12 ದಿನಗಳಲ್ಲಿ 'ಉಳಿದವರು ಕಂಡಂತೆ' ಸ್ಕ್ರಿಪ್ಟ್ ಮುಗಿಸಿದ್ದ ರಕ್ಷಿತ್ ಶೆಟ್ಟಿ; 'ರಿಚರ್ಡ್ ಆಂಟನಿ' ಯಾಕಿಷ್ಟು ತಡ?
ಕೆಲವು ಸಿನಿಮಾಗಳೇ ಹಾಗೆ ರಿಲೀಸ್ ಆದಾಗ ಜನರು ನಿರಾಸಕ್ತಿ ತೋರಿಸಿದ್ದರು. ಅದೇ ಟಿವಿಯಲ್ಲೋ, ಓಟಿಟಿಯಲ್ಲೋ ಬಂದಾಗ ಅದ್ಭುತ ಅಂತ ಕೊಂಡಾಡಿದ್ದು ಇದೆ. ಇಂತಹ ಸಾಕಷ್ಟು ಸಿನಿಮಾಗಳನ್ನು ಕನ್ನಡ ಚಿತ್ರರಂಗದಲ್ಲಿ ಹುಡುಕುತ್ತಾ ಹೋದರೆ ಸಿಗುತ್ತವೆ. ಅದರಲ್ಲಿ ರಕ್ಷಿತ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಉಳಿದವರು ಕಂಡಂತೆ' ಸಿನಿಮಾ ಕೂಡ ಒಂದು. ಸ್ಯಾಂಡಲ್‌ವುಡ್ ಮಟ್ಟಿಗೆ ಇದೊಂದು ಪ್ರಯೋಗಾತ್ಮಕ ಸಿನಿಮಾ.
ಒಂದೇ ಕಥೆಯನ್ನು ಹಲವು ಮಂದಿಯ ದೃಷ್ಟಿಕೋನದಲ್ಲಿ ತೆರೆಮೇಲೆ ತೋರಿಸುತ್ತಾ ಕೊನೆಗೆ ಕ್ಲೈಮ್ಯಾಕ್ಸ್‌ನಲ್ಲಿ ಅಂತ್ಯ ಹಾಡುವ ಸಿನಿಮಾಗಳು ಥ್ರಿಲ್ ಕೊಡುತ್ತವೆ. ಅಂತಹ ಸಿನಿಮಾಗಳ ಸಾಲಿನಲ್ಲಿ ಉಳಿಯುವುದು 'ಉಳಿದವರು ಕಂಡಂತೆ'. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ವಿಭಿನ್ನ ಪ್ರಯತ್ನ ಆಗಿತ್ತು. ಹಾಗಂತ ವರ್ಲ್ಡ್ ಸಿನಿಮಾದಲ್ಲಿ ಈ ಪ್ರಯೋಗ ಅದಾಗಲೇ ನಡೆದಿತ್ತು. ಅದರಿಂದ ರಕ್ಷಿತ್ ಶೆಟ್ಟಿ ಪ್ರೇರಣೆ ಪಡೆದು 'ಉಳಿದವರು ಕಂಡಂತೆ' ಕಥೆ ಹೆಣೆದಿರಬಹುದು.

ಆದರೆ, ಅದೆಷ್ಟೇ ಸಿನಿಮಾದಿಂದ ಪ್ರೇರಣೆ ಪಡೆದಿದ್ದರೂ ಇಂತಹ ಕಥೆಗಳಿಗೆ ಸ್ಕ್ರಿಪ್ಟ್ ಮಾಡುವುದು ಅಷ್ಟು ಸುಲಭವಲ್ಲ. ಸ್ಕ್ರೀನ್ ಪ್ಲೇ ಸರಿಯಾಗಿದ್ದರೆ, ಸಿನಿಮಾ ಅರ್ಥ ಆಗೋದು. ಹೌದು, ಒಂದು ಘಟನೆಯನ್ನು ಹಲವು ಬಾರಿ ತೋರಿಸುವುದರಿಂದ ಹೆಚ್ಚು ದೃಶ್ಯಗಳನ್ನು ಸೃಷ್ಟಿಸಬೇಕಿಲ್ಲ. ಆದರೆ, ಅದನ್ನು ಪೋಣಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೂ, ರಕ್ಷಿತ್ ಶೆಟ್ಟಿ ಈ ಸಿನಿಮಾಗೆ ಕೇವಲ 12 ದಿನಗಳಲ್ಲಿ ಸ್ಕ್ರಿಪ್ಟ್ ಮಾಡಿದ್ದರಂತೆ. ಈ ಮಾತನ್ನು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆದರೆ, 'ರಿಚರ್ಡ್ ಆಂಟನಿ'ಗೆ ಯಾಕಿಷ್ಟು ಸಮಯ ತೆಗೆದುಕೊಳ್ತಿದ್ದಾರೆ? ಅದನ್ನು ರಿವೀಲ್ ಮಾಡಿದ್ದಾರೆ.
