'ಕಾಂತಾರ' ದೃಶ್ಯವನ್ನು ಅಣಕಿಸಿದ ವಿವಾದ; ವಿಷಾದ ವ್ಯಕ್ತಪಡಿಸಿ ಪರಿಷ್ಕೃತ ಅಫಿಡವಿಟ್ ಸಲ್ಲಿಸಿದ ರಣ್‌ವೀರ್ ಸಿಂಗ್
ಬಾಲಿವುಡ್ ನಟ ರಣ್‌ವೀರ್ ಸಿಂಗ್ 'ಧುರಂಧರ್ 2' ಸಿನಿಮಾದ ಯಶಸ್ಸಿನ ಗುಂಗಿನಲ್ಲಿ ಇದ್ದಾರೆ. ಅದೇ ಇನ್ನೊಂದು ಕಡೆ ಗೋವಾದ ಇವೆಂಟ್‌ನಲ್ಲಿ ಕಾಂತಾರದ ದೃಶ್ಯವನ್ನು ಅಣಕಿಸಿದ ವಿವಾದ ಕೋರ್ಟ್‌ನಲ್ಲಿದೆ. ಇಂದು (ಏಪ್ರಿಲ್ 10) ಕರ್ನಾಟಕದ ಹೈಕೋರ್ಟ್‌ನಲ್ಲಿ ಈ ಸಂಬಂಧ ವಿಚಾರಣೆ ನಡೆದಿದ್ದು, ರಣ್‌ವೀರ್ ಸಿಂಗ್ ತಮ್ಮ ಹೇಳಿಕೆಗಳ ಬಗ್ಗೆ ಪರಿಷ್ಕೃತ ಕ್ಷಮಾದಾನ ಅಫಿಡವಿಟ್ ಸಲ್ಲಿಸಲು ಮುಂದಾಗಿದ್ದಾರೆಂದು ವರದಿಯಾಗಿದೆ.
ಬಾರ್ ಅಂಡ್ ಬೆಂಚ್ ವರದಿ ಮಾಡಿದ್ದಂತೆ, ರಣ್‌ವೀರ್ ಸಿಂಗ್ ಪರ ವಕೀಲರಾದ ಸಜನ್ ಪೂವಯ್ಯ ಹೈಕೋರ್ಟ್ ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿಸಿದ್ದು, ಈ ವಿವಾದದ ಬಗ್ಗೆ ನಟ ವಿಷಾದವನ್ನು ವ್ಯಕ್ತಪಡಿಸಿದ ಅಫಿಡವಿಟ್ ಸಲ್ಲಿಸಿದ್ದಾರೆಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಅಗತ್ಯ ಬಿದ್ದಲ್ಲಿ ಅದರ ಪರಿಷ್ಕೃತ ಆವೃತ್ತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಕ್ಕೆ ರಣ್‌ವೀರ್ ಸಿಂಗ್ ಸಿದ್ಧರಿದ್ದಾರೆಂದು ಸ್ಷಷ್ಟಪಡಿಸಿದ್ದಾರೆ.

ರಣ್‌ವೀರ್ ಸಿಂಗ್ ಗೋವಾದಲ್ಲಿ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ರಿಷಬ್ ಶೆಟ್ಟಿಯನ್ನು ಹೊಗಳುವ ಭರಾಟೆಯಲ್ಲಿ ಕರಾವಳಿ ಭಾಗದ ದೈವ ಚಾಮುಂಡಿ ದೇವಿಯನ್ನು ಅಣಕಿಸಿದ್ದರು. ಇದು ವಿವಾದವನ್ನು ಸೃಷ್ಟಿಯಾಗಿತ್ತು. ಬಳಿಕ ರಣ್‌ವೀರ್ ಸಿಂಗ್ ಈ ವರ್ತನೆಯನ್ನು ಖಂಡಿಸಿ, ಪ್ರಶಾಂತ್ ಮೇಥಲ್ ಎಂಬುವವರು ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ್ದರು. ಅಲ್ಲಿಂದ ಈ ಕೇಸ್ ಗಮನ ಸೆಳೆದಿದೆ.
ಹೈಕೋರ್ಟ್ ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರ ಎದುರು ನಡೆದ ವಿಚಾರಣೆ ವೇಳೆ ರಣ್‌ವೀರ್ ಸಿಂಗ್ ಪರ ವಕೀಲರಾದ ಸಜನ್ ಪೂವಯ್ಯ ಕೆಲವು ಅಂಶಗಳನ್ನು ಮುಂದಿಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಣ್‌ವೀರ್ ಸಿಂಗ್ ಈಗಾಗಲೇ ವಿಷಾದವನ್ನು ವ್ಯಕ್ತಪಡಿಸಿ ಅಫಿಡವಿಟ್ ಅನ್ನು ಸಲ್ಲಿಸಿದ್ದಾರೆ. ಜೊತೆಗೆ ಇನ್ನೂ ಅಗತ್ಯ ಬಿದ್ದಲ್ಲಿ ಅಫಿಡವಿಟ್‌ನ ಪರಿಷ್ಕೃತ ಆವೃತ್ತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ದರಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಗೋವಾದಲ್ಲಿ ಕೊಟ್ಟ ಹೇಳಿಕೆಯಿಂದ ದೇವಿಯ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬುದು ಆ ವೇಳೆ ಅರಿವಿಗೆ ಬಂದಿರಲಿಲ್ಲ. ಭಾರತದ ಎಲ್ಲಾ ಧರ್ಮವನ್ನು, ಸಂಪ್ರದಾಯವನ್ನು ಗೌರವಿಸುತ್ತೇನೆ. ತಾನು ಸಿಂಧಿ ಕುಟುಂಬದಲ್ಲಿ ಜನಿಸಿದ್ದಾರೆ. ಅಲ್ಲದೇ ಮುಂಬೈನಲ್ಲಿ ಬೆಳೆದಿದ್ದರಿಂದ ಪ್ರಾದೇಶಿಕ ಸೂಕ್ಷ್ಮತೆಗಳ ಬಗ್ಗೆ ತಮಗೆ ಅರಿವಿರಲಿಲ್ಲ ಎಂದು ರಣ್‌ವೀರ್ ಸಿಂಗ್ ತಮ್ಮ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ ಅತ್ಯಂತ ವಿಷಾದ ಹಾಗೂ ಬೇಷರತ್ ಕ್ಷಮೆಯನ್ನು ಕೇಳಿದ್ದಾರೆ ಎಂದು ಅವರ ಪರ ವಕೀಲರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

