'ಕೂಲಿ' ಕನ್ನಡ ಟೀಸರ್‌ನಲ್ಲಿ ರಜನಿ ಧ್ವನಿ ಇಲ್ಲ; ಕಾಟಚಾರಕ್ಕೆ ರಿಲೀಸ್ ಆಗುತ್ತಾ 171ನೇ ಸಿನಿಮಾ?
ಸೂಪರ್‌ಸ್ಟಾರ್ ರಜನಿಕಾಂತ್, ಲೋಕೇಶ್ ಕನಕರಾಜ್ ಜೋಡಿ ಸಿನಿಮಾ ಅನೌನ್ಸ್ ಮಾಡಿದ್ದಷ್ಟೇ ಆಗಿತ್ತು. ಇದು ಕಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟಡ್ ಸಿನಿಮಾ ಅನ್ನೋದು ಈಗಾಗಲೇ ಜಗತ್‌ಜಾಹೀರಾಗಿದೆ. ಹೀಗಿರುವಾಗ ಟೈಟಲ್ ಟೀಸರ್ ನೋಡುವುದಕ್ಕೆ ಕುತೂಹಲ ಇಲ್ಲದೆ ಇರುತ್ತಾ? ಅದಕ್ಕೆ ತಕ್ಕಂತೆ ಇಂದು (ಏಪ್ರಿಲ್ 22) ಟೈಟಲ್ ಟೀಸರ್ ರಿಲೀಸ್ ಆಗಿದೆ.
ತಲೈವಾ ರಜನಿಕಾಂತ್ ಮಾಸ್ ಎಂಟ್ರಿಗೆ ಸೂಪರ್‌ಸ್ಟಾರ್ ಫ್ಯಾನ್ಸ್ ಕಳೆದು ಹೋಗಿದ್ದಾರೆ. ಟಿಪಿಕಲ್ ಲೋಕೇಶ್ ಕನಕರಾಜ್ ಸಿನಿಮಾ ಅನ್ನೋದು ಕಣ್ಮುಂದೆ ಬಂದುಬಿಟ್ಟಿದ್ದೆ. ಟೀಸರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಲೆಕ್ಕದಲ್ಲಿ ವೀವ್ಸ್ ಗಿಟ್ಟಿಸಿಕೊಂಡಿದೆ. ಅದರಲ್ಲೂ ಟೈಟಲ್ ನೋಡಿದ್ಮೇಲೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಅದರಲ್ಲೂ ಕನ್ನಡಿಗರು ಟೈಟಲ್ ಕಾರ್ಡ್ ನೋಡಿ ರೋಮಾಂಚನಗೊಂಡಿದ್ದಾರೆ. ಯಾಕೆ ಅಂತ ಹೇಳುವುದಕ್ಕೂ ಮುನ್ನ ತಲೈವಾ 171ನೇ ಸಿನಿಮಾದ ಟೈಟಲ್ 'ಕೂಲಿ'. ಇದು ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಕನ್ನಡದಲ್ಲೂ ಈ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲಾಗುತ್ತದೆ. ಇದೇ ಖುಷಿಯಲ್ಲಿ ಕರ್ನಾಟಕದ ರಜನಿ ಫ್ಯಾನ್ಸ್ ಇದ್ದರೆ, ಚಿಕ್ಕ ನಿರಾಸೆ ಕೂಡ ಆಗಿದೆ.
'ಕೂಲಿ' ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗುತ್ತಿರೋದೇನೋ ಖುಷಿ ವಿಚಾರ. ಆದರೆ, ಈ ಟೈಟಲ್ ಟೀಸರ್‌ಗೆ ರಜನಿಕಾಂತ್ ಡಬ್ ಮಾಡಿದ್ದರೆ, ಕನ್ನಡಿಗರು ಮತ್ತಷ್ಟು ಥ್ರಿಲ್ ಆಗುತ್ತಿದ್ದರು. ರಜನಿಗೆ ಕನ್ನಡ ಗೊತ್ತಿರೋದ್ರಿಂದ ಕನ್ನಡದಲ್ಲಿ ಡಬ್ ಮಾಡಬಹುದಿತ್ತು ಅನ್ನೋ ಅಭಿಪ್ರಾಯ ಕನ್ನಡಿಗರಿಂದ ವ್ಯಕ್ತವಾಗುತ್ತಿದೆ.
