14 ವರ್ಷದ ಹಿಂದೆ ಶಿವಣ್ಣ ಗೃಹಪ್ರವೇಶದ ವಿಡಿಯೋ ಹಂಚಿಕೊಂಡ ರಾಘಣ್ಣ: ಸ್ವಿಮ್ಮಿಂಗ್ ಪೂಲ್ ಮಾಯ!
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿದ ದಿನದಿಂದ ರಾಘವೇಂದ್ರ ರಾಜ್‌ಕುಮಾರ್ ತುಂಬಾನೇ ಭಾವುಕರಾಗಿದ್ದಾರೆ. ಒಳಗಡೆ ನೋವು ಇದ್ದರೂ, ರಾಘಣ್ಣ ಅದನ್ನು ತೋರಿಸಿಕೊಂಡಿರಲಿಲ್ಲ. ಆದರೆ, ಅಪ್ಪುವಿನ ಒಂದೊಂದೇ ವಿಡಿಯೋ ಹಾಗೂ ಫೋಟೋವನ್ನು ಸೋಶಿಯಲ್ ಮಿಡಿಯಾದಲ್ಲಿ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈಗೊಂದು ಹಳೇ ವಿಡಿಯೋ ಶೇರ್ ಮಾಡಿದ್ದಾರೆ.
ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಈ ಮೂವರು ಸಹೋದರರು ಅನ್ನುವುದಕ್ಕಿಂತ ಸ್ನೇಹಿತರಾಗಿದ್ದಿದ್ದೇ ಹೆಚ್ಚು. ಯಾರದ್ದೇ ಮನೆಯಲ್ಲೂ ಕಾರ್ಯಕ್ರಮ ಜರುಗಿದರೆ ಅಲ್ಲಿ ಇಡೀ ಅಣ್ಣಾವ್ರ ಕುಟುಂಬವೇ ನೆರೆದಿರುತ್ತಿತ್ತು.
ಇದು ಇಂದು, ನಿನ್ನೆಯ ಪದ್ಧತಿ ಅಲ್ಲ. ಮೊದಲಿನಿಂದಲೂ ಬೆಳೆದು ಬಂದ ಪದ್ಧತಿ. ಹಾಗಾಗಿಯೇ ಶಿವರಾಜ್‌ಕುಮಾರ್ ಮನೆಯ ಗೃಹಪ್ರವೇಶದಲ್ಲಿ ಇಡೀ ಅಣ್ಣಾವ್ರ ಕುಟುಂಬವೇ ನೆರೆದಿತ್ತು. ಪುನೀತ್ ಕೂಡ ಪತ್ನಿಯಿಂದಿಗೆ ಖುಷಿ ಖುಷಿಯಿಂದ ಓಡಾಡಿಕೊಂಡಿದ್ದರು.

