ದುನಿಯಾ ವಿಜಯ್ ಜೊತೆ ಅಖಾಡಕ್ಕಿಳಿದ 'ಟೋಬಿ'; ರಾಜ್ ಬಿ ಶೆಟ್ಟಿ ಹೊಸ ಸಿನಿಮಾ ಬಗ್ಗೆ ಏನಿದು ಸುದ್ದಿ?
ಪ್ರತಿಭಾವಂತ ಕಲಾವಿದ ರಾಜ್ ಬಿ ಶೆಟ್ಟಿ ಸದಾ ಏನಾದರೊಂದು ಕ್ರಿಯಾಶೀಲತೆಯಲ್ಲಿ ತೊಡಗಿಕೊಂಡೇ ಇರುತ್ತಾರೆ. ಒಂದು ನಿಮಿಷ ಸುಮ್ಮನೆ ಕೂರೋ ಜನಾನೇ ಅಲ್ಲ ಅಂತ ಅವರ ಗೆಳೆಯರೇ ಹೇಳ್ತಾರೆ. 'ಟೋಬಿ'ಯಲ್ಲಿ ಅತ್ಯದ್ಭುತ ನಟನೆ ತೋರಿದ ಈ ಕಲಾವಿದ ನಂತರ ಕನ್ನಡದಲ್ಲಿ ಸ್ವಲ್ಪ ಸೈಲೆಂಟ್ ಆಗಿಬಿಟ್ಟರಲ್ಲ ಅಂತ ಅಭಿಮಾನಿಗಳು ಮಾತಾಡಿಕೊಳ್ಳೋಕೆ ಶುರು ಮಾಡಿದ್ದು ಉಂಟು.
ರಾಜ್ ಬಿ ಶೆಟ್ಟಿ ಸೈಲೆಂಟಾಗಿ ಮಲಯಾಳಂ ಭಾಷೆಯಲ್ಲಿ ಎರಡು ಸಿನಿಮಾ ಮುಗಿಸಿ ಬಂದಿದ್ದಾರೆ. ಈಗ ಕನ್ನಡದಲ್ಲೂ ಅರ್ಜುನ್ ಜನ್ಯ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ '45' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಕನ್ನಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋದು ಸುದ್ದಿ.

ಅಂದ್ಹಾಗೆ, ಇದೇ ಮೊದಲ ಬಾರಿಗೆ ರಾಜ್ ಬಿ ಶೆಟ್ಟಿ, ದುನಿಯಾ ವಿಜಯ್ ಜೊತೆ ಸೇರಿ ಒಂದು ಚಿತ್ರದಲ್ಲಿ ನಟಿಸೋಕೆ ಮುಂದಾಗಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದ ಗಲ್ಲಿಗಳಲ್ಲಿ ಓಡಾಡ್ತಿದೆ. ದುನಿಯಾ ವಿಜಯ್ 29ನೇ ಸಿನಿಮಾ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಆ ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತರು ಬರೆದಿರುವ 'ಚೋಮನ ದುಡಿ' ಕಾದಂಬರಿ ಪ್ರೇರಿತ ಸಿನಿಮಾ ಎನ್ನಲಾಗಿದೆ. ಜಡೇಶ ಹಂಪಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇತ್ತೀಚೆಗೆ ತೆರೆಕಂಡು ದಾಖಲೆ ಬರೆದ ದರ್ಶನ್ ಅಭಿನಯದ 'ಕಾಟೇರ' ಸಿನಿಮಾಗೆ ಕತೆ ಬರೆದಿದ್ದು ಇದೇ ಜಡೇಶ್ ಹಂಪಿ. ಹಾಗೇ ಶರಣ್ ನಟನೆಯ 'ಗುರು ಶಿಷ್ಯರು' ಸಿನಿಮಾದ ಡೈರೆಕ್ಷರ್ ಆಗಿರುವ ಇವರು ಈಗ 'ಚೋಮನ ದುಡಿ'ಯಿಂದ ಸ್ಪೂರ್ತಿ ಪಡೆದು ಹೆಣೆದ ಕತೆಯನ್ನು ಸಿನಿಮಾ ಮಾಡೋಕೆ ಸಜ್ಜಾಗಿದ್ದಾರೆ. ಕತೆಗೆ ಹೆಚ್ಚಿನ ಮಹತ್ವ ಕೊಡುವ ಈ ನಿರ್ದೇಶಕ 'ಚೋಮನ ದುಡಿ'ಯಿಂದ ಪ್ರೇರಿತರಾಗಿ ಎಂತಹ ಕಥೆಯನ್ನು ತೆರೆಮೇಲೆ ತರಬಹುದು? ಅನ್ನುವ ಕುತೂಹಲವಿದೆ.
ದುನಿಯಾ ವಿಜಯ್, ರಚಿತಾ ರಾಮ್ ಮತ್ತು ರಾಜ್ ಬಿ ಶೆಟ್ಟಿ ಇದ್ದಾರೆ ಎಂದ ಮೇಲೆ ಇದೊಂದು ಕಮರ್ಷಿಯಲ್ ಚಿತ್ರವೇ ಅನ್ನೋದು ಜನರ ಅನಿಸಿಕೆ. ಚಿತ್ರತಂಡ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಆದರೆ, ರಾಜ್ ಬಿ ಶೆಟ್ಟಿ ಅಸ್ತು ಅಂದಿರೋದ್ರಿಂದ ಈ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿರೋದಂತೂ ಸತ್ಯ.


Click it and Unblock the Notifications











