ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿ ಅಗಲಿಕೆಗೆ ಕಣ್ಣೀರಿಟ್ಟ ರಕ್ಷಿತಾ, ಯೋಗರಾಜ್ ಭಟ್, ಮಾಸ್ಟರ್ ಆನಂದ್
ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಇಂದು (ಮೇ 12) ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆಯ ಸುದ್ದಿಯನ್ನು ಕೇಳಿ ಕಿರುತೆರೆಯ ತಾರೆಯರು ಅಘಾತಕ್ಕೆ ಒಳಗಾಗಿದ್ದಾರೆ. ದಿಢೀರನೇ ಬಂದಿದ್ದ ಸುದ್ದಿಯನ್ನು ಇನ್ನು ಅರಗಿಸಿಕೊಳ್ಳುವುದಕ್ಕೆ ಆಗದೆ ಪರದಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಾಕೇಶ್ ಪೂಜಾರಿ ಅಗಲಿಕೆ ಕಾಮಿಡಿ ಕಿಲಾಡಿಗಳು ತಂಡಕ್ಕೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ.
ರಾಕೇಶ್ ಪೂಜಾರಿಯ ಅಂತಿಮ ಯಾತ್ರೆಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ತಂಡ ಹೋಗಿ ಅಂತಿಮ ನಮನ ಸಲ್ಲಿಸಿದೆ. ಕಾಮಿಡಿ ಕಿಲಾಡಿಯ ಸದಸ್ಯರೆಲ್ಲರೂ ಭಾವುಕರಾಗಿದ್ದರು. ಅನುಶ್ರೀ, ನಯನಾ ಸೇರಿದಂತೆ ಬಹುತೇಕ ಮಂದಿ ರಾಕೇಶ್ ಪೂಜಾರಿಗೆ ಅಂತಿಮ ನಮನ ಸಲ್ಲಿಸಿದರು. ಬಾರದೂರಿಗೆ ಹೊರಟು ಹೋದ ಗೆಳೆಯನನ್ನು ನೆನೆದು ಕಣ್ಣೀರು ಸುರಿಸಿದ್ದಾರೆ.

ಇದೇ ವೇಳೆ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋಗೆ ಜಡ್ಜ್‌ಗಳಾಗಿರುವ ನಟಿ ರಕ್ಷಿತಾ ಪ್ರೇಮ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಿರೂಪಕ ಮಾಸ್ಟರ್ ಆನಂದ್ ಅಂತಿಮ ನಮನ ಸಲ್ಲಿಸಿದ್ದಾರೆ. ಈ ವೇಳೆ ರಾಕೇಶ್ ಪೂಜಾರಿಯನ್ನು ನೆನಪಿಸಿಕೊಂಡು ನಟಿ ರಕ್ಷಿತಾ ಪ್ರೇಮ್ ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ದರ್ಶನ್ ಕೂಡ ರಕ್ಷಿತಾಗೆ ಫೋನ್ ಮಾಡಿ ಬೇಸರ ಹೊರ ಹಾಕಿದ್ದಾರೆಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಕ್ಷಿತಾ ಪ್ರೇಮ್
"ಅವನ ಬಗ್ಗೆ ಯಾವುದು ನೆನಪಾಗಲ್ಲ ಅಂತ ಕೇಳಿ. ಹಲವು ಸಾರಿ ನಮ್ಮ ಮನೆಗೆ ಬಂದಿದ್ದ. ನಮ್ಮ ಜೊತೆ ಕೂತು ಊಟ ಮಾಡಿದ್ದಾನೆ. ಅವನೊಬ್ಬ ಅದ್ಭುತ ಹುಡುಗ. ತುಂಬಾ ಒಳ್ಳೆಯ ಹುಡುಗ. ಇಷ್ಟು ಬೇಗ ಹೋಗಬಾರದಿತ್ತು. ಮೊದಲ ದಿನದಿಂದಲೇ ಅವರನು ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ನನ್ನ ಡಿಪಿಯನ್ನೇ ಹಾಕಿಕೊಂಡಿದ್ದಾನೆ. ಇವತ್ತು ಬೆಳಗ್ಗೆ ದರ್ಶನ್ ಕೂಡ ಫೋನ್ ಮಾಡಿ ಕೇಳಿದರು. ನಾವೆಲ್ಲರೂ ತುಂಬಾನೇ ಬೇಜಾರಾಗಿದ್ದೇವೆ." ಎಂದು ರಕ್ಷಿತಾ ಪ್ರೇಮ್ ಕಣ್ಣೀರು ಹಾಕಿದ್ದಾರೆ.