ಶಿವಣ್ಣ ಮನೆಯ ಗೃಹಪ್ರವೇಶದ ವಿಡಿಯೋ
2007ರಲ್ಲಿ ಶಿವರಾಜ್‌ಕುಮಾರ್ ನಾಗಾವರದ ಮಾನ್ಯತಾ ಟೆಕ್ ಪಾರ್ಕ್ ಬಳಿಕ ಹೊಸ ಬಂಗಲೆಯನ್ನು ಕಟ್ಟಿಸಿದ್ದರು. ಶಿವಣ್ಣ ಕಟ್ಟಿಸಿದ್ದ ಈ ಬಂಗಲೆಯ ಗೃಹಪ್ರವೇಶವನ್ನೂ ಅದ್ದೂರಿಯಾಗಿಯೇ ಮಾಡಿದ್ದರು. ಈ ವಿಡಿಯೋವನ್ನು ಶಿವರಾಜ್‌ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸುಮಾರು 14 ವರ್ಷಗಳ ಹಿಂದಿನ ಈ ವಿಡಿಯೋದಲ್ಲಿ ಶಿವಣ್ಣ ಹಾಗೂ ಪತ್ನಿ ಗೀತಾ ಅವರ ಜೊತೆಗೂಡಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಅಣ್ಣಾವ್ರ ಕುಟುಂಬ ಭಾಗಿ
ಶಿವರಾಜ್‌ಕುಮಾರ್ ಗೃಹಪ್ರವೇಶದಲ್ಲಿ ಇಡೀ ಅಣ್ಣಾವ್ರ ಕುಟುಂಬ ಭಾಗಿಯಾಗಿತ್ತು. ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿದ್ದು ಕಾಣಬಹುದು. ಇವರೊಂದಿಗೆ ಅಣ್ಣಾವ್ರ ಹೆಣ್ಣು ಮಕ್ಕಳು ಹಾಗೂ ಅಳಿಯಂದಿರು ಕೂಡ ಭಾಗಿಯಾಗಿದ್ದರು. ಈ ಇದೇ ವಿಡಿಯೋವನ್ನು ರಾಘಣ್ಣ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಗನ ಮನೆ ನೋಡುವ ಕನಸು ಈಡೇರಲಿಲ್ಲ
ಶಿವರಾಜ್‌ಕುಮಾರ್ ಮನೆ ಕಟ್ಟುವ ಕೆಲಸ ಆರಂಭ ಆಗಿತ್ತು. ಡಾ.ರಾಜ್‌ಕುಮಾರ್ ಕೂಡ ಮನೆ ನಿರ್ಮಾಣಗೊಳ್ಳುತ್ತಿದ್ದ ವೇಳೆ ಬಂದು ಹೋಗಿದ್ದರು. ಇನ್ನೇನು ಬಂಗಲೇ ನಿರ್ಮಾಣ ಪೂರ್ಣಗೊಳ್ಳುತ್ತಿದೆ ಅನ್ನುವಷ್ಟರಲ್ಲೇ ಅಣ್ಣಾವ್ರು ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದರು. ಡಾ. ರಾಜ್‌ಕುಮಾರ್ ಅಗಲಿದ ಒಂದು ವರ್ಷದ ಬಳಿಕ ಶಿವರಾಜ್‌ಕುಮಾರ್ ಮನೆ ಪೂರ್ಣಗೊಂಡಿತ್ತು. ಆಗ ಗೃಹಪ್ರವೇಶವನ್ನು ಮಾಡಿದ್ದರು. ಮನೆಯೊಳಗೆ ಪ್ರವೇಶ ಮಾಡುವ ಆರಂಭದಲ್ಲೇ ಅಣ್ಣಾವ್ರು ಹಾಗೂ ವರಪ್ಪ ಅವರ ಫೋಟೊವನ್ನು ಲಗತ್ತಿಸಲಾಗಿದೆ.

ಶಿವಣ್ಣನ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ಇಲ್ಲ
ಶಿವರಾಜ್‌ಕುಮಾರ್ ಗೃಹಪ್ರವೇಶದ ವಿಡಿಯೋದ ಆರಂಭದಲ್ಲಿಯೇ ಬೃಹತ್ ಸ್ವಿಮ್ಮಿಂಗ್ ಪೂಲ್ ಕಾಣ ಸಿಗುತ್ತದೆ. ಆದ್ರೀಗ ಶಿವರಾಜ್‌ಕುಮಾರ್ ಮನೆಯಲ್ಲಿ ಆ ಸ್ವಿಮ್ಮಿಂಗ್ ಪೂಲ್ ಇಲ್ಲ. ಈ ಸ್ವಿಮ್ಮಿಂಗ್ ಪೂಲ್ ಇದ್ದ ಸ್ಥಳದಲ್ಲೀಗ ಗಾರ್ಡನ್ ನಿರ್ಮಿಸಲಾಗಿದೆ. ಅಸಲಿಗೆ ಈ ಸ್ವಿಮ್ಮಿಂಗ್ ಪೂಲ್ ಅನ್ನು ಮುಚ್ಚಿದ್ದು ಏಕೆ? ಅನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ, 2007ರಲ್ಲಿ ಶಿವಣ್ಣನ ಮನೆಯ ಗೃಹಪ್ರವೇಶವಾಗಿದ್ದ ಸಂದರ್ಭದಲ್ಲಿ ಸ್ವಿಮ್ಮಿಂಗ್ ಪೂಲ್ ಇತ್ತು.


Click it and Unblock the Notifications











