"ಜನರು ಯಾಕೆ ಆ ಸಿನಿಮಾ ನೋಡುತ್ತಿದ್ದಾರೆ? ನನಗೆ ಅರ್ಥನೇ ಆಗುತ್ತಿಲ್ಲ"; 'ಶಾಸ್ತ್ರಿ' ರಿಲೀಸ್‌ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ರನ್ನು ಬಂಧಿಸಲಾಗಿದೆ. ದರ್ಶನ್ ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೇ ಜುಲೈ 18ರಂದು ಮತ್ತೆ ದರ್ಶನ್ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ಈ ಗ್ಯಾಪ್‌ನಲ್ಲಿ ಸಿನಿಮಾ ಮಂದಿ ದರ್ಶನ್ ನಟಿಸಿದ 'ಶಾಸ್ತ್ರಿ' ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ.
2005ರಲ್ಲಿ ದರ್ಶನ್ ನಟಿಸಿದ 'ಶಾಸ್ತ್ರಿ' ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸಾಫೀಸ್‌ನಲ್ಲೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ದರ್ಶನ್ ಮತ್ತೆ ಜೈಲು ಸೇರಿದ ಬೆನ್ನಲ್ಲೇ 19 ವರ್ಷಗಳ ಬಳಿಕ ಮತ್ತೆ ಈ ಸಿನಿಮಾವನ್ನು ಮರು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಅದರಂತೆ ಈಗ ಸಿನಿಮಾ ಕೂಡ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ಈ ಬಗ್ಗೆ ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. 'ರೂಪಾಂತರ' ಸಿನಿಮಾದಲ್ಲಿ ನಟಿಸಿರುವ ರಾಜ್ ಬಿಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ದರ್ಶನ್ ಬಂಧನದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರಿಸಿದ್ದಾರೆ. "ಚಿತ್ರರಂಗದ ಮೇಲೆ ಖಂಡಿತಾ ಪ್ರಭಾವ ಬೀರುತ್ತೆ. ಇನ್ನೊಂದು ನಮ್ಮ ಇಮೇಜ್ ಕೂಡ ಬದಲಾಗುತ್ತೆ. ಕಲೆಕ್ಟಿವ್ ಆಗಿ ನಾವೆಲ್ಲರೂ ಸಂಬಂಧಿಕರೇ. ಒಳ್ಳೆಯದು ಮಾಡಿ, ಕೆಟ್ಟದ್ದು ಮಾಡಿ ನಾವೆಲ್ಲರೂ ಸಂಬಂಧಿಕರೇ. ಕೆಜಿಎಫ್ ಮಾಡಿದರೆ ಹೇಗೆ ಎಲ್ಲರಿಗೂ ಹೆಮ್ಮೆ ಅನಿಸುತ್ತೋ ಹಾಗೇ ನಮ್ಮವರ ಮೇಲೆ ಈ ರೀತಿ ಆರೋಪ ಬಂದಾಗ ನಾವು ಅನುಭವಿಸಬೇಕಾಗುತ್ತೆ" ಎಂದಿದ್ದಾರೆ.
ಸಿನಿಮಾದವರು ಅಂದ ಕೂಡಲೇ ಮನೆ ಬಾಡಿಗೆ ಸಿಗೋದಿಲ್ಲ ಅಂತಹ ಪರಿಸ್ಥಿತಿಯಿದೆ. ಇಂತಹ ಘಟನೆಗಳು ಚಿತ್ರರಂಗಕ್ಕೆ ಹೊಡೆತ ಕೊಡುತ್ತವೆ. ಇಲ್ಲಿ ದರ್ಶನ್ ಅವರದ್ದು ಏನಾದರೂ ತಪ್ಪಾಗಿದ್ದರೆ, ನ್ಯಾಯ ಎಲ್ಲರಿಗೂ ಒಂದೇ. ಅದರಲ್ಲಿ ಭೇದ ಭಾವವಿಲ್ಲ. ನ್ಯಾಯದ ಪ್ರಕಾರ ಯಾವುದು ಸರಿ ಅದು ಆಗಲೇಬೇಕು. ಎಲ್ಲರಿಗೂ ನ್ಯಾಯ ಸಿಗಲೇಬೇಕು. ಸಿಕ್ಕಿದರೆ ಮಾತ್ರ ಅದರ ಮೇಲೆ ನಂಬಿಕೆ ಬರುತ್ತದೆ. ಅಪರಾಧ ಆಗಿದ್ದರೆ ಅವರಿಗೆ ಶಿಕ್ಷೆ ಆಗಲೇಬೇಕು. ಇಲ್ಲದೇ ದರ್ಶನ್ ಹೋದರೆ, ರಿಲೀಸ್ ಆಗುತ್ತಾರೆ ಎಂದೂ ಹೇಳಿದ್ದಾರೆ.

