ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಎರಡನೇ ಮದುವೆ, ಇಲ್ಲಿದೆ ಸತ್ಯಾಂಶ..!
ಸೊಸೈಟಿಯಲ್ಲಿ ಆಗಬಹುದಾದ ಸಡನ್ ಸುದ್ದಿಗಳಿಗೆ ಜನಸಾಮಾನ್ಯರು ಟಿವಿ, ನ್ಯೂಸ್ ಪೇಪರ್ ಗಳನ್ನು ನಂಬುವ ಕಾಲ ಮರೆಯಾಯ್ತು. ಅಂಗೈಲ್ಲಿರುವ ಮೊಬೈಲ್ ನಲ್ಲಿಯೇ ಎಲ್ಲ ಸುದ್ದಿಗಳು ಘಟಿಸಿದ ಕೆಲವೇ ಸೆಕೆಂಡುಗಳಲ್ಲಿ ತಲುಪಿಬಿಡುತ್ತದೆ. ಅಷ್ಟರಮಟ್ಟಿಗೆ ತಂತ್ರಜ್ಞಾನ ಬೆಳೆದು, ನೋಡುಗರೇ ನಿಬ್ಬೆರಗಾಗುವಂತೆ ಮಾಡುತ್ತಿದೆ.
ಇನ್ನು ಸೋಶಿಯಲ್ ಮೀಡಿಯಾವಂತೂ ಎಲ್ಲ ಮಾಧ್ಯಮಗಳನ್ನು ಸೈಡ್ ಗೆ ತಳ್ಳಿ ತನ್ನ ಕಬಂಧ ಬಾಹುವಿನಿಂದ ಆಕ್ರಮಿಸಿಕೊಂಡುಬಿಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟವಾಗುವ ಸುದ್ದಿಗಳು, ವಿಚಾರಗಳು ಸತ್ಯವೋ, ಸುಳ್ಳೋ ಎಂಬುದನ್ನು ಅರಿಯುವಷ್ಟರಲ್ಲಿ ಎಲ್ಲರಿಗೂ ಸುದ್ದಿಗಳು ಹರಡಿ ಮತ್ತಾವುದೋ ಪ್ರಮಾದವನ್ನು ಸೃಷ್ಟಿಸಿ ಬಿಟ್ಟಿರುತ್ತದೆ.ಇದಕ್ಕೆ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಅವರ ಕುರಿತು ಕೆಲ ದಿನಗಳ ಹಿಂದೆ ಹರಡಿದ ಸುದ್ದಿ ಮತ್ತೊಂದು ಉದಾಹರಣೆ.

ಹೌದು, ಕೆಲ ದಿನಗಳ ಹಿಂದೆ ಸಂಜನಾ ಆನಂದ್ ಅವರ ಕುರಿತು ಸುಳ್ಳು ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು. ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಜೊತೆ ಸಂಜನಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಅದು. ಇನ್ನು ಕೆಲವರು ನಿವೇದಿತಾ ಗೌಡ ಅವರಿಂದ ಚಂದನ್ ಶೆಟ್ಟಿ ದೂರವಾಗಲು, ಇಬ್ಬರ ದಾಂಪತ್ಯ ಮುರಿದು ಬೀಳಲು ಸಂಜನಾ ಆನಂದ್ ಅವರೇ ಕಾರಣ ಎಂಬ ಸುದ್ದಿಯನ್ನು ಕೂಡ ಹಬ್ಬಿಸಿದ್ದರು.
ಈ ಸುದ್ದಿಗಳಿಗೆ ತಕ್ಷಣವೇ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದರು. ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದರು. ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದರು.
