"ನನಗೂ ಆರೋಗ್ಯ ತಪ್ಪಿತಲ್ಲ.. ನನ್ನ ಮಗ ಅನಾಥ ಆಗಿಬಿಟ್ಟನಲ್ಲ ಅನಿಸಿತ್ತು" : ರಾಘಣ್ಣ
ರಾಘವೇಂದ್ರ ರಾಜ್‌ಕುಮಾರ್ ದ್ವಿತೀಯ ಪುತ್ರ ಯುವ ರಾಜ್‌ಕುಮಾರ್ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾಗಿದೆ. ದೊಡ್ಮನೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವ ವಾರಸ್ದಾರ ಸಿಕ್ಕಿದ್ದೂ ಆಗಿದೆ. ಥಿಯೇಟರ್‌ನಲ್ಲಿ ಅಭಿಮಾನಿಗಳು ಶಿಳ್ಳೆ ಹೊಡೆದು ಅಭಿಮಾನ ವ್ಯಕ್ತ ಪಡಿಸಿದ್ದೂ ಆಗಿದೆ.
ಮಗನ ಮೊದಲ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ರಾಘಣ್ಣ ತಮ್ಮ ಪತ್ನಿ ಮಂಗಳಾ ಜೊತೆ ಥಿಯೇಟರ್‌ಗೆ ಬಂದಿದ್ದರು. ಇಡೀ ಸಿನಿಮಾವನ್ನು ಅಭಿಮಾನಿಗಳ ಜೊತೆ ಕೂತು ಸಿನಿಮಾವನ್ನು ನೋಡಿದ್ದರು. ಮಗನ ನಟನೆಯನ್ನು ಕಣ್ತುಂಬಿಕೊಂಡ ಬಳಿಕ ರಾಘಣ್ಣ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಯುವರಾಜ್‌ಕುಮಾರ್ ಮೊದಲ ಸಿನಿಮಾ 'ಯುವ' ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಈ ವೇಳೆ ತಮ್ಮ ಪುನೀತ್ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ನೆರವನ್ನು ನೆನೆದಿದ್ದಾರೆ. ಈ ವೇಳೆ ಭಾವುಕರಾಗಿ ತಮ್ಮ ಮಗನಿಗೆ ಅಪ್ಪು ಕೊಟ್ಟ ಭಿಕ್ಷೆ ಎಂದು ರಾಘಣ್ಣ ಹೇಳಿಕೊಂಡಿದ್ದಾರೆ.
"ನನ್ನ ಮಗನ ಅಭಿಮಾನಿಯಾದೆ"
'ಯುವ' ಸಿನಿಮಾವನ್ನು ನೋಡಿದ ಬಳಿಕ ರಾಘವೇಂದ್ರ ರಾಜ್‌ಕುಮಾರ್ ಖುಷಿಯಾಗಿದ್ದರು. ತಂದೆಯಾಗಿ ಸಿನಿಮಾ ನೋಡುವುದಕ್ಕೆ ಬಂದವನು ಅಭಿಮಾನಿಯಾಗಿ ಹೋಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. "ನಾನು ನನ್ನ ಮಗನ ತಂದೆಯಾಗಿ ಬಂದೆ. ಪಿಕ್ಚರ್ ನೋಡಿ ಹೋಗಬೇಕಾದರೆ, ನನ್ನ ಮಗನ ಅಭಿಮಾನಿಯಾಗಿ ಹೋಗುತ್ತಿದ್ದೇನೆ. ಒಟ್ಟಾರೆ, ಸಿನಿಮಾ ಬಗ್ಗೆ ಹೇಳಬೇಕು ಅಂದರೆ, ನನ್ನ ಮಗನನ್ನು ಪರಿಚಯ ಮಾಡುವುದಕ್ಕೆ ಈ ಸಿನಿಮಾ ಮಾಡಿಲ್ಲ. ಒಂದೊಳ್ಳೆ ಸಿನಿಮಾ ಮಾಡಿ, ಅದರಲ್ಲಿ ನನ್ನ ಮಗನನ್ನು ಪರಿಚಯ ಮಾಡಿದ್ದಾರೆ. ಅದು ನನಗೆ ಇಷ್ಟ ಆಗಿದೆ." ಎಂದು ರಾಘಣ್ಣ ಹೇಳಿದ್ದಾರೆ.
