Raj B Shetty-Toby: ಯಾರಿಗೆ ಉತ್ತರ ಕೊಡೋಕೆ 'ಟೋಬಿ'? ರಾಜ್ ಬಿ ಶೆಟ್ಟಿ ಕೋಪ ಸಿನಿಮಾವಾಗಿ ಬದಲಾಗಿದ್ದೇಗೆ?
ಕಳೆದ ವಾರ 'ಕ್ಷೇತ್ರಪತಿ' ರಿಲೀಸ್ ಆಗಿದೆ. ರೈತನ ಕೋಪ, ಹೋರಾಟವನ್ನೇ ಮುಂದಿಟ್ಟುಕೊಂಡು ಮಾಡಿದ ಸಿನಿಮಾವಿದು. ಈ ಸಿನಿಮಾ ರಿಲೀಸ್ ಆದ ಒಂದು ವಾರಕ್ಕೆ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಅದುವೇ 'ಟೋಬಿ'.
ಈ ವಾರ 'ಟೋಬಿ' ರಿಲೀಸ್ ಆಗುತ್ತಿದೆ. ರಾಜ್ ಬಿ ಶೆಟ್ಟಿ ನಟಿಸಿದ ಮೊದಲ ಪಕ್ಕಾ ಕಮರ್ಷಿಯಲ್ ಸಿನಿಮಾವಿದು. 'ಟೋಬಿ'ಯ ಕೋಪ, ಅಸಹನೆಯನ್ನೇ ಸಿನಿಮಾ ಮಾಡಿ ತೆರೆಮೇಲೆ ತರಲಾಗಿದೆ. ಅಷ್ಟಕ್ಕೂ 'ಟೋಬಿ' ಸಿನಿಮಾ ಆಗುವುದಕ್ಕೊಂದು ಕೋಪದ ಹಿನ್ನೆಲೆಯಿದೆ.

ಈ ಹಿಂದೆ ಟ್ರೈಲರ್ ಲಾಂಚ್ ಮಾಡುವಾಗ ರಾಜ್ ಬಿ ಶೆಟ್ಟಿ 'ಟೋಬಿ' ಯಾಕೆ ಮಾಡಿದ್ದು ಅನ್ನೋದಕ್ಕೆ ಕಾರಣ ಕೊಟ್ಟಿದ್ದರು. ಯಾರಿಗೋ ಉತ್ತರ ಕೊಡುವುದಕ್ಕೆ ಸಿನಿಮಾ ಮಾಡಿದ್ದೇವೆ ಎಂದಿದ್ದರು. ಈಗ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ರಾಜ್ ಬಿ ಶೆಟ್ಟಿ ಈ ಬಗ್ಗೆ ಮತ್ತಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ಅದೇನು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ಯಾರದ್ದೋ ಕೋಪಕ್ಕೆ ಹುಟ್ಟಿಕೊಳ್ತಾ 'ಟೋಬಿ'?
'ಟೋಬಿ' ಸಿನಿಮಾ ಬಗ್ಗೆ ರಾಜ್ ಬಿ ಶೆಟ್ಟಿ ಇಂಟ್ರೆಸ್ಟಿಂಗ್ ವಿಷಯವೊಂದನ್ನು ಬಿಚ್ಚಿಟ್ಟಿದ್ದರು. ಯಾರದ್ದೋ ಕೋಪಕ್ಕೆ ಈ ಸಿನಿಮಾ ಮಾಡಿದ್ದಾಗಿ ರಾಜ್ ಬಿ ಶೆಟ್ಟಿ ಹೇಳಿದ್ದರು. ಟ್ರೈಲರ್ ಲಾಂಚ್‌ನಲ್ಲಿ ಕೆಣಕಿದವರಿಗೆ ಉತ್ತರ ಕೊಡುವುದಕ್ಕೆ 'ಟೋಬಿ' ಮಾಡಿದ್ದಾಗಿ ಹೇಳಿದ್ದರು. ಅದನ್ನೀಗ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ. 'ಟೋಬಿ' ಯಾಕೆ ಹುಟ್ಟಿಕೊಳ್ತು? ಕೆಣಕಿದವರು ರಾಜ್ ಬಿ ಶೆಟ್ಟಿ ಕೋಪಕ್ಕೆ ತುತ್ತಾಗಿದ್ದೇಗೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ತಂಡನೇ ಸರಿಯಿಲ್ಲ ಎಂದಿದ್ದವರು ಯಾರು?
