Peddi Karnataka Business: 'ಜೇಮ್ಸ್' ನಿರ್ಮಾಪಕರ ಪಾಲಾದ 'ಪೆದ್ದಿ'; ಕರ್ನಾಟಕದಲ್ಲಿ ಬಿಡುಗಡೆಗೆ ಕೊಟ್ಟಿದ್ದಿಷ್ಟು ಕೋಟಿನಾ?
ಟಾಲಿವುಡ್‌ನ ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟಿಸಿರುವ 'ಪೆದ್ದಿ' ಸಿನಿಮಾ ಜೂನ್ 4 ರಂದು ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ಬ್ಯುಸಿನೆಸ್ ಅನ್ನು ಆರಂಭ ಮಾಡಿದೆ. 'ಪೆದ್ದಿ' ಸಿನಿಮಾ ಕರ್ನಾಟಕದಲ್ಲಿಯೂ ಟ್ರೆಂಡಿಂಗ್‌ನಲ್ಲಿ ಇರುವುದರಿಂದ ಸಿನಿಮಾ ಖರೀದಿಗೆ ವಿತರಣಾ ಸಂಸ್ಥೆಗಳು ಮುಗಿಬಿದ್ದಿದ್ದವು. ಅಲ್ಲದೇ ಕರ್ನಾಟಕದಲ್ಲೂ ರಾಮ್ ಚರಣ್ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಕಲೆಕ್ಷನ್ ಮಾಡುತ್ತವೆ. ಹೀಗಾಗಿ ಕರ್ನಾಟಕದ ವಿತರಣಾ ಸಂಸ್ಥೆಗಳು ಈ ಪ್ಯಾನ್ ಇಂಡಿಯಾ ಸಿನಿಮಾ ಮೇಲೆ ಕಣ್ಣು ಇಟ್ಟಿದ್ದವು.
ಈಗಾಗಲೇ 'ಪೆದ್ದಿ' ಸಿನಿಮಾದ ಹಾಡುಗಳು, ತುಣುಕುಗಳು ಮಿಲಿಯನ್‌ಗಟ್ಲೇ ವೀವ್ಸ್ ಪಡೆದುಕೊಂಡಿವೆ. ರಾಮ್ ಚರಣ್ ಲುಕ್ ಕಿಕ್ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗು ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ರಾಮ್ ಚರಣ್ ಹಾಗೂ ಶಿವಣ್ಣ ಇಬ್ಬರೂ ಮುಖಾ-ಮುಖಿ ಆಗುವುದನ್ನು ನೋಡುವುದಕ್ಕೆ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.

ಈ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ವಿತರಕರು ಸಿನಿಮಾ ಖರೀದಿಗೆ ಮುಗಿಬಿದ್ದಿದ್ದರು. ಈ ಪೈಪೋಟಿಯಲ್ಲಿ ಪುನೀತ್ ರಾಜ್‌ಕುಮಾರ್ ಕೊನೆಯ ಸಿನಿಮಾ 'ಜೇಮ್ಸ್' ನಿರ್ಮಿಸಿದ್ದ ಕಿಶೋರ್ ಫಿಲ್ಮ್ಸ್ ಈ ಸಿನಿಮಾವನ್ನು ಖರೀದಿ ಮಾಡಿದೆ. ಅಧಿಕೃತವಾಗಿ ಈ ವಿಷಯ ಈಗ ಹೊರ ಬಿದ್ದಿದೆ. ತೆಲುಗಿನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವನ್ನು ಭಾರೀ ಮೊತ್ತಕ್ಕೆ ಖರೀದಿ ಮಾಡಿದೆ ಎಂದು ಹೇಳಲಾಗುತ್ತಿದೆ.
₹20 ಕೋಟಿಗೆ ಡೀಲ್
'ಪೆದ್ದಿ' ಸಿನಿಮಾಗೆ ಕರ್ನಾಟಕದಲ್ಲೂ ಕ್ರೇಜ್ ಜೋರಾಗಿದೆ. ರಾಮ್ ಚರಣ್ ಜೊತೆ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರೊಂದಿಗೆ ಬಿಗ್ ಸ್ಟಾರ್ ಕಾಸ್ಟ್ ಇರುವುದರಿಂದ ಕರ್ನಾಟಕದ ವಿತರಕರು ಈ ಸಿನಿಮಾವನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದರು. ಭಾರೀ ಪೈಪೋಟಿಯಲ್ಲಿ ಕಿಶೋರ್ ಫಿಲ್ಮ್ಸ್ ಈ ಸಿನಿಮಾವನ್ನು ಸುಮಾರು 20 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎಂದು ವಿತರಕರ ವಲಯ ಹೇಳುತ್ತಿದೆ.
ಬೆಂಗಳೂರಲ್ಲಿ ಬಿಗ್ ಪ್ರಮೋಷನ್
'ಪೆದ್ದಿ' ಸಿನಿಮಾವನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಲಾಗಿದೆ. ಹೀಗಾಗಿ ರಾಮ್ ಚರಣ್, ಜಾಹ್ನವಿ ಕಪೂರ್, ಶಿವಣ್ಣ ಸೇರಿದಂತೆ ಪ್ರಮುಖ ನಟ-ನಟಿಯರು ಬೆಂಗಳೂರಿನಲ್ಲಿ ಪ್ರಚಾರ ಮಾಡಲಿದ್ದಾರೆ ಅನ್ನೋ ಸುದ್ದಿಯಿದೆ. ಜೂನ್ 4 ರಂದು ರಿಲೀಸ್ ಆಗುತ್ತಿರುವುದರಿಂದ ಮುಂದಿನ ತಿಂಗಳಿನಿಂದ ಸಿನಿಮಾ ತಂಡ ಅಬ್ಬರ ಪ್ರಚಾರ ಮಾಡಲಿದೆ. ಇನ್ನು ಒಂದು ಅಂದಾಜಿನ ಪ್ರಕಾರ ಈ ಸಿನಿಮಾ 300 ರಿಂದ 350 ಸ್ಕ್ರೀನ್‌ಗಳಲ್ಲಿ ರಿಲೀಸ್ ಮಾಡುವುದಕ್ಕೆ ಆಲೋಚನೆ ಮಾಡಲಾಗಿದೆ.

