Raghavendra Rajkumar: "ಯಶಸ್ಸು, ಆಯಸ್ಸು ನಿನ್ನ ಪಾಲಿಗಿರಲಿ".. ರಾಘಣ್ಣನ ಹುಟ್ಟುಹಬ್ಬಕ್ಕೆ ಶಿವಣ್ಣ ಭಾವುಕ ಟ್ವೀಟ್
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದಂದೇ ಅದೆಷ್ಟೋ ಮಂದಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಸೆಲೆಬ್ರೆಟಿಗಳು ಕೂಡ ಇದ್ದಾರೆ. ಅದರಲ್ಲೂ ಸ್ಯಾಂಡಲ್‌ವುಡ್‌ನಲ್ಲೂ ಆಗಸ್ಟ್ 15ಕ್ಕೆ ಜನಿಸಿದವರು ಬಹಳ ಮಂದಿ ಇದ್ದಾರೆ. ಭಾರತಿ ವಿಷ್ಟುವರ್ಧನ್, ನಾಗತಿಹಳ್ಳಿ ಚಂದ್ರಶೇಖರ್, ಅರ್ಜುನ್ ಸರ್ಜಾ ಹಾಗೇ ರಾಘವೇಂದ್ರ ರಾಜ್‌ಕುಮಾರ್ ಸ್ವಾತಂತ್ರ್ಯ ದಿನದಂದೇ ಹುಟ್ಟುಹಬ್ಬವಿದೆ.
ಅಣ್ಣಾವ್ರ ಎರಡನೇ ಪುತ್ರ ರಾಘವೇಂದ್ರ ರಾಜ್‌ಕುಮಾರ್ ಇಂದು (ಆಗಸ್ಟ್ 15) 58ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಅಣ್ಣ ಶಿವರಾಜ್‌ಕುಮಾರ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.

ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ಸಹೋದರರಿಗಿಂತ ಹೆಚ್ಚಾಗಿ ಸ್ನೇಹಿತರಾಗಿ ಕಂಡಿದ್ದೇ ಹೆಚ್ಚು. ಒಬ್ಬರಿಗೊಬ್ಬರು ಕಷ್ಟಕ್ಕೆ ಸದಾ ನಿಲ್ಲುತ್ತಾರೆ. ರಾಘವೇಂದ್ರ ರಾಜ್‌ಕುಮಾರ್ ಅನಾರೋಗ್ಯಕ್ಕೀಡಾದಾಗ ಶಿವಣ್ಣನೇ ಮುಂದೆ ನಿಂತಿದ್ದರು. ಆ ವೇಳೆ ಶಿವರಾಜ್‌ಕುಮಾರ್ ನನ್ನ ತಂದೆ ಸಮಾನ ಎಂದು ರಾಘಣ್ಣ ಭಾವನಾತ್ಮಕವಾಗಿ ಹೇಳಿದ್ದರು.
ಆರೋಗ್ಯವಾಗಿದ್ದಾಗ ರಾಘವೇಂದ್ರ ರಾಜ್‌ಕುಮಾರ್ ಸಿನಿಮಾದ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ತಮ್ಮ ನಿರ್ಮಾಣ ಕಂಪನಿಯ ವ್ಯವಹಾರವನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಮನೆಯಲ್ಲಿ ಏನೇ ಕಷ್ಟಗಳು ಎದುರಾದರೂ ರಾಘಣ್ಣನೇ ಮುಂದೆ ನಿಲ್ಲುತ್ತಿದ್ದರು. ಹೀಗಾಗಿ ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಆರಂಭದ ದಿನಗಳಲ್ಲಿ ನಟನೆಯತ್ತ ಹೆಚ್ಚು ಗಮನ ಹರಿಸಲು ಸಾಧ್ಯವಾಗಿತ್ತು.
