'ಬ್ಯಾಚುಲರ್ ಪಾರ್ಟಿ' ವಿವಾದ; ಪೊಲೀಸ್ ವಿಚಾರಣೆ ಬಳಿಕ ಮ್ಯೂಸಿಕ್ ಕಂಪನಿಗಳ ಮೇಲೆ ರಕ್ಷಿತ್ ಶೆಟ್ಟಿ ಕಿಡಿ
ನಟ ರಕ್ಷಿತ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ' ಸಿನಿಮಾ ನಿರ್ಮಾಣ ಮಾಡಿ ರಕ್ಷಿತ್ ಶೆಟ್ಟಿ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಇದರಲ್ಲಿ ಎರಡು ಹಳೆಯ ಸಿನಿಮಾದ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಎಂಟಿಆರ್ ಮ್ಯೂಸಿಕ್ ಸಂಸ್ಥೆ ರಕ್ಷಿತ್ ಶೆಟ್ಟಿ ನಿರ್ಮಾಣದ ಸಂಸ್ಥೆ ಪರಂವಃ ಸ್ಟುಡಿಯೋ ವಿರುದ್ಧ ದೂರನ್ನು ದಾಖಲಿಸಲಾಗಿತ್ತು. ಈ ವಿಚಾರವಾಗಿ ಇಂದು (ಆಗಸ್ಟ್ 2) ಯಶವಂತಪುರ ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ಎಂಆರ್‌ಟಿ ಮ್ಯೂಸಿಕ್ ಸಂಸ್ಥೆಯ ಸ್ವಾಮ್ಯದಲ್ಲಿರುವ 'ನ್ಯಾಯ ಎಲ್ಲಿದೆ?' ಮತ್ತು 'ಗಾಳಿ ಮತು' ಸಿನಿಮಾದ ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. 'ಬ್ಯಾಚುಲರ್ ಪಾರ್ಟಿ' ಸಿನಿಮಾದ "ನ್ಯಾಯ ಎಲ್ಲಿದೆ" ಹಾಗೂ "ನಿನ್ನನ್ನು ಕಣ್ತುಂಬ ನೋಡುವಾಸೆ" ಈ ಎರಡು ಹಾಡುಗಳನ್ನು ಸಿನಿಮಾದಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಬಳಸಿಕೊಳ್ಳಲಾಗಿತ್ತು.

'ಬ್ಯಾಚುಲರ್ ಪಾರ್ಟಿ' ಸಿನಿಮಾದಲ್ಲಿ ಈ ಎರಡು ಹಾಡುಗಳನ್ನು ಬಳಸಿಕೊಂಡಿದ್ದರಿಂದ ಕಾಪಿ ರೈಟ್ ಉಲ್ಲಂಘನೆ ಆಗಿದೆಯೆಂದು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಾಗಿಸಿತ್ತು. ರಕ್ಷಿತ್ ಶೆಟ್ಟಿ ವಿರುದ್ಧ ಎಂಆರ್‌ಟಿ ಸಂಸ್ಥೆಯ ಮಾಲೀಕ ನವೀನ್ ಕುಮಾರ್ ದೂರು ನೀಡಿದ್ದರು. ಈ ಸಂಬಂಧ ರಕ್ಷಿತ್ ಶೆಟ್ಟಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ವಿಚಾರಣೆ ಮುಗಿಸಿದ ಬಂದ ರಕ್ಷಿತ್ ಶೆಟ್ಟಿ ಮ್ಯೂಸಿಕ್ ಕಂಪನಿಗಳ ವಿರುದ್ಧ ಕಿಡಿಕಾರಿದ್ದಾರೆ. ಎರಡು ಮೂರು ಮ್ಯೂಸಿಕ್ ಕಂಪನಿಗಳು ಇವೆ. ಸಿನಿಮಾ ರಿಲೀಸ್ ಆಗುವುದನ್ನೇ ಕಾಯುತ್ತಿರುತ್ತವೆ. ಹುಡುಕಿ ಎಲ್ಲಿ ಕೇಸ್ ಹಾಕಬೇಕು ಅಂತ ಕಾಯುತ್ತಲೇ ಇರುತ್ತವೆ ಎಂದು ಮ್ಯೂಸಿಕ್ ಕಂಪನಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
