7 ಭಾಷೆಯಲ್ಲಿ ರಾಧಿಕಾ ಕುಮಾರಸ್ವಾಮಿಯ 'ಅಜಾಗ್ರತ' ರಿಲೀಸ್: 'ಭೈರಾದೇವಿ' ಸಿನಿಮಾ ಏನಾಯ್ತು?
ರಾಧಿಕಾ ಕುಮಾರಸ್ವಾಮಿ ಎಲ್ಲಿ ಹೋಯ್ತು? ಹೊಸ ಸಿನಿಮಾ ಬಗ್ಗೆ ಒಂದು ಅಪ್‌ಡೇಟ್ ಇಲ್ಲ. 'ಭೈರಾದೇವಿ' ಸಿನಿಮಾ ಏನಾಯ್ತು ಅಂತಾನೂ ಹೇಳುತ್ತಿಲ್ಲ ಅಂತ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದರು. ಇನ್ನೇನು ರಾಧಿಕಾ ಚಿತ್ರರಂಗದಿಂದ ದೂರ ಆದರು ಬಿಡು ಅನ್ನುವಾಗಲೇ ಹೊಸ ಸಿನಿಮಾ ಲಾಂಚ್ ಆಗಿದೆ.
ಕೆಲವು ವರ್ಷಗಳಿಂದ ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಕಳೆದ ವರ್ಷ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ್ದ 'ರವಿ ಬೋಪಣ್ಣ' ರಿಲೀಸ್ ಆಗಿದ್ದರೂ, ಅದು ಹಳೇ ಕಮಿಟ್ಮೆಂಟ್. ಹೀಗಾಗಿ ರಾಧಿಕಾ ನಿಧಾನವಾಗಿ ಚಿತ್ರರಂಗದಿಂದ ದೂರ ಆಗುತ್ತಿದ್ದಾರಾ ಅನ್ನೋ ಅನುಮಾನ ಮೂಡಿತ್ತು.

ಇನ್ನು ಅವರದ್ದೇ ನಿರ್ಮಾಣ ಸಂಸ್ಥೆ ಶಮಿಕಾ ಪ್ರೊಡಕ್ಷನ್‌ನಲ್ಲಿ 'ಭೈರಾದೇವಿ' ಸಿನಿಮಾ ಸೆಟ್ಟೇರಿತ್ತು. ಅದು ಕೂಡ ಇನ್ನೂ ರಿಲೀಸ್ ಆಗಿಲ್ಲ. ಈ ಮಧ್ಯೆ ಪ್ಯಾನ್ ಇಂಡಿಯಾ ಸಿನಿಮಾ ಸೆಟ್ಟೇರಿದೆ. ಅಷ್ಟಕ್ಕೂ ಈ ಸಿನಿಮಾವನ್ನು ರಾಧಿಕಾ ಒಪ್ಪಿಕೊಳ್ಳುವುದಕ್ಕೆ ಏನು ಕಾರಣ? ಇಷ್ಟು ದಿನ ಏನು ಮಾಡುತ್ತಿದ್ದರು? ಅನ್ನುವ ಡಿಟೈಲ್ಸ್ ಇಲ್ಲಿದೆ.
ರಾಧಿಕಾ ಕುಮಾರಸ್ವಾಮಿ ಹೊಸ ಸಿನಿಮಾ ಒಪ್ಪಿದ್ದೇಕೆ?
ರಾಧಿಕಾ ಕುಮಾರಸ್ವಾಮಿ ಹೀರೊಯಿನ್ ಆಗಿ ನಟಿಸುತ್ತಿರುವ ಹೊಸ ಸಿನಿಮಾ 'ಅಜಾಗ್ರತ' ಇತ್ತೀಚೆಗೆ ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ಸೆಟ್ಟೇರಿದೆ. ಸಿನಿರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ರಾಧಿಕಾ, ದಿಢೀರನೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೇ ಎಲ್ಲರ ಅಚ್ಚರಿಗೂ ಕಾರಣವಾಗಿತ್ತು.