ಹಾಗೇ ದರ್ಶನ್ 'ಶಾಸ್ತ್ರಿ' ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆನೂ ಮಾತಾಡಿದ್ದಾರೆ. "ಒಂದು ವಿಷಯ ಸತ್ಯ. ದರ್ಶನ್ ಸರ್‌ಗೆ ಇರುವ ಫ್ಯಾನ್ಸ್ ಬಗ್ಗೆ ಕ್ಲಿಯರ್ ಆಗಿ ವಿವರಿಸುವುದಕ್ಕೆ ಬರುವುದಿಲ್ಲ. ನೀವು ಎಷ್ಟೇ ದುಡಿದರೂ, ಎಷ್ಟು ಒಳ್ಳೆಯ ಸಿನಿಮಾ ಕೊಟ್ಟದರೂ, ಅದನ್ನು ಗಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಹೇಗೆ ಅಂತ ಅದಕ್ಕೆ ಫಾರ್ಮೂಲ ಗೊತ್ತಿಲ್ಲ. ಜನರ ಮನಸ್ಸಿನಲ್ಲಿ ಏನಾಗುತ್ತಿದೆ. ಜನರು ಯಾಕೆ ಆ ಸಿನಿಮಾ ನೋಡುತ್ತಿದ್ದಾರೆ? ಜನರು ಯಾಕೆ ಬೇರೆ ಸಿನಿಮಾ ನೋಡುತ್ತಿಲ್ಲ. ನನಗೆ ಅರ್ಥನೇ ಆಗುತ್ತಿಲ್ಲ. ನನಗೆ ಅನಿಸುತ್ತೆ. ಇದನ್ನು ನಾವು ಕೊಟ್ಟಿದ್ದಲ್ಲ. ದೇವರು ಕೊಟ್ಟಿದ್ದು" ಎಂದು ರಾಜ್ ಬಿ ಶೆಟ್ಟಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ದರ್ಶನ್ ತಪ್ಪು ಮಾಡಿದ್ದರೆ, ತಿದ್ದಿಕೊಳ್ಳುತ್ತಾರೆಂದು ಹೇಳಿದ್ದಾರೆ. "ಒಂದು ವೇಳೆ ಅವರಿಂದ ತಪ್ಪಾಗಿದ್ದರೆ, ಇಷ್ಟೊತ್ತಿಗೆ ಅವರು ತಿದ್ದಿಕೊಂಡಿರುತ್ತಾರೆ ಅನಿಸುತ್ತೆ. ಒಬ್ಬಂಟಿಯಾಗಿ ನಿಂತಾಗ ಅದು ಕಾಡುತ್ತೆ. ಯಾಕಂದ್ರೆ ಒಂದು ಜೀವ ಹೋಗಿದಲ್ವಾ? ಎಷ್ಟೋ ಸಲ ನಾವು ಗಾಡಿಯಲ್ಲಿ ಹೋಗಬೇಕಾದರೆ, ಯಾರೋ ಒಬ್ಬರು ಓವರ್ ಟೇಕ್ ಮಾಡಿದಾಗ, ಹೊಡೆದು ಬಿಡಬೇಕು ಅಂತ ಅನಿಸುತ್ತೆ. ಅದೂ ಕೂಡ ಕ್ರೈಂ ಅಲ್ಲವೇ. ನಮ್ಮೊಳಗೆ ಎಲ್ಲೋ ಒಂದು ಆ ಕ್ರೌರ್ಯ ಸ್ಟ್ರಾಂಗ್ ಆಗಿ ಕೂತಿದೆ. ಅವರು ಮಾಡಿದ್ದು ತಪ್ಪು ಅನ್ನೋದಾದರೆ, ನಾವು ಮಾಡುತ್ತಿರುವುದು ಏನು? ಅಂತ ಅನಿಸುತ್ತೆ" ಎಂದು ಜಾಣತನದ ಉತ್ತರ ಕೊಟ್ಟಿದ್ದಾರೆ.


Click it and Unblock the Notifications











