200 ರೂ. ಟಿಕೆಟ್ ಇನ್ನೂ ಮರೀಚಿಕೆ; ಫಿಲ್ಮ್ ಚೇಂಬರ್ ಅಧ್ಯಕ್ಷರ ಒಡೆತನದ ಚಿತ್ರಮಂದಿರಗಳಲ್ಲೇ 'ಕೂಲಿ' ದುಬಾರಿ
ವಿಶ್ವದಾದ್ಯಂತ ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಸಿನಿಮಾಗಾಗಿ ಜನರು ಕಾದು ಕೂತಿದ್ದಾರೆ. ರಜನಿಕಾಂತ್ ಹಾಗೂ ಲೋಕೇಶ್ ಕನಗರಾಜ್ ಕಾಂಬಿನೇಷನ್ ಆ ಮಟ್ಟಿಗೆ ಕ್ರೇಜ್ ಹುಟ್ಟಾಕಿದೆ. ಆಗಸ್ಟ್ 14ರಂದು ರಿಲೀಸ್ ಆಗುತ್ತಿರುವ ಈ ಸಿನಿಮಾದ ಟಿಕೆಟ್‌ಗಳಿಗಾಗಿ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಓಪನಿಂಗ್ ಆಗಿದೆ. ಟಿಕೆಟ್ ಖರೀದಿ ಮಾಡುವುದಕ್ಕಾಗಿಯೇ ಕಾದು ಕೂತಿದ್ದ ಫ್ಯಾನ್ಸ್‌ಗಳಿಗೆ ಒಂದ್ಕಡೆ ಖುಷಿಯಾಗಿದ್ದರೆ, ಇನ್ನೊಂದ್ಕಡೆ ಟಿಕೆಟ್ ಬೆಲೆ ಶಾಕ್ ಕೊಟ್ಟಿದೆ.
ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಸರ್ಕಾರ ಸಿನಿಮಾ ಟಿಕೆಟ್‌ಗಳ ಬೆಲೆ ₹200 ನಿಗಧಿ ಪಡಿಸುವಂತೆ ನೋಟಿಸ್ ಅನ್ನು ರಿಲೀಸ್ ಮಾಡಿತ್ತು. ಅದರ ಹೊರತಾಗಿಯೂ ಸಿನಿಮಾ ಟಿಕೆಟ್‌ಗಳ ಬೆಲೆ ಗಗನಕ್ಕೆ ಏರಿಸಲಾಗಿದೆ. ಈ ಬಗ್ಗೆ ಪ್ರೇಕ್ಷಕರು ಅಸಮಧಾನ ಹೊರ ಹಾಕುವುದಕ್ಕೆ ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ರಜನಿಕಾಂತ್ ಅಭಿಮಾನಿಗಳಿಗಾಗಿ ಫ್ಯಾನ್ಸ್ ಶೋ ಅನ್ನು ಹಾಕಲಾಗಿದೆ. ಇದು ಬೆಳಗ್ಗೆ 6 ಗಂಟೆಯಿಂದ ಆರಂಭ ಆಗಲಿದೆ. ಈ ಶೋ ಟಿಕೆಟ್ ಬೆಲೆ ₹2000 ದಾಟಿದೆ.

ಇತ್ತ ಟಿಕೆಟ್ ಬೆಲೆ ಕಡಿಮೆ ಮಾಡಬೇಕು ಅಂತ ಕೆಲವು ತಿಂಗಳುಗಳಿಂದ ಹೋರಾಟ ಮಾಡುತ್ತಿದ್ದವರೇ ತಮ್ಮ ಥಿಯೇಟರ್‌ಗಳಲ್ಲಿ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಅದರಲ್ಲಿ ಕರ್ನಾಟಕ ಫಿಲ್ಮ್ ಚೇಂಬರ್‌ನ ಹಾಲಿ ಅಧ್ಯಕ್ಷ ನರಸಿಂಹಲು ಅವರ ಚಿತ್ರಮಂದಿರಗಳು ಕೂಡ ಸೇರಿಕೊಂಡಿವೆ. ಇದು ಚಿತ್ರರಂಗದ ಹಲವು ಮಂದಿಯ ಕಣ್ಣುಗಳನ್ನು ಕೆಂಪಾಗಿಸಿವೆ. ಅಷ್ಟಕ್ಕೂ ಫಿಲ್ಮ್ ಚೇಂಬರ್ ಅಧ್ಯಕ್ಷರ ಒಡೆತನ ಚಿತ್ರಮಂದಿರಗಳು ಯಾವುವು? ಆ 3 ಥಿಯೇಟರ್‌ಗಳ ಬೆಲೆ ಎಷ್ಟು? ತಿಳಿಯುವುದಕ್ಕೆ ಮುಂದೆ ಓದಿ.
