"ವಿಜಿ ಒತ್ತಡದಲ್ಲಿ ಪೋಸ್ಟ್ ಹಾಕಿರಬೇಕು"; ದರ್ಶನ್ ಫ್ಯಾನ್ಸ್ ವಿರುದ್ಧ ದೂರು ಕೊಟ್ಟ ಬಳಿಕ ರಮ್ಯಾ ಪ್ರತಿಕ್ರಿಯೆ
ದರ್ಶನ್ ಜಾಮೀನು ಅರ್ಜಿ ರದ್ದು ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ದರ್ಶನ್‌ಗೆ ನೀಡಿದ ಜಾಮೀನು ರದ್ದಾದರೆ, ಮತ್ತೆ ಜೈಲಿಗೆ ಹೋಗುತ್ತಾರಾ? ಎನ್ನುವ ಅತಂಕ ಅವರ ಆಪ್ತರಲ್ಲಿ ಮನೆ ಮಾಡಿದೆ. ಈ ಮಧ್ಯೆ ದರ್ಶನ್ ಅಭಿಮಾನಿಗಳ ವಿರುದ್ಧ ಇಬ್ಬರು ಸೆಲೆಬ್ರೆಟಿಗಳು ತಿರುಗಿಬಿದ್ದಿದ್ದಾರೆ. ಇದು ಕೂಡ ದರ್ಶನ್‌ಗೆ ಕಂಟಕವಾಗುವ ಸಾಧ್ಯತೆಯಿದೆ. ಅದರಲ್ಲಿ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಖಡಕ್ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ದರ್ಶನ್ ಜಾಮೀನು ವಿಚಾರವಾಗಿ ಸುಪ್ರೀಂ ಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಅಶ್ಲೀಲ ಪದಗಳನ್ನು ಬಳಸಿ ದರ್ಶನ್ ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಇದನ್ನು ನೋಡಿ ಕೆಂಡಾಮಂಡಲ ಆಗಿರುವ ರಮ್ಯಾ ಇಂದು (ಜುಲೈ 28) ಸೈಬರ್ ಠಾಣೆಯ ಮೆಟ್ಟಿಲೇರಿ ದರ್ಶನ್ ಅಭಿಮಾನಿಗಳ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

ರಮ್ಯಾ ಅವರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದ ಸುಮಾರು 43 ಖಾತೆಗಳ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ರಮ್ಯಾಗೆ ಬೆದರಿಕೆ ಒಡ್ಡುವಂತಿದ್ದ ಕಮೆಂಟ್‌ಗಳನ್ನು ಕ್ರೂಢೀಕರಿಸಿ, ಅಂತಹವುಗಳನ್ನು ಮಾತ್ರ ದೂರಿನಲ್ಲಿ ದಾಖಲು ಮಾಡಿದ್ದಾರೆ. ಬೆಂಗಳೂರಿನ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ ಬಳಿಕ ರಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಈ ವೇಳೆ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್‌ಗೂ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ರೇಣುಕಾಸ್ವಾಮಿಗೂ ಇವರಿಗೂ ವ್ಯತ್ಯಾಸವಿಲ್ಲ"
"ಸುಪ್ರೀಂ ಕೋರ್ಟ್‌ನವರು ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದರು. ಅದನ್ನು ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ನಲ್ಲಿ ನಾನು ಶೇರ್ ಮಾಡಿದ್ದೆ. ಸುಪ್ರೀಂ ಕೋರ್ಟ್‌ನಿಂದ ಸಾಮಾನ್ಯ ಜನರಿಗೆ ಎಲ್ಲೋ ಒಂದು ಕಡೆ ಹೋಪ್ ಇದೆ. ನಮಗೆ ನ್ಯಾಯ ಸಿಗುತ್ತೆ ಅಂತ ಹೇಳಿದ್ದೆ. ಅದಾದ್ಮೇಲೆ ಟ್ರೋಲ್‌ಗಳನ್ನು ಶುರು ಮಾಡಿಕೊಂಡರು. ಸೆಲೆಬ್ರೆಟಿ ಆದ್ಮೇಲೆ ಟ್ರೋಲ್ ಇದ್ದೇ ಇರುತ್ತೆ. ಆದರೆ, ನಾನು ಈ ಮಟ್ಟಕ್ಕೆ ಎಕ್ಸ್‌ಪೀರಿಯನ್ಸ್ ಮಾಡಿರಲಿಲ್ಲ. ನನಗೆ ರೇಣುಕಾಸ್ವಾಮಿಗೂ ಇವರು ಮೆಸೇಜ್ ಮಾಡುವುದಕ್ಕೂ ವ್ಯತ್ಯಾಸನೇ ಇಲ್ಲ ಅಂತ ಅನಿಸಿತು. ನನಗೆ ಈ ರೀತಿ ಕಳಿಸುತ್ತಾರೆ ಅಂದ್ಮೇಲೆ, ಸಾಮಾನ್ಯ ಹೆಣ್ಣು ಮಕ್ಕಳಿಗೆ ಯಾವ ರೀತಿ ಕಳಿಸುತ್ತಿರಬಹುದು. ನಮ್ಮ ಸಮಾಜ ಎಷ್ಟು ಕೀಳು ಮಟ್ಟಕ್ಕೆ ಬಂದಿದೆ ಅಂತ ನನಗೆ ಬೇಸರ ಆಯ್ತು. ಹಾಗಾಗಿ ಇದನ್ನು ಹಾಗೇ ಸುಮ್ಮನೆ ಬಿಡಬಾರದು ಅಂತ ಕಮಿಷನರ್ ಸಾಹೇಬರಿಗೆ ನಾನು ದೂರನ್ನು ಕೊಟ್ಟಿದ್ದೇನೆ." ಎಂದು ರಮ್ಯಾ ಹೇಳಿದ್ದಾರೆ.
"ನ್ಯಾಯ ಸಿಗುತ್ತೆ ಎನ್ನುವ ನಂಬಿಕೆಯಿದೆ"
"ಕಮಿಷನರ್ ಆಫೀಸ್‌ನಲ್ಲಿ ಸೈಬರ್ ಕ್ರೈಂ ಡಿಪಾರ್ಟ್‌ಮೆಂಟ್ ಇದೆ. ಅಲ್ಲಿಗೆ ಅವರು ಈ ದೂರನ್ನು ಫಾರ್ವಡ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಅವರು ಆಕ್ಷನ್ ತೆಗೆದುಕೊಳ್ಳುತ್ತೇನೆ ಅಂತನೂ ಹೇಳಿದ್ದಾರೆ. ಇದರಿಂದ ನ್ಯಾಯ ಸಿಗುತ್ತೆ ಅಂತ ನಾನು ನಂಬಿದ್ದೇನೆ. ಇದರಿಂದ ಸಮಾಜಕ್ಕೆ ಒಂದು ಮೆಸೇಜ್ ಹೋಗಬೇಕು ಅಂತ ನಾನು ಇಷ್ಟ ಪಡುತ್ತೇನೆ." ಎಂದು ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

