ನದಿಯಂತೆ ಕಡಲು ಸೇರಲು ಹೊರಟ ಶ್ರುತಿ ಹರಿಹರನ್: 'ಸ್ಟ್ರಾಬೆರಿ' ಅಸಲಿ ಕಥೆಯೇನು?
ಒಂದಿಷ್ಟು ವಿವಾದ. ಮೀಟೂ ತಲೆ ನೋವು. ಪೊಲೀಸ್ ಸ್ಟೇಷನ್, ಕೋರ್ಟು ಕಚೇರಿ ಮಧ್ಯೆ ಶ್ರುತಿ ಹರಿಹರನ್ ಸಿನಿಮಾ ಜರ್ನಿಗೆ ಕೊಂಚ ಹಿನ್ನೆಡೆಯಾಗಿತ್ತು. ಆದರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ನಟಿ ಒಂದಿಷ್ಟು ಅದ್ಭುತ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಇವುಗಳಲ್ಲಿ ಕೆಲವು ಸಿನಿಮಾಗಳು ಗೆದ್ದಿವೆ. ಮತ್ತೆ ಕೆಲವು ನಿರ್ಮಾಣ ಹಂತದಲ್ಲಿಯೇ ಇವೆ. ಸದ್ಯಕ್ಕೆ ಎಲ್ಲರ ಗಮನ ಸೆಳೆಯುತ್ತಿರುವುದು ರಕ್ಷಿತ್ ಶೆಟ್ಟಿ ನಿರ್ಮಾಣದ 'ಸ್ಟ್ರಾಬರಿ' ಸಿನಿಮಾ'
ಮೀಟೂ ಅಭಿಯಾನದಲ್ಲಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅಲ್ಲಿಂದ ಶ್ರುತಿ ಹರಿಹರನ್ ಹೋರಾಟ ಮುಂದುವರೆಸಿದ್ದರು. ಆದರೆ, ಕೆಲವೇ ದಿನಗಳ ಹಿಂದಷ್ಟೇ ಕಬ್ಬನ್ ಪಾರ್ಕ್ ಪೊಲೀಸರು ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಶ್ರುತಿ ಹರಿಹರನ್ ಮುಂದಿನ ಹಾದಿಯೇನು ಅನ್ನುವಾಗಲೇ ಬ್ಯೂಟಿಫುಲ್ ಮನಸ್ಸಿನ ನಟಿಯ ಬಾಳಲ್ಲಿ 'ಸ್ಟ್ರಾಬರಿ' ಎಂಟ್ರಿಯಾಗಿದೆ.

'ಸ್ಟ್ರಾಬೆರಿ' ಕಥೆಯೇನು?
ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ 'ಸ್ಟ್ರಾಬರಿ' ಇಂದು ನಿನ್ನೆ ಆರಂಭವಾದ ಸಿನಿಮಾ ಅಲ್ಲ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಮುಗಿದಿದೆ. ರಕ್ಷಿತ್ ನಿರ್ಮಿಸಿದ ಸಿನಿಮಾ ಅಂದಾಗ, ಎಲ್ಲರ ಕಣ್ನೂ ಸಿನಿಮಾ ಕಥೆ ಮೇಲೆ ಸಾಗುತ್ತೆ. ಇದು ತಾಯಿ ಪ್ರೀತಿಯನ್ನು ಕಳೆದುಕೊಂಡ ಅಮೃತಾ ಅನ್ನುವ ಲೈಂಗಿಕ ಕಾರ್ಯಕರ್ತೆಯೊಬ್ಬಳ ಕತೆ. ಆಕೆಯ ಬಾಳಲ್ಲಿ ಮತ್ತೊಮ್ಮೆ ಅಂತಹ ಪ್ರೀತಿಯ ಭರವಸೆ ಸಿಕ್ಕಾಗ ಅಮೃತಾ ಕಡಲನ್ನು ಸೇರಲು ಹೊರಟ ನದಿಯಂತೆ ಸಾಗುವ ಕಥೆಯೇ 'ಸ್ಟ್ರಾಬೆರಿ'. ಹೀಗಾಗಿ ಇದು ರೆಗ್ಯೂಲರ್ ಮರಸುತ್ತುವ ಪ್ರೇಮಕಥೆಯಲ್ಲ ಅನ್ನುವುದನ್ನು ಒಂದೆಳೆ ಕಥೆ ಹೇಳುತ್ತಿದೆ.

ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಶ್ರುತಿ
'ಸ್ಟ್ರಾಬೆರಿ' ಸಿನಿಮಾದ ಹೈಲೈಟ್ ಶ್ರುತಿ ಹರಿಹರನ್. ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸದಾ ಬೇರೊಂದು ಹಾದಿಯನ್ನು ಹುಡುಕುವ ಶ್ರುತಿ ಹರಿಹರನ್ 'ಸ್ಟ್ರಾಬೆರಿ'ಯಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಇವರದ್ದು ಅಮೃತಾ ಎನ್ನುವ ಪಾತ್ರ. ಮತ್ತೊಂದು ವಿಭಿನ್ನ ಪಾತ್ರ ಶ್ರುತಿ ಹರಿಹರನ್ ಸಿನಿಮಾ ಜರ್ನಿಗೆ ಹೊಸ ಹಾದಿಯನ್ನು ತೋರಿಸುವ ಬಲ್ಲದು ಎನ್ನುವ ನಿರೀಕ್ಷೆಯಿದೆ. ಸದ್ಯ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಇದೆ.

'ಸ್ಟ್ರಾಬೆರಿ' ರಿವರ್ಸ್ ಸ್ಕ್ರೀನ್ ಪ್ಲೇ ಸಿನಿಮಾ
ಲೈಂಗಿಕ ಕಾರ್ಯಕರ್ತೆ, ಶ್ರುತಿ ಹರಿಹರನ್ ನಟನೆಯ ಸಿನಿಮಾ ಅಂದಾಕ್ಷಣ ಇದು ಕೆಲ ವರ್ಗಕ್ಕೆ ಮಾತ್ರ ಸೀಮಿತವಾಗುವ ಸಿನಿಮಾ ಎನ್ನುವಂತಿಲ್ಲ. ಈ ಚಿತ್ರದ ಸ್ಕ್ರೀನ್ ಪ್ಲೇ ಮತ್ತೊಂದು ಹೈಲೈಟ್. ಇಡೀ ಸಿನಿಮಾ ರಿವರ್ಸ್ ಸ್ಕ್ರೀನ್ ಪ್ಲೇನಲ್ಲಿ ಸಾಗುತ್ತೆ. ಅಂದ ಹಾಗೆ 'ಸ್ಟ್ರಾಬೆರಿ; ಸಿನಿಮಾವನ್ನು ಅರ್ಜುನ್ ಲೂವೀಸ್ ಬರೆದು ನಿರ್ದೇಶಿಸಿದ್ದಾರೆ. ಈ ಸಿನಿಮಾ ಅರ್ಜುನ್ ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಹೊಸ ನಿರ್ದೇಶಕ 'ಸ್ಟ್ರಾಬೆರಿ' ಮೂಲಕ ಏನು ಹೇಳಲು ಹೊರಟಿದ್ದಾರೆ ಎನ್ನುವುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಪರಂವಃ ಸ್ಪಾಟ್‌ಲೈಟ್‌ನ ಮೊದಲ ಸಿನಿಮಾ
'ಸ್ಟ್ರಾಬೆರಿ' ರಕ್ಷಿತ್ ಶೆಟ್ಟಿಯ ನಿರ್ಮಾಣ ಸಂಸ್ಥೆ ಪರಂವಃ ಸ್ಪಾಟ್‌ಲೈಟ್ ಬ್ಯಾನರ್‌ನಿಂದ ನಿರ್ಮಾಣ ಗೊಂಡಿರುವ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ಜೊತೆ ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಹಾಗೇ 'ಒಂದು ಮೊಟ್ಟೆಯ ಕಥೆ', 'ಬೀರ್‌ಬಲ್' ಹಾಗೂ 'ಗರುಡ ಗಮನ ವೃಷಭ ವಾಹನ' ಚಿತ್ರಗಳಲ್ಲಿ ನಟಿಸಿದ ನಟ ವಿನೀತ್ ಕುಮಾರ್ ನಟಿಸಿದ್ದಾರೆ. ಮಂಗಳೂರಿನ ರಂಗಭೂಮಿಯಲ್ಲಿ ಪಳಗಿರುವ ಕಲಾವಿದ ವಿಜಯ್ ಮಯ್ಯ, ಜಾರ್ಜ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಸ್ಟ್ರಾಬೆರಿ' ಸಿನಿಮಾ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದು, ಶೀಘ್ರದಲ್ಲೇ ರಿಲೀಸ್‌ಗೆ ರೆಡಿಯಾಗಬಹುದು.


Click it and Unblock the Notifications