ಯೋಗರಾಜ್ ಭಟ್
"ನನ್ನ ತುಂಬಾ ಮುದ್ದಿನ ನಟ ಅವನು. ನಾನು, ರಕ್ಷಿತಾ ಅವರು, ಸಮಸ್ತ ಜೀ ಬಳಗದವರಿಗೆ ಅವನು ಅಂದರೆ ಖುಷಿ. ಯಾವುದೇ ಹಿನ್ನೆಲೆಯಿಲ್ಲದೆ ಕರಾವಳಿಯ ಈ ಭಾಗದಿಂದ ಬಂದು ಆ ವೇದಿಕೆಯಲ್ಲಿ ಅಷ್ಟು ಹೆಸರು ಮಾಡಿದ. ಪ್ರಕೃತಿ ಕರೆದಾಗ ಹೋಗಬೇಕು. ಎಲ್ಲರೂ ಹೋಗಬೇಕು. ಆದರೆ, ಇಷ್ಟು ಬೇಗ ಕರೆಯುತ್ತೆ ಅಂತ ನಾವ್ಯಾರೂ ಅಂದುಕೊಂಡಿರಲಿಲ್ಲ. ತುಂಬಾ ಜೀವಂತಿಕೆ ಇದ್ದಂತಹ ಹುಡುಗ. ಈಗ ನೆನಪಾಗಬೇಕು ಅಷ್ಟೇ. ನಗುವಿನ ಹಿಂದೆ ನೋವು ಇರುತ್ತೆ. ನೋವಿನ ಪ್ರಮಾಣ ಒಬ್ಬೊಬ್ಬರಲ್ಲಿ ಒಂದೊಂದು ತರ ಇರುತ್ತೆ. ಯಾವುದೇ ಹಿನ್ನೆಲೆ ಇಲ್ಲದೆ ಬಂದವನು ಬದುಕು ಕಟ್ಟಿದ್ದೇ ತುಂಬಾ ದೊಡ್ಡದು. ಅದೇನು ನೋವಿತ್ತೋ? ಅದ್ಯಾಕೆ ಆ ನಿರ್ಧಾರ ತೆಗೆದುಕೊಳ್ತೋ ಅವನ ಹೃದಯ ಅವನಿಗೆ ಗೊತ್ತಿರಲ್ಲ. ಸಾವು ಅವನಿಗೆ ಗೊತ್ತಿಲ್ಲ. ಆನಂದವಾಗಿ ಮಲಗಿದ್ದಾನೆ." ಎಂದು ಯೋಗರಾಜ್ ಭಟ್ ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಹಾಗೇ ತಂಗಿ ಮದುವೆ ಮಾಡಬೇಕು ಅಂತ ರಾಕೇಶ್ ಪೂಜಾರಿ ತುಂಬಾನೇ ಆಸೆ ಇಟ್ಟುಕೊಂಡಿದ್ದರು. ಆ ಆಸೆಯನ್ನು ಈಡೇರಿಸಿಕೊಳ್ಳುವ ಮೊದಲೇ ಇಹಲೋಕವನ್ನು ತ್ಯಜಿಸಿದ್ದಾರೆ. ಈ ಬಗ್ಗೆನೂ ಯೋಗರಾಜ್ ಭಟ್ ಮಾತಾಡಿದ್ದಾರೆ. "ತಂಗಿಯ ಮದುವೆ, ಜೊತೆಗೆ ಆತನಿಗೆ ತಂದೆ ಇರಲಿಲ್ಲ. ನಟನಾಗಿ ಹಲವಾರು ಕನಸುಗಳು ಇತ್ತು. ಅವನು ಏನೇನು ಕನಸು ಕಂಡಿದ್ದ ಅನ್ನೋದು ಅವನ ಗೆಳೆಯರಿಗೆ ಚೆನ್ನಾಗಿ ಗೊತ್ತು. ನಾವು, ನೀವು ಎಲ್ಲಾ ಸೇರಿ ಒಂದೊಂದನ್ನೇ ಪೂರೈಸಬೇಕು ಅಷ್ಟೇ. ರಾಕೇಶ್ ಅಂದ ಕೂಡಲೇ ಅವನ ಜೀವಂತಿಕೆ, ಅವನ ಮುಗ್ಧತೆ, ಅವನ ನಗು ನೆನಪಾಗುತ್ತೆ. ಅಗಾಧವಾಗಿ ಜನರನ್ನು ನಗಿಸುತ್ತಿದ್ದ. ತುಂಬಾನೇ ಮುಗ್ಧ. ಅವನು ವೇದಿಕೆಗೆ ಬಂದರೆ, ಪುಟ್ಟ ಮಗು ಬಂದಂತೆ ಆಗುತ್ತಿತ್ತು. ಅವನು ವೇದಿಕೆ ಬಂದಾಗಲೆಲ್ಲ ನಿನ್ನ ಮುಗ್ಧತೆ ಹೀಗೆ ಇರಲಿ ಅಂತ ಹೇಳುತ್ತಿದ್ವಿ, ತುಂಬಾ ಮುಗ್ಧತೆಯಿಂದ ಇದ್ದರೆ ಹೀಗಾಗುತ್ತೋ ಏನೋ ಗೊತ್ತಿಲ್ಲ." ಎಂದು ಯೋಗರಾಜ್ ಭಟ್ ಪ್ರತಿಕ್ರಿಯಿಸಿದ್ದಾರೆ.
