'AI' ತಂತ್ರಜ್ಞಾನ ಬಳಸಿ ರೆಡಿ ಆಯ್ತು ಕನ್ನಡ ಸಿನಿಮಾ; ಬೆರಗು ಮೂಡಿಸಿದ 'ರಾಣಿ ಚೆನ್ನಮ್ಮ' ಟೀಸರ್
'AI' ತಂತ್ರಜ್ಞಾನ ವಿಶ್ವದಾದ್ಯಂತ ಹಲ್‌ಚಲ್ ಎಬ್ಬಿಸಿದೆ. ಈ ತಂತ್ರಜ್ಞಾನದಿಂದ ಕೆಲವರಲ್ಲಿ ಆತಂಕ ಮೂಡಿದೆ. ಇನ್ನು ಕೆಲವರಿಗೆ ಖುಷಿ ಕೊಟ್ಟಿದೆ. ಇದೇ ಎಐ ಅನ್ನು ಬಳಸಿಕೊಂಡು ದುಡಿಮೆ ಮಾಡುವುದಕ್ಕೂ ಶುರು ಮಾಡಿದ್ದಾರೆ. ಆದರೆ, ವಿಶ್ವದಾದ್ಯಂತ ಬಹುತೇಕ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಎಐ ಎಂದು ಆರೋಪ ಮಾಡಲಾಗುತ್ತಿದೆ. ಹೀಗಿದ್ದರೂ 'ಎಐ' ಕ್ರಿಯೇಟಿವ್ ಫೀಲ್ಡ್‌ನಲ್ಲಿ ಎಫೆಕ್ಟಿವ್ ಆಗಿ ಬಳಸಿಕೊಳ್ಳಲಾಗುತ್ತಿದೆ.
ಸಿನಿಮಾ ಒಂದು ಕ್ರಿಯೇಟಿವ್ ಫೀಲ್ಡ್. ಇಲ್ಲಿ ಎಐ ತಂತ್ರಜ್ಞಾನವನ್ನು ಬಳಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಆದ್ರೀಗ ಸಿನಿಮಾ ಮಂದಿಗೆ ಈ ತಂತ್ರಜ್ಞಾನದ ಸಾಮರ್ಥ್ಯ ಅರ್ಥ ಆಗಿದೆ. ಹೀಗಾಗಿ ತಮ್ಮ ಸಿನಿಮಾಗಳ ಕೆಲವು ದೃಶ್ಯಗಳಿಗೆ ಎಐ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಇಲ್ಲೊಂದು ಕನ್ನಡದ ತಂಡ ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಸಿನಿಮಾವನ್ನು ನಿರ್ಮಾಣ ಮಾಡಿದೆ. ಸಿನಿಮಾ ನಿರ್ಮಾಣದ ಜೊತೆ ಟೀಸರ್ ಅನ್ನೂ ರಿಲೀಸ್ ಮಾಡಲಾಗಿದೆ.

ಹೌದು, (AI) ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ಐತಿಹಾಸಿಕ 'ರಾಣಿ ಚೆನ್ನಮ್ಮ' ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದ ಟೀಸರ್ ಅನ್ನೂ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಹೆಸರು ಸೂಚಿಸುವಂತೆ ಇದು ಕಿತ್ತೂರಿನ ರಾಣಿ ಚೆನ್ನಮ್ಮನ ಕುರಿತಾದ ಸಿನಿಮಾ. ಈ ಐತಿಹಾಸಿಕ ಸಿನಿಮಾ್ ಟೀಸರ್ ನೋಡಿ ಸಿನಿಮಾ ಮಂದಿನೇ ದಂಗಾಗಿದ್ದಾರೆ. ಇನ್ನು ಪ್ರೇಕ್ಷಕರು ಕೂಡ ಥ್ರಿಲ್ ಆಗಿದ್ದಾರೆ. ಹಾಗಿದ್ದರೆ, ಈ ಟೀಸರ್‌ನ ವಿಶೇಷತೆ ಏನು? ತಿಳಿಯುವುದಕ್ಕೆ ಮುಂದೆ ಓದಿ.
'ರಾಣಿ ಚೆನ್ನಮ್ಮ' ಕನ್ನಡದಲ್ಲಿ ನಿರ್ಮಾಣಗೊಂಡಿರುವ ಮತ್ತೊಂದು ಐತಿಹಾಸಿಕ ಸಿನಿಮಾ. ಕಿತ್ತೂರಿನ ರಾಣಿ ಚೆನ್ನಮ್ಮನ ಧೈರ್ಯ, ಬ್ರಿಟಿಷರ ವಿರುದ್ಧ ಹೋರಾಟ ಹಾಗೂ ಸ್ವಾಭಿಮಾನವನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇದು ಕಿತ್ತೂರಿನ ರಾಣಿ ಚೆನ್ನಮ್ಮನ ಜೀವನಗಾಥೆಯೂ ಕೂಡ ಹೌದು. ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತೆ ಐತಿಹಾಸ ಘಟನೆಗಳಿಗೆ ಮರುಜೀವ ನೀಡುವ ಪ್ರಯತ್ನವಾಗಿದೆ.