ರಾಘಣ್ಣ ಹಾಗೂ ಶಿವಣ್ಣ ಇಬ್ಬರಲ್ಲೂ ವಯಸ್ಸಿನ ಅಂತರ ಕೂಡ ಹೆಚ್ಚೇನು ಇಲ್ಲ. ಹೀಗಾಗಿ ಸಹೋದರರಿಗಿಂತ ಸ್ನೇಹಿತರಾಗಿದ್ದಾರೆ. ಹೀಗಾಗಿ ಇಂದು (ಆಗಸ್ಟ್ 15) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ರಾಘಣ್ಣನಿಗೆ ಶಿವಣ್ಣ ಟ್ವೀಟ್ ಮೂಲಕ ಭಾವನಾತ್ಮಕವಾಗಿ ಶುಭ ಕೋರಿದ್ದಾರೆ.
"ತಮ್ಮನಾಗಿ ನನಗೆ ಎಷ್ಟೋ ಬಾರಿ ಶಕ್ತಿ ತುಂಬಿದ್ದೀಯ. ಕುಟುಂಬದ ಪ್ರತಿಯೊಬ್ಬರ ಜೊತೆಗೂ ಸ್ಫೂರ್ತಿಯಾಗಿ ನಿಂತಿದ್ದೀಯ. ಯಶಸ್ಸು, ಆಯಸ್ಸು, ಸುಖ, ಸಂತೋಷ, ಎಲ್ಲವೂ ನಿನ್ನ ಪಾಲಿಗಿರಲಿ. ಹುಟ್ಟು ಹಬ್ಬದ ಶುಭಾಶಯಗಳು ರಾಘು" ಎಂದು ಶಿವರಾಜ್‌ಕುಮಾರ್ ಬರೆದು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ನೋಡಿ ದೊಡ್ಮನೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ರಾಘವೇಂದ್ರ ರಾಜ್‌ಕುಮಾರ್ ಒಬ್ಬ ನಟನಾಗಿ ಯಶಸ್ಸು ಗಳಿಸುವುದಕ್ಕಿಂತ ವ್ಯವಹಾರದಲ್ಲಿ ಸಕ್ಸಸ್ ಕಂಡಿದ್ದಾರೆ. ಸಿನಿಮಾ ನಿರ್ಮಾಣದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಸೋತಿದ್ದು ತೀರಾ ವಿರಳ. ವಜ್ರೇಶ್ವರಿ ಕಂಬೈನ್ಸ್‌ನಿಂದ ಶಿವಣ್ಣ ಹಾಗೂ ಪುನೀತ್ ರಾಜ್‌ಕುಮಾರ್ ಅವರಿಗಾಗಿ ನಿರ್ಮಾಣ ಆಗುತ್ತಿದ್ದ ಸಿನಿಮಾ ಯಶಸ್ಸಿನಲ್ಲಿ ರಾಘಣ್ಣನ ಶ್ರಮ ಕೂಡ ಇದೆ.
ಇನ್ನು ರಾಘವೇಂದ್ರ ರಾಜ್‌ಕುಮಾರ್ ಬಾಲ ನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ 'ಚಿರಂಜೀವಿ ಸುಧಾಕರ' ಸಿನಿಮಾದಿಂದ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಣ್ಣನಂತೆ ಆರಂಭದಲ್ಲಿಯೇ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 'ನಂಜುಂಡಿ ಕಲ್ಯಾಣ', 'ಗಜಪತಿ ಗರ್ವಭಂಗ', ಬ್ಯಾಕ್ ಟು ಬ್ಯಾಕ್ ಹಿಟ್ ಆಗಿತ್ತು.
ರಾಘವೇಂದ್ರ ರಾಜ್‌ಕುಮಾರ್ ಇದೂವರೆಗೂ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅನಾರೋಗ್ಯದ ಬಳಿಕ ಮತ್ತೆ ಚೇತರಿಸಿಕೊಂಡು ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಇವರ ಇಬ್ಬರು ಮಕ್ಕಳು ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಿನಯ್ ರಾಜ್‌ಕುಮಾರ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ಯುವ ರಾಜ್‌ಕುಮಾರ್ ಮೊದಲ ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣ ನಡೆಯುತ್ತಿದೆ.


Click it and Unblock the Notifications











