ರಶ್ಮಿಕಾ ಮಂದಣ್ಣ ಮೊದಲ ಆಡಿಷನ್ ವಿಡಿಯೋ ವೈರಲ್;ಕನ್ನಡ ಮಾತಾಡಲು ಹರಸಾಹಸ..ಆ ಸಿನಿಮಾ ಯಾವುದು?
ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದ ಸಿನಿಮಾ ಜೀವನ ಆರಂಭಿಸಿದ್ದರೂ, ಪರಭಾಷೆಯಲ್ಲಿಯೇ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಹಿಂದಿ ಅಂತ ಸಿಕ್ಕಾ ಪಟ್ಟೆ ಬ್ಯುಸಿಯಾಗಿದ್ದಾರೆ. ಈಗ ಸಲ್ಮಾನ್ ಖಾನ್ ಜೊತೆ ನಟಿಸುವುದಕ್ಕೂ ಆಫರ್ ಬಂದಿದೆ. 'ಅನಿಮಲ್', 'ಪುಷ್ಪ'ದಂತಹ ಬ್ಲಾಕ್ ಬಸ್ಟರ್ ಸಿನಿಮಾ ಕೊಟ್ಟ ಮೇಲೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೇ ಹೆಚ್ಚಾಗಿ ನಟಿಸುತ್ತಿದ್ದಾರೆ.
ಕರ್ನಾಟಕದ ಹುಡುಗಿಯೊಬ್ಬಳು ಈ ಮಟ್ಟಿಗೆ ಬೆಳೆಯಬಹುದೆಂದು ಇದೇ ಎಂಟು ವರ್ಷಗಳ ಹಿಂದೆ ಯಾರೂ ಊಹಿಸಿರಲಿಲ್ಲ. ಒಂದೇ ಒಂದು ಸಿನಿಮಾ ರಶ್ಮಿಕಾ ಮಂದಣ್ಣರನ್ನು ಸೂಪರ್‌ಸ್ಟಾರ್ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಆದರೆ, ಒಂದು ಕಾಲದಲ್ಲಿ ರಶ್ಮಿಕಾ ಮಂದಣ್ಣ ಕನ್ನಡದ ಸಿನಿಮಾಗಳಿಗೆ ಆಡಿಷನ್ ಕೊಡುತ್ತಿದ್ದ ಕಾಲವಿತ್ತು. ರಶ್ಮಿಕಾ ಮೊದಲ ಆಡಿಷನ್ ಕೊಟ್ಟಾಗ ಕೇವಲ 19 ವರ್ಷ.

ರಕ್ಷಿತ್ ಶೆಟ್ಟಿ ನಟಿಸಿದ 'ಕಿರಿಕ್ ಪಾರ್ಟಿ' ಸಿನಿಮಾಗೆ ಆಡಿಷನ್ ಕೊಡುವುದಕ್ಕೂ ಮುನ್ನ ಸಾಕಷ್ಟು ಸಿನಿಮಾಗಳಿಗೆ ಆಡಿಷನ್ ಕೊಟ್ಟಿದ್ದರು. ಈಗ ಕಿರಿಕ್ ಪಾರ್ಟಿಗೂ ಮುನ್ನ ರಶ್ಮಿಕಾ ಆಡಿಷನ್ ಕೊಟ್ಟಿದ್ದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಪುನೀತ್ ರಾಜ್‌ಕುಮಾರ್ ಜೊತೆ ಅಂದೇ ನಟಿಸುತ್ತದ್ದರೇ ರಶ್ಮಿಕಾ? ಕನ್ನಡ ಮಾತಾಡಲು ಅಷ್ಟೊಂದು ಪರದಾಡಿದ್ದರೇ ರಶ್ಮಿಕಾ? ಈ ಬಗ್ಗೆ ಅಂದು ಆಡಿಷನ್ ಮಾಡಿದ ನಿರ್ದೇಶಕರೇ ಫಿಲ್ಮಿಬೀಟ್ ಕನ್ನಡಕ್ಕೆ ಮಾತು ನೀಡಿದ್ದಾರೆ.
