"ಭಟ್ರು ನರಿ..ಶಿವಣ್ಣ ಎಕ್ಸ್‌ಟ್ರಾರ್ಡಿನರಿ..ಜಗ್ಗೇಶ್ ಸರ್, ನಾನು ಕತ್ತೆಗಳು..ಶ್ರಮಜೀವಿಗಳು"; ನಿರ್ದೇಶಕ ಗುರುಪ್ರಸಾದ್
ಶಿವರಾತ್ರಿ ಹಬ್ಬಕ್ಕೆ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಮಾರ್ಚ್ 8ಕ್ಕೆ ರಿಲೀಸ್ ಆಗುತ್ತಿದೆ. ಹಾಗೇ ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಸಿನಿಮಾ ಕೂಡ ಅದೇ ದಿನ ರಿಲೀಸ್ ಆಗುತ್ತಿದೆ. ಹೀಗಾಗಿ ಶಿವರಾತ್ರಿಗೆ ಬಾಕ್ಸಾಫೀಸ್‌ನಲ್ಲಿ 'ರಂಗನಾಯಕ' Vs 'ಕರಟಕ ದಮನಕ' ಪೈಪೋಟಿಗೆ ಬೀಳಲಿವೆ.
'ಕರಟಕ ದಮನಕ' ಸಿನಿಮಾದಲ್ಲಿ ಶಿವಣ್ಣ ಹಾಗೂ ಪ್ರಭುದೇವ ಇದೇ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಹೀಗಾಗಿ ಈ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿದೆ. ಅದೇ ಇನ್ನೊಂದು ಕಡೆ 'ಮಠ','ಎದ್ದೇಳು ಮಂಜುನಾಥ' ಜೋಡಿ ಜಗ್ಗೇಶ್ ಹಾಗೂ ಗುರುಪ್ರಸಾದ್ ಅವರ ಮತ್ತೊಂದು ಸಿನಿಮಾ 'ರಂಗನಾಯಕ'ಗೂ ಅದೇ ಕುತೂಹಲವಿದೆ. ಹೀಗಾಗಿ ಈ ಸಿನಿಮಾಗಳಲ್ಲಿ ಯಾವುದರ ಕಡೆಗೆ ಪ್ರೇಕ್ಷಕರು ವಾಲುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.

ಕನ್ನಡದ ಎರಡು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರೋದ್ರಿಂದ ಗುರುಪ್ರಸಾದ್ ನಿರ್ದೇಶಕ ಯೋಗರಾಜ್ ಭಟ್ ಸವಾಲೆಸೆದಿದ್ದಾರೆ. ತೆರೆ ಹಿಂದೆ ಸ್ನೇಹಿತರಾಗಿರೋ ಇವರಿಬ್ಬರೂ ಶಿವರಾತ್ರಿಗೆ ಎದುರಾಳಿಗಳಾಗಿ ಬರುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಗುರುಪ್ರಸಾದ್ ವಿಡಿಯೋ ಮಾಡಿ ಈ ಕ್ಲ್ಯಾಶ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಭಟ್ರ 'ಮುಂಗಾರು ಮಳೆ'.. ಶಿವಣ್ಣನ 'ಓಂ' ಮಾಡಿಲ್ಲ
ನಿರ್ದೇಶಕ ಯೋಗರಾಜ್ ಭಟ್ ಹಾಗೂ ಶಿವಣ್ಣನ ಬಗ್ಗೆ 'ರಂಗನಾಯಕ' ನಿರ್ದೇಶಕ ಗುರುಪ್ರಸಾದ್ ಹಾಸ್ಯಸ್ಪದವಾಗಿ ಮಾತಾಡಿದ್ದಾರೆ. "ಯೋಗರಾಜ್ ಭಟ್ ದೈತ್ಯರು. ಅವರ 'ಮುಂಗಾರು ಮಳೆ' ನಾನು ಮಾಡಿಲ್ಲ. ಶಿವಣ್ಣ ಅವರ 'ಓಂ' ನಾನು ಮಾಡಿಲ್ಲ. ನಾನು ನನ್ನ ಸ್ಟ್ರಕ್ಚರ್‌ನಲ್ಲಿ ನಂದೇ ಸಿನಿಮಾ ಮಾಡಿದ್ದೇನೆ. ನಾವಿಬ್ಬರೂ ಈಗ ಎದುರಾಳಿಯಾಗಿ ಬರುತ್ತಿದ್ದೇವೆ. ಮೊನ್ನೆ ಸಿಕ್ಕಿದ್ರು. ಏನ್ರಿ ಹೀಗೆ ಮಾಡಿದ್ರಿ ಅಂತ ಕೇಳಿದೆ. ಅವರದ್ದೇ ಸ್ಟೈಲ್‌ನಲ್ಲಿ ಅನೌನ್ಸ್ ಮಾಡಿಬಿಟ್ಟಿದ್ದಾರೆ ಅಂದ್ರು." ಎಂದು ರಂಗನಾಯಕ ನಿರ್ದೇಶಕ ಗುರುಪ್ರಸಾದ್ ಹೇಳಿದ್ದಾರೆ.

