ಯಪ್ಪಾ..ರೂಮರ್ ಹುಟ್ಕೊಂಡ್ರೆ, ಹಿಂಗೂ ಕ್ಲಾರಿಟಿ ಕೊಡ್ಬಹುದು; ಒಂದು ವಿಡಿಯೋದಲ್ಲಿ 2 ಸಂದೇಶ ಕೊಟ್ಟ ರಮ್ಯಾ-ವಿನಯ್
ಮೋಹಕತಾರೆ ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ಡೇಟಿಂಗ್ ಮಾಡುತ್ತಿದ್ದಾರಾ? ಇತ್ತೀಚೆಗೆ ರಮ್ಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿನಯ್ ರಾಜ್‌ಕುಮಾರ್ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದರು. ಇತ್ತ ವಿನಯ್ ಕೂಡ ರಮ್ಯಾ ಕುರಿತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಇದನ್ನೆಲ್ಲ ನೋಡಿ ಇವರಿಬ್ಬರು ಇಷ್ಟೊಂದು ಕ್ಲೋಸ್ ಆಗಿದ್ದರು ಹೇಗೆ ಅನ್ನೋ ಅನುಮಾನ ಅಂತ ಅವರ ಅಭಿಮಾನಿಗಳಿಗೇ ಹುಟ್ಟಿಕೊಂಡಿತ್ತು. ಇಬ್ಬರೂ ಯಾವಾಗ ಒಟ್ಟಿಗೆ ಕಾಣಿಸಿಕೊಂಡರೋ ಅಲ್ಲಿಂದ ಅಈ ಅನುಮಾನ ಇನ್ನಷ್ಟು ಹೆಚ್ಚಾಯ್ತಾ ಹೋಯ್ತು.
ಕೊನೆಗೊಮ್ಮೆ ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ಇಬ್ಬರೂ ಡೇಟಿಂಗ್ ಮಾಡುತ್ತಿರಬಹುದು ಅನ್ನೋ ನಿರ್ಧಾರಕ್ಕೂ ಬಂದರು. ಮಾಧ್ಯಮಗಳಲ್ಲೂ ಸಿಕ್ಕಾಪಟ್ಟೆ ಸುದ್ದಿ ಹರಿದಾಡುವುದಕ್ಕೆ ಶುರುವಾಗಿತ್ತು. ಈ ಗ್ಯಾಪ್‌ನಲ್ಲಿ ದರ್ಶನ್ ಅಭಿಮಾನಿಗಳ ವಿರುದ್ಧ ರಮ್ಯಾ ಹೋರಾಟಕ್ಕೆ ನಿಂತಾಗ ವಿನಯ್ ರಾಜ್‌ಕುಮಾರ್ ಮೊದಲು ಬೆಂಬಲಕ್ಕೆ ಬಂದಿದ್ದರು. ಈ ಘಟನೆ ಇನ್ನೂ ಉಪ್ಪು ಖಾರ ಹಾಕಿತ್ತು.

