣ್ಣಾವ್ರ ಮಗ ಅನ್ನೋ ಟ್ಯಾಗ್ ಇತ್ತು. ಶಿವ ಪಕ್ಕದಲ್ಲಿ ರಾಜ್‌ಕುಮಾರ್ ಹೆಸರಿತ್ತು. ರಾಜ್‌ಕುಮಾರ್ ಪಕ್ಕದಲ್ಲಿ ಒಂದು ಸ್ಟ್ರಾಂಗ್ ಪವರ್ ಇತ್ತು. ಆ ಪವರ್ ಜೊತೆಯಲ್ಲಿ ಬಂದವರು ನಾವು. ಬಂದ್ಮೇಲೆ ಅಭಿಮಾನಿಗಳು ತೋರಿಸುವ ಪ್ರೀತಿನೇ ಬೇರೆ. ಅವರು ಒಮ್ಮೆ ಒಪ್ಪಿದರೆ, ಮತ್ತೆ ಅದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯನೇ ಇಲ್ಲ." ಎಂದು ಶಿವಣ್ಣ ಹೇಳಿದ್ದಾರೆ.

"ಅಪ್ಪು ಚಿಕ್ಕ ವಯಸ್ಸಲ್ಲೇ ಸೂಪರ್‌ಸ್ಟಾರ್"
ಪುನೀತ್ ಹಾಗೂ ತಾವು ಚಿತ್ರರಂಗಕ್ಕೆ ಆಡಂಬರವಿಟ್ಟುಕೊಂಡು ಬಂದಿಲ್ಲ ಅನ್ನೋದನ್ನು ಶಿವಣ್ಣ ನೆನಪಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಅಪ್ಪು ಸೂಪರ್‌ಸ್ಟಾರ್ ಆಗಿದ್ದರು ಎಂದಿದ್ದಾರೆ. "ಟ್ಯಾಲೆಂಜ್ ಅನ್ನು ತುಂಬಾನೇ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ನಾವೆಲ್ಲ ಬಂದಾಗ ಆಡಂಬರ ಇರಲಿಲ್ಲ. ಅಪ್ಪುನೇ ತೆಗೆದುಕೊಳ್ಳಿ, ಚಿಕ್ಕ ವಯಸ್ಸಿನಲ್ಲೇ ಸೂಪರ್‌ಸ್ಟಾರ್, ನ್ಯಾಷನಲ್ ಅವಾರ್ಡ್ ತೆಗೆದುಕೊಂಡಿದ್ದ. ಅಪ್ಪುನ ಸಿನಿಮಾದಲ್ಲಿ ನೋಡಿ ನೋಡಿ ಜನರಿಗೆ ನಮ್ಮ ಮನೆ ಹುಡುಗ ಅಂತ ಅನಿಸಿಬಿಟ್ಟ." ಎಂದು ಶಿವಣ್ಣ ಹೇಳಿದ್ದಾರೆ.
'ಅಪ್ಪು' ಸಿನಿಮಾ ಮಾಡಬೇಕು ಅಂದಿದ್ಯಾರು?
"ಅಪ್ಪು ಸಿನಿಮಾ ಮಾಡಬೇಕಾದರೆ, ಇಂತಹದ್ದೊಂದು ಸಬ್ಜೆಕ್ಟ್ ಇದೆ ಅಂದಾಗ, ನಾನು ಮಾಡುವುದಿಲ್ಲ ಅಂದಿದ್ದ. ಹೀಗಂದರೆ ಹೇಗೆ ಅಪ್ಪು ಅಂದಾಗ ಅವನಿಗೆ ಮಾಡಬೇಕು ಅಂತ ಅನಿಸಿತ್ತು. ಅಪ್ಪುನಾ ನಾವು ಸಿನಿಮಾದಲ್ಲಿ ಅಲ್ಲದೆ ಪ್ರತಿದಿನ ವ್ಯಾಯಾಮ ಮಾಡುವುದನ್ನು ನೋಡುತ್ತಿದ್ದಾಗ ಇವನು ಯಾಕೆ ಸೂಪರ್‌ಸ್ಟಾರ್ ಆಗಲ್ಲ ಅಂತ ಅನಿಸಿತ್ತು. ಪುರಿ ಜಗನ್ನಾಥ್ ಅವರ ಹೇಳಿದ ಸಬ್ಜೆಕ್ಟ್ ಕೇಳಿ ಇದು ಅಪ್ಪು ಮಾಡಿ ಸರ್ ಅಂತ, ವರದಪ್ಪ ಅವರು ಅಪ್ಪಾಜಿಗೆ ಹೇಳಿ ಆಗಿದ್ದು." ಶಿವಣ್ಣ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ.
'ಅಪ್ಪು' ಸಿನಿಮಾಗೆ ಮೊದಲಿಟ್ಟ ಟೈಟಲ್ ಏನು?
'ಅಪ್ಪು' ಟೈಟಲ್ ಕೊಟ್ಟಿದ್ದು ನಾನೇ ಎಂದು ಶಿವಣ್ಣ ಈ ಹಿಂದೆನೇ ಹೇಳಿಕೊಂಡಿದ್ದಾರೆ. ಆದರೆ, 'ಅಪ್ಪು'ಗೂ ಮೊದಲು ಪುರಿ ಜಗನ್ನಾಥ್ 'ಈಡಿಯಟ್' ಅನ್ನುವ ಟೈಟಲ್ ಇಟ್ಟಿದ್ದರು. ಅದನ್ನು ಬೇಡ ಅಂತ ಶಿವಣ್ಣನೇ ಮೊದಲು ಹೇಳಿದ್ದರು. "ಅಪ್ಪು ಅಂತ ಟೈಟಲ್ ಕೊಟ್ಟಿದ್ದು ಕೂಡ ನಾನೇ. ಅವರು 'ಈಡಿಯಟ್' ಅಂತ ಇಡಬೇಕು ಅಂತಿದ್ರು. ಮೊದಲನೇ ಸಿನಿಮಾಗೆ ಆ ಟೈಟಲ್ ಬೇಡ ಸರ್ ಅಪ್ಪು ಅಂತ ಇಡಿ ಅಂದೆ. ಚಿಕ್ಕ ವಯಸ್ಸಿನಿಂದಲೂ ಅಪ್ಪು ಅಂತ ಕರೆದು ಅಭ್ಯಾಸ. ಹಾಗೇ ಸಿನಿಮಾ ಎಡಿಟಿಂಗ್ ನಮ್ಮ ಮನೆ ಪಕ್ಕದಲ್ಲಿಯೇ ನಡೆಯುತ್ತಿತ್ತು. ಆ ಫೈಟ್ ನೋಡಿದ ಮೇಲೆ ಇವನು ಸಾಧಾರಣ ಸ್ಟಾರ್ ಅಲ್ಲ ಪವರ್‌ಸ್ಟಾರ್ ಅಂದೆ. ಆ ಪವರ್‌ಸ್ಟಾರ್ ಅಂತ ಆಡಿಯೋ ಫಂಕ್ಷನ್‌ನಲ್ಲಿ ಮೊದಲು ಕರೆದಿದ್ದೇ ನಾನು. ಅದು ನನ್ನ ಮನಸ್ಸಿಗೆ ಗೊತ್ತು. ಅಪ್ಪು ಮನಸ್ಸಿಗೆ ಗೊತ್ತು" ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.


Click it and Unblock the Notifications