ಮನದ ಕಡಲು ಸಿನಿಮಾದಲ್ಲಿ ನಟಿಸಬೇಕಿತ್ತು
"ಅವನು ಮನದ ಕಡಲು ಸಿನಿಮಾದಲ್ಲಿಯೂ ಮಾಡಬೇಕಿತ್ತು. ಕಾಂತಾರ ಶೂಟಿಂಗ್ ಹೋಗಿದ್ದರಿಂದ ನನ್ನ ಸಿನಿಮಾದಲ್ಲಿ ಮಾಡುವುದಕ್ಕೆ ಆಗಲಿಲ್ಲ. ಹಲವಾರು ಸಿನಿಮಾಗಳ ಪ್ಲ್ಯಾನ್ ಇತ್ತು. ಸಿನಿಮಾ ಒಳ್ಳೆಯ ನಟನನ್ನು ಕೈ ಬಿಡುವುದಿಲ್ಲ. ಈಗ ಸಿನಿಮಾಗೆ ಅವನು ಇಲ್ಲದ ಹಾಗೇ ಆಗಿದೆ." ಎಂದು ಯೋಗಭಟ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮಾಸ್ಟರ್ ಆನಂದ್
"ರಾಕೇಶನ ಬಗ್ಗೆ ನೆನಪಾಗುವಂತಹದ್ದು ಹೇಳುತ್ತಾ ಹೋದರೆ ಸಾವಿರ ಇದೆ. ಸೀಸನ್ 3 ರಲ್ಲಿ ಅವನು ಬಂದಿದ್ದು. ಈ ಕಡೆ ಭಾಗದ ಅವನ ಭಾಷೆ, ಕಾಮಿಡಿ ಎಲ್ಲವೂ ನೆನಪಾಗುತ್ತೆ. ಅವನ ವಿಶೇಷತೆ ಅಂದರೆ, ಯಾವುದಾದರೂ ಸ್ಕಿಟ್ ಚೆನ್ನಾಗಿ ಆಗಿಲ್ಲ ಅಂದುಕೊಳ್ಳಿ, ಅವನು ಇರೋ ಸ್ಕಿಟ್ ಅಲ್ಲದೇ ಅಪೋಸಿಟ್ ಇರುವ ಸ್ಕಿಟ್ ಚೆನ್ನಾಗಿ ಆಗಿಲ್ಲ ಅಂದರೂ ಒಳಗೆ ನುಗ್ಗಿ ಆ ಸ್ಕಿಟ್ ಅನ್ನೂ ಗೆಲ್ಲಿಸುವ ಹಾಗೆ ಮಾಡೋನು. ನನಗೆ 24 ಗಂಟೆಯಲ್ಲಿ ಎಲ್ಲಿ ಇದ್ದೆ. ಎಲ್ಲಿಗೆ ಬಂದಿದ್ದೀನಿ ಅಂತ ಅನಿಸುತ್ತಿದೆ. ಇಷ್ಟೆನಾ ಲೈಫ್ ಅಂತ ಅನಿಸಿಬಿಡುತ್ತೆ." ಎಂದಿದ್ದಾರೆ ಮಾಸ್ಟರ್ ಆನಂದ್.
