'ಶಾನುಭೋಗರ ಮಗಳು' ರಾಗಿಣಿ ಪ್ರಜ್ವಲ್: ಇದು ನಾಲ್ವರು ಬ್ರಿಟಿಷರನ್ನು ಗುಂಡಿಟ್ಟು ಕೊಂದ ವೀರನಾರಿಯ ಕಥೆ
ಸಿನಿಮಾಗಳನ್ನು ಪ್ರೀತಿಸುವ ಒಂದು ವರ್ಷ ಸೈಲೆಂಟ್ ಆಗಿದೆ. ಅವರಿಗೆ ಮಾಸ್, ಕಮರ್ಷಿಯಲ್, ಲವ್ ಸ್ಟೋರಿ, ಆಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು ಅಷ್ಟಾಗಿ ಇಷ್ಟ ಆಗುವುದಿಲ್ಲ. ಅವರಿಗೆ ಕಾದಂಬರಿ ಆಧಾರಿಸಿದ ಸಿನಿಮಾಗಳು ಅಂದರೆ ಬಲು ಇಷ್ಟ.
ಇತ್ತೀಚೆಗೆ ಕಾದಂಬರಿ ಆಧಾರಿಸಿದ ಸಿನಿಮಾಗಳು ಕಡಿಮೆ ಆಗಿವೆ. ಇಂತಹ ಸಿನಿಮಾಗಳನ್ನು ನಿರ್ಮಾಣ ಮಾಡುವ ಆಸಕ್ತಿ ಇಂದಿನ ಫಿಲ್ಮ್ ಮೇಕರ್‌ಗಳಿಗೆ ಇಲ್ಲ. ಗಿರೀಶ್ ಕಾರ್ನಾಡ್, ನಾಗಾಭಾರಣ, ಸಿದ್ಧಲಿಂಗಯ್ಯ, ಕೂಡ್ಲು ರಾಮಕೃಷ್ಣ ಅಂತಹ ನಿರ್ದೇಶಕರು ಕಾದಂಬರಿಯನ್ನು ಆಧರಿಸಿಯೇ ಸಿನಿಮಾ ಮಾಡುತ್ತಿದ್ದರು. ಅಂತಹ ಸಿನಿಮಾಗಳನ್ನು ಕಮರ್ಷಿಯಲ್ ಆಗಿ ಹಿಟ್ ಕೂಡ ಮಾಡಿದ್ದರು.

ಕಾದಂಬರಿ ಆಧಾರಿತ ಸಿನಿಮಾಗಳು ಸ್ಯಾಂಡಲ್‌ವುಡ್‌ನಲ್ಲಿ ಮರೀಚಿಕೆ ಆಗಿರುವಾಗಲೇ, ಇಂತಹದ್ದೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತಿದೆ. ವಿಶೇಷ ಅಂದ್ರೆ, ಪ್ರಿನ್ಸ್ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಈ ಸಿನಿಮಾದಲ್ಲಿ ಶಾನುಭೋಗರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಈ ಸಿನಿಮಾದ ಹೆಸರು ಕೂಡ 'ಶಾನುಭೋಗರ ಮಗಳು'.
