ಅಮೆರಿಕದಲ್ಲೇ ರೆಡಿಯಾಗುತ್ತೆ 'ರಿಚರ್ಡ್ ಆಂಟೋನಿ' ಕಥೆ: ಇವತ್ತು ರಾತ್ರಿನೇ USAಗೆ ರಕ್ಷಿತ್!
ಸ್ಯಾಂಡಲ್‌ವುಡ್ ಕಳೆದ ಎರಡು ದಿನಗಳಿಂದ ಡಲ್ ಹೊಡೆಯುತ್ತಿದೆ. ಚುನಾವಣೆ ಹಾಗೂ ಐಪಿಎಲ್ ಅಬ್ಬರದ ನಡುವೆ ಕನ್ನಡ ಸಿನಿಮಾ ಸೈಲೆಂಟ್ ಆಗಿದೆ. ಇನ್ನೊಂದು ಕಡೆ ಸೂಪರ್‌ಸ್ಟಾರ್ ಸಿನಿಮಾಗಳು ಸೆಟ್ಟೇರುತ್ತಿಲ್ಲ. ಹೀಗಾಗಿ ಸ್ಯಾಂಡಲ್‌ವುಡ್ ಡಲ್ ಹೊಡೆಯುತ್ತಿದೆ.
ಇಷ್ಟು ಸೈಲೆಂಟ್ ಆಗಿದ್ದ ಸ್ಯಾಂಡಲ್‌ವುಡ್ ನಿಧಾನವಾಗಿ ಚಿರುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ. ಚುನಾವಣೆ, ಐಪಿಎಲ್ ಗುಂಗಿನಿಂದ ಹೊರಬಂದು ಸಿನಿಮಾ ಚಟುವಟಿಕೆ ಕಡೆ ಮುಖ ಮಾಡುತ್ತಿದ್ದಾರೆ. ಇಂದು(ಮೇ 10) ಮತದಾನ ಮಾಡಿದ ಬಳಿಕ ಸಿನಿಮಾ ಚಟುವಟಿಗಳನ್ನೂ ಚುರುಕುಗೊಳಿಸಿದ್ದಾರೆ.

ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇದೇ ವೇಳೆ ಇಂದು (ಮೇ 10) ರಾತ್ರಿಯೇ ಅಮೆರಿಕಗೆ ಹೋಗುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಸಲಿಗೆ ವೋಡ್ ಹಾಕಿದ ಕೂಡಲೇ ಅಮೆರಿಕಗೆ ಹಾರುತ್ತಿರೋದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ವೋಟ್ ಮಾಡಿ ಅಮೆರಿಕಗೆ ತೆರಳಲಿರೋ ರಕ್ಷಿತ್
'777 ಚಾರ್ಲಿ' ಬಳಿಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯ ಒಂದೇ ಒಂದು ಸಿನಿಮಾನೂ ರಿಲೀಸ್ ಆಗಿಲ್ಲ. ಹಾಗಂತ ಸಿನಿಮಾಗಳಿಲ್ಲ ಅಂತೇನೂ ಅಲ್ಲ. ರಕ್ಷಿತ್ ಬಳಿ ಕೈ ತುಂಬಾ ಸಿನಿಮಾಗಳಿವೆ. ಆದರೆ, ಯಾಕೋ ರಿಲೀಸ್ ಮಾತ್ರ ತಡವಾಗುತ್ತಿದೆ. ಉಡುಪಿಯಲ್ಲಿ ವೋಟ್ ಮಾಡಿದ ಬಳಿಕ ರಕ್ಷಿತ್ ಶೆಟ್ಟಿ ಸಿನಿಮಾ ಕೆಲಸಕ್ಕಾಗಿಯೇ ಅಮೆರಿಕಗೆ ತೆರಳುತ್ತಿದ್ದಾರೆ.
ಇಂದು (ಮೇ 10) ರಾತ್ರಿಯೇ ಯುಎಸ್‌ಎಗೆ ಪಯಣ ಬೆಳೆಸಲಿದ್ದಾರೆ. ಅದಕ್ಕೆ ಕಾರಣ 'ರಿಚರ್ಡ್ ಆಂಟೋನಿ'. ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ಸಿನಿಮಾ 'ಉಳಿದವರು ಕಂಡಂತೆ'ಯ ಪ್ರೀಕ್ವೆಲ್ ಈಗಾಗಲೇ ಅನೌನ್ಸ್ ಆಗಿದೆ. ಅದರ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಕೊನೆಯ ಹಂತದ ಸ್ಕ್ರಿಪ್ಟ್ ಮುಗಿಸಲು ಅಮೆರಿಕಗೆ ತೆರಳುತ್ತಿರುವುದಾಗಿ ಸ್ವತ: ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಸ್ಕ್ರಿಪ್ಟ್ ಮಾಡೋಕೆ ಅಮೆರಿಕನೇ ಯಾಕೆ?
ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟೋನಿ ಸ್ಕ್ರಿಪ್ಟ್ ಮಾಡೋಕೆ ಅಮೆರಿಕಾಗೇ ಯಾಕೆ ಹೋಗುತ್ತಿದ್ದಾರೆ ಅನ್ನೋ ಪ್ರಶ್ನೆ ಮೂಡುವುದ ಸಹಜ. ಇಲ್ಲಿ ಹಗಲು ಇದ್ದಾಗ, ಅಲ್ಲಿ ರಾತ್ರಿ ಇರುತ್ತೆ. ಅಲ್ಲಿ ರಾತ್ರಿ ಇದ್ದಾಗ, ಇಲ್ಲಿ ಹಗಲು ಇರುತ್ತೆ. ಹೀಗಾಗಿ ಸ್ಕ್ರಿಪ್ಟ್ ಮಾಡುವಾಗ ಫೋನ್ ಕಾಲ್ ಡಿಸ್ಟರ್ಬೆನ್ಸ್ ಬೇಡವೆಂದು ಅಮೆರಿಕಗೆ ತೆರಳುತ್ತಿದ್ದಾರೆ. ಸದ್ಯ ಕೊನೆಯ ಹಂತದ ಸ್ಕ್ರಿಪ್ಟ್ ಮಾಡುವುದಕ್ಕೆ ರಕ್ಷಿತ್ ಯುಎಸ್‌ಎಗೆ ಹೋಗುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಈಗಾಗಲೇ ಹೇಮಂತ್ ರಾವ್ ನಿರ್ದೇಶನದ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾವನ್ನು ಮುಗಿಸಿದ್ದಾರೆ. ಸದ್ಯಕ್ಕೀಗ ಆ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಲ್ಲಾ ಮುಗಿದು, ಇನ್ನೇನು ಪ್ರಚಾರ ಆರಂಭ ಮಾಡುವ ವೇಳೆ ರಕ್ಷಿತ್ ಶೆಟ್ಟಿ ಹಿಂತಿರುಗಬಹುದು. ಅಷ್ಟೊತ್ತಿಗೆ ರಿಚರ್ಡ್ ಆಂಟೋನಿ ಸ್ಕ್ರಿಪ್ಟ್ ಕೂಡ ಮುಗಿದಿರುವ ಸಾಧ್ಯತೆಯಿದೆ.

ಮೊದಲಿನಂತಿಲ್ಲ ಉಡುಪಿ
ಉಡುಪಿಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತದಾನ ಮಾಡಿದ್ದಾರೆ. ಇದಕ್ಕಾಗಿಯೇ ಬೆಂಗಳೂರಿನಿಂದ ಉಡುಪಿಗೆ ಬಂದು ಮತದಾನ ಮಾಡಿದ್ದಾರೆ. ಈ ವೇಳೆ "ಮತದಾನ ಮಾಡುವುದು ಬಹಳ ಮುಖ್ಯ. ಅದು ನಮ್ಮ ಜವಾಬ್ದಾರಿ. ನನಗೆ ಪಕ್ಷದ ಮೇಲೆ ಒಲವಿದೆ. ಪ್ರಚಾರಕ್ಕೆ ಹೋಗಲ್ಲ. ಆ ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡುವುದು ಒಳ್ಳೆಯದು." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
ಹಾಗೇ "ನಾನು ಚಿಕ್ಕವನಾಗಿದ್ದಾಗ ಉಡುಪಿ ಬೆಳೆಯಬೇಕು ಎಂಬ ಆಸೆ ಇತ್ತು. ಈಗ ಬಂದು ನೋಡಿದರೆ ಮೊದಲೇ ಚೆನ್ನಾಗಿತ್ತು ಅಂತ ಅನಿಸುತ್ತೆ. ನಾಯಕನಾದವ ಊರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಕ್ಷೇತ್ರದ ಜನರ ಬೇಡಿಕೆಗಳನ್ನು ಈಡೇರಿಸಬೇಕು. ಯುವ ಜನರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು ನಮ್ಮ ದೇಶದ ಭವಿಷ್ಯ ಆಗಿರುತ್ತಾರೆ. ಚುನಾವಣಾ ಪ್ರಕ್ರಿಯೆಗೆ ಹೊಸ ಹೊಸ ಮುಖಗಳು ಬರಲೇಬೇಕು" ಎಂದು ರಕ್ಷಿತ್ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