ಹಾಗೇ "ರಾತ್ರಿ ಮೂರು ಗಂಟೆಯಲ್ಲಿ ನಯನಾ ಫೋನ್ ಬಂತು. ರಾಕಿ..ರಾಕಿ ಅಂತಿದ್ದಾಳೆ. ಸುಮ್ಮನೆ ಅಳುತ್ತಿದ್ದಾಳೆ. ಏನು ಅಂದಾಗ, ಹೀಗಾಗಿದೆ ಅಂದಳು. ಸುಮ್ಮನೆ ಇರು ತಮಾಷೆ ಮಾಡುವುದಕ್ಕೆ ಟೈಮ್ ಇಲ್ವ ನಿಮಗೆ ಅಂದೆ. ಏನು ಮಾಡುತ್ತೀರ. ಅವನು ತುಂಬಾನೇ ಕ್ಯೂಟ್. ಎಲ್ಲರೂ ನಮಸ್ಕಾರ ಮಾಡುತ್ತಿದ್ದರು. ನನಗೆ ನಮಸ್ಕಾರ ಮಾಡಬೇಕು ಅನಿಸಲಿಲ್ಲ. ಅವನು ಕ್ಯೂಟ್ ಅಂತ ಅನಿಸುತ್ತಿದ್ದ. ಏನೂ ಹೇಳುವುದಕ್ಕೆ ಆಗಲ್ಲ. ನಮ್ಮ ಸಿನಿಮಾ ಎಲ್ಲಾ ಮಾಡಿದ. ಅವರದ್ದೊಂದು ಬ್ಯಾಚ್ ಇದೆ. ಅವರನ್ನೆಲ್ಲ ಇಟ್ಕೊಂಡು ಸಿನಿಮಾದಲ್ಲಿ ಸೀನ್ಸ್ ಎಲ್ಲಾ ಮಾಡಿದ್ವಿ. ಇವತ್ತು ಒಬ್ಬ ಪ್ರತಿಭಾನ್ವಿತ ನಟನನ್ನು ಕನ್ನಡ ಚಲನಚಿತ್ರರಂಗ ಕಳೆದುಕೊಂಡಿದೆ." ಮಾಸ್ಟರ್ ಆನಂದ್ ಹೇಳಿದ್ದಾರೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ
"ಈಗ ನಕ್ಕರೆ ಆಯಸ್ಸು ಹೆಚ್ಚಾಗುತ್ತೆ ಅಂತ ಹೇಳುತ್ತಾರೆ. ಸುತ್ತ ಇರೋರನ್ನು ನಗಿಸುತ್ತಲೇ ಇರೋನು. ನಗಿಸಿ, ನಗಿಸಿ ಬಾಯಿ ಮುಚ್ಚೋ ಅಂತ ಹೇಳಬೇಕು ನಾವು ಅಷ್ಟು ನಗಿಸೋನು. ನೋಡಿದರೆ, ಅವನ ಆಯಸ್ಸನ್ನೇ ದೇವರು ಕಿತ್ತುಕೊಂಡನಲ್ಲ. ಅದೇ ಬೇಜಾರು. ಈ ನ್ಯೂಸ್ ಒಂದು ಹಿಂಸೆ ಕೊಡುತ್ತಿದ್ದರೆ, ಹೋಗುವುದಕ್ಕೆ ಆಗಿಲ್ವಲ್ಲ ಅನ್ನೋದು ಇನ್ನೊಂದು ಹಿಂಸೆ. ಅಂತಿಮ ಯಾತ್ರೆ ಅಂತ ನ್ಯೂಸ್‌ನಲ್ಲಿ ಬಂತು. ಆ ಪದ ಎಷ್ಟು ಭಯಾನಕವಾಗಿದೆ. 34 ವರ್ಷ ಅವನಿಗೆ, ಇದೇ ಸತ್ಯ." ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಭಾವುಕರಾಗಿದ್ದಾರೆ.
"ಅವನ ಆರಂಭವನ್ನು ನೋಡಿದ್ವಿ. ಉಡುಪಿಯ ಯಾವುದೋ ಒಂದು ಹಳ್ಳಿಯಲ್ಲಿ ನಾಟಕಗಳನ್ನು ಮಾಡಿಕೊಂಡು, ತುಳುನಾಡಿನ ಚಾನೆಲ್‌ಗಳಲ್ಲಿ ಶೋಗಳನ್ನು ಮಾಡಿಕೊಂಡು ಇದ್ದವನು. ಜೀ ಕನ್ನಡದಂತಹ ದೊಡ್ಡ ಚಾನೆಲ್‌ಗೆ ಬಂದು, ದೊಡ್ಡ ಶೋ ಮಾಡಿ ಭರವಸೆ ಮೂಡಿಸಿದ್ನಲ್ಲ. ನಾನು ಕಾಮಿಡಿಯನ್ ಅಂತ ಪ್ರೂವ್ ಮಾಡಿದ್ನಲ್ಲ. ಅದು ಚಿಕ್ಕ ವಯಸ್ಸಿಗೆ ಸಾಧನೆ ಮಾಡಿಕೊಂಡ." ಎನ್ನುತ್ತಾರೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ.


Click it and Unblock the Notifications