'ಉಳಿದವರು ಕಂಡಂತೆ' ಐದು ವಿಭಿನ್ನ ಕಥೆಗಳ ಒಂದು ಗುಚ್ಛ. ಇವೆಲ್ಲವನ್ನೂ ಸೇರಿಸಿದರೆ ಒಂದು 'ಉಳಿದವರು ಕಂಡಂತೆ' ಆಗುತ್ತೆ. ಒಂದು ಪ್ರಕರಣವನ್ನು ಬೇರೆ ಬೇರೆ ವ್ಯಕ್ತಿಗಳು ಯಾವ್ಯಾವ ದೃಷ್ಟಿಕೋನದಿಂದ ನೋಡುತ್ತಿದ್ದಾರೆ ಅನ್ನೋದನ್ನು ಹೇಳುತ್ತಾ ಹೋಗುವ ಸಿನಿಮಾವಿದು. ಇದು ತೆರೆಕಂಡಾಗ ರಕ್ಷಿತ್ ಶೆಟ್ಟಿ ಕ್ವರಾಂಟಿನೋ ಸಿನಿಮಾಗಳಿಂದ ಸ್ಪೂರ್ತಿ ಪಡೆದು ಕಥೆ ಹೆಣೆಯಲಾಗಿದೆ ಎಂದು ಬಹಳ ಮಂದಿ ಅಭಿಪ್ರಾಯ ಪಟ್ಟಿದ್ದರು. ಆದರೆ, ಸಿನಿಮಾ ರಿಲೀಸ್ ಆದಾಗ ಇಷ್ಟ ಆಗದೇ ಇದ್ದದ್ದು, ಥಿಯೇಟರ್‌ನಿಂದ ಹೊರ ಬಂದ್ಮೇಲೆ ಯಾಕೆ ಇಷ್ಟ ಆಯ್ತು? ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಈಗ 'ಉಳಿದವರು ಕಂಡಂತೆ' ಸಿನಿಮಾ ಪ್ರೀಕ್ವೆಲ್ ಮಾಡುವುದಕ್ಕೆ ರಕ್ಷಿತ್ ಶೆಟ್ಟಿ ಮುಂದಾಗಿದ್ದಾರೆ. 'ರಿಚರ್ಡ್ ಆಂಟನಿ'ಗಾಗಿ ಕಳೆದ ಕೆಲವು ತಿಂಗಳುಗಳಿಂದ ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಆದರೆ, ಇನ್ನೂ ಸೆಟ್ಟಿರಿಲ್ಲ. ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ 'ಉಳಿದವರು ಕಂಡಂತೆ' ಸಿನಿಮಾ ಸ್ಕ್ರಿಪ್ಟ್ ಅನ್ನು 12 ದಿನಗಳಲ್ಲಿ ಮುಗಿದ್ದು, ರಿಚರ್ಡ್ ಆಂಟನಿಗೆ ಯಾಕಿಷ್ಟು ಸಮಯದ ಹಿಡಿಯುತ್ತಿದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ.

"ಉಳಿದವರು ಕಂಡಂತೆ ಸಿನಿಮಾದ ಸ್ಕ್ರಿಪ್ಟ್‌ನ್ನು ಕೇವಲ 12 ದಿನಗಳಲ್ಲಿ ಬರೆದು ಮುಗಿಸಿದ್ದೆ. ಆಗ ಯಾವುದೇ ಒತ್ತಡವಿರಲಿಲ್ಲ. ಮುಗ್ಧತೆಯಿಂದ ಸಿನಿಮಾವನ್ನು ಮಾಡಿದ್ದೆ. ಆಗ ಚಿತ್ರರಂಗದ ಮಾರ್ಕೇಟಿಂಗ್, ಪ್ರಮೋಷನ್, ಬ್ರ್ಯಾಂಡಿಂಗ್ ಎನ್ನುವ ಒತ್ತಡವಿರಲಿಲ್ಲ. ಈಗ ದಶಕದ ನಂತರವೂ ಅದು ಕಲ್ಟ್ ಸಿನಿಮಾ ಆಗಿದ್ದಕ್ಕೆ ಖುಷಿಯಿದೆ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಹಾಗೇ ರಿಚರ್ಡ್ ಆಂಟನಿ ತಡವಾಗುತ್ತಿರೋದ್ಯಾಕೆ? ಅಂತಾನೂ ಹೇಳಿದ್ದಾರೆ.
"ರಿಚರ್ಡ್ ಆಂಟನಿ ಸಿನಿಮಾ 'ಉಳಿದವರು ಕಂಡಂತೆ' ಸಿನಿಮಾದ ಪ್ರೀಕ್ವೆಲ್, ಸೀಕ್ವೆಲ್. ಇದನ್ನು ಭಾರೀ ಪ್ರಮಾಣದಲ್ಲಿ ಮಾಡುತ್ತಿದ್ದೇವೆ. ಬೇರೆ ದೇಶಗಳಿಗೆ ಹೋಗಿ ಶೂಟ್ ಮಾಡುತ್ತಿದ್ದೇವೆ. ರಿಚರ್ಡ್ ಆಂಟನಿ ನೋಡುವುದಕ್ಕೆ ಕಾಯುತ್ತಿದ್ದಾರೆ ಅನ್ನೋದು ಗೊತ್ತು. ಕಾಯುವಿಕೆ ಜಾಸ್ತಿನೂ ಆಗಿರಬಹುದು. ಏನ್ಮಾಡೋದು ನನಗೆ ಸಮಯ ಹೋಗುವುದೇ ಗೊತ್ತಾಗುತ್ತಿಲ್ಲ. ಆದರೆ, ಅಭಿಮಾನಿಗಳಿಗೆ ಈ ಸಿನಿಮಾ ಪೈಸಾ ವಸೂಲ್ ಸಿನಿಮಾ ಆಗುತ್ತೆ. ರಿಚರ್ಡ್ ಆಂಟನಿಯಲ್ಲಿ ನೀವು ರಿಚಿ 2.0 ನೋಡುತ್ತೀರ" ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