ಆದರೂ ಕೂಡ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿ ಅವರ ಕುರಿತ ಈ ಸುಳ್ಳು ಸುದ್ದಿ ಇವತ್ತು ಕೂಡ ಚಾಲ್ತಿಯಲ್ಲಿದೆ. ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ಅವರಿಗೆ ಹೋದಲ್ಲಿ ಬಂದಲ್ಲಿ ನಿಮ್ಮ ಇಬ್ಬರ ಲವ್ ಸ್ಟೋರಿಯ ಕುರಿತು ಚೂರು ಹೇಳಿ ಎನ್ನುವ ಪ್ರಶ್ನೆಯನ್ನು ಕೂಡ ಕೇಳಲಾಗುತ್ತಿದೆ. ಹೀಗಾಗಿಯೇ ಇದೆಲ್ಲದರಿಂದ ಬೇಸತ್ತಿರುವ ಚಂದನ್ ಮತ್ತು ಸಂಜನಾ ಈಗ ಇನ್ನೊಮ್ಮೆ ಸ್ಪಷ್ಟೀಕರಣವನ್ನು ನೀಡಿದ್ದಾರೆ.
ಹೌದು, ಅಸಲಿಗೆ ನಿವೇದಿತಾ ಗೌಡ ಅವರಿಂದ ದೂರವಾಗಿರುವ ಚಂದನ್ ಶೆಟ್ಟಿ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಇದ್ದಾರೆ. ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದಾರೆ. ಚಂದನ್ ಮತ್ತು ಸಂಜನಾ ಆನಂದ್ ಅವರ ಈ ಹಾಡು ಒಂದು ವರ್ಷದ ಹಿಂದೆಯೇ ಯೂಟ್ಯೂಬ್‌ನಲ್ಲಿ ಬಿಡುಗಡೆಯೂ ಆಗಿದೆ.
ಸಂಜನಾ ಆನಂದ್ ಜೊತೆ ನಿಜಕ್ಕೂ ಮದುವೆಯಾಗುತ್ತಿದ್ದಾರಾ ಚಂದನ್ ಶೆಟ್ಟಿ ? ಸತ್ಯಾಂಶ ಇಲ್ಲಿದೆ...!
ಸದ್ಯ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಈ ಚಿತ್ರದ ಪ್ರಚಾರಕ್ಕೆ ಚಾಲನೆಯನ್ನು ನೀಡಲಾಗಿದೆ. ಈ ಹಿನ್ನೆಲೆ ಮಾಧ್ಯಮದವರ ಮುಂದೆ ಬಂದಿದ್ದ ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ತಮ್ಮ ಬಗ್ಗೆ ಹರಡಿರುವ ಸುಳ್ಳು ಸುದ್ದಿಯ ಕುರಿತು ಇನ್ನೊಮ್ಮೆ ಮಾತನಾಡಿದ್ದಾರೆ. ಅಂತೆ-ಕಂತೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಚಂದನ್ ಶೆಟ್ಟಿ, ಈ ಚಿತ್ರಕ್ಕೋಸ್ಕರ ನಾನು ಸಂಜನಾ ಆನಂದ್ ಅವರ ಜೊತೆ ಡ್ಯಾಶ್ ಸಾಂಗ್ ಮಾಡಿದೆ. ಆದರೆ ಆ ನಂತರ ನನ್ನ ಜೀವನದಲ್ಲಿ ಏನೇನೋ ಆಗಿ ಹೋಯ್ತು ಎಂದು ಹೇಳಿದ್ದಾರೆ. ನಾನು ಮತ್ತು ಸಂಜನಾ ಮದುವೆ ಆಗುತ್ತೇವೆ ಎಂದು ಎಲ್ಲರು ಮಾತನಾಡಲು ಶುರು