'ಚಾಂದಿನಿ ಬಾರ್'ನಲ್ಲಿದ್ದುಕೊಂಡೇ ಸಾಧನೆ ಮಾಡಿದವರಿಗೆ 25ರ ಸಂಭ್ರಮ
ಬಾರ್ ಅಂತ ಹೇಳಿದ ಕೂಡಲೇ ಅವರನ್ನು ನೋಡುವ ರೀತಿಯೇ ಬದಲಾಗಿಬಿಡುತ್ತೆ. ಅಲ್ಲಿ ಕೆಲಸ ಮಾಡುವವರು ಏನಾದರೂ ಸಾಧನೆ ಮಾಡುತ್ತಾರೆ ಅಂದರೆ, ಯಾರೂ ನಂಬುವುದಿಲ್ಲ. ಆದರೆ, ಇಂತಹ ಬಾರ್‌ನಲ್ಲಿ ಇದ್ದುಕೊಂಡೇ ಸಾಧನೆ ಮಾಡಿದವರ ಬಗ್ಗೆ ಗೊತ್ತೇ ಇರುವುದಿಲ್ಲ.
ಇಂತಹ ನೈಜ ಘಟನೆಗಳನ್ನು ಇಟ್ಟುಕೊಂಡೇ 'ಚಾಂದಿನಿ ಬಾರ್' ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಕಳೆದ ತಿಂಗಳು ಏಪ್ರಿಲ್ 21ರಂದು ಸಿನಿಮಾ ರಿಲೀಸ್ ಕೂಡ ಆಗಿತ್ತು.
ಚಾಂದಿನಿ ಬಾರ್ ಸಿನಿಮ ಬಿಡುಗಡೆಯಾಗುವಾಗ ಸುಮಾರು 9 ಸಿನಿಮಾಗಳು ಬಿಡುಗಡೆಯಾಗಿದ್ದವು. ಇದರಲ್ಲಿ ವಿಭಿನ್ನ ಟೈಟಲ್ ಮೂಲಕ 'ಚಾಂದಿನಿ ಬಾರ್' ಸಿನಿಮಾ ಕೂಡ ಗಮನ ಸೆಳೆದಿತ್ತು. 9 ಸಿನಿಮಾಗಳ ಪೈಪೋಟಿ ಜೊತೆ ಚುನಾವಣೆ, ಐಪಿಎಲ್ ಜೊತೆನೂ ಸೆಣೆಸಾಡಿ ಈ ಸಿನಿಮಾ 25 ದಿನಗಳನ್ನು ಪೂರೈಸಿದೆ.

'ಚಾಂದಿನಿ ಬಾರ್' ಸಿನಿಮಾದ ಕಲ್ಪನೆ ರಾಘವೇಂದ್ರ ಕುಮಾರ್ ಅವರದ್ದು. ಇವೇ ಸಿನಿಮಾದ ನಿರ್ದೇಶಕ ಕಮ್ ನಾಯಕ. ಬರಗೂರು ರಾಮಚಂದ್ರಪ್ಪ ಹಾಗೂ ಮಂಜು ಸ್ವರಾಜ್ ಅವರ ಜೊತೆ ಕೆಲಸ ಮಾಡಿ ಅನುಭವವಿದೆ. ರಾಘವೇಂದ್ರ ಕುಮಾರ್‌ಗೆ ಸುಕೃತಿ ಪ್ರಭಾಕರ್ ನಾಯಕಿಯಾಗಿ ನಟಿಸಿದ್ದಾರೆ.
ರಾಘವೇಂದ್ರ ಕುಮಾರ್ ಸಿನಿಮಾ ಮಾಡಬೇಕು ಹಂಬಲದಲ್ಲಿ ಕಥೆ ರೆಡಿ ಮಾಡಿಟ್ಟುಕೊಂಡಿದ್ದರು. ಆದರೆ, ಹೊಸಬರನ್ನು ನಂಬಿ ಹಣ ಹೂಡಲು ಯಾರೂ ಮುಂದೆ ಬಾರದೇ ಇದ್ದಿದ್ದರಿಂದ ಸ್ನೇಹಿತರೆಲ್ಲ ಸೇರಿ ಹಣ ಹಾಕಿ ಈ ಸಿನಿಮಾ ಮಾಡಿದ್ದಾರೆ.
ಚಾಂದಿನಿ ಬಾರ್ ಅಂದಕೂಡಲೇ ಇದೊಂದು ಕುಡುಕರ ಕಥೆ ಅಂದುಕೊಳ್ಳುವವರೇ ಹೆಚ್ಚು. ಆದರೆ, ಇದು ಕುಡುಕರ ಕಥೆಯಲ್ಲ. ಬದಲಿಗೆ ಬಾರ್‌ನಲ್ಲಿ ಇದ್ದುಕೊಂಡು ಬದುಕು ಕಟ್ಟಿಕೊಳ್ಳುವವರ ಕಥೆ ಎಂದು ಚಿತ್ರ ಹೇಳಿದೆ.

ಚುನಾವಣೆ ಹಾಗೂ ಐಪಿಎಲ್ ಪಂದ್ಯಗಳ ಮಧ್ಯೆ ಈ ಸಿನಿಮಾವನ್ನು ಚಿತ್ರಮಂದಿರಲ್ಲಿ ಉಳಿಸಿಕೊಳ್ಳು ಚಿತ್ರತಂಡ ತುಂಬಾನೇ ಪ್ರಯತ್ನ ಪಟ್ಟಿದೆ. ಮೊದಲಿಗೆ ಈ ಸಿನಿಮಾವನ್ನು ಮಲ್ಟಿಪ್ಲೆಕ್ಸ್‌ನಲ್ಲಿ ರಿಲೀಸ್ ಮಾಡಲಾಗಿತ್ತು. ಆ ಬಳಿಕ ಸಿಂಗಲ್ ಸ್ಕ್ರೀನ್‌ನಲ್ಲಿ ರಿಲೀಸ್ ಮಾಡಿ, ಪ್ರೇಕ್ಷಕರ ಪ್ರತಿಕ್ರಿಯೆ ಸಿಗುತ್ತಿದ್ದಂತೆ ಒಂದೊಂದೇ ಥಿಯೇಟರ್ ಅನ್ನು ಹೆಚ್ಚಿಸಲಾಗಿತ್ತು.
ಇದೇ ಪ್ರಯತ್ನದಲ್ಲಿ ಈ ಸಿನಿಮಾ 25 ದಿನಗಳನ್ನು ಪೂರೈಸಿದೆ. ಚಾಂದಿನಿ ಬಾರ್ ಸಿನಿಮಾ 25 ದಿನ ಪ್ರದರ್ಶನ ಕಂಡಿದ್ದಕ್ಕೆ ಚಿತ್ರತಂಡ ಖುಷಿಯಾಗಿದೆ. ಹೊಸ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಸಿಕ್ಕಿರೋ ಬೆಂಬಲಕ್ಕೆ ಇಡೀ ಚಿತ್ರತಂಡ ಥ್ರಿಲ್ ಆಗಿದೆ.


Click it and Unblock the Notifications