ದೊಡ್ಡ ಮೊತ್ತಕ್ಕೆ ಖರೀದಿಸಿದ ಸಿನಿಮಾಗಳಿವು
ಕರ್ನಾಟಕದ ವಿತರಕರು 'ಪೆದ್ದಿ' ಸಿನಿಮಾವನ್ನು ಸುಮಾರು 20 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದಾರೆ. ಇದು ಮೇಲ್ನೋಟಕ್ಕೆ ದೊಡ್ಡ ಮೊತ್ತವೇ. ಆದರೆ, 'ಪೆದ್ದಿ'ಗಿಂತಲೂ ಹೆಚ್ಚು ಹಣವನ್ನು ಕೊಟ್ಟು ತೆಲುಗು, ತಮಿಳು ಸಿನಿಮಾವನ್ನು ಖರೀದಿ ಮಾಡಿದ ಉದಾಹರಣೆಗಳಿವೆ. ಅದರಲ್ಲಿ ರಜನಿಯ 'ರೋಬೋ 2', ಅಲ್ಲು ಅರ್ಜುನ್ 'ಪುಷ್ಪ 2' ಸಿನಿಮಾಗಳು ಕೂಡ ಸೇರಿಕೊಂಡಿವೆ. ಕರ್ನಾಟಕದ ವಿತರಕರ ವಲಯದಿಂದ ಸಿಕ್ಕಿರುವ ಮಾಹಿತಿ ಹೀಗಿದೆ.
ಎಂದಿರನ್-₹9 ಕೋಟಿ
ರೋಬೋ 2- ₹36 ಕೋಟಿ
ಜೈಲರ್- ₹18-21 ಕೋಟಿ
ಬಾಹುಬಲಿ -₹16 ಕೋಟಿ
ಸಾಹೋ- ₹16 ಕೋಟಿ
ಪುಷ್ಪ - ₹16 ಕೋಟಿ
ಪುಷ್ಪ 2- ₹36 ಕೋಟಿ
'ಜೈಲರ್ 2' ಟಾರ್ಗೆಟ್ ಏನು?
'ಪೆದ್ದಿ' ಹಿಂದೇನೆ ರಿಲೀಸ್ ಆಗಲಿರುವ ಮತ್ತೊಂದು ಸಿನಿಮಾ 'ಜೈಲರ್ 2'. ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ನೆಲ್ಸನ್ ದಿಲೀಪ್ ಕುಮಾರ್ ಕಾಂಬಿನೇಷನ್ ಸಿನಿಮಾಗೆ ಕ್ರೇಜ್ ಜೋರಾಗಿದೆ. ಹೀಗಾಗಿ ಈಗಾಗಲೇ ನಿರ್ಮಾಣ ಸಂಸ್ಥೆ ಸಿನಿಮಾಗೆ ₹36 ಕೋಟಿ ರೂಪಾಯಿ ಡಿಮ್ಯಾಂಡ್ ಇಟ್ಟಿದೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ. ಅಸಲಿಗೆ ಈ ಬಗ್ಗೆ ಅಧಿಕೃತ ಇನ್ನೂ ಸಿಕ್ಕಿಲ್ಲ.


Click it and Unblock the Notifications