ಮಾಡಿದರು. ಸುದ್ದಿ ವೈರಲ್ ಆಯ್ತು ಎಂದು ಹೇಳಿರುವ ಚಂದನ್ ಶೆಟ್ಟಿ ನನ್ನ ಪರಿಚಯದವರೊಬ್ಬರು ನನಗೆ ಕರೆ ಮಾಡಿ ಸಂಜನಾ ಆನಂದ್ ಜೊತೆ ನಿನ್ನ ಮದುವೆಯಂತೆ ಎಂದೆಲ್ಲ ಕೇಳಲು ಶುರು ಮಾಡಿದರು ಎಂದು ಹೇಳಿದ್ದಾರೆ. ಮುಂದುವರೆದು ನನ್ನ ಮದುವೆಯ ಬಗ್ಗೆ ನನಗೆ ಗೊತ್ತಿರಲಿಲ್ಲ, ಅದ್ಹೇಗೆ ಎಲ್ಲರು ಗೊತ್ತಾಯ್ತು ಎಂದು ನನಗೂ ಗೊತ್ತಾಗಲಿಲ್ಲ ಎಂದು ಹೇಳಿರುವ ಚಂದನ್ ಶೆಟ್ಟಿ ನಮ್ಮ ನಡುವೆ ಆ ರೀತಿಯ ವಿಷಯ ಏನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಚಂದನ್ ಶೆಟ್ಟಿ ಅವರ ಮನವಿಯ ಮೇರೆಗೆ ಈ ವಿಚಾರದ ಕುರಿತು ಸಂಜನಾ ಆನಂದ್ ಕೂಡ ಮಾತನಾಡಿದ್ದು ಮಾಧ್ಯಮದವರಿಂದ, ಚಿತ್ರರಂಗದಿಂದ ಸ್ನೇಹಿತರಿಂದ ಇಷ್ಟೇ ಯಾಕೆ ಸಂಬಂಧಿಕರಿಂದ ಕೂಡ ಈ ಕುರಿತು ನನಗೆ ಪ್ರಶ್ನೆಯನ್ನು ಕೇಳಲಾಗುತ್ತಿತ್ತು, ಹೀಗಾಗಿ ಇನ್ನೊಮ್ಮೆ ಸ್ಪಷ್ಟೀಕರಣ ಕೊಡುತ್ತಿದ್ದೇನೆ ಎಂದು ಹೇಳಿದ್ದಾರೆ. ನಮ್ಮ ನಡುವೆ ಆ ರೀತಿಯ ಸಂಬಂಧವೇನು ಇಲ್ಲ, ಚಂದನ್ ಮತ್ತು ನಾನು ಕೇವಲ ಸ್ನೇಹಿತರಷ್ಟೇ ಒಂದರ್ಥದಲ್ಲಿ ನನಗೆ ಅಣ್ಣ ಇದ್ದಂತೆ ಎಂದು ಕೂಡ ಸಂಜನಾ ಆನಂದ್ ಹೇಳಿದ್ದಾರೆ. ಅಣ್ಣ ಎಂದು ಸಂಜನಾ ಆನಂದ್ ವೇದಿಕೆಯಲ್ಲಿ ಹೇಳಿದ ತಕ್ಷಣ ಚಂದನ್ ಶೆಟ್ಟಿ ಅವರ ಮುಖ ಬಾಡಿ ಹೋಯ್ತು ಎನ್ನುವುದು ಬೇರೆ ವಿಚಾರ.
ಅಂದ್ಹಾಗೇ ಚಂದನ್ ಶೆಟ್ಟಿ ಜೊತೆ ಮದುವೆಯ ವದಂತಿ ಕುರಿತು ಈ ವರ್ಷದ ಆರಂಭದಲ್ಲಿ 'ಫಿಲ್ಮಿಬೀಟ್ ಕನ್ನಡ'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಸಂಜನಾ ಆನಂದ್, ಕೆಲವರು ಎಐ ತಂತ್ರಜ್ಞಾನದ ಸಹಾಯದಿಂದ ನಮ್ಮಿಬ್ಬರಿಗೆ ಮದುವೆಯ ಪೋಷಾಕನ್ನು ಕೂಡ ತೋಡಿಸಿದ್ದರು ಫೋಟೊಗಳನ್ನು ವೈರಲ್ ಮಾಡಿದ್ದರು ಎಂದು ಹೇಳಿದ್ದರು. ಮಂಗಳೂರಿನಲ್ಲಿ ನಮ್ಮಿಬ್ಬರ ಮದುವೆ ನಡೆಯಲಿದೆ ಎಂದು ಕೂಡ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು.
