'ಬಲರಾಮ'ನ ಅಡ್ಡಾಗೆ ಬಂದ ಅಪ್ಪು ನಾಯಕಿ; ಹೊಸ ವರ್ಷಕ್ಕೆ ಪ್ರಿಯಾ ಆನಂದ್‌ಗೆ ಅದ್ಧೂರಿ ವೆಲ್‌ಕಮ್!
ಟೈಟಲ್ ನೋಡಿದ ಮೇಲೆ 'ಆ ದಿನಗಳು' ನೆನಪಾಗಬಹುದು. ಇದೇ ಸಿನಿಮಾ ನಿರ್ದೇಶಕ ಕೆ.ಎಂ.ಚೈತನ್ಯ ಆಕ್ಷನ್ ಕಟ್ ಹೇಳುತ್ತಿರುವ ಹೊಸ ಸಿನಿಮಾ 'ಬಲರಾಮನ ದಿನಗಳು' . ಈಗಾಗಲೇ ಶೂಟಿಂಗ್ ಆರಂಭಿಸಿ ಎರಡು ಹಂತಗಳ ಶೂಟಿಂಗ್ ಅನ್ನೂ ಚಿತ್ರತಂಡ ಮುಗಿಸಿದೆ. ಇದು ಟೈಗರ್ ವಿನೋದ್ ಪ್ರಭಾಕರ್ ಅವರ 25ನೇ ಸಿನಿಮಾ. ಹೀಗಾಗಿ ಅದ್ಧೂರಿಯಾಗಿ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.
ವಿನೋದ್ ಪ್ರಭಾಕರ್ ಆಕ್ಷನ್ ಮಾಸ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಆದರೆ, ಇವರ 25ನೇ ಸಿನಿಮಾ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ವಿಭಿನ್ನವಾಗಿರುತ್ತೆ. ಇದೇ ಮೊದಲ ಬಾರಿಗೆ 'ಆ ದಿನಗಳು' ಖ್ಯಾತಿಯ ಕೆ.ಎಂ.ಚೈತನ್ಯ ಟೈಗರ್ ವಿನೋದ್ ಪ್ರಭಾಕರ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಾಕಂದ್ರೆ ಚೈತನ್ಯ ಭೂಗತಲೋಕದ ಕಥೆಗಳನ್ನು ಹೇಳುವ ರೀತಿ ಈಗಾಗಲೇ ಗೊತ್ತಿದೆ. ಫ್ಯಾಮಿಲಿ ಕೂಡ ಕೂತು ನೋಡುವಂತೆ ಇರುತ್ತೆ.

ಈ ಕಾರಣಗಳಿಗೆ ವಿನೋದ್ ಪ್ರಭಾಕರ್ 25ನೇ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡುತ್ತೆ. ಈ ನಟನಿಗೆ ಹೊಸ ಇಮೇಜ್ ಕೊಡುತ್ತೆ ಅನ್ನುವ ನಿರೀಕ್ಷೆಯಲ್ಲಿ ಸ್ಯಾಂಡಲ್‌ವುಡ್ ಇದೆ. ಇಲ್ಲಿವರೆಗೂ ಸಿನಿಮಾ ನಾಯಕಿಯನ್ನು ಗೌಪ್ಯವಾಗಿ ಇಟ್ಟಿದ್ದ ನಿರ್ದೇಶಕ ಹೊಸ ವರ್ಷದ ಸಂಭ್ರಮದಲ್ಲಿ ಅವರ ಹೆಸರನ್ನು ರಿವೀಲ್ ಮಾಡಿದ್ದಾರೆ. ಅವರು ಮತ್ಯಾರೂ ಅಲ್ಲ ಅಪ್ಪು ಜೊತೆ 'ರಾಜಕುಮಾರ' ಸಿನಿಮಾದಲ್ಲಿ ನಟಿಸಿದ ಪ್ರಿಯಾ ಆನಂದ್.
ಹೌದು, ಪುನೀತ್ ರಾಜ್‌ಕುಮಾರ್ ನಟಿಸಿದ್ದ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ 'ರಾಜಕುಮಾರ' ಸಿನಿಮಾದಲ್ಲಿ ಪ್ರಿಯಾ ಆನಂದ್ ನಟಿಸಿದ್ದರು. ಅಲ್ಲಿಂದ ಕನ್ನಡದಲ್ಲಿ 'ಯುವರತ್ನ', ಇತ್ತೀಚೆಗೆ ಯೋಗರಾಜ್ ಭಟ್ ನಿರ್ದೇಶಿಸಿದ 'ಕರಟಕ ದಮನಕ' ಸಿನಿಮಾದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ನಟಿಸಿದ್ದರು. ಈಗ ಮತ್ತೊಂದು ಕನ್ನಡ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಈಗಾಗಲೇ ಬಲರಾಮನ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ.