ಇಷ್ಟೆಲ್ಲ ಆಗುತ್ತಿದ್ದಾಗಲೇ ಮೋಹಕತಾರೆ ರಮ್ಯಾ ಮತ್ತೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಕ್ಲಾರಿಟಿ ಕೊಡುವುದಕ್ಕೆ ಮುಂದಾದರು. ಆದರೆ, ಒಪ್ಪಿಕೊಳ್ಳುವುದಕ್ಕೆ ನೆಟ್ಟಿಗರು ರೆಡಿಯಿರಲಿಲ್ಲ. ಕಮೆಂಟ್ ಬಾಕ್ಸ್‌ನಲ್ಲಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಹರಿದು ಬರುವುದಕ್ಕೆ ಶುರುವಾಗಿದ್ದವು. ಇನ್ನು ಇದು ಬೇರೆ ಹಾದಿಯೇ ಹಿಡಿಯುತ್ತಿದೆ ಅಂತ ಗೊತ್ತಾಗುತ್ತಿದ್ದಂತೆ ಇಬ್ಬರೂ ಸೇರಿ ಒಂದು ವಿಡಿಯೋ ಮಾಡಿದ್ದಾರೆ. ಒಂದು ವಿಡಿಯೋ.. ಎರಡು ಸಂದೇಶವನ್ನು ಹೊತ್ತು ಬಂದಂತೆ ಇದೆ. ಅದೇನು ಅಂತ ನೋಡುವುದಾರೇ,
ಮತ್ತೆ ಒಟ್ಟಿಗೆ ಕಂಡ ರಮ್ಯಾ-ವಿನಯ್
ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ಇಬ್ಬರೂ ನಾವು ಒಳ್ಳೆ ಸ್ನೇಹಿತರು ಸಾರಿ ಹೇಳಿದ್ದರು. ಆದರೆ, ನೆಟ್ಟಿಗರು ಮಾತ್ರ ಒಪ್ಪಿಕೊಳ್ಳುವುದಕ್ಕೆ ರೆಡಿಯಿರಲಿಲ್ಲ. ಒಮ್ಮೆಯಂತೂ ರಮ್ಯಾ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮದೇ ಸ್ಟೈಲ್‌ನಲ್ಲೊಂದು ಪೋಸ್ಟ್ ಹಾಕಿದ್ದರು. ಅದಕ್ಕೂ ಕಮೆಂಟ್‌ಗಳು ಉಲ್ಟಾ-ಸೀತಾ ಬರುವುದಕ್ಕೆ ಶುರುವಾಗಿದ್ದವು. ಅದಕ್ಕೆ ಇಬ್ಬರೂ ಸೇರಿ ಮಾಸ್ಟರ್ ಪ್ಲ್ಯಾನ್ ಮಾಡಿ ಒಂದು ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಈ ಟ್ರೆಂಡ್ ಆಗುತ್ತಿದೆ.
53 ನಿಮಿಷದ ಹಿಂದೆ ರಮ್ಯಾಗೊಂದು ಮೆಸೇಜ್
"ಏನು ನಿನಗೆ ರಿಂಗ್ ಕೊಡಬೇಕು ಅಂತ ಅನಿಸಿತು". ರಮ್ಯಾ ಹೀಗೆ ಡೈಲಾಗ್ ಬಿಡುವುದರಿಂದಲೇ ಈ ವಿಡಿಯೋ ಶುರುವಾಗಿತ್ತೆ. ಹಾಗೇ ರಿವೈಂಡ್ ಪ್ಲೇ ಆಗಿ 53 ನಿಮಿಷಗಳ ಹಿಂದೆ ವಿನಯ್ ರಾಜ್‌ಕುಮಾರ್ ಮೆಸೇಜ್ ಮಾಡಿ ರಮ್ಯಾಗೆ ತಾನು ಕಳಿಸಿದ ಲೋಕೇಶನ್‌ಗೆ ಕರೆಸಿಕೊಳ್ಳುತ್ತಾರೆ. ಸೀದಾ ಜ್ಯುವೆಲರಿ ಶಾಪ್‌ಗೆ ನುಗ್ಗಿದ ರಮ್ಯಾ-ವಿನಯ್ ಇಬ್ಬರೂ ಡೈಮಂಡ್ ರಿಂಗ್ ಬಗ್ಗೆ ಮಾತಾಡುತ್ತಾರೆ. ಆ ಕಟ್ಟು, ಈ ಕಟ್ಟು ಅಂತ ಶುರುವಾಗುತ್ತೆ. ರಿಂಗ್ ಸೆಲೆಕ್ಟ್ ಮಾಡೋಕೆ ರಮ್ಯಾಗೆ ವಿನಯ್ ಬಿಟ್ಟು ಬಿಡುತ್ತಾರೆ. ಆಗಲೇ "ನಿಂಗ್ಯಾಕೆ ರಿಂಗ್ ಕೊಡಬೇಕು ಅಂತ ಅನಿಸಿತು" ಅಂತ ರಮ್ಯಾ ಕೇಳಿದಾಗ, ಓಹೋ ನಾವು ಅಂದ್ಕೊಂಡಿದ್ದು ನಿಜ ಆಯ್ತು ಅಂದ್ಕೊಂಡ ನೆಟ್ಟಿಗರಿಗೆ ವಿನಯ್ ಡೈಲಾಗ್ ಬಿಗ್ ಟ್ವಿಸ್ಟ್ ಕೊಡುತ್ತೆ.