'ಕೂಲಿ' ಟಿಕೆಟ್ ಬೆಲೆ ಬಲು ದುಬಾರಿ
ರಜನಿಕಾಂತ್, ಆಮಿರ್ ಖಾನ್, ನಾಗಾರ್ಜುನ, ಉಪೇಂದ್ರ ಒಟ್ಟಿಗೆ ಒಂದೇ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ 'ಕೂಲಿ' ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ಈ ಕಾರಣಕ್ಕೆ ಸಿನಿಮಾ ರಿಲೀಸ್‌ಗೆ ಇನ್ನೂ ಐದಾರು ದಿನಗಳು ಇರುವಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿತ್ತು. ಇದೇ ಖುಷಿಯಲ್ಲಿ ಟಿಕೆಟ್ ಖರೀದಿಗೆ ಮುಂದಾಗಿದ್ದ ಸಿನಿಪ್ರಿಯರಿಗೆ ಶಾಕ್ ಆಗಿದೆ. ಮೊದಲ ದಿನದ ಶೋಗಳಿಗೆ 400 ರೂಪಾಯಿಂದ 2000 ರೂಪಾಯಿವರೆಗೂ ಟಿಕೆಟ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಇದು ಸಿನಿಮಾ ಪ್ರೇಮಿಗಳನ್ನು ನಿರಾಸೆ ಮಾಡಿದೆ. ಈ ಸಿನಿಮಾದ ಟಿಕೆಟ್ ಬೆಲೆ ತಮಿಳುನಾಡಿನಲ್ಲೇ ಇಷ್ಟೊಂದು ದುಬಾರಿ ಇಲ್ಲ. ಆದರೆ, ಬೆಂಗಳೂರಿನಲ್ಲಿ ಟಿಕೆಟ್‌ಗಳ ಬೆಲೆಯನ್ನು ಗಣನೀಯವಾಗಿ ಏರಿಕೆ ಮಾಡಿರೋದು ಹಲವರ ಕಣ್ಣು ಕೆಂಪಾಗಿಸಿದೆ.
ಅಧ್ಯಕ್ಷರ ಚಿತ್ರಮಂದಿರಗಳೇ ದುಬಾರಿ
ಕರ್ನಾಟಕ ಫಿಲ್ಮ್ ಚೇಂಬರ್‌ನ ಅಧ್ಯಕ್ಷರಾಗಿರುವ ನರಸಿಂಹಲು ಅವರ ಬಳಿ ಮೂರು ಚಿತ್ರಮಂದಿರಗಳಿವೆ. ಬೆಂಗಳೂರಿನಲ್ಲಿರುವ ವೈಭವಿ, ವೈಷ್ಣವಿ ಹಾಗೂ ವೈನಿಧಿ ಈ ಮೂರು ಚಿತ್ರಮಂದಿರಗಳಿಗೆ ಇವರೇ ಮಾಲೀಕರು. ಈ ಮೂರೂ ಚಿತ್ರಮಂದಿರಗಳಲ್ಲಿ 'ಕೂಲಿ' ಸಿನಿಮಾದ ಟಿಕೆಟ್ ಬೆಲೆಯನ್ನು ಗಗನಕ್ಕೆ ಏರಿಸಲಾಗಿದೆ. ಫ್ಯಾನ್ಸ್ ಶೋಗಳಿಗೆ 400 ರೂಪಾಯಿಯಿಂದ 800 ರೂಪಾಯಿವರೆಗೂ ಏರಿಕೆ ಮಾಡಲಾಗಿದೆ. ಈ ಮೂರು ಚಿತ್ರಮಂದಿರಗಳ ಟಿಕೆಟ್ ಬೆಲೆ ಎಷ್ಟಿದೆ ಎಂದು ನೋಡುವುದಾರೆ,
ವೈಭವಿ-ವೈಷ್ಣವಿ ₹800-₹500 (ಫ್ಯಾನ್ಸ್ ಶೋ) ₹300-₹250 (ನಾರ್ಮಲ್ ಶೋ)
ವೈನಿಧಿ ₹500-₹400 (ಫ್ಯಾನ್ಸ್ ಶೋ) ₹250-₹200 (ನಾರ್ಮಲ್ ಶೋ)

ದುಬಾರಿ ಚಿತ್ರಮಂದಿರ ಯಾವುದು?