ಪ್ರಿಯಾ ಆನಂದ್ ಈಗಾಗಲೇ ಅಪ್ಪು ಅಭಿನಯದ 'ರಾಜಕುಮಾರ', 'ಜೇಮ್ಸ್' ಹಾಗೂ 'ಆರೆಂಜ್', 'ಕರಟಕ ದಮನಕ' ದಂತಹ ಯಶಸ್ವಿ ಸಿನಿಮಾಗಳಿಗೆ ನಾಯಕಿಯಾಗಿ ನಟಿಸಿದ್ದಾರೆ. ತಮಿಳು ನಟಿಯಾಗಿದ್ದರೂ ಇತ್ತೀಚೆಗೆ ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 'ಬಲರಾಮನ ದಿನಗಳು' ಸಿನಿಮಾ ತಂಡ ಹೊಸ ವರ್ಷದ ಮೊದಲ ದಿನವೇ ನಾಯಕಿ ಪ್ರಿಯಾ ಆನಂದ್ ಅವರ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ವೆಲ್‌ಕಮ್ ಮಾಡಿದ್ದಾರೆ.
ಅಂದ್ಹಾಗೆ, 'ಬಲರಾಮನ ದಿನಗಳು' 80ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಇದೂ ಕೂಡ ಭೂಗತಲೋಕದ ಹಿನ್ನೆಲೆಯುಳ್ಳ ಕಥೆಯಾಗಿದ್ದರೂ ಅದಕ್ಕೆ ಕೆ.ಎಂ.ಚೈತನ್ಯ ಸ್ಟೈಲ್ ಇರುತ್ತೆ. ಇತ್ತೀಚೆಗೆ ವಿನೋದ್ ಪ್ರಭಾಕರ್ ಬರ್ತ್‌ಡೇಗೆ ಅಂತ ರಿಲೀಸ್ ಮಾಡಿದ್ದ ಸಿನಿಮಾದಲ್ಲಿ ಫಸ್ಟ್ ಲುಕ್ ಅಂತಹದ್ದೊಂದು ಸುಳಿವು ಕೊಟ್ಟಿದೆ. ಈ ಸಿನಿಮಾ ಇನ್ನೊಂದು ಹೈಲೈಟ್ ಅಂದರೆ, ತಮಿಳಿನಲ್ಲಿ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿದ ಸಂತೋಷ್ ನಾರಾಯಣನ್ ಈ ಚಿತ್ರಕ್ಕೆ ಟ್ಯೂನ್ ಹಾಕುತ್ತಿದ್ದಾರೆ.
ಸಂತೋಷ್ ನಾರಾಯಣನ್ 'ಅಟ್ಟಕತ್ತಿ', ರಜನಿಕಾಂತ್ ನಟನೆಯ 'ಕಾಲ', 'ಕಬಾಲಿ' ಹಾಗೂ 'ಭೈರವ', ನಾನಿಯ 'ದಸರಾ', ಪ್ರಭಾಸ್ 'ಕಲ್ಕಿ' ಸೇರಿದಂತೆ ಹಲವು ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿ ಗಮನ ಸೆಳೆದಿದ್ದಾರೆ. ಈಗ 'ಬಲರಾಮನ ದಿನಗಳು' ಸಿನಿಮಾ ಮೂಲಕ ಸಂತೋಷ್ ನಾರಾಯಣನ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದು ಇದು ಅವರು ಸಂಗೀತ ನೀಡುತ್ತಿರುವ 51ನೇ ಸಿನಿಮಾ.
ಇನ್ನು 'ಬಲರಾಮನ ದಿನಗಳು' ಸಿನಿಮಾ ಎರಡು ಹಂತಗಳ ಚಿತ್ರೀಕರಣ ಮುಕ್ತಾಯವಾಗಿದೆ. ಇದೇ ಜನವರಿ 15 ರಿಂದ 3ನೇ ಹಂತದ ಶೂಟಿಂಗ್ ಆರಂಭವಾಗಲಿದೆ. ಈ ತಂಡಕ್ಕೆ ಬಹುಭಾಷಾ ನಟಿ ಪ್ರಿಯಾ ಆನಂದ್ ಎಂಟ್ರಿ ಕೊಟ್ಟಿದ್ದು ಮತ್ತಷ್ಟು ಪವರ್ ಬಂದಂತಾಗಿದೆ. ಈ ಸಿನಿಮಾವನ್ನು ಶ್ರೇಯಸ್ ನಿರ್ಮಾಣ ಮಾಡುತ್ತಿದ್ದು, ಇದೇ ವರ್ಷ ಸಿನಿಮಾ ಬಿಡುಗಡೆಯಾಗಲಿದೆ.


Click it and Unblock the Notifications











