"ಚಿಕ್ಕ ಯಜಮಾನ್ರು ಹುಟ್ಟುಹಬ್ಬ ಹೇಗೆ ಮಾಡ್ತಿದ್ದಾರೆ ಎಂದಿದ್ದ ಅಣ್ಣಾವ್ರು": ಮಗನ ಬರ್ತ್‌ಡೇಯಂದೆ 'ಅಪ್ಪು' ನೆನೆದ ರಾಘಣ್ಣ!
ಹುಟ್ಟುಹಬ್ಬದ ದಿನದಂದೇ ಅಭಿಮಾನಿಗಳು ಯುವ ರಾಜ್‌ಕುಮಾರ್‌ಗೆ ಮೆಗಾ ಪವರ್‌ಸ್ಟಾರ್ ಅಂತ ಬಿರುದು ಕೊಟ್ಟಿದ್ದಾಗಿದೆ. ಇನ್ನೊಂದು ಕಡೆ 'ಯುವ' ಸಿನಿಮಾದ ಹೊಸ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಹೀಗಾಗಿ ದೊಡ್ಮನೆ ಅಭಿಮಾನಿಗಳಿಗೆ ಇಂದು (ಏಪ್ರಿಲ್ 23) ಎಲ್ಲಿಲ್ಲದ ಸಂಭ್ರಮ.
ಹೌದು, ಅಣ್ಣಾವ್ರ ಕುಟುಂಬದ ಮತ್ತೊಂದು ಕುಡಿ, ರಾಘವೇಂದ್ರ ರಾಜ್‌ಕುಮಾರ್ ಅವರ ದ್ವಿತೀಯ ಪುತ್ರ ಯುವ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರೋದು ಗೊತ್ತೇ ಇದೆ. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಯುವ ರಾಜ್‌ಕುಮಾರ್ ಅನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದೆ.

ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡುತ್ತಿರೋ 'ಯುವ'ಗಾಗಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಯುವ ಹುಟ್ಟುಹಬ್ಬದ ಈ ಸಂದರ್ಭದಲ್ಲಿಯೇ ಹೊಂಬಾಳೆ ಫಿಲ್ಮ್ಸ್ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಇನ್ನೊಂದು ಕಡೆ ಯುವ ಮನೆ ಮುಂದೆ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಮಗನ ಮೇಲಿನ ಈ ಅಭಿಮಾನವನ್ನು ಕಂಡು ರಾಘಣ್ಣ ಖುಷಿ ಪಟ್ಟಿದ್ದಾರೆ. ಜೊತೆಗೆ ತಮ್ಮ ಪುನೀತ್ ಮೊದಲ ಸಿನಿಮಾ ಅಪ್ಪು ಬಳಿಕ ಆಚರಿಸಿಕೊಂಡ ಹುಟ್ಟುಹಬ್ಬದ ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.
'ಯುವ' ಹೊಸ ಪೋಸ್ಟರ್ ರಿಲೀಸ್
ಅಪ್ಪು ಅಗಲಿದ ಬಳಿಕ ಕಂಗಾಲಿದ್ದ ಅಭಿಮಾನಿಗಳ ನಂಬಿಕೆ ಯುವ ಮೇಲಿದೆ. ಅವರ ಸ್ಥಾನವನ್ನು ಯುವ ರಾಜ್‌ಕುಮಾರ್ ತುಂಬುತ್ತಾರೆ ಅನ್ನೋ ಮಹದಾಸೆಯಲ್ಲಿ ಕಾದು ಕೂತಿದ್ದಾರೆ. ಈಗಾಗಲೇ 'ಯುವ' ಸಿನಿಮಾ ಚಿಕ್ಕ ಝಲಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈಗ ಹುಟ್ಟುಹಬ್ಬದ ಈ ಸಂದರ್ಭದಲ್ಲಿಯೇ 'ಯುವ' ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ.
ಹೊಂಬಾಳೆ ಫಿಲ್ಮ್ಸ್ 'ಯುವ' ಸಿನಿಮಾ ನಿರ್ಮಾಣ ಮಾಡುತ್ತಿದೆ. ಸಂತೋಷ್ ಆನಂದ್‌ರಾಮ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಯುವ 31ನೇ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ನಿರ್ಮಾಣ ಸಂಸ್ಥೆ 'ಯುವ' ಸಿನಿಮಾ ಹೊಚ್ಚ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಇದು ಈ ಪೋಸ್ಟರ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅಪ್ಪು, ಅಣ್ಣಾವ್ರನ್ನು ನೆನೆದ ರಾಘಣ್ಣ
ಸಹಸ್ರಾರು ಸಂಖ್ಯೆಯಲ್ಲಿ ಅಭಮಾನಿಗಳು ಬಂದು ಯುವ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಇದನ್ನು ಕಣ್ತುಂಬಿಕೊಂಡ ರಾಘಣ್ಣ ಸಹೋದರ ಪುನೀತ್ ರಾಜ್‌ಕುಮಾರ್ ಹಾಗೂ ತಂದೆ ಡಾ.ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ. 'ಅಪ್ಪು' ಸಿನಿಮಾ ರಿಲೀಸ್ ಆದ ಬಳಿಕ ಪುನೀತ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಹೀಗೆ ಆಚರಿಸಿದ್ದರು. ಅದನ್ನು ಕಣ್ತುಂಬಿಕೊಂಡ ಅಣ್ಣಾವ್ರು ಪತ್ನಿ ಪಾರ್ವತಮ್ಮ ಅವರನ್ನು ಕರೆದು ಹರ್ಷ ವ್ಯಕ್ತಪಡಿಸಿದ್ದರು. ಆ ಘಳಿಗೆಯನ್ನು ನೆನಪಿಸಿಕೊಂಡಿದ್ದಾರೆ.