"ಅದೂ ಕೂಡ ಒಂದು ರೀತಿಯ ಟೀಕೆನೇ.. ಕೆಲವು ಟೀಕೆಗಳನ್ನು ನಾವು ತೆಗೆದುಕೊಳ್ಳುವಾಗ ನಾವು ಸಮಚಿತ್ತರಾಗಿರುತ್ತೇವೆ. ಇನ್ನೊಂದು ಮಾತಲ್ಲಿ ಹೇಳಬೇಕಾದರೆ, ನಿಮಗೆ ತುಂಬಾ ಅಗತ್ಯವಿದೆ ಅಂತ ನಿಮ್ಮ ಕೈ ಹಿಡಿದುಕೊಂಡೆ. ಸ್ವಲ್ಪ ಮುಂದೆ ಹೋದ ಕೂಡಲೇ ನೀವೆಲ್ಲೋ ಬಿಟ್ಟು, ಆ ಮೇಲೆ ನಾನು ಕೈ ಹಿಡಿದುಕೊಂಡಿದ್ದಕ್ಕೆ ಬೇರೆ ಏನೋ ಕಥೆ ಕಟ್ಟಿ, ಅದರ ಜೊತೆಗೆ ಬೇರೆ ಬೇರೆ ಲೈಟ್ ಹಾಕಿಕೊಂಡು ಹೋಗುವವರಿಗೆ ಇವರು ಸರಿಯಿಲ್ಲ. ತಂಡನೇ ಸರಿಯಲ್ಲ. ಇವರು ಈ ತರದವರೇ ಅನ್ನೋ ಆಟಿಟ್ಯೂಡ್ ತೋರುವಂತೆ ವರ್ತಿಸಿದರೆ, ಮತ್ತೆ ನಾವು ಕೂತು ಇಲ್ಲ ಅವರು ಸರಿಯಿಲ್ಲ ಅಂತ ಹೇಳುವುದಕ್ಕಿಂತ ಒಂದು ಸಿನಿಮಾ ಉತ್ತರ ಹೇಳುತ್ತೆ ಅಂತ ಅಂದುಕೊಂಡಿದ್ದೇನೆ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಸಿನಿಮಾದಿಂದ ಉತ್ತರ ಕೊಡಲು ಹೊರಟ 'ಟೋಬಿ'
"ಹೀಗೆ ಮಾಡಿದ್ದು ಹತ್ತಿರದವರೇ.. ನಾನಂದುಕೊಂಡೆ ಸಿನಿಮಾ ಉತ್ತರ. ಯಾಕಂದ್ರೆ, ಸಿನಿಮಾ ಯಾವತ್ತೂ ಉಳಿಯುತ್ತೆ. ನಿಮಗೆ ಯಾವಾಗದರೂ ನೋವು ಆದಾಗ, ಅದನ್ನು ವ್ಯಕ್ತಪಡಿಸಲು ಭಾಷೆಯ ಪ್ರಯೋಗ ಮಾಡುತ್ತಿದ್ದೀರ, ಕಿರುಚಾಡುತ್ತಿದ್ದೀರ. ಅದೇ ಆ ಸಮಯಕ್ಕೆ ನಿಮಗೆ ಏನೂ ಮಾಡೋಕೆ ಆಗುತ್ತಿಲ್ಲ ಅಂತ ಸುಮ್ಮನೆ ಕೂತಾಗ ಅದು ಕ್ರಿಯೇಟಿವ್ ಆಗಿ, ಏನೋ ಆಗಿ ಹಾಡಾಗಿ, ಕವಿತೆಯಾಗಿ, ಕಥೆಯಾಗಿ, ಒಂದು ಸಿನಿಮಾವಾಗಿ ಬಂದರೆ, ಅದರಿಂದ ತುಂಬಾನೇ ಲಾಭವಿದೆ. ಟೋಬಿ ಆ ತರಹದ ಸಿನಿಮಾ." ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಕಥೆಗಾಗಿ ಸಿಟ್ಟು ಖರ್ಚಾಗಿದೆ"
"ನಾನು ನಿಮ್ಮ ತಂಡದ ಬಗ್ಗೆ ಏನೋ ಹೇಳುತ್ತೇನೆ. ಅದಕ್ಕೆ ಉತ್ತರ ಕೊಡಬೇಕು ಅಂತ ಏನೋ ಶುರು ಮಾಡಿತ್ತೀರ. ಆ ಪ್ರಕ್ರಿಯೆ ಎಷ್ಟು ಆಸಕ್ತಿದಾಯಕವಾಗಿರುತ್ತೆ ಅಂದರೆ, ನಾನೇ ಮರೆತು ಹೋಗುತ್ತೇನೆ. ಈಗ ನಿಮ್ಮ ಸಿಟ್ಟು ಎಲ್ಲಿಗೆ ಹೋಯ್ತು. ಅದು ಖರ್ಚಾಗಿದೆ. ಕಥೆ ಆಗಿ ಖರ್ಚಾಗಿದೆ. ಅದರಿಂದ ನಷ್ಟ ಆಗಿಲ್ಲ. ಲಾಭನೇ ಆಗಿದೆ." ಎಂದು ರಾಜ್ ಬಿ ಶೆಟ್ಟಿ ರಿವೀಲ್ ಮಾಡಿದ್ದಾರೆ.


Click it and Unblock the Notifications