"ನನ್ನ ಮಗ ಅನಾಥ ಆಗ್ಬಿಟ್ನಲ್ಲ ಅನ್ನೋ ಕೊರಗಿತ್ತು"
ದೊಡ್ಮನೆ ಕುಡಿ ಚಿತ್ರರಂಗಕ್ಕೆ ಪ್ರವೇಶ ಮಾಡುವಾಗ ಇಡೀ ಕುಟುಂಬ ಒಟ್ಟಿಗೆ ನಿಲ್ಲುತ್ತಿತ್ತು. ದೊಡ್ಮನೆಯಿಂದ ಚಿತ್ರರಂಗಕ್ಕೆ ಬಂದವರಿಗೆ ಆ ಭಾಗ್ಯ ಸಿಕ್ಕಿದೆ. ಆದರೆ, ಯುವ ಒಬ್ಬನನ್ನು ಬಿಟ್ಟು. "ನನಗೆ ಒಂದು ಕೊರತೆಯಿತ್ತು. ನನ್ನನ್ನ, ಶಿವಣ್ಣನನ್ನ, ನನ್ನ ತಮ್ಮನನ್ನ ಪರಿಚಯ ಮಾಡಬೇಕಾದರೆ ಮೂರು ಶಕ್ತಿ ಇತ್ತು. ತಂದೆ, ತಾಯಿ, ಚಿಕ್ಕಪ್ಪ ಇದ್ದರು. ಇವನು ಬಂದಾಗ ಯಾರೂ ಇಲ್ಲ. ಏನಪ್ಪ ನನ್ನ ಮಗ ಅನಾಥನಾಗಿಬಿಟ್ಟನಲ್ಲ. ನನಗೂ ಆರೋಗ್ಯ ತಪ್ಪಿಬಿಡ್ತು. ಯಾರಿದ್ದಾರೆ ಅಂತ ಅನಿಸಿತ್ತು. ಇಂತಹ ಸಮಯದಲ್ಲಿ ದೇವರು ಎರಡು ವ್ಯಕ್ತಿಗಳನ್ನು ಕಳಿಸಿಕೊಡುತ್ತಾನೆ. ಹೊಂಬಾಳೆಯ ವಿಜಯ್ ಅವರು ಬರುತ್ತಾರೆ. ತಾಯಿ ತರ ನಿರ್ದೇಶಕ ಬರುತ್ತಾರೆ. ಇವರಿಬ್ಬರು ನಮ್ಮ ತಂದೆ, ಚಿಕ್ಕಪ್ಪ ಅವರ ಜಾಗ ತುಂಬಿಕೊಂಡರು." ಎಂದು ರಾಘಣ್ಣ ಹೇಳುತ್ತಾರೆ.
"ಇದು ಅಪ್ಪು ಹಾಕಿದ ಭಿಕ್ಷೆ"
"ಕೊನೆಯವರೆಗೂ ನನ್ನ ಮಗನನ್ನು ಆಶೀರ್ವಾದ ಮಾಡುತ್ತಲೇ ಹೋಗಿದ್ದಾನೆ. ಅಪ್ಪು, ಅಶ್ವಿನಿ ಇಬ್ಬರನೂ ಹೊಂಬಾಳೆಯವರಿಗೆ ಗುರು ಸಿನಿಮಾ ನೀವು ಮಾಡಬೇಕು ಅಂತ ಕೇಳಿಕೊಂಡಿದ್ದಾರೆ. ಇದೇನೆ ಬಂದರೂ ಅವರಿಬ್ಬರಿಗೆ ಅರ್ಪಿಸುತ್ತೇನೆ. ಇದು ಅಪ್ಪು ಹಾಕಿದ ಭಿಕ್ಷೆ ಅಂತಲೇ ಅಂದುಕೊಳ್ಳುತ್ತೇನೆ. ಅಭಿಮಾನಿಗಳು ಇದ್ದಾರಪ್ಪ, ನೀನು ಚೆನ್ನಾಗಿರು ಹೋಗು ಅಂತ ಕಳಿಸಿದಂತೆ ಇದೆ." ಎಂದು ರಾಘಣ್ಣ ಹೇಳಿದ್ದಾರೆ.
"ಎಲ್ಲಾ ಅರೇಂಜ್ ಮಾಡಿ ಹೋಗಿದ್ದಾನೆ"
ಪುನೀತ್ ರಾಜ್‌ಕುಮಾರ್ ಅವರೇ ಹೊಂಬಾಳೆ ಯುವಗಾಗಿ ಒಂದು ಸಿನಿಮಾ ಮಾಡಬೇಕು ಅಂತ ಹೇಳಿದ್ದರು. ಅಪ್ಪು ಅಗಲಿಕೆ ಬಳಿಕ ಆಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಹೊಂಬಾಳೆ ಬಳಿ ಮನವಿ ಮಾಡಿದ್ದರು. ಅದಕ್ಕೆ ಅಪ್ಪುನೇ ಎಲ್ಲಾ ಅರೇಂಜ್ ಮಾಡಿ ಹೋಗಿದ್ದಾನೆಂದು ರಾಘಣ್ಣ ಹೇಳಿಕೊಂಡಿದ್ದಾರೆ. "ಹೊಂಬಾಳೆ, ಸಂತೋಷ್ ಆನಂದ್‌ರಾಮ್ ಒಂದೊಳ್ಳೆ ತಂಡ ಸಿಕ್ಕಿತು ನಮಗೆ. ಇದೆಲ್ಲವನ್ನೂ ನನ್ನ ತಮ್ಮನೇ ಅರೇಂಜ್ ಮಾಡಿ ಹೋಗಿದ್ದಾನೆ. ಯಾರಾದ್ರೂ ಮಾಡಲಿ ಒಳ್ಳೆಯ ಸಿನಿಮಾ ಮಾಡಬೇಕು. ಜನರು ಇಷ್ಟ ಪಡಬೇಕು. ಅದನ್ನು ಮಾಡಿದ್ದಾರೆ. ನಾನು ಅದಕ್ಕೆ ಸೋಲುತ್ತೇನೆ." ಎನ್ನುತ್ತಾರೆ.


Click it and Unblock the Notifications