ಇದೇ ಶುಕ್ರವಾರ (ಅಕ್ಟೋಬರ್ 4) ಹೊಸಬರ ಸಿನಿಮಾ 'ಗೋಪಿಲೋಲ' ರಿಲೀಸ್ ಆಗುತ್ತಿದೆ. ಆದರೆ, ಈ ಸಿನಿಮಾ 2016ರಲ್ಲಿ ನಿರ್ದೇಶಕ ಆ ರವೀಂದ್ರ ಶುರು ಮಾಡಿದ್ದರು. ಆ ವೇಳೆ ಹೊಸ ನಾಯಕಿಯರ ಹುಡುಕಾಟದಲ್ಲಿ ಇದ್ದರು. ಆಗ ರಶ್ಮಿಕಾ ಬಂದು ಆಡಿಷನ್ ಕೊಟ್ಟದ್ದರು. "ಗೋಪಿಲೋಲ ಅಂತ ಸಿನಿಮಾ ಅನೌನ್ಸ್ ಮಾಡಿ, ಹೊಸ ಕಲಾವಿದರನ್ನು ಹುಡುಕುತ್ತಿದ್ವಿ. ಅದಕ್ಕೆ ನಾವು ಎಲ್ಲಾ ಕಡೆನೂ ಪಬ್ಲಿಸಿಟಿ ಮಾಡಿದ್ವಿ. ಆ ಟೈಮ್‌ನಲ್ಲಿ ಒಂದಿಷ್ಟು ಕಲಾವಿದೆಯರು ಬಂದರು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಆಗ ಅವರಿಗೆ ಕನ್ನಡ ಸ್ಪಷ್ಟವಾಗಿ ಮಾತಾಡುವುದಕ್ಕೆ ಬರುತ್ತಿರಲಿಲ್ಲ. ಆಗ ನಾವು ನೀವು ಡ್ಯಾನ್ಸ್ ಚೆನ್ನಾಗಿ ಮಾಡುತ್ತೀರ. ಗುಡ್ ಲುಕ್ಕಿಂಗ್ ಇದೆ. ನಿಮ್ಮ ಕಡೆಯಿಂದ ಪರ್ಫಾಮೆನ್ಸ್ ಮಾಡಿಸಬಹುದು. ನೀವು ಕನ್ನಡ ಸ್ವಲ್ಪ ಕಲೀರಿ ಅಂತ ಹೇಳಿ ಸ್ವಲ್ಪ ಟೈಮ್ ಕೊಟ್ಟಿದ್ವಿ" ಎಂದು ಆರ್. ರವೀಂದ್ರ ಫಿಲ್ಮಿಬೀಟ್ ಕನ್ನಡಕ್ಕೆ ಮಹಿತಿ ನೀಡಿದ್ದಾರೆ.
'ಗೋಪಿಲೋಲ' ಸಿನಿಮಾ ಪುನೀತ್ ರಾಜ್‌ಕುಮಾರ್ ಅವರನ್ನು ಹಾಕೊಂಡು ಸಿನಿಮಾ ಮಾಡಬೇಕು ಅಂತಿದ್ದರು. ಇದೊಂದು ಸಾವಯವ ಕೃಷಿಯನ್ನು ಆಧರಿಸಿದ ಸಿನಿಮಾ ಆಗಿದ್ದು, ಒಂದೊಳ್ಳೆ ಸಂದೇಶವಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಜೊತೆ ಸಿನಿಮಾ ಆಗಲೇ ಇಲ್ಲ. "ಈ ಸಿನಿಮಾ ಬಿಗ್ ಬಜೆಟ್ ಆಗಿತ್ತು. ಈ ಪಿಕ್ಚರ್‌ಗಾಗಿ ನಮ್ಮ ಪ್ರಡ್ಯೂಸರ್ ಅಪ್ಪು ಸರ್‌ಗೆ ಕಾಂಟ್ಯಾಕ್ಟ್ ಮಾಡಿದ್ದರು. ಆ ಟೈಮ್‌ನಲ್ಲಿ ಅಪ್ಪು ಸರ್ ತುಂಬಾ ಸಿನಿಮಾಗಳು ಇತ್ತು. ಇದನ್ನು ಸ್ವಲ್ಪ ಟೈಮ್ ತೆಗೆದುಕೊಂಡು ಮಾಡೋಣ. ಎರಡು ಮೂರು ವರ್ಷ ಕಾಯಿರಿ ಅಂತ ಹೇಳಿದ್ದರು. ಈ ಸಿನಿಮಾವನ್ನು ಅಪ್ಪು ಮತ್ತು ರಶ್ಮಿಕಾ ಮಂದಣ್ಣ ಮಾಡಬೇಕಿತ್ತು" ಎನ್ನುತ್ತಾರೆ ನಿರ್ದೇಶಕರು.
