Devi Mahatme: ಎಲ್ಲಾ 'ದೇವಿ ಮಹಾತ್ಮೆ'.. ರಂಗಾಯಣ ರಘು ವೃತ್ತಿ ಬದುಕಿನಲ್ಲೇ ಹೊಸ ಅಧ್ಯಾಯ!
ರಂಗಾಯಣ ರಘು ಇತ್ತೀಚೆಗೆ ಒಪ್ಪಿಕೊಳ್ಳುತ್ತಿರುವ ಸಿನಿಮಾ ಮೇಲೆ ಒಂದು ಕಣ್ಣು ಇಟ್ಟಿದ್ದರೆ ಒಳ್ಳೆಯದು. ಯಾಕಂದ್ರೆ, ಇವರು ನಟಿಸುತ್ತಿರುವ ಸಿನಿಮಾಗಳು ಆ ಮಟ್ಟಿಗೆ ಗಮನ ಸೆಳೆಯುತ್ತಿವೆ. ಹಾಗಂತ ಇಲ್ಲಿ ರಂಗಾಯಣ ರಘು ನಟನೆಯ ಬಗ್ಗೆ ಮಾತಾಡುತ್ತಿಲ್ಲ. ಅದು ಹಲವು ವರ್ಷಗಳಿಂದ ಪ್ರೇಕ್ಷಕರು ನೋಡುತ್ತಲೇ ಬಂದಿದ್ದಾರೆ. ಆದರೆ, ಇತ್ತೀಚೆಗೆ ಕನ್ನಡದ ಫಿಲ್ಮ್ ಮೇಕರ್ಸ್ ಅವರಿಗಾಗಿಯೇ ಬರೆಯುತ್ತಿರುವ ಕಥೆಗಳು ಹೊಸ ಆಡಿಯನ್ಸ್ ಅನ್ನು ಹುಟ್ಟಾಕುತ್ತಿವೆ.
ರಂಗಾಯಣ ರಘು ಸಾಕಷ್ಟು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ದಾರೆ. ಪೋಷಕರಾಗಿ ಬಣ್ಣ ಹಚ್ಚಿದ್ದಾರೆ. ಇನ್ನು ಕೆಲವು ಸಿನಿಮಾಗಳಲ್ಲಿ ಖಳನಾಯಕನಾಗಿದ್ದೂ ಇದೆ. ಆದರೆ, ಇತ್ತೀಚೆಗೆ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ 'ಶಾಖಾಹಾರಿ'ಯ ಬಳಿಕ ಅವರ ಖದರ್ ಬದಲಾಗಿದೆ. ಅವರಿಗಾಗಿ ಫಿಲ್ಮ್ ಮೇಕರ್ಸ್ ಕಥೆ ಹೆಣೆಯುವುದಕ್ಕೆ ಶುರು ಮಾಡಿದ್ದಾರೆ.

ಯಾವುದೇ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ನಿಭಾಯಿಸಬಲ್ಲ ಈ ಹಿರಿಯ ನಟ ಮತ್ತೆ ಗಮನ ಸೆಳೆಯುತ್ತಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದೇವಿ ಮಹಾತ್ಮೆ' ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಹೊಂಬಾಳೆ ಮ್ಯೂಸಿಕ್‌ನಲ್ಲಿ ಬಿಡುಗಡೆಯಾಗಿರುವ ಒಂದು ನಿಮಿಷದ ಆಸು-ಪಾಸಿನಲ್ಲಿ ಇರುವ ಈ ಟೀಸರ್ ಬಗ್ಗೆನೇ ಈಗ ಚರ್ಚೆಯಾಗುತ್ತಿದೆ. ಅದರಲ್ಲೂ ರಂಗಾಯಣ ರಘು ಅವರ ಅಭಿನಯ ನೋಡಿ ಪ್ರೇಕ್ಷಕರು ಕಳೆದೇ ಹೋಗಿದ್ದಾರೆ.
'ದೇವಿ ಮಹಾತ್ಮೆ' ಟೀಸರ್ ಕಿಕ್
ಸ್ಯಾಂಡಲ್‌ವುಡ್ ಸಿನಿಮಾ 'ದೇವಿ ಮಹಾತ್ಮೆ' ಟೀಸರ್ ರಿಲೀಸ್ ಆಗುತ್ತಿದ್ದಂತೆ ರಂಗಾಯಣ ರಘು ಹೈಲೈಟ್ ಆಗಿದ್ದಾರೆ. ಈ ಕುತೂಹಲಕಾರಿ ಟೀಸರ್ ಈಗಾಗಲೇ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಮೇಲ್ನೋಟಕ್ಕೆ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಸಿನಿಮಾ ಅಂತ ಅನಿಸುತ್ತಿದೆ. ಅತೀ ಚಿಕ್ಕ ಟೀಸರ್ ಈಗಾಗಲೇ ಸಿನಿಮಾ ಬಗ್ಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸಿನಿ ಪ್ರಿಯರಿಗೆ ಒಂದು ಕಿಕ್ ಕೊಟ್ಟಿದೆ.
ರಂಗಾಯಣ ರಘು ಹೈಲೈಟ್
ಸ್ಯಾಂಡಲ್‌ವುಡ್‌ನ ಹಿರಿಯ ನಟ ರಂಗಾಯಣ ರಘು 'ದೇವ ಮಹಾತ್ಮೆ'ಯ ಹೀರೊ. 1 ನಿಮಿಷ 5 ಸೆಕೆಂಡ್ ಇರುವ ಟೀಸರ್‌ನಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಇದ್ದರೂ, ಇವುಗಳೊಂದಿಗೆ ರಂಗಾಯಣ ರಘು ಅವರ ಅಭಿನಯ, ಸಮುದ್ರ ತೀರ, ಹುಲಿ ವೇಷ ಟೀಸರ್ ಹೈಲೈಟ್ ಆಗಿದೆ. ಇನ್ನು ಸಸ್ಪೆನ್ಸ್-ಥ್ರಿಲ್ಲರ್‌ಗೆ ಟೀಸರ್‌ಗೆ ಲಿಕಿತ್ ಪ್ರಸಾದ್ ಶೆಟ್ಟಿ ಮ್ಯೂಸಿಕ್ ಸಖತ್ ಕಿಕ್ ಕೊಡುತ್ತಿವೆ. ರಂಗಾಯಣ ರಘು ಕರಿಯರ್‌ನಲ್ಲಿ ಇನ್ನೊಂದು ಅತ್ಯುತ್ತಮ ಸಿನಿಮಾ ಆಗುವುದರಲ್ಲಿ ಎರಡು ಮಾತಿಲ್ಲ.

