ಚಾಮುಂಡಿ ದೇವಿಯ ಮುಂದೆ ರಣ್‌ವೀರ್ ಸಿಂಗ್; ಆ 10 ನಿಮಿಷ ದೇವಸ್ಥಾನದಲ್ಲಿ ಏನೇನಾಯ್ತು?
ಕಳೆದ ಒಂದೂವರೆ ವರ್ಷದಿಂದ ಬಾಲಿವುಡ್ ನಟ ರಣ್‌ವೀರ್ ಸಿಂಗ್ ಚರ್ಚೆಯಲ್ಲಿದ್ದಾರೆ. ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ನಲ್ಲಿ ಕಾಂತಾರ ಸಿನಿಮಾದ ರಿಷಬ್ ಶೆಟ್ಟಿ ಪಾತ್ರವನ್ನು ಅಣಕಿಸಿ ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಈ ಸಂಬಂಧ ರಣ್‌ವೀರ್ ಸಿಂಗ್ ವಿರುದ್ಧ ದೂರನ್ನು ದಾಖಲಿಸಲಾಗಿತ್ತು. ಇದು ಕರ್ನಾಟಕದ ಹೈಕೋರ್ಟ್ ಮೆಟ್ಟಿಲನ್ನು ಏರಿತ್ತು. ಕೆಲವು ದಿನಗಳ ಹಿಂದಷ್ಟೇ ರಣ್‌ವೀರ್ ಸಿಂಗ್ ಹೈ ಕೋರ್ಟ್‌ಗೆ ಚಾಮುಂಡೇಶ್ವರಿ ದೇವಿಯ ಬಳಿ ಕ್ಷಮೆ ಕೇಳುವುದಾಗಿ ಮನವಿ ಸಲ್ಲಿಸಿದ್ದರು.
ರಣ್‌ವೀರ್ ಸಿಂಗ್ ಮನವಿಯ ಮೇರೆಗೆ ಹೈಕೋರ್ಟ್ ಅವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ರದ್ದು ಮಾಡಿತ್ತು. ಅಲ್ಲದೇ ನಾಲ್ಕು ವಾರಗಳ ಒಳಗೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವಿಯ ಮುಂದೆ ಕ್ಷಮೆಯನ್ನು ಕೇಳುವಂತೆ ಸೂಚಿಸಿತ್ತು. ಇದೇ ವೇಳೆ 'ಡಾನ್ 3' ಸಿನಿಮಾ ವಿವಾದಕ್ಕೆ ಸಂಬಂಧಿಸಿದಂತೆ ಬ್ಯಾನ್‌ಗೆ ಒಳಗಾದ ಸುದ್ದಿ ಸಂಚಲನ ಸೃಷ್ಟಿಸಿತ್ತು.

ಇದೇ ಸಮಯದಲ್ಲಿ ರಣ್‌ವೀರ್ ಸಿಂಗ್ ದಿಢೀರನೇ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ವಿಸಿಟ್ ಹಾಕಿದ್ದಾರೆ. ಯಾರಿಗೂ ಮಾಹಿತಿ ನೀಡದೆ, ಬೆಳ್ಳಂಬೆಳಗ್ಗೆ 7.45ರ ಸುಮಾರಿಗೆ ದೇವಸ್ಥಾನಕ್ಕೆ ಬಂದು ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದಿದ್ದಾರೆ. 10 ನಿಮಿಷಗಳ ಕಾಲ ದೇವಿಯ ಮುಂದೆ ಕೂತಿದ್ದ ರಣ್‌ವೀರ್ ಸಿಂಗ್ ಏನೆಲ್ಲ ಮಾಡಿದರು ಅನ್ನೋದನ್ನು ದೇವಸ್ಥಾನದ ಅರ್ಚಕರು ವಿವರಿಸಿದ್ದಾರೆ.
ಬೆಳಗ್ಗೆ 7.45ಕ್ಕೆ ದೇವಸ್ಥಾನಕ್ಕೆ ಭೇಟಿ
ರಣ್‌ವೀರ್ ಸಿಂಗ್ 'ಧುರಂಧರ್' ಸೀಕ್ವೆಲ್‌ಗಳ ಮೂಲಕ ಬಾಲಿವುಡ್ ಬಾಕ್ಸಾಫೀಸ್ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ರಣ್‌ವೀರ್ ಈಗ ಟಾಪ್ ಹೀರೋ ಆಗಿ ಹೊರ ಹೊಮ್ಮಿದ್ದಾರೆ. ಈ ಮಧ್ಯೆ ವಿವಾದಗಳು ಕೂಡ ಅವರನ್ನು ಆವರಿಸಿಕೊಂಡಿದೆ. ಸದ್ಯ ಕೋರ್ಟ್ ಆದೇಶದ ಮೇರೆಗೆ ರಣ್‌ವೀರ್ ಸಿಂಗ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ಕೊಟ್ಟು ದೇವಿಯ ದರ್ಶನ್ ಪಡೆದು ಹೋಗಿದ್ದಾರೆ. ಅವರು ಜನರ ಕಣ್ಣು ತಪ್ಪಿಸಿ ಹೇಗೆ ಬಂದರು? ದೇವಸ್ಥಾನದ ಒಳಗೆ 10 ನಿಮಿಷಗಳು ಏನು ನಡೀತು ಅನ್ನೋದನ್ನು ಅರ್ಚಕರು ವಿವರಿಸಿದ್ದಾರೆ.
"7.45ಕ್ಕೆ ದೇವಸ್ಥಾನಕ್ಕೆ ಬಂದಿದ್ದರು. ಯಾರಿಗೂ ಗೊತ್ತಾಗದ ಹಾಗೆ ಮಾಸ್ಕ್ ಹಾಕೊಂಡು ಬಂದಿದ್ದರು. ಹೀಗಾಗಿ ಅವರನ್ನು ಯಾರಿಗೂ ಗುರುತಿಸುವುದಕ್ಕೆ ಗೊತ್ತಾಗಲಿಲ್ಲ. ಅವರು ಒಳಗಡೆ ಬಂದ ಮೇಲೆ ನಮಗೂ ಅವರು ರಣ್‌ವೀರ್ ಸಿಂಗ್ ಅಂತ ಗೊತ್ತಾಗಿದ್ದು. ಡೈರೆಕ್ಟ್ ಆಗಿ ಒಳಗೆ ಬಂದು ಕೂತಿದ್ರು. ಅವರೊಂದಿಗೆ ಇನ್ನೂ ಇಬ್ಬರು ಜೊತೆಯಲ್ಲಿ ಬಂದಿದ್ದರು. ಅರ್ಚನೆ ಎಲ್ಲಾ ಮಾಡಿ ಪ್ರಸಾದ ಕೊಟ್ಟು ಕಳುಹಿಸಿದ್ವಿ ಅಷ್ಟೇ." ಎಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ಹೇಳಿದ್ದಾರೆ.