ಈ ಸಿನಿಮಾ ಪೋಸ್ಟ್‌ಪೋನ್ ಆದಾಗ ರಶ್ಮಿಕಾ ಮಂದಣ್ಣ 'ಕಿರಿಕ್ ಪಾರ್ಟಿ'ಗೆ ಆಡಿಷನ್ ಕೊಟ್ಟಿದ್ದರು. ಆ ಸಿನಿಮಾಗೆ ಸೆಲೆಕ್ಟ್ ಕೂಡ ಆದರು. ಆಮೇಲೆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಇದರ ಹಿಂದೆನೇ ಸಿನಿಮಾ ಕೋವಿಡ್ ಬಂದಿದ್ದರಿಂದ 'ಗೋಪಿಲೋಲ' ನಿಂತಿತ್ತು. ಸಿನಿಮಾ ಶುರು ಮಾಡಬೇಕು ಅಂದಾಗ ಪುನೀತ್ ರಾಜ್‌ಕುಮಾರ್ ಅಗಲಿದ್ದರಿಂದ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ದೇಶಕ ಆರ್. ರವೀಂದ್ರ ಮುಂದಾಗಿದ್ದರು.
'ಗೋಪಿಲೋಲ' ಸಿನಿಮಾ ಆಡಿಷನ್ ಕೊಡುವಾಗ ರಶ್ಮಿಕಾ ಮಂದಣ್ಣಗೆ ಕನ್ನಡ ಮಾತಾಡುವುದಕ್ಕೆ ಬರುತ್ತಿರಲಿಲ್ಲ. ಆ ವೇಳೆ ಇವರು ಇಷ್ಟು ದೊಡ್ಡ ನಟಿ ಆಗುತ್ತಾರೆ ಅಂತಾನೂ ಅಂದುಕೊಂಡಿರಲಿಲ್ಲ ಎಂದು ನಿರ್ದೇಶಕ ಆರ್ ರವೀಂದ್ರ ಹೇಳುತ್ತಾರೆ. "ಅವರು ಆಡಿಷನ್‌ಗೆ ಬಂದಾಗ ಈ ಮಟ್ಟಕ್ಕೆ ಬೆಳೆಯುತ್ತಾರೆ ಅಂತ ಅಂದುಕೊಂಡಿರಲೇ ಇಲ್ಲ. ಆ ವಿಡಿಯೋ ಶೂಟ್ ಮಾಡಿದ್ದೂ ನಾವೇ. ಒಂದು ಕಾಲೇಜ್ ಹುಡುಗಿ ತರ ಬಂದರು. ನನಗೆ ತುಂಬಾ ಇಂಟ್ರೆಸ್ಟ್ ಇದೆ. ನಾನು ಏನನ್ನೂ ಎಕ್ಸ್‌ಪೆಕ್ಟ್ ಮಾಡಲ್ಲ ಅಂತ ಹೇಳಿದ್ದರು. ಒಂದು ರೂಪಾಯಿಯನ್ನು ತೆಗೆದುಕೊಳ್ಳಲ್ಲ ಈ ಸಿನಿಮಾ ಮಾಡುತ್ತೇನೆ ಅಂದಿದ್ದರು. ಫೀಮೇಲ್ ರೋಲ್‌ಗೆ ಅಷ್ಟು ಪ್ರಾಮುಖ್ಯತೆ ಇತ್ತು" ಎನ್ನುತ್ತಾರೆ.


Click it and Unblock the Notifications