ರಾಗಿಣಿ ಪ್ರಜ್ವಲ್ ಹೊಸ ಸಿನಿಮಾ
ಪ್ರಜ್ವಲ್ ದೇವರಾಜ್ ಪತ್ನಿ ಒಳ್ಳೆ ಡ್ಯಾನ್ಸರ್ ಅನ್ನೋದು ಗೊತ್ತಿರೋ ವಿಷಯವೇ. ಆದರೆ, ಇತ್ತೀಚೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಒಳ್ಳೆ ನಟಿ ಎಂಬುದು ಸಾಬೀತಾಗಿದೆ. 'ರಿಷಭಪ್ರಿಯ' ಅನ್ನೋ ಕಿರುಚಿತ್ರದ ಮೂಲಕ ನಟನೆ ಕಡೆ ವಾಲಿದ ರಾಗಿಣಿ, ಕಥೆಗಳನ್ನು ಆಯ್ಕೆ ಮಾಡಿಕೊಂಡು ಹೊಸ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಇದೀಗ ಲೇಖಕಿ ಭಾಗ್ಯ ಕೃಷ್ಣಮೂರ್ತಿ ಬರೆದ ಕಾದಂಬರಿಯನ್ನು ಆಧರಿಸಿದ 'ಶಾನುಭೋಗರ ಮಗಳು' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸ್ವತಂತ್ರ ಪೂರ್ವದ ಕಥೆಯಾಗಿದ್ದು, ಪಕ್ಕಾ ದೇಸಿ ಮಹಿಳೆಯಾಗಿ ರಾಗಿಣಿ ಪ್ರಜ್ವಲ್ ನಟಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಟಿಪ್ಪು ಸುಲ್ತಾನ್, ಮೈಸೂರಿನ ಮಹಾರಾಜರ ಸನ್ನಿವೇಶ
'ಶಾನುಭೋಗರ ಮಗಳು' ಸಿನಿಮಾದಲ್ಲಿ ರಾಗಿಣಿ ನಾಲ್ವರು ಬ್ರಿಟಿಷರ ವಿರುದ್ಧ ಗುಂಡು ಹಾರಿಸಿ ಕೊಲ್ಲುವ ವೀರ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಟಿಪ್ಪು ಸುಲ್ತಾನ್ ಹಾಗೂ ಮೈಸೂರಿನ ಮಹಾರಾಜರ ಸನ್ನಿವೇಶಗಳು ಕೂಡ ಬರುತ್ತವೆ. ಹೀಗಾಗಿ ಕಾದಂಬರಿ ಆಧಾರಿತ ಸಿನಿಮಾ ಪ್ರಿಯರಿಗೆ ಗಮನ ಸೆಳೆಯುತ್ತಿದೆ.
ಅಂದ್ಹಾಗೆ ಟಿಪ್ಪು ಸುಲ್ತಾನ್ ಪಾತ್ರದಲ್ಲಿ ಕಿಶೋರ್ ನಟಿಸಿದ್ದಾರೆ. ಇತ್ತೀಚೆಗೆ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ ರಾಗಿಣಿ ಪ್ರಜ್ವಲ್ ನಾಲ್ವರು ಬ್ರಿಟಿಷರನ್ನು ಗುಂಡಿಟ್ಟು ಕೊಲ್ಲುವ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಲಾಗಿದೆ.
ಹಿರಿಯ ಕಲಾವಿದರ ಸಮಾಗಮ
'ಶಾನುಭೋಗರ ಮಗಳು' ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ಜೊತೆಗೆ ಹಿರಿಯ ಕಲಾವಿದರಾದ ರಮೇಶ್‍ಭಟ್, ಸುಧಾ ಬೆಳವಾಡಿ, ಪದ್ಮಾ ವಾಸಂತಿ ನಟಿಸುತ್ತಿದ್ದಾರೆ. ಇವರ ಜೊತೆ ವಾಣಿಶ್ರೀ, ಭಾಗ್ಯಶ್ರೀ, ಕುಮಾರಿ ಅನನ್ಯಾ, ಟಿ.ಎನ್.ಶ್ರೀನಿವಾಸ ಮೂರ್ತಿ ಹಾಗೂ ನಿರಂಜನ ಶೆಟ್ಟಿ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ವಿಶೇಷ ಅಂದ್ರೆ, ಡಾ||ಶಮಿತಾ ಮಲ್ನಾಡ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಬಿ.ಎ. ಮಧು ಅವರ ಚಿತ್ರಕತೆ-ಸಂಭಾಷಣೆಯಿದೆ. ಜೈ ಆನಂದ್ ಕ್ಯಾಮರಾ, ಕೆಂಪರಾಜ್ ಸಂಕಲನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಒಟ್ನಲ್ಲಿ ಕಾದಂಬರಿ ಆಧಾರಿತ ಸಿನಿಮಾ ಬೇಕು ಅನ್ನೋರಿಗೆ 'ಶಾನುಭೋಗರ ಮಗಳು' ದಿಟ್ಟತನ ಇಷ್ಟ ಆಗಬಹುದು. ಶೂಟಿಂಗ್ ಮುಗಿಸಿ, ಶೀಘ್ರದಲ್ಲಿಯೇ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದೆ.


Click it and Unblock the Notifications











