"ಸು ಫ್ರಮ್ ಸೋ 2 ನಾನು ಮಾಡಲ್ಲ.. ಅವರು ಬೇಕಿದ್ರೆ ಮಾಡಿಕೊಳ್ಳಲಿ"; ರಾಜ್ ಬಿ ಶೆಟ್ಟಿ ಹಿಂದೆ ಸರಿದಿದ್ದೇಕೆ?
ಕನ್ನಡ ಚಿತ್ರರಂಗದ ಬಗ್ಗೆ ಮತ್ತೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಚರ್ಚೆ ಮಾಡುವಂತೆ ಮಾಡಿದ ಸಿನಿಮಾ 'ಸು ಫ್ರಮ್ ಸೋ'. ದೇಶದ ಉದ್ದಗಲಕ್ಕೂ ಈ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಮಲಯಾಳಂ ಹಾಗೂ ತೆಲುಗು ಭಾಷೆಯ ಜನರು ಕೂಡ ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಹಜವಾಗಿ ಒಂದು ಸಿನಿಮಾ ಬ್ಲಾಕ್‌ಬಸ್ಟರ್ ಆದರೆ, ಆ ಸಿನಿಮಾ ಸೀಕ್ವೆಲ್ ಬರೋದು ಕಾಮನ್. ಆದರೆ, ರಾಜ್ ಬಿ ಶೆಟ್ಟಿ ಪಾರ್ಟ್ 2 ಮಾಡೋದಿಲ್ಲ ಅಂತ ನಿರ್ಧರಿಸಿದ್ದಾರೆ.
ಇನ್ನೊಂದು ಕಡೆ 'ಸು ಫ್ರಮ್ ಸೋ' ಸಿನಿಮಾ ನಿರ್ದೇಶಿಸಿದ ಜಿಪಿ ತುಮಿನಾಡು ಅವರಿಗೆ ಸೀಕ್ವೆಲ್ ಮಾಡಬೇಕು ಅನ್ನೋ ಆಸೆಯಿದೆ. ಇದನ್ನು ಈಗಾಗಲೇ ರಾಜ್ ಬಿ ಶೆಟ್ಟಿಯವರ ಬಳಿಯೂ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ ಬಿ ಶೆಟ್ಟಿ ಮಾತ್ರ 'ಸು ಫ್ರಮ್ ಸೋ' ಪಾರ್ಟ್ 2 ಮಾಡೋದಿಲ್ಲ. ನೀವು ಬೇಕಾದರೆ ಮಾಡಿಕೊಳ್ಳಿ ಅಂತ ಖಡಾ ಖಂಡಿತವಾಗಿ ಹೇಳಿದ್ದಾರೆ. ಹೀಗಾಗಿ 'ಸು ಫ್ರಮ್ ಸೋ' ಪಾರ್ಟ್ 2 ಬರೋದು ಅನುಮಾನ.

'ಸು ಫ್ರಮ್ ಸೋ' ಇತ್ತೀಚೆಗೆ ತೆಲಗು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಹೀಗಾಗಿ ರಾಜ್ ಬಿ ಶೆಟ್ಟಿ ತೆಲುಗಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅಲ್ಲಿನ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಸೆಳೆಯುವುದಕ್ಕೆ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇತ್ತೀಚೆಗೆ ತೆಲುಗು ಮಾಧ್ಯಮದವರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದ ರಾಜ್ ಬಿ ಶೆಟ್ಟಿ 'ಸು ಫ್ರಮ್ ಸೋ' ಪಾರ್ಟ್ 2 ಮಾಡುವುದಕ್ಕೆ ಯಾಕೆ ಇಷ್ಟವಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ಪಾರ್ಟ್ 2 ಬಗ್ಗೆ ನಂಬಿಕೆಯಿಲ್ಲ"
ರಾಜ್ ಬಿ ಶೆಟ್ಟಿಗೆ ತೆಲುಗು ಪತ್ರಕರ್ತರು 'ಸು ಫ್ರಮ್ ಸೋ' ಪಾರ್ಟ್ 2 ಮಾಡುವ ಆಲೋಚನೆ ಇದೆಯೇ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ರಾಜ್ ಬಿ ಶೆಟ್ಟಿ ನೇರವಾಗಿ ಪಾರ್ಟ್ ಮಾಡೋದಿಲ್ಲ ಎಂದು ಹೇಳಿದ್ದಾರೆ. "ನನಗೆ ಪಾರ್ಟ್ 2 ಬಗ್ಗೆ ನಂಬಿಕೆ ಇಲ್ಲ. ಏನಂದ್ರೆ, ನಾನು ಮೊದಲು ರೈಟರ್, ಟೆಕ್ನಿಷಿಯನ್. ಆ ಮೇಲೆ ನಟ. ನಾನು ಈಗಾಗಲೇ ನೋಡಿದ್ದರ ಬಗ್ಗೆ ನಾನು ಉತ್ಸುಕನಾಗಿಲ್ಲ. ಆದರೆ, ನನ್ನ ನಿರ್ದೇಶಕರು ಪಾರ್ಟ್ ಮಾಡೋಣ ಎಂದು ಕನ್ವಿನ್ಸ್ ಮಾಡುತ್ತಿದ್ದಾರೆ. ಸು ಫ್ರಮ್ ಸೋ ಪಾರ್ಟ್ 2 ಮಾಡೋಣ ಎಂದು ಹೇಳುತ್ತಿದ್ದಾರೆ." ಎಂದು ತೆಲುಗು ಪತ್ರಕರ್ತರಿಗೆ ಹೇಳಿದ್ದಾರೆ.

