ತಮ್ಮನನ್ನು ಎಷ್ಟು ಮುದ್ದಿಸುತ್ತಾಳೆ ಐರಾ...: ಮುದ ನೀಡುವ ಮುದ್ದಾದ ವಿಡಿಯೋ
ತಾರಾ ಜೋಡಿ ಯಶ್ ಮತ್ತು ರಾಧಿಕಾ ದಂಪತಿ ಮಗಳು ಐರಾ, ಪುಟಾಣಿ ತಮ್ಮನನ್ನು ಮುದ್ದಾಡುವ ಕ್ಯೂಟ್ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಮುದ್ದು ಮುಖದ ಐರಾಗೆ ಅಂತರ್ಜಾಲದಲ್ಲಿ ಭಾರಿ ಬೇಡಿಕೆ ಇದೆ. ರಾಧಿಕಾ ಪಂಡಿತ್ ಮತ್ತು ಯಶ್ ಹಂಚಿಕೊಳ್ಳುವ ಫೋಟೊಗಳಲ್ಲಿ ಐರಾ ಎಲ್ಲರ ಮನಸಲ್ಲಿ ಕಚಗುಳಿ ಇಡುತ್ತಾಳೆ.
Recommended Video
ಎರಡನೆಯ ಮಗನಿಗೆ ಆರು ತಿಂಗಳು ತುಂಬಿದ ಸಂದರ್ಭದಲ್ಲಿ ರಾಧಿಕಾ ಪಂಡಿತ್ ಮತ್ತು ಯಶ್ ಮಗುವಿನ ಮೊದಲ ಫೋಟೊ ಶೇರ್ ಮಾಡಿದ್ದರು. ಇತ್ತೀಚೆಗೆ ಮಗನನ್ನು ಎತ್ತಿಕೊಂಡಿರುವ ಯಶ್ ಫೋಟೊ ಶೇರ್ ಮಾಡಿದ್ದ ರಾಧಿಕಾ, ನನ್ನ ಫೇವರಿಟ್ ಹುಡುಗರು ಎಂದು ಬರೆದುಕೊಂಡಿದ್ದರು. ಮಗನಿಗೆ ಏನು ಹೆಸರಿಡುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅದರ ನಡುವೆ ರಾಧಿಕಾ ಮತ್ತೊಂದು ಸುಂದರ ವಿಡಿಯೋ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ತಮ್ಮನೊಂದಿಗೆ ಐರಾ ಆಟ
ಐರಾ ತಮ್ಮನನ್ನು ಕಾಲಿನ ಮೇಲೆ ಮಲಗಿಸಿಕೊಂಡು ಆತನೊಂದಿಗೆ ಆಟವಾಡುವ, ಮುದ್ದಿಸುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ತನಗಿಂತಲೂ ಗುಂಡಾಗಿರುವ ತಮ್ಮನನ್ನು ಎತ್ತಿಕೊಳ್ಳಲು ಐರಾ ಕಷ್ಟಪಟ್ಟರೂ, ತಮ್ಮನ ಮೇಲೆ ತನಗಿರುವ ಪ್ರೀತಿಯನ್ನು ತೋರಿಸಿಕೊಳ್ಳುತ್ತಾಳೆ. ತಮ್ಮನನ್ನು ನಿಧಾನವಾಗಿ ತಟ್ಟುತ್ತಾ ಆತನನ್ನು ಮಲಗಿಸಲು ಐರಾ ಪ್ರಯತ್ನಿಸುತ್ತಾಳೆ.

ಅಕ್ಕನಿಗೆ ತಮ್ಮನ ಪ್ರೀತಿ
ತೊದಲು ಮಾತುಗಳಲ್ಲಿ ಐರಾ ತಮ್ಮನನ್ನು ಕರೆಯುತ್ತಾಳೆ. ಅದಕ್ಕೆ ತಮ್ಮ ಕೂಡ ಅಷ್ಟೇ ಪ್ರೀತಿಯಿಂದ ಸ್ಪಂದಿಸುತ್ತಾನೆ. ಅಕ್ಕನ ಪ್ರೀತಿಗೆ ಪ್ರತಿಯಾಗಿ ಅವಳನ್ನು ಅಕ್ಕರೆಯಿಂದ ಮುದ್ದಿಸಲು ಪ್ರಯತ್ನಿಸುತ್ತಾನೆ. ಜೊತೆಗೆ ಹೊರಳಾಡುತ್ತಾನೆ. ಐರಾಳಿಗೆ ಕಷ್ಟವಾಗಬಾರದೆಂದು ರಾಧಿಕಾ, ಮಗನ ತಲೆಗೆ ಆಧಾರವಾಗಿ ಹಿಡಿದುಕೊಂಡಿದ್ದಾರೆ.