ಅವಳನ್ನು ಮೀಟ್ ಮಾಡಿ 3 ವರ್ಷ ಆಯ್ತು
ಹೌದು, ವಿನಯ್ ರಾಜ್‌ಕುಮಾರ್ ಡೈಲಾಗ್ ಇದೇನೆ. "ಅವಳನ್ನು ಮೀಟ್ ಮಾಡಿ 3 ವರ್ಷ ಆಯ್ತಲ್ಲ. ಅದಕ್ಕೆ ಈ ಬಾರಿ ಚೆನ್ನಾಗಿರೋದು ಏನಾದರೂ ಕೊಡೋಣ ಅಂತ". ಈ ಡೈಲಾಗ್ ನೆಟ್ಟಿಗರ ಲೆಕ್ಕಾಚಾರವನ್ನೇ ತಲೆ ಕೆಳಗೆ ಮಾಡಿಬಿಡ್ತು. ಕೊನೆಗೂ ಒಂದು ರಿಂಗ್ ಸೆಲೆಕ್ಟ್ ಆಯ್ತು. ವಿನಯ್ ರಾಜ್‌ಕುಮಾರ್ ಲವ್‌ನಲ್ಲಿ ಬಿದ್ದಿರೋದು ಕೂಡ ರಿವೀಲ್ ಆಯ್ತು. ಈಗ ಹುಟ್ಕೊಂಡಿರೋ ಹೊಸ ಪ್ರಶ್ನೆ ವಿನಯ್ ಪ್ರೀತಿಸ್ತಿರೋ ಹುಡುಗಿ ಯಾರು? ಅನಂತು ಮನಸ್ಸು ಕದ್ದ ನುಸ್ರತ್ ಯಾರು? ಅಂತ ತಲೆಗೆ ಹುಳಬಿಟ್ಕೊಂಡಿದ್ದಾರೆ.
ಏನಿಲ್ಲ.. ಏನಿಲ್ಲ..
ರಮ್ಯಾ ಹಾಗೂ ವಿನಯ್ ರಾಜ್‌ಕುಮಾರ್ ನಡುವೆ ಹಬ್ಬಿದ್ದ ವದಂತಿಗಳೆಲ್ಲ ಸುಳ್ಳು. ಇದನ್ನು ಎಫೆಕ್ಟಿವ್ ಆಗಿ ಹೇಳ್ಬೇಕಿತ್ತು. ಹಾಗೇ ಗೊತ್ತಾಗದ ಹಾಗೆ ತನ್ನ ಲವ್ ಮ್ಯಾಟರ್ ಅನ್ನೂ ಗೊತ್ತು ಮಾಡಿಸಬೇಕಿತ್ತು. ಅಲ್ಲಿಗೆ ಒಂದು ವಿಡಿಯೋಗೆ ಎರಡು ಹಕ್ಕಿಗಳನ್ನು ಹೊಡೆದು ಆಗಿತ್ತು. ಆದರೆ, ನೆಟ್ಟಿಗರಿಗೆ ಒಂದು ವಿಷಯಕ್ಕೆ ಕ್ಲಾರಿಟಿ ಸಿಕ್ಕರೂ, ಇನ್ನೊಂದು ವಿಷಯಕ್ಕೆ ತಲೆಗೆ ಹುಳ ಬಿಟ್ಟುಕೊಂಡಂತಾಗಿದೆ.


Click it and Unblock the Notifications