ಬೆಂಗಳೂರಿನಲ್ಲಿ ಇದೂವರೆಗೂ ದುಬಾರಿ ಚಿತ್ರಮಂದಿರ ಎನಿಸಿಕೊಂಡಿರೋದು ಸ್ವಾಗತ್ ಶಂಕರ್ ನಾಗ್. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರುವ ಈ ಸಿನಿಮಾದ ಫ್ಯಾನ್ ಶೋ ಬೆಳಗ್ಗೆ 6.30ಕ್ಕೆ ಆರಂಭ ಆಗಲಿದೆ. ಈ ಶೋನ ಗೋಲ್ಡನ್ ರಿಕ್ಲೈನರ್ ಬೆಲೆ ₹2000, ಗೋಲ್ಡ್ ಕ್ಲಾಸ್ ₹1500, ಸಿಲ್ವರ್ ಕ್ಲಾಸ್ ₹1000, ಲಾಂಜರ್‌ಗೆ ₹1000 ರೂಪಾಯಿಯನ್ನು ನಿಗಧಿ ಮಾಡಲಾಗದೆ. ಇಷ್ಟು ದುಬಾರಿಯಾಗಿದ್ದರೂ ಈ ಶೋ ಹೌಸ್ ಫುಲ್ ಆಗಿದೆ. ಹಾಗೇ ಇನ್ನೂ ಎರಡು ನಾರ್ಮಲ್ ಶೋಗಳು ಕೂಡ ಫುಲ್ ಆಗಿದ್ದು, ಇದರ ಟಿಕೆಟ್ ಬೆಲೆ ₹800, ₹550, ₹400 ಆಗಿದೆ.
ಟಿಕೆಟ್ ಬೆಲೆ ₹200 ಆಗೋದ್ಯಾವಾಗ?
ಕರ್ನಾಟಕದ ಸರ್ಕಾರ ಸಿನಿಮಾ ಟಿಕೆಟ್ ಬೆಲೆಯನ್ನು ₹200ಗೆ ನಿಗಧಿ ಪಡಿಸುವಂತೆ ನೋಟಿಫಿಕೆಷನ್ ಹೊರಡಿಸಿದೆ. ಆದರೆ, ಈ ಬಗ್ಗೆ ಇನ್ನೂ ಚಿತ್ರಮಂದಿರದ ಮಾಲೀಕರಿಗೆ ಕ್ಲಾರಿಟಿ ಇಲ್ಲ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಎರಡರಲ್ಲೂ ಟಿಕೆಟ್ ಬೆಲೆ ₹200 ಇರುತ್ತಾ? ಅನ್ನೋದಕ್ಕೆ ಸ್ಪಷ್ಟತೆ ಇಲ್ಲ. ಇನ್ನು 'ಕೂಲಿ' ಕನ್ನಡ ವರ್ಷನ್ ಟಿಕೆಟ್‌ಗಳ ಬೆಲೆ ₹250 ರಿಂದ ₹200 ನಿಗಧಿ ಪಡಿಸಲಾಗಿದೆ. ಒಟ್ಟಾರೆ, ಕರ್ನಾಟಕದಲ್ಲಿ ಸೂಪರ್‌ಸ್ಟಾರ್ ಸಿನಿಮಾಗಳ ಟಿಕೆಟ್ ಬೆಲೆಯನ್ನು ಗಗನಕ್ಕೆ ಏರಿಸುವುದು ಮುಂದುವರೆದಿದೆ.


Click it and Unblock the Notifications