"ಇವತ್ತಿನ ದಿನ ನಾವು ನನ್ನ ತಮ್ಮನನ್ನು ನೆನಪಿಸಿಕೊಳ್ಳಲೇಬೇಕು. ಅವನ ಆಶೀರ್ವಾದದಿಂದಲೇ ಇವೆಲ್ಲ ನಡೆಯುತ್ತಿರೋದು. 2002ರಲ್ಲಿ 2003ರಲ್ಲಿ ನಮ್ಮ ತಮ್ಮನ ಹುಟ್ಟಿದ ಹಬ್ಬ ಆಯ್ತು. 'ಅಪ್ಪು' ಸಿನಿಮಾ ರಿಲೀಸ್ ಆದ್ಮೇಲೆ. ಈ ತರ ಸಿಕ್ಕಾಪಟ್ಟೆ ಜನ ಬಂದಿದ್ದರು. ಅದು ಹಳೇ ಮನೆ. ನಮ್ಮ ತಂದೆ ಇದ್ದರು. ನಮ್ಮ ತಂದೆ ನಮ್ಮ ತಾಯಿಯನ್ನು ಕರೆದು ಪಾರ್ವತಿ ಬಾ ಇಲ್ಲಿ. ಚಿಕ್ಕ ಯಜಮಾನರ ಹುಟ್ಟಿದ ಹಬ್ಬವನ್ನು ಹೇಗೆ ಮಾಡುತ್ತಾರೆ ನೋಡು. ನಮ್ಮದೆಲ್ಲ ಏನೂ ಇರಲಿಲ್ಲ. ಆ ತರ ಮಾಡುತ್ತಿದ್ದಾರೆ. ಆಗ ನಮ್ಮ ತಾಯಿ, ನೀವು ಹುಟ್ಟಿದ ಹಬ್ಬ ಮಾಡಿಸಿಕೊಳ್ಳುತ್ತಿರಲಿಲ್ಲ. ಇಲ್ಲಾ, ಅಂದಿದ್ದರೆ ನಮ್ಮ ಜನ ಒಂದು ವಾರದಿಂದ ಆಚರಣೆ ಮಾಡೋರು ಎಂದಿದ್ರು. ಇವತ್ತು ನನಗೆ ದೃಶ್ಯ ನೆನಪಾಗುತ್ತೆ." ಎಂದು ರಾಘಣ್ಣ ಆ ಘಳಿಗೆಯನ್ನು ಮೆಲುಕು ಹಾಕಿದ್ದಾರೆ.
"ಇದನ್ನೆಲ್ಲ ನೋಡುವುದಕ್ಕೆ ನನ್ನ ಜೀವ ಇದೆಯಲ್ಲ"
ಯುವ ಮೊದಲ ಸಿನಿಮಾ ರಿಲೀಸ್‌ಗೂ ಮುನ್ನವೇ ಅಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಸೇರಿ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇದನ್ನು ನೋಡಿದ ಬಳಿಕ ರಾಘಣ್ಣ ಭಾವುರಾಗಿದ್ದಾರೆ. ಇದನ್ನು ನೋಡುವುದಕ್ಕೆ "ಇನ್ನೂ ನನ್ನ ಜೀವ ಇದೆಯಲ್ಲ" ಎಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
"ಅಭಿಮಾನಿಗಳ ಆರ್ಶೀರ್ವಾದ ಅಭಿಮಾನ ಹೀಗೆ ಇರಲಿ. ಅವರನ್ನು ಚೆನ್ನಾಗಿ ನೋಡಿಕೋ. ಅವರನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಂದು ಹುಟ್ಟುಹಬ್ಬದ ಜೊತೆಗೆ ಮತ್ತೆ ಅವರನು ಸಿನಿಮಾ ಇಂಡಸ್ಟ್ರಿಗೆ ಹುಟ್ಟುತ್ತಿದ್ದಾನೆ. ಮಕ್ಕಳ ಹುಟ್ಟಿದ ಹಬ್ಬ ಹೀಗೆ ಆಚರಣೆ ಮಾಡಿದರೆ, ಯಾವ ತಂದೆಗೆ ಖುಷಿಯಾಗಲ್ಲ. ಅಭಿಮಾನಿ ದೇವರುಗಳೇ ಅವರು. ಅವರ ಮನೆಯಲ್ಲಿ ಇರುತ್ತಾರೋ ಇಲ್ವೋ. ಈ ಮನೆಗೆ ಬಂದು ಹುಟ್ಟುಹಬ್ಬ ಆಚರಿಸುತ್ತಾರೆ. ಇದನ್ನೆಲ್ಲ ನೋಡುವುದಕ್ಕೆ ನನ್ನ ಜೀವ ಇದೆಯಲ್ಲ. ಅಷ್ಟೇ ಖುಷಿಯಾಗುತ್ತೆ." ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ.


Click it and Unblock the Notifications











