'ತಾಜ್ ಮಹಲ್' ರಿಲೀಸ್ ಆದ ದಿನವೇ 'ಫಾದರ್' ಬಿಡುಗಡೆ; ಎರಡು ಸಿನಿಮಾಗಳಿಗೂ ಇದೆ ಒಂದು ನಂಟು
ಆರ್.ಚಂದ್ರು 'ಕಬ್ಜ' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಟಚ್ ಮಾಡಿದ್ದರು. ಆ ಮಟ್ಟಕ್ಕೆ ಹೋಗುವುದಕ್ಕೆ ಕಾರಣ ಅವರೇ ನಿರ್ದೇಶಿಸಿದ ಒಂದು ಸಿನಿಮಾ ಕಾರಣ ಅದು ತಾಜ್‌ಮಹಲ್. ಈ ಸಿನಿಮಾ ರಿಲೀಸ್ ಆಗಿ ಹೆಚ್ಚು ಕಡಿಮೆ 18 ವರ್ಷಗಳಾಗಿವೆ. ಇಂದಿಗೂ ಆರ್.ಚಂದ್ರು ಈ ಸಿನಿಮಾವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ಈಗ ಮತ್ತೆ 'ತಾಜ್‌ಮಹಲ್' ಗುಂಗಿನಲ್ಲಿ ಇದ್ದಾರೆ.
ಚೊಚ್ಚಲ ಪ್ರಯತ್ನದಲ್ಲೇ ಆರ್.ಚಂದ್ರಗೆ ಯಶಸ್ಸು ತಂದುಕೊಟ್ಟ ಸಿನಿಮಾ 'ತಾಜ್‌ಮಹಲ್'. ಅಜಯ್ ರಾವ್, ಪೂಜಾಗಾಂಧಿ ನಟಿಸಿದ ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಬರೆದಿತ್ತು. ತೆರೆಕಂಡ ಹಲವು ಚಿತ್ರಮಂದಿರಗಳಲ್ಲಿ ಸುಮಾರು 200 ದಿನಗಳ ಕಾಲ ಸಿನಿಮಾ ಪ್ರದರ್ಶನ ಕಂಡಿತ್ತು. ಹೀಗಾಗಿ ಆರ್.ಚಂದ್ರು ಅವರಿಗೆ ಈ ಸಿನಿಮಾ ತುಂಬಾನೇ ಸ್ಪೆಷಲ್. ಈಗ ಅದೇ ಸಿನಿಮಾದ ಗುಂಗಿನಲ್ಲಿ ಇರುವುದಕ್ಕೆ ಕಾರಣ 'ಫಾದರ್'.