10 ನಿಮಿಷದ ವಿಸಿಟ್
ರಣ್‌ವೀರ್ ಸಿಂಗ್ ದೇವಸ್ಥಾನದ ಒಳಗೆ 10 ನಿಮಿಷ ಇದ್ದರು. ಯಾರೊಂದಿಗೂ ಒಂದೂ ಮಾತು ಆಡಿಲ್ಲ. "ಅವರ ಪೋಷಕರ ಹೆಸರಲ್ಲಿ ಪೂಜೆ ಮಾಡಿಸಿದರು ಅನಿಸುತ್ತೆ. ಒಂದು 10 ನಿಮಿಷ ಪ್ರಾರ್ಥನೆ ಮಾಡಿದರು. ಅವರು ಎರಡು ಮಾತು ಕೂಡ ಆಡಲಿಲ್ಲ. ಹಣ್ಣು, ಕಾಯಿ ತಂದಿದ್ದರು. ಪೂಜೆ ಮಾಡಿಕೊಂಡು ಹೋದರು. ಕ್ಷಮೆ ಕೇಳಿದ್ದರ ಬಗ್ಗೆ ಏನೂ ಗೊತ್ತಿಲ್ಲ. 5-10 ನಿಮಿಷ ಕೂತಿದ್ದರು. ಅದರಲ್ಲಿ ಏನಾದರೂ ಪ್ರಾರ್ಥನೆ ಮಾಡಿರಬಹುದು ಅಷ್ಟೇ. ಅವರು ಮಾಸ್ಕ್ ತೆಗೆದ ಬಳಿಕವೇ ನಮಗೆ ಅವರು ಅಂತ ಗೊತ್ತಾಗಿದ್ದು." ಎನ್ನುತ್ತಾರೆ ಅರ್ಚಕರು.
ತಾಯಿ ಕ್ಷಮಿಸಬಹುದು
ರಣ್‌ವೀರ್ ಸಿಂಗ್ ಯಶಸ್ಸಿನ ಉತ್ತುಂಗದಲ್ಲಿ ಇದ್ದರೂ, ವಿವಾದಗಳು ಅವರನ್ನು ಬಿಟ್ಟಿಲ್ಲ. ಸದ್ಯ ಕಾಂತಾರ ಮಿಮಿಕ್ರಿ ವಿವಾದದಿಂದ ಹೊರ ಬಂದಿದ್ದು, ಚಾಮುಂಡಿ ದೇವಿಯ ಮುಂದೆ ಕ್ಷಮೆ ಕೇಳಿದ್ದಾರೆ. "ಚಾಮುಂಡೇಶ್ವರಿ ಶಕ್ತಿ ದೇವತೆ. ಯಾವುದೇ ರೀತಿ ತಪ್ಪು ಮಾಡಿದರೂ ಬಂದು ಕೇಳಿಕೊಂಡರೆ ತಾಯಿ ಕ್ಷಮಿಸುತ್ತಾಳೆ. ಅವರು ಕ್ಷಮೆ ಕೇಳುತ್ತೇನೆ ಅಂತ ಹೇಳಿದ್ರಲ್ಲ ಅದಕ್ಕೆ ಅವರು ಬಂದಿರಬಹುದೇನೋ ಗೊತ್ತಿಲ್ಲ. ಹೀಗಾಗಿ ತಾಯಿ ಕ್ಷಮಿಸಬಹುದು." ಎಂದು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕರು ಹೇಳಿದ್ದಾರೆ.


Click it and Unblock the Notifications