"ಪಾರ್ಟ್ 2 ಮಾಡಿದರೆ ತಡೆಯುವುದಿಲ್ಲ"
"ನಾನು ಅವರಿಗೆ ನೀವು ಯಾರೊಂದಿಗೆ ಬೇಕಿದರೂ ಸು ಫ್ರಮ್ ಸೋ ಪಾರ್ಟ್ 2 ಮಾಡಿ. ನಾನು ನಿಮ್ಮನ್ನು ತಡೆಯುವುದಿಲ್ಲ. ಆದರೆ, ನಾನು ಇದರಲ್ಲಿ ಇರುವುದಿಲ್ಲ ಎಂದು ಹೇಳಿದ್ದೇನೆ. ನಾನು ಮಂಗಳೂರಿನ ಸಣ್ಣ ನಗರದಿಂದ ಬಂದಿದ್ದೇನೆ. ಮಂಗಳೂರಿನಲ್ಲಿ ಸಿನಿಮಾ ಕಲ್ಚರ್ ಎನ್ನುವುದೇ ಇಲ್ಲ. ಅಲ್ಲಿಂದ ಬಂದು ನಾನು ಈ ಇಡಸ್ಟ್ರಿಯಲ್ಲಿ ಸಿನಿಮಾ ಮಾಡುತ್ತಿರುವುದು ನನಗೆ ಹೆಮ್ಮೆ. ಇಂತಹ ಸಂದರ್ಭದಲ್ಲಿ ನಾನು ಯಶಸ್ಸು ಚೇಸ್ ಮಾಡುವುದಕ್ಕೆ ಹೋಗಿ ಆ ಗೌರವವನ್ನು ಹಾಳು ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
'ಗರುಡ ಗಮನ'ವನ್ನೂ ಮಾಡುವುದಿಲ್ಲ
ಇದೇ ಸಂವಾದದಲ್ಲಿ 'ಸು ಫ್ರಮ್ ಸೋ' ಅಷ್ಟೇ ಅಲ್ಲ.'ಗರುಡ ಗಮನ ವೃಷಭ ವಾಹನ' ಸಿನಿಮಾವನ್ನು ಪಾರ್ಟ್ 2 ಮಾಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಹೀಗಾಗಿ ರಾಜ್ ಬಿ ಶೆಟ್ಟಿಯ ಸಿನಿಮಾಗಳು ಪಾರ್ಟ್ 2 ಆಗೋದಿಲ್ಲ."ಗರುಡ ಗಮನ ವೃಷಭ ವಾಹನ ಪಾರ್ಟ್ 2 ಮಾಡುವುದಕ್ಕೂ ನನಗೆ ಅದಕ್ಕೆ ಇಷ್ಟವಿಲ್ಲ. ಈ ಸಿನಿಮಾ ಮಾಡುವುದಕ್ಕೂ ನನಗೆ ಇಷ್ಟವಿಲ್ಲ. ನಾನು ಇದರ ಭಾಗವಾಗುವುದಿಲ್ಲ. ನನ್ನ ತಂಡ ಸಿನಿಮಾ ಮಾಡುವುದಕ್ಕೆ ಬಯಸಿದರೆ, ಅವರು ಮಾಡಬಹುದು. ನಾನು ಆ ಸಿನಿಮಾದ ಭಾಗವಾಗಿ ಇರುವುದಿಲ್ಲ." ಎಂದು ಪತ್ರಕರ್ತರಿಗೆ ಹೇಳಿದ್ದಾರೆ.


Click it and Unblock the Notifications