"ಜನವರಿಯಲ್ಲಿ ಬ್ಯಾಚುಲರ್ ಪಾರ್ಟಿ ಅಂತ ಸಿನಿಮಾ ರಿಲೀಸ್ ಆಗಿತ್ತು. ಪರಂವಃ ಸ್ಟುಡಿಯೋನಿಂದ ಆ ಸಿನಿಮಾವನ್ನು ನಾವು ನಿರ್ಮಾಣ ಮಾಡಿದ್ವಿ. ಅದರಲ್ಲಿ ನಾವು ಮೂರು ನಾಲ್ಕು ಹಳೆಯ ಹಾಡುಗಳನ್ನು ಬಳಸಿಕೊಳ್ಳುವ ಪರಿಸ್ಥಿತಿ ಇತ್ತು. ಬೇರೊಂದು ಮ್ಯೂಸಿಕ್ ಕಂಪನಿಯಿಂದ ಎರಡು ಹಾಡು ಇತ್ತು. ಅವರೊಂದಿಗೆ ಮಾತಾಡಿದ್ವಿ. ಅವರು ಒಂದು ಮೊತ್ತ ಹೇಳಿದರು. ಅದನ್ನು ನಾವು ತೆಗೆದುಕೊಂಡೆವು. ಇನ್ನೆರಡು ಹಾಡುಗಳು ಕಾಪಿರೈಟ್ ಉಲ್ಲಂಘನೆ ಅಲ್ಲ. ಯಾವುದಕ್ಕೂ ಇರಲಿ ಅಂತ ನಮ್ಮ ಪ್ರೊಡಕ್ಷನ್ ಮ್ಯಾನೇಜರ್‌ಗೆ ಹೇಳಿದ್ದೆ. ಅವರು ಫೋನ್ ಮಾಡಿದಾಗ ದೊಡ್ಡ ಅಮೌಂಟ್ ಹೇಳಿದ್ದಾರೆ. ಕಾಪಿರೈಟ್ ಉಲ್ಲಂಘನೆ ಅಲ್ಲ. ಅದಕ್ಕೆ ಯಾಕೆ ಅಷ್ಟೊಂದು ಹಣ ಕೊಡಬೇಕು ಅಂತ ಅನಿಸಿತ್ತು. ಅದ್ಯಾಕೋ ಸರಿ ಅನಿಸಲಿಲ್ಲ." ಎಂದು ರಕ್ಷಿತ್ ಶೆಟ್ಟಿ ಎಂಆರ್‌ಟಿ ಮ್ಯೂಸಿಕ್ ಸಂಸ್ಥೆ ಜೊತೆಗಿನ ಮಾತುಕತೆಯನ್ನು ವಿವರಿಸಿದ್ದಾರೆ.
ಹಾಗೇ "ಹೀಗೆ ಎರಡು ಮೂರು ಬಾರಿ ಹೇಳುತ್ತೇವೆ ಅಂತ ಹೇಳಿದ್ದರು. ಮತ್ತೆ ಅವರು ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಿರಲಿಲ್ಲ. ನಮ್ಮ ಸಿನಿಮಾ ರಿಲೀಸ್ ಹತ್ತಿರವಿತ್ತು. ಹಾಗಾಗಿ ನಾವು ರಿಲೀಸ್ ಮಾಡಿದ್ವಿ. ರಿಲೀಸ್ ಆದ ಮೂರು ನಾಲ್ಕು ತಿಂಗಳ ಬಳಿಕ ಕೇಸ್ ಹಾಕಿದ್ದಾರೆ. ಒಂದು ಹಾಡು 6 ಸೆಕೆಂಡ್ ಟಿವಿಯಲ್ಲಿ ಬರುತ್ತೆ ಅಷ್ಟೇ. ಇನ್ನೊಂದು ಹಾಡು ಶಾಲೆಯಲ್ಲಿ ವಿದ್ಯಾರ್ಥಿ ಹಾಡುವ ಸಂದರ್ಭ. ಇದೆರಡೂ ಕಾಪಿ ರೈಟ್ ಅಲ್ಲ ಅಂತ ನಮ್ಮ ವಾದ. ಒಂದು ಮೂರು ನಾಲ್ಕು ಮ್ಯೂಸಿಕ್ ಕಂಪನಿಗಳು ಇದ್ದಾವೆ. ಇವರ ಕೆಲಸನೇ ಸಿನಿಮಾ ರಿಲೀಸ್ ಆದ ಕೂಡಲೇ ಎಲ್ಲೆಲ್ಲಿ ಕೇಸ್ ಹಾಕಬಹುದು ಅಂತ." ಎಂದು ರಕ್ಷಿತ್ ಶೆಟ್ಟಿ ಗುಡುಗಿದ್ದಾರೆ.
ಸದ್ಯ ಯಶವಂತಪುರ ಪೊಲೀಸ್ ಠಾಣೆ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿಕೆ ದಾಖಲಿಸಿದ್ದಾರೆ. ಮ್ಯೂಸಿಕ್ ಸಂಸ್ಥೆ ವಿರುದ್ಧ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಈ ಬಾರಿ ಈ ಕಾಪಿ ರೈಟ್ ವಿವಾದಕ್ಕೆ ಕೋರ್ಟ್‌ನಲ್ಲೇ ಒಂದು ಕ್ಲಾರಿಟಿ ಸಿಗಲಿ ಎಂದು ನಿರ್ಧರಿಸಿದ್ದಾರೆ.


Click it and Unblock the Notifications











