Rajinikanth: ವಾಂಖೆಡೆಯಲ್ಲಿ ಭಾರತ vs ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯ ವೀಕ್ಷಣೆ.. ಕೊನೆ ಬಾರಿ ಪಂದ್ಯ ವೀಕ್ಷಿಸಿದ್ದು ಯಾವಾಗ?
ಸೂಪರ್‌ಸ್ಟಾರ್ ರಜನಿಕಾಂತ್ ನೋಡುವುದೇ ಅಭಿಮಾನಿಗಳಿಗೆ ಒಂದು ಭಾಗ್ಯ. ಅಪಾರ ಅಭಿಮಾನಿಗಳ ಪಾಲಿನ ತಲೈವಾ ಹಾಗೆಲ್ಲ ಕಾಣಿಸಿಕೊಳ್ಳುವುದಿಲ್ಲ. ಆದ್ರೀಗ ಲಕ್ಷಾಂತರ ಅಭಿಮಾನಿಗಳ ಮುಂದೆ ಸೂಪರ್‌ಸ್ಟಾರ್ ಪ್ರತ್ಯಕ್ಷ ಆಗಿದ್ದಾರೆ. ಅಷ್ಟೇ ಅಲ್ಲದೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯವನ್ನು ವೀಕ್ಷಿಸಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ ನಡೆದಿತ್ತು. ಈ ವೇಳೆ ರಜನಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್(MCA) ಅಧ್ಯಕ್ಷರೊಂದಿಗೆ ಕೂತು ಪಂದ್ಯ ವೀಕ್ಷಿಸಿದ್ದಾರೆ. ಅಭಿಮಾನಿಗಳಿಗೆ ಬಲು ಅಪರೂಪಕ್ಕೆ ಈ ದೃಶ್ಯ ನೋಡಲು ಸಿಕ್ಕಿದೆ.

ಭಾರತ vs ಆಸ್ಟ್ರೇಲಿಯಾ ಪಂದ್ಯಕ್ಕೆ ಸ್ಟಾರ್ ಕಳೆ
ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷ ಅಮುಲ್ ಕಾಲೆ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಆಹ್ವಾನ ನೀಡಿದ್ದರು. ಈ ಆಹ್ವಾನದ ಮೇರೆಗೆ ಸೂಪರ್‌ಸ್ಟಾರ್ ಪತ್ನಿ ಲತಾ ಅವರೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವೀಕ್ಷಿಸಲು ಮುಂಬೈಗೆ ತೆರೆಳಿದ್ದರು.
ರಜನಿಕಾಂತ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವನ್ನು ವೀಕ್ಷಿಸಿದ್ದರಿಂದ ಪಂದ್ಯಕ್ಕೆ ಸ್ಟಾರ್ ಕಳೆ ಬಂದಿತ್ತು. ಕೆಲ ಹೊತ್ತು ತಲೈವಾ ಮುಂಬೈನ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರೊಂದಿಗೆ ಚರ್ಚೆ ಕೂಡ ಮಾಡಿದ್ದಾರೆ.
12 ವರ್ಷಗಳ ಬಳಿಕ ಕ್ರಿಕೆಟ್ ಪಂದ್ಯ ವೀಕ್ಷಣೆ
ಅಭಿಮಾನಿಗಳು ರಜನಿಕಾಂತ್ ಅನ್ನು ಹಲವು ಕಾರ್ಯಕ್ರಮಗಳಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಆದರೆ, ಈ ರೀತಿ ಕ್ರಿಕೆಟ್ ಸ್ಟೇಡಿಯಂಗೆ ಹೋಗಿ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಿದ್ದು ತೀರಾ ವಿರಳ. ಮೂಲಗಳ ಪ್ರಕಾರ ತಲೈವ ಕಳೆದ ಒಂದು ದಶಕದಿಂದ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯವನ್ನು ವೀಕ್ಷಣೆ ಮಾಡಿಲ್ಲ.
2011ರಲ್ಲಿ ನಡೆದ ವಿಶ್ವ ಕಪ್ ಪಂದ್ಯವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಸ್ಟೇಡಿಯಂ ತೆರಳಿ ವೀಕ್ಷಿಸಿದ್ದರು. ಅದೇ ಕೊನೆಯ ಪಂದ್ಯವಾಗಿತ್ತು ಎಂದು ವರದಿಯಾಗಿವೆ. ಭಾರತ ಆ ಪಂದ್ಯವನ್ನು ಗೆದ್ದು ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತ್ತು. ಈಗ ಮತ್ತೆ ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಣೆ ಮಾಡಿದ್ದಾರೆ.
'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಬ್ಯುಸಿ
ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಸದ್ಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿರುವ 'ಜೈಲರ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸೂಪರ್‌ಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗಿದೆ.
'ಜೈಲರ್' ಸಿನಿಮಾದಲ್ಲಿ ರಜನಿಕಾಂತ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ಕೆಲವು ತಿಂಗಳ ಹಿಂದಷ್ಟೇ ಇದೇ ಸಿನಿಮಾ ಶೂಟಿಂಗ್ ಮಂಗಳೂರಿನಲ್ಲಿ ನಡೆದಿತ್ತು. ಶಿವರಾಜ್‌ಕುಮಾರ್ ಹಾಗೂ ರಜನಿ ಇಬ್ಬರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಇತ್ತೀಚೆಗೆ ರಜನಿಕಾಂತ್ ಸಿನಿಮಾಗೆ ಬಾಲಿವುಡ್ ನಟ ಜಾಕಿಶ್ರಾಫ್ ಕೂಡ ಸೇರಿಕೊಂಡಿದ್ದರು.


Click it and Unblock the Notifications











