ಮತ್ತೊಂದು ಮಲೆನಾಡು ಸೊಗಡಿನ ಥ್ರಿಲ್ಲರ್ ಕಥೆ.. 'ಶಾಖಾಹಾರಿ' ಸಿನಿಮಾದ ರಂಗಾಯಣ ರಘು ಲುಕ್ ಹೇಗಿದೆ ?
ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದರಲ್ಲಿ ರಂಗಾಯಣ ರಘು ಕೂಡ ಒಬ್ಬರು. ಇವರ ಅಭಿನಯದ ಬಗ್ಗೆ ವಿಶೇಷವಾಗಿ ಏನೂ ಹೇಳಬೇಕಿಲ್ಲ. ಕನ್ನಡದ ಸ್ಟಾರ್ ಸಿನಿಮಾಗಳಲ್ಲಿ ರಂಗಾಯಣ ರಘು ಇದ್ದರೆ ಮುಗೀತು. ಅಲ್ಲೊಂದು ನಗುವಿನ ಲೋಕವೇ ನಿರ್ಮಾಣವಾಗಿಬಿಡುತ್ತೆ.
ಕೆಲವು ದಿನಗಳ ಹಿಂದಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ 'ಬಾನದಾರಿಯಲಿ' ಸಿನಿಮಾದಲ್ಲಿ ರಂಗಾಯಣ ರಘು ನಟನೆಯನ್ನು ಸಿನಿಪ್ರಿಯರ ಹಾಡಿ ಹೊಗಳಿದ್ದರು. ಗೋಲ್ಡನ್ ಸ್ಟಾರ್ ಗಣೇಶ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡದ ಸ್ಟಾರ್ ನಟರೊಂದಿಗೆ ಮಿಂಚಿರೋ ನಟ ಮತ್ತೊಂದು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದುವೇ 'ಶಾಖಾಹಾರಿ'.

ಕೇವಲ ಪೋಷಕ ಪಾತ್ರದಲ್ಲಷ್ಟೇ ಅಲ್ಲ. ಈ ಹಿಂದೆ ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಸಾಧುಕೋಕಿಲಾ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದೆ. ಆದ್ರೀಗ 'ಶಾಖಾಹಾರಿ' ಅನ್ನೋ ವಿಶೇಷ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಇದೇ ಸಿನಿಮಾದ ರಂಗಾಯಣ ರಘು ಪಾತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಲುಕ್ ನೋಡಿದ ಸಿನಿಪ್ರಿಯರಲ್ಲಿ ಮತ್ತಷ್ಟು ಕೌತುಕ ಹೆಚ್ಚಾಗಿದೆ.
'ಶಾಖಾಹಾರಿ' ಸಿನಿಮಾ ಟೈಟಲ್ ಪೋಸ್ಟರ್ ಅನ್ನು ಯೋಗರಾಜ್ ಭಟ್ ರಿಲೀಸ್ ಮಾಡಿದ್ದರು. ಈಗ ರಂಗಾಯಣ ರಘು ಪಾತ್ರದ ಫಸ್ಟ್ ಲುಕ್ ಹೊರಬಿದ್ದಿದೆ. ಅಂದ್ಹಾಗೆ ಈ ಸಿನಿಮಾವನ್ನು ಸಂದೀಪ್ ಸುಂಕದ್ ನಿರ್ದೇಶನ ಮಾಡಿದ್ದಾರೆ. ಕಿರುಚಿತ್ರಗಳಿಗೆ ಆಕ್ಷನ್ ಕಟ್ ಹೇಳಿ ಅನುಭವವಿರುವ ಸಂದೀಪ್ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ಕ್ರಿಪ್ಟ್ ಹಾಗೂ ಕೋ ಡೈರೆಕ್ಷನ್ ಮಾಡಿದ ಅನುಭವ ಇವರಿಗೆ ಇದೆ.
'ಶಾಖಾಹಾರಿ' ಪೋಸ್ಟರ್ ನೋಡಿ ಕಥೆಯ ಬಗ್ಗೆ ಕುತೂಹಲ ಮೂಡುವುದು ಸಹಜ. ಶಿವಮೊಗ್ಗದ ತೀರ್ಥಹಳ್ಳಿಯ ಒಂದು ಊರಿನಲ್ಲಿ ನಡೆಯುವ ಕಥೆ. ಮಲೆನಾಡಿನಲ್ಲಿ ನಡೆಯುವ ಒಂದಿಷ್ಟು ನಿಗೂಢ ಘಟನೆಗಳ ಸುತ್ತಮುತ್ತ ಈ ಕಥೆಯನ್ನು ಹೆಣೆಯಲಾಗಿದೆ. ಅಂದ್ಹಾಗೆ ರಂಗಾಯಣ ರಘು ಹೋಟೆಲ್‌ನಲ್ಲಿ ಅಡುಗೆ ಮಾಡುವ ಭಟ್ಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ರಂಗಾಯಣ ರಘು ಜೊತೆಗೆ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಹಾಗೇ ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ 'ಶಾಖಾಹಾರಿ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಸಂದೀಪ್‌ಗೆ ಜೊತೆಗಾಗಿ ವಿಶ್ವಜಿತ್ ರಾವ್ ಕ್ಯಾಮರಾ, ಶಶಾಂಕ್ ನಾರಾಯಣ ಎಡಿಟಿಂಗ್, ಮಯೂರ್ ಅಂಬೆಕಲ್ಲು ಸಂಗೀತ ಈ ಸಿನಿಮಾಗಿದೆ. ಚಿತ್ರತಂಡದ ಪ್ರಕಾರ, ಈಗಾಗಲೇ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್‌ನಲ್ಲಿ ತಂಡ ಬ್ಯುಸಿಯಾಗಿದೆ. ಇಡೀ ಸಿನಿಮಾವನ್ನು ಮಲೆನಾಡಿನಲ್ಲೇ ಚಿತ್ರೀಕರಣ ಮಾಡಿದ್ದು, ಇಲ್ಲಿನವರೇ ಈ ಸಿನಿಮಾಗೆ ಕೆಲಸ ಮಾಡಿರೋದು ವಿಶೇಷ.


Click it and Unblock the Notifications