"ಭಟ್ರಿಗೆ ಸವಾಲು ಹಾಕೋಣ ಅಂತಿದ್ದೀನಿ"
'ರಂಗನಾಯಕ' ಹಾಗೂ 'ಕರಟಕ ದಮನಕ' ಎರಡೂ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿರುವುದಕ್ಕೆ ಗುರುಪ್ರಸಾದ್ ನಿರ್ದೇಶಕ ಯೋಗರಾಜ್ ಭಟ್ಟರಿಗೆ ಸವಾಲೆಸೆದಿದ್ದಾರೆ. "ನಾನು ಪ್ರತ್ಯೇಕವಾಗಿ ಚಾಲೆಂಜ್ ಹಾಕೋಣ ಅಂತ ಇದ್ದೀನಿ. ಭಟ್ರು ನರಿ.. ಶಿವಣ್ಣ ಎಕ್ಸ್‌ಟ್ರಾರ್ಡಿನರಿ. ಈ ಕಡೆ ಎರಡು ಕತ್ತೆಗಳು. ನಾನೊಂದು, ಜಗ್ಗೇಶ್ ಸರ್ ಒಂದು. ಶ್ರಮ ಜೀವಿಗಳು. ಫಸ್ಟ್ ನಮ್ಮದು ನೋಡಿ. ಆಮೇಲೆ ಅವರದ್ದು ನೋಡಿ. ಆಮೇಲೆ ಕತ್ತೆ ಫೋಟೊದಲ್ಲಿ ದಿನವೂ ನನ್ನನ್ನು ನೋಡಿ ಯೋಗ ಬರುವುದು. ಇದನ್ನು ಪ್ರೋಮೊ ಮಾಡೋಣ ಅಂತ ಇದ್ದೀನಿ." ಎಂದು ಗುರುಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ.
ಭಟ್ಟರಿಗೆ ಗುರುಪ್ರಸಾದ್ ಹಾಕಿದ ಚಾಲೆಂಜ್ ಏನು?
"ಅಪ್ಪು ಸರ್.. ಜಗ್ಗೇಶ್ ಅವರ ಮಠ, ಮಂಜುನಾಥ ಫ್ಯಾನ್ ಅವರು. ರಂಗನಾಯಕ ಶೂಟಿಂಗ್‌ಗೆ ಬರ್ತೀನಿ ಅಂತ ಹೇಳಿದ್ರು. ಜಗ್ಗೇಶ್ ಸರ್ ಒಂದೇ ಒಂದು ಫೋನ್ ಮಾಡಿ ಕೊಟ್ಟಿದ್ದರು. ಅವತ್ತು ಚಿಕನ್ ಬಿರಿಯಾನಿ ಮಾಡಿಸೋಣ ಅಂತ ಇದ್ದೆವು. ಅವತ್ತು ಅವರು ಹೋದ್ರು ಅಂತ ಗೊತ್ತಾಯ್ತು. ಆ ಮೇಲೆ ಏನಾಯ್ತು ಅಂತ ಗೊತ್ತಾಯ್ತು. ಅದಕ್ಕೆ ಕರಟಕ ದಮನಕ ರಿಲೀಸ್ ದಿನ ಶಿವಣ್ಣನನ್ನು ಎತ್ತಾಕೊಂಡು ಹೋಗಿ ನಮ್ಮ ಸಿನಿಮಾ ಥಿಯೇಟರ್‌ಗೆ ಕೂರಿಸಬೇಕು ಅಂತ ಇದ್ದೀನಿ. ಇದೊಂದು ಚಾಲೆಂಜ್. ಭಟ್ರೇ ಚಾಲೆಂಜ್ ಒಪ್ಪಿಕೊಳ್ತೀರಾ?" ಎಂದು ಗುರುಪ್ರಸಾದ್ ಹೇಳಿದ್ದಾರೆ.
ಶಿವಣ್ಣ ಕೈಕಾಲಿ ಹಿಡಿದು ಸಿನಿಮಾ ತೋರಿಸ್ತೀವಿ
"ಕರಟಕ ದಮನಕದಲ್ಲಿ ಪ್ರಭುದೇವ ನಮ್ಮ ಕಂಟ್ರೋಲ್‌ನಲ್ಲಿ ಇಲ್ಲ. ಶಿವಣ್ಣನ ಕೈ ಕಾಲು ಹಿಡಿದು, ಅಣ್ಣ ಬಾರಣ್ಣ ಮಜಾ ಕೊಡ್ತೀನಿ ಬಾರಣ್ಣ ಅಂತ ಥಿಯೇಟರ್‌ಗೆ ಕರ್ಕೊಂಡು ಬರೋದು. ಯಾಕಂದ್ರೆ, ಮಠ, ಮಂಜುನಾಥ ಸಿನಿಮಾವನ್ನು ಮೊದಲ ಶಿವಣ್ಣನಿಗೆ ತೋರಿಸಿದ್ದೆವು." ಎಂದು ಈ ವಿಶೇಷ ವಿಡಿಯೋದಲ್ಲಿ ನಿರ್ದೇಶಕ ಗುರುಪ್ರಸಾದ್ ಹೇಳಿಕೊಂಡಿದ್ದಾರೆ.


Click it and Unblock the Notifications