ಅತ್ಯುತ್ತಮ ಸ್ಟಾರ್‌ಕಾಸ್ಟ್
'ಮರ್ಯಾದೆ ಪ್ರಶ್ನೆ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ನಾಗರಾಜ್ ಸೋಮಯಾಜಿ 'ದೇವಿ ಮಹಾತ್ಮೆ'ಯ ನಿರ್ದೇಶಕ. ಮತ್ತೊಂದು ವಿಶಿಷ್ಟ ಕಥೆಯನ್ನು ಹೊತ್ತು ತಂದಿದ್ದಾರೆ. ಟೀಸರ್ ಅಂತೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಉತ್ತಮ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಂಗಾಯಣ ರಘು ಜೊತೆ ಪ್ರತಿಮಾ ನಾಯಕ್, ಸುಂದರ್ ವೀಣಾ, ಅರವಿಂದ್ ಕುಪ್ಳಿಕರ್, ಬಾಸುಮ ಕೊಡಗು, ನಾಗೇಂದ್ರ ಶಾ, ಪಿಡಿ ಸತೀಶ್ ಚಂದ್ರ, ಪ್ರಶಾಂತ್ ಹಿರೇಮಠ, ಆದಿತ್ಯ ರಾಜ್ ರಘು ಪಾಂಡೇಶ್ವರ, ಪಲ್ಲವಿ ಮಂಜುನಾಥ್, ಶೈಲಶ್ರೀ ಮೂಲ್ಕಿ, ಶ್ವೇತಾ ಶ್ರೀನಿವಾಸ, ಮಹಾದೇವ ಹಡಪದ್, ಆಸಿಫ್ ಕ್ಷತ್ರಿಯ ನಟಿಸುತ್ತಿದ್ದಾರೆ.
ರಂಗಾಯಣ ರಘು 400ನೇ ಸಿನಿಮಾ
'ದೇವಿ ಮಹಾತ್ಮೆ' ಒಂದು ಕಡೆಯಾದರೆ, ಇನ್ನೊಂದು ಕಡೆ ರಂಗಾಯಣ ರಘು ಅವರ 400ನೇ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಆ ಸಿನಿಮಾಗೆ 'ಹೊಸ ಜೀವನ' ಎಂದು ಟೈಟಲ್ ಇಡಲಾಗಿದೆ. ಇದು ರಂಗಾಯಣ ರಘು ಅವರ ವೃತ್ತಿ ಬದುಕಿನ ಮತ್ತೊಂದು ಮೈಲಿಗಲ್ಲು ಎಂದು ಹೇಳಬಹುದು. ಮೋಹನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಒಟ್ನಲ್ಲಿ ರಂಗಾಯಣ ರಘು ಅವರಿಗೆ 'ದೇವಿ ಮಹಾತ್ಮೆ' ಕೈ ಹಿಡಿಯುವ ಎಲ್ಲಾ ಸಾಧ್ಯತೆಗಳೂ ಇವೆ.


Click it and Unblock the Notifications