ಹೀಗೆ ನನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳು ಬಂದಾಗ ನಾನು ತಲೆ ಕೆಡಿಸಿಕೊಂಡಿರಲಿಲ್ಲ ಆದರೆ ಅದ್ಯಾವಾಗ ಸಂಬಂಧಿಕರೆಲ್ಲ ನನಗೆ ಕರೆ ಮಾಡಲು ಶುರು ಮಾಡಿ ಚಂದನ್ ಶೆಟ್ಟಿ ಜೊತೆ ಮದುವೆಯಾಗ್ತಿದೀಯಾ ಅಂತೆ ನಮಗೆಲ್ಲ ಕರಿಲೇ ಇಲ್ಲ ಎಂದು ಕೇಳತೊಡಗಿದಾಗ ನನಗೆ ಚೂರು ಗಾಬರಿಯಾಯಿತು ಎಂದು ಹೇಳಿದ್ದ ಸಂಜನಾ ಆನಂದ್ ಈ ಕಾರಣಕ್ಕೆ ಸುಮ್ಮನೆ ಇದ್ದರೆ ಇದೆಲ್ಲ ಇನ್ನೂ ಹೆಚ್ಚಾಗುತ್ತೆ ಎಂದು ನಾನು ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ, ಈಗಲೂ ಕೂಡ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಹೇಳಿದ್ದರು.
ಇನ್ನುಳಿದಂತೆ ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಸದ್ಯಕ್ಕೆ ಬ್ಯಾಚುಲರ್ ಜೀವನವನ್ನೂ ಎಂಜಾಯ್ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನ, ಹಾಡು, ಅಭಿನಯ ಎಂದು ಬ್ಯುಸಿಯಾಗಿದ್ದಾರೆ. ಸಂಜನಾ ಆನಂದ್ ಕೂಡ ತಮ್ಮನ್ನು ತಾವು ಚಿತ್ರರಂಗದಲ್ಲಿ ತೋಡಗಿಸಿಕೊಂಡಿದ್ದಾರೆ. ಹಯಗ್ರೀವ, ಮುಧೋಳ್ ಸೇರಿ ಕೆಲ ಚಿತ್ರಗಳಿಗೆ ಬಣ್ಣವನ್ನು ಹಚ್ಚಿದ್ದಾರೆ. ಆ ಕಡೆ ನಿವೇದಿತಾ ಗೌಡ ಅವರ ವಿಚಾರ ಎಲ್ಲರಿಗೆ ಗೊತ್ತೇ ಇದೆ.
ಒಟ್ನಲ್ಲಿ ಸದ್ಯ ಚಂದನ್ ಶೆಟ್ಟಿ ಮತ್ತು ಸಂಜನಾ ಆನಂದ್ ತಮ್ಮ ಮದ್ವೆಯ ಕುರಿತು ಹಬ್ಬಿರುವ ಸುದ್ದಿಯನ್ನು ಸುಳ್ಳು ಎಂದು ಹೇಳಿದ್ದಾರೆ. ಸುದ್ದಿಯನ್ನು ಅಲ್ಲಗೆಳೆದಿದ್ದಾರೆ. ಸೂತ್ರಧಾರಿ ಚಿತ್ರದಲ್ಲಿ ಹಾಡೊಂದರಲ್ಲಿ ಇಬ್ಬರು ಹೆಜ್ಜೆ ಹಾಕಿದ್ದು ಈ ಚಿತ್ರದಲ್ಲಿ ಚಂದನ್ ಎದುರು ನಾಯಕಿಯ ಪಾತ್ರಕ್ಕೆ ಅಪೂರ್ವ ಬಣ್ಣ ಹಚ್ಚಿದ್ದಾರೆ. ಕಿರಣ್ ಕುಮಾರ್ ನಿರ್ದೇಶನವಿರುವ ಈ ಚಿತ್ರವನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ಖುದ್ದು ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತವನ್ನು ಕೂಡ ನೀಡಿದ್ದಾರೆ.


Click it and Unblock the Notifications