ಇಷ್ಟೇ ಅಲ್ಲದೆ ರಣ್‌ವೀರ್ ಸಿಂಗ್ ಚಾಮುಂಡಿ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆಯನ್ನು ಸಲ್ಲಿಸುವುದಾಗಿ ಭರವಸೆ ನೀಡಿರುವುದನ್ನು ನ್ಯಾಯಾಧೀಶರ ಗಮನಕ್ಕೆ ತಂದಿದ್ದಾರೆ. ಆದರೆ, ದೂರುದಾರ ಪ್ರಶಾಂತ್ ಮೇಥಲ್ ಅವರಿಗೆ ರಣ್‌ವೀರ್ ಸಿಂಗ್ ಸಲ್ಲಿಸಿದ ಅಫಿಡವಿಟ್ ಸಮಾಧಾನ ತಂದಿದ್ದಲ್ಲ. ರಣ್‌ವೀರ್ ಸಿಂಗ್ ಅಫಿಡವಿಟ್‌ನಲ್ಲಿ ಪ್ರಾಮಾಣಿಕ ಪಶ್ಚಾತ್ತಾಪವಿಲ್ಲ ಎಂದು ವಾದಿಸಿದ್ದಾರೆ. ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅಂದು ರಣ್‌ವೀರ್ ಸಿಂಗ್‌ಗೆ ಇಂತಹ ಮಾತುಗಳನ್ನು ಆಡದಂತೆ ಸಲಹೆ ನೀಡಿದ್ದರು. ಹೀಗಾಗಿ ಸೂಕ್ತವಾದ ಅಫಿಡವಿಟ್ ಸಲ್ಲಿಸುವಂತೆ ಅವರು ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.
ಇದಕ್ಕೆ ರಣ್‌ವೀರ್ ಸಿಂಗ್ ಪರ ವಕೀಲರಾದ ಸಜನ್ ಪೂವಯ್ಯ ಪ್ರತಿಕ್ರಿಯಿಸಿದ್ದು, ಕ್ಷಮಾದಾನ ಕೇಳಿದ ಪದಗಳನ್ನು ಕುರಿತು ದೂರುದಾರದೊಂದಿಗೆ ಚರ್ಚೆ ಮಾಡಿ, ಪರಿಷ್ಕೃತ ಅಫಿಡವಿಟ್ ಸಲ್ಲಿಸಲು ಸಿದ್ಧರಿರುವುದಾಗಿ ತಿಳಿಸಿದರು. ಬೆಂಗಳೂರು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಈ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದ್ದಾರೆ.
ಇನ್ನು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಣವೀರ್ ಸಿಂಗ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆ ರಣ್‌ವೀರ್ ಸಿಂಗ್ 'ಕಾಂತಾರ' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನೀಡಿದ ಅಭಿನಯವನ್ನು ಪ್ರಶಂಸಿಸಿದ್ದರು. ಇದೇ ವೇಳೆ, ಚಾಮುಂಡಿ ದೇವಿಯ ಪಾತ್ರವನ್ನು "ಹೆಣ್ಣು ಭೂತ" ಎಂದು ಹೇಳಿ, ಸಿನಿಮಾದ ದೃಶ್ಯವೊಂದನ್ನು ಅಣಕಿಸಿದ್ದರು. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು.


Click it and Unblock the Notifications