ರಜನಿ ಮಾಸ್ ಡೈಲಾಗ್ ಅನ್ನು ಬೇರೆ ಧ್ವನಿಯಲ್ಲಿ ಕೇಳುವುದಕ್ಕೆ ಕನ್ನಡಿಗರಿಗೆ ಮಜಾಕೊಡುತ್ತಿಲ್ಲ. ಹೀಗಾಗಿ ಮುಂದೆ ರಿಲೀಸ್ ಆಗೋ ಚಿಕ್ಕ ತುಣುಕಿನಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಧ್ವನಿ ಇರಬೇಕು ಅನ್ನೋ ಆಸೆ ಕನ್ನಡಿಗರಿಂದ ವ್ಯಕ್ತವಾಗುತ್ತಿದೆ. ಕೆಲವು 'ಕೂಲಿ' ಟೀಸರ್ ನೋಡಿ "ಡಬ್ಬಿಂಗ್ ಧ್ವನಿಯನ್ನು ಬದಲಾಯಿಸಿ", "ಧ್ವನಿ ಸೂಟ್ ಆಗುತ್ತಿಲ್ಲ" ಅಂತೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

ರಜನಿಕಾಂತ್‌ಗೆ ಕರ್ನಾಟಕದಲ್ಲೂ ದೊಡ್ಡ ಅಭಿಮಾನಿ ಬಳಗವಿದೆ ಅನ್ನೋದು ಗೊತ್ತಿರೋ ಸಂಗತಿನೇ. ಕನ್ನಡಿಗರು ಕೂಡ ರಜನಿ ಸಿನಿಮಾವನ್ನು ಇಷ್ಟ ಪಡುತ್ತಾರೆ. ಅದಕ್ಕೆ 'ಜೈಲರ್' ಸಿನಿಮಾನೇ ಸಾಕ್ಷಿ. 'ಜೈಲರ್' ಡಬ್ ವರ್ಷನ್ ಅನ್ನು ರಿಲೀಸ್ ಮಾಡಲಾಗಿತ್ತು. ಅದಕ್ಕೂ ಕರ್ನಾಟಕದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಈ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗೆ ರಜನಿಕಾಂತ್ ಡಬ್ ಮಾಡಿದರೆ, ಪ್ರೇಕ್ಷಕರಿಗೆ ಥ್ರಿಲ್ಲಿಂಗ್ ಅನುಭವ ನೀಡೋದು ಗ್ಯಾರಂಟಿ.
ಸೂಪರ್‌ಸ್ಟಾರ್ ಹಲವು ದಶಕಗಳಿಂದ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಈ ಕಾರಣಕ್ಕೆ 'ಕೂಲಿ'ಗೆ ರಜನಿಕಾಂತ್ ಕನ್ನಡದಲ್ಲಿ ಡಬ್ ಮಾಡಬೇಕು ಅನ್ನೋ ಹಂಬಲ ಕನ್ನಡಿಗರಲ್ಲಿದೆ. ರಜನಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ತಾರೋ ಕಾದು ನೋಡುವುದಷ್ಟೇ ಬಾಕಿ. ಸದ್ಯ 'ಕೂಲಿ' ಟೀಸರ್ ಅಂತೂ ಸಖತ್ ಪ್ರಾಮಿಸಿಂಗ್ ಆಗಿದೆ.
ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ರಜನಿಕಾಂತ್ ಹಾಗೂ ಲೋಕೇಶ್ ಕನಕರಾಜ್ ಕಾಂಬಿನೇಷನ್ ಮೊದಲ ಸಿನಿಮಾದಲ್ಲಿ ಅಯ್ಯಪ್ಪ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಸ್ಮಗ್ಲಿಂಗ್ ಆಕ್ಷನ್ ಸಿನಿಮಾ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸದ್ಯ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಟೈಟಲ್ ಟೀಸರ್ ರಿಲೀಸ್ ಆಗಿದೆ.


Click it and Unblock the Notifications