'ಕಬ್ಜ' ಬಳಿಕ ಆರ್.ಚಂದ್ರು ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ತಮ್ಮ ಆರ್.ಸಿ ಸ್ಟುಡಿಯೋಸ್ ಮೂಲಕ ಐದು ಸಿನಿಮಾಗಳನ್ನು ಘೋಷಣೆ ಮಾಡಿದ್ದರು. ಅದರಲ್ಲಿ 'ಫಾದರ್' ಮೊದಲನೇ ಸಿನಿಮಾ. ಈ ಸಿನಿಮಾವನ್ನು 'ತಾಜ್‌ಮಹಲ್' ತೆರೆಕಂಡ ಸಿನಿಮಾದಂದೇ ಬಿಡುಗಡೆ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಷ್ಟೇ ಅಲ್ಲದೆ, ಅದೇ ದಿನದಂದು ಸಿನಿಮಾ ಯಾಕೆ ರಿಲೀಸ್ ಆಗುತ್ತಿದೆ ಎನ್ನುವ ಸೀಕ್ರೆಟ್ ಅನ್ನೂ ರಿವೀಲ್ ಮಾಡಿದ್ದಾರೆ.
ಆರ್.ಚಂದ್ರು ನಿರ್ಮಿಸುತ್ತಿರುವ 'ಫಾದರ್' ಸಿನಿಮಾ ಬಹುತೇಕ ಕಂಪ್ಲೀಟ್ ಆಗಿದೆ. ಇನ್ನೊಂದು ಸಾಂಗ್ ಬ್ಯಾಲೆನ್ಸ್ ಉಳಿದುಕೊಂಡಿದೆ. ಅದೇನಾದರೂ ಮುಗಿದರೆ, ಶೂಟಿಂಗ್ ಮುಗಿದಂತೆ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಸಿನಿಮಾ ಬಿಡುಗಡೆ ಯಾವಾಗ ಮಾಡಬೇಕು ಎನ್ನುವ ಲೆಕ್ಕಾಚಾರ ಕೂಡ ಹಾಕಿಟ್ಟುಕೊಂಡಿದ್ದಾರೆ. 'ತಾಜ್‌ಮಹಲ್' ರಿಲೀಸ್ ಆದ ದಿನವೇ ಈ 'ಫಾದರ್' ಸಿನಿಮಾ ಕೂಡ ರಿಲೀಸ್ ಆಗಬೇಕು ಅನ್ನೋದು ಅವರ ಆಸೆ.
"ಫಾದರ್ ರಿಲೀಸ್‌ಗೆ ಪ್ಲಾನ್ ಮಾಡುತ್ತಿದ್ದೇನೆ. ಜುಲೈ 25ನೇ ತಾರೀಕು ನನ್ನ ಮೊದಲನೇ ಸಿನಿಮಾ ತಾಜ್ ಮಹಲ್ ರಿಲೀಸ್ ಆದ ಡೇಟ್. ಆದೇ ದಿನ ರಿಲೀಸ್ ಮಾಡಬೇಕು ಅಂತ ಸ್ವಲ್ಪ ಸ್ಪೀಡ್ ಆಗಿ ಕೆಲಸ ಮಾಡುತ್ತಿದ್ದೇನೆ. ಎಷ್ಟು ದಿನ ಆದ್ಮೇಲೆ ಅದೇ ಡೇಟ್ ಸಿಕ್ಕಿದೆ. ಅದೇ ತರ ಇದೊಂದು ಎಮೋಷನಲ್ ಸಿನಿಮಾವಿದು. 18 ವರ್ಷ ಆದ್ಮೇಲೆ ಅದೇ ಡೇಟ್ ಸಿಕ್ಕಿದೆ ನನಗೆ. ಹಾಗಾಗಿ ಆ ಡೇಟ್‌ಗೆ ರಿಲೀಸ್ ಮಾಡಬೇಕು ಅಂತ ಕೆಲಸ ಮಾಡುತ್ತಿದ್ದೇನೆ." ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

'ಫಾದರ್' ಸಿನಿಮಾ ತಂದೆ ಹಾಗೂ ಮಗನ ನಡುವಿನ ಕಥೆ. ಹೀಗಾಗಿ ಈ ಸಿನಿಮಾದಲ್ಲಿ ಭಾವನಾತ್ಮಕ ಸನ್ನಿವೇಶಗಳನ್ನು ನಿರೀಕ್ಷೆ ಮಾಡಬಹುದು. ತಾಜ್ ಮಹಲ್ ಕೂಡ ಭಾವನಾತ್ಮಕ ಸಿನಿಮಾ ಆಗಿದ್ದರಿಂದ ಜುಲೈ 25ಕ್ಕೆ ರಿಲೀಸ್ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಅದಕ್ಕಾಗಿ ಕೆಲಸಗಳು ಕೂಡ ವೇಗವಾಗಿ ಮುಗಿಸುತ್ತಿದ್ದಾರೆ. ಇನ್ನು ಈ ಸಿನಿಮಾವನ್ನು ಥಿಯೇಟರ್‌ಗೋಸ್ಕರನೇ ಮಾಡಿದ್ದು, ಜನರನ್ನು ಬಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡಬೇಕು ಎಂಬ ಅಭಿಪ್ರಾಯವನ್ನು ಆರ್.ಚಂದ್ರು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಪ್ರಕಾಶ್ ರಾಜ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದರೆ, ಇವರಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಇದ್ದಾರೆ. ಆರ್. ಚಂದ್ರು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರೆ, ರಾಜ್ ಮೋಹನ್ ಈ ಸಿನಿಮಾಗೆ ಚಿತ್ರಕಥೆ ಬರೆದು, ನಿರ್ದೇಶನವನ್ನು ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ವಾರಣಾಸಿಯಲ್ಲಿ ಶೂಟಿಂಗ್ ಮಾಡಲಾಗಿದೆ.


Click it and Unblock the Notifications