'ಅಜಾಗ್ರತ' ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಸಹೋದರನೇ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ ಸೇರಿದಂತೆ ಒಟ್ಟು 7 ಭಾಷೆಗಳಲ್ಲಿ ನಿರ್ಮಾಪಕ ರವಿರಾಜ್ ಬಿಡುಗಡೆ ಮಾಡುತ್ತಿದ್ದಾರೆ. ನಾಯಕಿಯ ಹುಡುಕಾಟದಲ್ಲಿದ್ದ ಸಹೋದರ ಸೂಕ್ತ ಹೀರೊಯಿನ್ ಸಿಗದೆ ಕೊನೆಯಲ್ಲಿ ರಾಧಿಕಾರನ್ನೇ ಆಯ್ಕೆ ಮಾಡಿದ್ದಾರೆ. "ಈ ಸಿನಿಮಾಗಾಗಿ ನನ್ನ ಸಹೋದರ ನಾಯಕಿಯ ಹುಡುಕಾಟದಲ್ಲಿದ್ದ. ಆ ವೇಳೆ ನಾನೊಂದಿಷ್ಟು ನಾಯಕಿಯರ ಹೆಸರನ್ನು ಸೂಚಿಸಿದೆ. ಅದು ಅವರಿಗೆ ಇಷ್ಟವಾಗಲಿಲ್ಲ. ಕೊನೆಗೆ ನನ್ನ ಹೆಸರು ಬಂದಾಗ, ನಾನು ಸಂತೋಷದಿಂದ ಒಪ್ಪಿಕೊಂಡೆ. ಅವರು ನನ್ನನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ನಾನು ತುಂಬಾನೇ ಖುಷಿಯಾಗಿದ್ದೇನೆ." ಎಂದು ಹೇಳಿದ್ದಾರೆ.
'ಭೈರಾದೇವಿ' ಕಥೆಯೇನು?
ರಾಧಿಕಾ ಕುಮಾರಸ್ವಾಮಿ ತುಂಬಾನೇ ಇಷ್ಟ ಪಟ್ಟು ನಿರ್ಮಾಣ ಮಾಡುತ್ತಿರುವ ಸಿನಿಮಾ 'ಬೈರಾದೇವಿ'. ಪುತ್ರಿ ಹೆಸರಲ್ಲಿ ಹುಟ್ಟಾಕಿರೋ ಶಮಿಕಾ ಪ್ರೊಡಕ್ಷನ್ ಈ ಸಿನಿಮಾಗೆ ಹಣ ಹಾಕುತ್ತಿದೆ. ಆದರೆ, ಈ ಸಿನಿಮಾ ಬಗ್ಗೆನೂ ಮಾಹಿತಿ ಇರಲಿಲ್ಲ. ಹೊಸ ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಸಿನಿಮಾ ಎಕ್ಸ್‌ಪ್ರೆಸ್‌ನಲ್ಲಿ 'ಭೈರಾದೇವಿ' ಬಗ್ಗೆ ಮಾಹಿತಿ ನೀಡಿದ್ದಾರೆ.
'ಬೈರಾದೇವಿ' ಸಿನಿಮಾ ಸದ್ಯ ನಿರ್ಮಾಣ ಹಂತದಲ್ಲಿದೆ. ಈ ಸಿನಿಮಾ ಬಿಡುಗಡೆ ಆಗುವವರೆಗೂ ಹೊಸ ಸಿನಿಮಾ ಒಪ್ಪಿಕೊಳ್ಳುವುದ ಬೇಡ ಎಂದುಕೊಂಡಿದ್ದರಂತೆ. ಆದರೆ, ಸಹೋದರನೇ 'ಅಜಾಗ್ರತ' ನಿರ್ಮಾಣ ಮಾಡುತ್ತಿರುವುದರಿಂದ ಒಪ್ಪಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ರಾಧಿಕಾ ಸಿನಿಮಾದಲ್ಲಿ ಬಾಲಿವುಡ್ ನಟ
'ಅಜಾಗ್ರತ' ಸಿನಿಮಾದಲ್ಲಿ ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಎಂ ಶಶಿಧರ್ ನಿರ್ಮಿಸುತ್ತಿರುವ ಈ ಸಿನಿಮಾದ ವಿಶೇಷ ಅಂದ್ರೆ, ಏಳು ಭಾಷೆಗಳಿಗೆ ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಶೂಟಿಂಗ್ ಮಾಡಿ ಬಿಡುಗಡೆ ಮಾಡಲಿದ್ದಾರೆ. ಈ ಚಿತ್ರಕ್ಕೆ ಹರಿ ಸಂಗೀತ ನಿರ್ದೇಶನವಿದ್ದರೆ, ರವಿವರ್ಮ ಆಕ್ಷನ್ ಸೀನ್‌ಗಳನ್ನು ನಿರ್ದೇಶನ ಮಾಡುತ್ತಿದ್ದಾರೆ.


Click it and Unblock the Notifications











