ನಟ ರಮೇಶ್ ಅರವಿಂದ್‌ರಿಂದ ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ ಕೃತಿ 'ನೋಡಲು ಮರೆಯದಿರಿ, ಮರೆತು ನಿರಾಶರಾಗದಿರಿ' ಲೋಕಾರ್ಪಣೆ
ಸಿನಿಮಾ ಪತ್ರಕರ್ತ ಡಾ.ಶರಣು ಹುಲ್ಲೂರು ಈಗಾಗಲೇ ಸಿನಿಮಾಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಆ ಎಲ್ಲಾ ಕೃತಿಗಳಿಗೂ ಓದುಗರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಬೆನ್ನಲ್ಲೇ ಮತ್ತೊಂದು ಕೃತಿ ಲೋಕಾರ್ಪಣೆಗೊಂಡಿದೆ.
'ಕನ್ನಡದ 100 ಸ್ಮರಣೀಯ ಸಿನಿಮಾಗಳು-ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ' ಹೆಸರಿನ ಕೃತಿಯನ್ನು ಇತ್ತೀಚೆಗೆ ಕನ್ನಡದ ಜನಪ್ರಿಯರ ನಟ ರಮೇಶ್ ಅರವಿಂದ್ ಹಾಗೂ ಹಿರಿಯ ಪತ್ರಕರ್ತ ಜೋಗಿ ಲೋಕಾರ್ಪಣೆ ಮಾಡಿದ್ದಾರೆ.

ಈ ಕೃತಿಯಲ್ಲಿ ಸುಮಾರು ನೂರು ಸಿನಿಮಾಗಳ ಬಗ್ಗೆ ವಿಶ್ಲೇಷಣೆ ಇದೆ. ಈ ನೂರು ಸಿನಿಮಾಗಳನ್ನು ಯಾಕೆ ನೋಡಬೇಕು? ಆ ಸಿನಿಮಾದಲ್ಲಿರುವ ವಿಶೇಷತೆಯೇನು? ಅನ್ನು ತಿಳಿಸಲಾಗಿದೆ. ಇದರೊಂದಿಗೆ ಸಿನಿಮಾದ ಬಗ್ಗೆ ಅಪರೂಪದ ಆಸಕ್ತಿಕರ ಸಂಗತಿಗಳು ಕೂಡ ಇವೆ.
ಕನ್ನಡದಲ್ಲಿ ಆರಂಭ ಆಗಿದ್ದ ಮೂಕಿ ಚಿತ್ರಗಳ ಕಾಲದಿಂದ ಹಿಡಿದು ಕಳೆದ ವರ್ಷದವರೆಗೆ ಬಿಡುಗಡೆಯಾದವುಗಳ 100 ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪುಸ್ತಕದಲ್ಲಿ ಇದೂವರೆಗೂ ನೋಡಿರದ ಸಿನಿಮಾಗಳ ಎಕ್ಸ್‌ಕ್ಲೂಸಿವ್ ಫೋಟೋಗಳನ್ನು ಬಳಸಿಕೊಳ್ಳಲಾಗಿದೆ.
"ಶರಣು ಹುಲ್ಲೂರು ಅವರನ್ನು ಹಲವು ವರ್ಷಗಳಿಂದ ಕಂಡಿದ್ದೇನೆ. ಅವರು ಸಿನಿಮಾಗಳನ್ನು ಗ್ರಹಿಸುವ ರೀತಿ, ಅವುಗಳ ವಿಶ್ಲೇಷಣೆ ಮತ್ತು ಸಿನಿಮಾ ನೋಡಿಸುವ ಆಸಕ್ತಿಯೇ ಇಂಥದ್ದೊಂದು ಪುಸ್ತಕ ಬರುವುದಕ್ಕೆ ಸಾಧ್ಯ. 'ನೋಡಲು ಮರೆಯದಿರಿ ಮರೆತು ನಿರಾಶಾರಾಗದಿರಿ' ಕೃತಿಯಲ್ಲಿ ಅಪರೂಪದ ಸಿನಿಮಾಗಳ ಕುರಿತಾಗಿ ಬರೆದಿದ್ದಾರೆ. ಹಾಗಾಗಿ ಈ ಪುಸ್ತಕವನ್ನು ಓದಲು ಮರೆಯದಿರಿ ಮರೆತು ನಿರಾಶಾರಾಗದಿರಿ" ಎಂದರು ನಟ ರಮೇಶ್ ಅರವಿಂದ್ ಪುಸ್ತಕ ಬಿಡುಗಡೆ ಬಳಿಕ ವಿವರಿಸಿದ್ದಾರೆ.