ಈ ಸಿನಿಮಾಗೆ "ಕಿತ್ತೂರಿನ ಗತ್ತು... ದೇಶಕ್ಕೆ ಗೊತ್ತು" ಎಂಬ ಸಬ್ ಟೈಟಲ್ ಅನ್ನು ಇಡಲಾಗಿದ್ದು, "ಕೇವಲ ಕಥೆಯನ್ನು ಹೇಳುವುದಲ್ಲ. ಇದು ಇತಿಹಾಸದ ಘರ್ಜನೆ, ಒಂದು ಪೀಳಿಗೆಯನ್ನು ಎಚ್ಚರಿಸುವ ಕೂಗು. ಇದು ಐತಿಹಾಸಿಕ ಘಟನೆಗಳ ಪುನರ್‌ಸೃಷ್ಟಿ ಮಾತ್ರವಲ್ಲ .ಇದು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಭಾರತದ ಮೊದಲನೇ ಮಹಿಳೆಯ ಮನೋಬಲ, ನಾಯಕತ್ವ ಮತ್ತು ಸ್ವಾತಂತ್ರ್ಯದ ಆಕಾಂಕ್ಷೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ" ಎಂದು ಸಿನಿಮಾ ತಂಡ ಹೇಳಿಕೊಂಡಿದೆ. ಅಂದ್ಹಾಗೆ ಈ ಸಿನಿಮಾವನ್ನು ಶ್ವೇತಾ ಶೆಟ್ಟಿ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ದೇಶನ ಮಾಡಿದ್ದಾರೆ. ಲತಾ ಜೈಪ್ರಕಾಶ್ ಬಿಎಂಕೆ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶ್ರೀಹರಿ ಸಿನಿಮಾಗೆ ಸಂಗೀತ ನೀಡಿದ್ದರೆ, ಶಿವನಂಜೆಗೌಡ ಮತ್ತು ಡಾ|| ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಸಂಜೀವ್ ರೆಡ್ಡಿ ಎಡಿಟಿಂಗ್ ಈ ಸಿನಿಮಾಗಿದೆ.
ಇನ್ನು ಸಿನಿಮಾದ ದೃಶ್ಯ ವಿನ್ಯಾಸ, ಪಾತ್ರಗಳು, ಯುದ್ಧದ ಸನ್ನಿವೇಶಗಳು ಸೇರಿದಂತೆ ಬಹುತೇಕ ಸಿನಿಮಾವನ್ನು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ. ಕನ್ನಡ ಚಿತ್ರರಂಗದಲ್ಲಿಯೇ ಇದು ಹೊಸ ಪ್ರಯೋಗ. ಈ ಸಿನಿಮಾ ಭವಿಷ್ಯದಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ ಸಿನಿಮಾ ಮಾಡುವವರಿಗೆ ಹೊಸ ದಾರಿಯನ್ನು ತೆರೆದಿಡುತ್ತೆ. ಸಿನಿಮಾ ದೃಶ್ಯಗಳಿಗೆ ಎಐ ತಂತ್ರಜ್ಞಾನ ಬಳಸಿದರೆ, ಆಡಿಯೋ ಪ್ರೊಡಕ್ಷನ್ ಸಂಪೂರ್ಣವಾಗಿ ಮ್ಯಾನುಯಲ್ ಆಗಿದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧೈರ್ಯವಾಗಿ ನಿಂತ ರಾಣಿ ಚೆನ್ನಮ್ಮನ ಹೋರಾಟವು ಇಂದಿಗೂ ಪ್ರೇರಣೆಯಾಗಿದ್ದು, ಈ ಸಿನಿಮಾವು ಹೊಸ ತಂತ್ರಜ್ಞಾನದ ಮೂಲಕ ಜೀವಂತಗೊಳಿಸುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ.


Click it and Unblock the Notifications
