ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ರಚಿತಾ ರಾಮ್ ಡಿಸ್ಚಾರ್ಜ್: ಸಿನಿಮಾ ಪ್ರಚಾರನೇ ಕಾರಣ
ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್. ಕಳೆದೊಂದು ತಿಂಗಳಿಂದ ಎಲ್ಲಿ ನೋಡಿದರೂ ರಚಿತಾ ರಾಮ್ ಕಾಣಿಸುತ್ತಿದ್ದರು. ಸಿನಿಮಾ ಶೂಟಿಂಗ್, ಪ್ರಚಾರ ಅಂತ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದ್ದರು. ಏಕ್ ಲವ್ ಯಾ, ಲವ್ ಯು ರಚ್ಚು ಸೇರಿದಂತೆ ಬೇರೆ ನಟರ ಸಿನಿಮಾದ ಪ್ರಚಾರದಲ್ಲಿಯೂ ಡಿಂಪಲ್ ಕ್ವೀನ್ ಬ್ಯುಸಿಯಾಗಿದ್ದರು. ಇಷ್ಟು ಆಕ್ಟೀವ್ ಆಗಿ ಓಡಾಡಿಕೊಂಡಿದ್ದ ರಚಿತಾ ಈಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲಿ ಎಲ್ಲಾ ನಟಿಯರಿಗಿಂತ ಬ್ಯುಸಿ ಇರುವ ನಾಯಕಿ ರಚಿತಾ ರಾಮ್. ಕೈಯಲ್ಲಿ ಕಮ್ಮಿ ಎಂದರೂ ಏಳೆಂಟು ಸಿನಿಮಾಗಳನ್ನು ಇಟ್ಟುಕೊಂಡಿದ್ದಾರೆ. ಒಂದೇ ಒಂದು ದಿನವೂ ಬಿಡುವಿಲ್ಲದೆ ಸಿನಿಮಾದಲ್ಲಿ ನಟಿಸುತ್ತಿರುವ ನಟಿ ರಚಿತಾ ರಾಮ್. ಈ ಮಧ್ಯೆ ಸಿನಿಮಾಗಳ ಪ್ರಚಾರಕ್ಕೂ ಸಮಯ ಮೀಸಲಿಟ್ಟಿದ್ದಾರೆ. ಹೀಗಾಗಿ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತಿರುವುದರಿಂದ ರಚಿತಾ ರಾಮ್ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂದು ಹೇಳಲಾಗಿದೆ.

ರಚಿತಾ ರಾಮ್ ಆರೋಗ್ಯದಲ್ಲಿ ಏರು-ಪೇರು
ರಚಿತಾ ರಾಮ್ ಎರಡು ದಿನಗಳ ಹಿಂದಷ್ಟೆ ಏಕ್ ಲವ್ ಯಾ ಸಿನಿಮಾದ ಪ್ರಚಾರಕ್ಕೆಂದು ಶಿವಮೊಗ್ಗಕ್ಕೆ ಹೋಗಿದ್ದರು. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾ ಜನವರಿ 21ಕ್ಕೆ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಹೀಗಾಗಿ ನಿರ್ದೇಶಕ ಪ್ರೇಮ್ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಏಕ್ ಲವ್ ಯಾ ತಂಡದೊಂದಿಗೆ ಶಿವಮೊಗ್ಗಕ್ಕೆ ತೆರಳಿದ್ದರು. ಅಲ್ಲಿಂದ ವಾಪಾಸ್ ಆಗುತ್ತಿದ್ದಂತೆ ರಚಿತಾ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು.

ಜ್ವರ ಹಾಗೂ ಶೀತದಿಂದ ಬಳಲುತ್ತಿರುವ ರಚಿತಾ
ಕಳೆದ ಕೆಲ ದಿನಗಳಿಂದ ರಚಿತಾ ರಾಮ್ ನಾನ್ ಸ್ಟಾಪ್ ಶೂಟಿಂಗ್ ಮಾಡುತ್ತಿದ್ದಾರೆ. ಇದರ ಜೊತೆನೇ ಸಿನಿಮಾಗಳ ಪ್ರಚಾರದಲ್ಲಿಯೂ ತೊಡಗುತ್ತಿದ್ದಾರೆ. ಹೀಗಾಗಿ ಅತಿಯಾದ ಒತ್ತಡದಿಂದ ಆಯಾಸಕ್ಕೆ ಒಳಗಾಗಿದ್ದರು. ಆಯಾಸದ ನಡುವೆಯೇ ರಚಿತಾ 'ಏಕ್ ಲವ್ ಯಾ' ಸಿನಿಮಾದ ಪ್ರಚಾರಕ್ಕೆ ಶಿವಮೊಗ್ಗಕ್ಕೆ ಹೋಗಿದ್ದರು ಎನ್ನಲಾಗಿದೆ. ಹೀಗಾಗಿ ವಾಪಾಸ್ ಬೆಂಗಳೂರಿಗೆ ಮರಳುತ್ತಿದ್ದಂತೆ ಅತಿಯಾದ ಜ್ವರ ಹಾಗೂ ಶೀತದಿಂದ ಬಳಲುತ್ತಿದ್ದರು. ಹೀಗಾಗಿ ಕೂಡಲೇ ರಚಿತಾ ರಾಮ್‌ರನ್ನುಆಸ್ಪತ್ರೆಗೆ ದಾಖಲಿಸಲಾಗಿತ್ತು.

ರಚಿತಾ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರಚಿತಾ ರಾಮ್ ನಿನ್ನೆ (ಡಿಸೆಂಬರ್ 27) ದಾಖಲಾಗಿದ್ದರು ಎನ್ನಲಾಗಿದೆ. ಎರಡು ದಿನಗಳ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದರು. ಬಳಿಕ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಗೆ ತೆರಳಿದ್ದು, ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ತಿಂಗಳ ಅಂತರದಲ್ಲಿ ಎರಡು ಸಿನಿಮಾ
ರಚಿತಾ ರಾಮ್ ನಟಿಸಿದ ಎರಡು ಸಿನಿಮಾಗಳು ಒಂದು ತಿಂಗಳ ಅಂತರದಲ್ಲಿ ಬಿಡುಗಡೆಯಾಗಲಿದೆ. ಅಜಯ್ ರಾವ್ ಜೊತೆ ನಟಿಸಿದ 'ಲವ್ ಯು ರಚ್ಚು' ಡಿಸೆಂಬರ್ 31ರಂದು ಬಿಡುಗಡೆಯಾಗಿತ್ತಿದ್ದರೆ, ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರ ಜನವರಿ 21ರಂದು ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಈ ಎರಡು ಸಿನಿಮಾಗಳ ಭರ್ಜರಿ ಪ್ರಚಾರದಲ್ಲಿ ರಚಿತಾ ರಾಮ್ ಭಾಗಿಯಾಗಿದ್ದರು. ಅಲ್ಲದೆ, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ರಚಿತಾ ಆಪ್ತ ಮೂಲಗಳು ತಿಳಿಸಿವೆ.


Click it and Unblock the Notifications