"ಆ ಕಾಲ ಮತ್ತು ಈ ಕಾಲದ ಮೆಚ್ಚಿನ ನೂರು ಸಿನಿಮಾಗಳನ್ನು ಗೆಳೆಯ, ಸಹೋದ್ಯೋಗಿ ಶರಣು ಹುಲ್ಲೂರು ಈ ಪುಸ್ತಕದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ನನ್ನ ಮೆಚ್ಚಿನ ಸಿನಿಮಾಗಳು ಇಲ್ಲಿರುವುದನ್ನು ನೋಡಿ ರೋಮಾಂಚನಗೊಂಡಿದ್ದೇನೆ. ನಾನು ಮೆಚ್ಚಿದ ಕೆಲವು ಸಿನಿಮಾಗಳು ಇಲ್ಲಿಲ್ಲವಲ್ಲ ಅಂತನೂ ಆಶ್ಚರ್ಯಪಟ್ಟಿದ್ದೇನೆ. ಈ ಸಿನಿಮಾ ನನಗೆ ನೆನಪೇ ಇರಲಿಲ್ಲವಲ್ಲ ಅಂತ ಬೆರಗಾಗಿದ್ದೇನೆ. ಶರಣು ಹುಲ್ಲೂರು ಅಸಾಧ್ಯ ಜೀವಂತಿಕೆಯ, ಹೊಸತನಗಳ ಹುಡುಕಾಟದ, ಬರೆಯುವ ಹುರುಪು ಉಳಿಸಿಕೊಂಡ ಲವಲವಿಕೆಯ ಗೆಳೆಯ. ಈ ಪುಸ್ತಕ ಅವರ ಸಿನಿಮಾ ಪ್ರೀತಿಗೆ ಮತ್ತೊಂದು ಸಾಕ್ಷಿ. ಇದು ಚಿಗುರಿಸಿದ ನೆನೆಪುಗಳಲ್ಲಿ ನಾನು ನನ್ನ ತಾರುಣ್ಯಕ್ಕೆ ಮರಳಿದ್ದೇನೆ" ಎಂದು ಹಿನ್ನುಡಿಯಲ್ಲಿ ಜೋಗಿ ಬರೆದು ಶುಭ ಹಾರೈಸಿದ್ದಾರೆ.
ಬೆಂಗಳೂರಿನ ಸಾವಣ್ಣ ಪ್ರಕಾಶನ 'ನೋಡಲು ಮರೆಯದಿರಿ ಮರೆತು ನಿರಾಶಾರಾಗದಿರಿ' ಪುಸ್ತಕವನ್ನು ಹೊರತಂದಿದೆ. ಈ ಹಿಂದೆ ಇದೇ ಪ್ರಕಾಶನದಿಂದ ಶರಣು ಹುಲ್ಲೂರು ಬರೆದಿದ್ದ 'ಅಂಬರೀಶ್' ಬಯೋಗ್ರಫಿ ಮತ್ತು 'ನೀನೇ ರಾಜಕುಮಾರ' ಪುನೀತ್ ರಾಜಕುಮಾರ್ ಬಯೋಗ್ರಫಿಯನ್ನು ಹೊರ ತಂದಿದ್ದರು.


Click it and Unblock the Notifications