ವೈರಲ್ ಆಗಿದ್ದ ಚಿತ್ರ
ಈ ವಿಡಿಯೋ ಹಂಚಿಕೊಳ್ಳಲು ಕೂಡ ಕಾರಣವಿದೆ. ಜೂನ್ 2ಕ್ಕೆ ಐರಾಳಿಗೆ ಹದಿನೆಂಟು ತಿಂಗಳು ತುಂಬಿದ ಖುಷಿಯನ್ನು ರಾಧಿಕಾ ಪಂಡಿತ್ ತಿಳಿಸಿದ್ದಾರೆ. ಎರಡನೆಯ ಮಗುವಿನ ಫೋಟೊ ಅನಾವರಣ ಮಾಡುವ ಹಿಂದಿನ ದಿನ ಐರಾ ಜತೆಗೆ ಮಗು ಕುಳಿತಿರುವ ಫೋಟೊವನ್ನು ಶೇರ್ ಮಾಡಿದ್ದರು. ಈ ನಾಲ್ಕು ಜನರ ಚೆಂದದ ಕುಟುಂಬದ ಚಿತ್ರವೂ ವೈರಲ್ ಆಗಿತ್ತು.

18ನೇ ತಿಂಗಳು
'ನಮ್ಮ ಪುಟಾಣಿ ಮಗು ಇಂದು 18ನೇ ತಿಂಗಳಿಗೆ ಕಾಲಿರಿಸಿದ್ದಾಳೆ. ನಮ್ಮ ಪುಟ್ಟದಾದ ಬೇಬಿ ಸಿಟ್ಟರ್ ನಿಮ್ಮ ಮುಖದಲ್ಲಿ ನಗು ತರಿಸುತ್ತದೆ ಎಂದು ಭಾವಿಸುತ್ತೇನೆ' ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.
ಅಪ್ಪನನ್ನು ಅನುಕರಿಸುತ್ತಿದ್ದಾಳೆ
ಅಷ್ಟೇ ಅಲ್ಲ, ಈ ವಿಡಿಯೋದಲ್ಲಿ ಐರಾ, ತಮ್ಮನನ್ನು ಮುದ್ದಿಸುತ್ತಿರುವ ಪರಿ ಅಪ್ಪನನ್ನು ನೆನಪಿಸುತ್ತಿದೆ ಎಂದಿದ್ದಾರೆ. 'ಅವಳು ನನ್ನ ತಂದೆಯನ್ನು ಅನುಕರಿಸುತ್ತಿದ್ದಾಳೆ ಎನ್ನುವುದು ನನಗೆ ಖಚಿತವಾಗಿ ತಿಳಿದಿದೆ' ಎಂದು ಹೇಳಿದ್ದಾರೆ. ಪುಟಾಣಿ ಮಕ್ಕಳನ್ನು ಅಜ್ಜ ಹೇಗೆ ಮುದ್ದಿಸುತ್ತಾರೆ ಎಂಬುದನ್ನು ಅನುಭವಿಸಿ ತಿಳಿದಿರುವ ಐರಾ, ಅದನ್ನು ತಮ್ಮನ ಮೇಲೆಯೂ ಪ್ರಯೋಗಿಸಿದ್ದಾಳೆ.

ಮಾನ್ವಿತಾ ಕಾಮತ್ ಕಾಮೆಂಟ್
ಈ ವಿಡಿಯೋ ಕಂಡು ಎಲ್ಲರೂ ಐರಾಳ ಪ್ರೀತಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ನಟಿ ಮಾನ್ವಿತಾ ಕಾಮತ್ 'ಓಎಂಜಿ! ಈ ವಿಡಿಯೋ ಬಹಳ ಮುದ್ದಾಗಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಮಾತೃಭಾಷೆ ಕೊಂಕಣಿಯಲ್ಲಿ ಕೂಡ ವಿಡಿಯೋವನ್ನು ಹೊಗಳಿದ್ದಾರೆ.


Click it and Unblock the Notifications