"ಹೆಣ್ಣು ಮಕ್ಕಳಿಗೂ ಫ್ರೀಡಂ ಬೇಕು"
"ದಿನಾ ನೋಡ್ತಾ ಇದ್ದೇನೆ. ಹೆಣ್ಣು ಮಕ್ಕಳ ಮೇಲೆನೇ ಅತ್ಯಾಚಾರ ಆಗುತ್ತಿದೆ. ಎಷ್ಟೋ ಹೆಣ್ಣು ಮಕ್ಕಳು ಆತ್ಮ*ಹತ್ಯೆಯನ್ನೂ ಮಾಡಿಕೊಂಡಿದ್ದಾರೆ. ಇದು ಆಗಬಾರದು. ಗಂಡು ಮಕ್ಕಳಿಗೆ ಎಷ್ಟು ಫ್ರೀಡಂ ಇದೆ. ಅಷ್ಟೇ ಫ್ರೀಡಂ ಹೆಣ್ಣು ಮಕ್ಕಳಿಗೂ ಇರಬೇಕು. ನನ್ನಿಂದ ಅಷ್ಟೇ ಅಲ್ಲ. ಎಲ್ಲಾ ಹೆಣ್ಣು ಪರ ಈ ದೂರನ್ನು ಕೊಟ್ಟಿದ್ದೇನೆ. ನಮ್ಮೆಲ್ಲರಿಗೂ ನ್ಯಾಯ ಸಿಗುತ್ತೆ ಎಂದು ನಾನು ನಂಬಿದ್ದೇನೆ." ಎಂದಿದ್ದಾರೆ.
"ಪ್ರಥಮ್ ದೂರು ಕೊಡಬೇಕು"
"ಪ್ರಥಮ್ ಅವರು ಬಂದು ದೂರನ್ನು ಕೊಡುತ್ತಾರೆ ಅಂತ ಅಂದುಕೊಂಡಿದ್ದೇನೆ. ಯಾಕಂದ್ರೆ, ನಾವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಅವರಿಗೂ ನಮಗೂ ವ್ಯತ್ಯಾಸ ಇರುವುದಿಲ್ಲ. ಸೆಲೆಬ್ರೆಟಿಗಳು ಹೇಗೆ ನಡೆದುಕೊಳ್ಳುತ್ತಾರೋ ಅದೇ ರೀತಿ ಅವರು ವರ್ತನೆ ಮಾಡುತ್ತಾರೆ. ಕಾನೂನು ಕೈಗೆ ತೆಗೆದುಕೊಂಡರೆ, ನೀವು ಹೇಗೆ ಸಂದೇಶ ಕೊಡುತ್ತೀರ?" ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.
"ವಿಜಿ ಒತ್ತಡಕ್ಕೆ ಬಿದ್ದು ಹಾಕಿರಬೇಕು"
"ವಿಜಯಲಕ್ಷ್ಮಿ ಹಾಗೂ ರಕ್ಷಿತಾ ಇಬ್ಬರೂ ನನ್ನ ಬಗ್ಗೆ ಹೇಳಿದ್ದಾರೆ ಅಂತ ನನಗೆ ಅನಿಸುವುದಿಲ್ಲ. ವಿಜಿ ಆತರ ಏನಾದರೂ ಹಾಕಿದ್ದರೆ, ಒತ್ತಡಕ್ಕೆ ಬಿದ್ದು ಹಾಕಿರಬಹುದು ಅನಿಸುತ್ತೆ. ಅವರು ಆತರ ಯಾವುದೇ ಸಂಬಂಧವನ್ನು ಇಟ್ಟುಕೊಂಡಿಲ್ಲ. ರಕ್ಷಿತಾ ಅವರು ಪೋಸ್ಟ್ ಮಾಡಿದ್ದನ್ನು ನನಗೆ ಯಾರೋ ಕಳಿಸಿದರು. ಆದರೆ, ಅದು ನನಗೆ ಸಂಬಂಧಿಸಿದಲ್ಲ ಎಂದು ಅನಿಸುತ್ತೆ." ಎಂದು ರಮ್ಯಾ ಹೇಳಿದ್ದಾರೆ.


Click it and Unblock the Notifications











