ಕನ್ನಡ ಮಾತಾಡಲು ಪರದಾಟ, ಡಬ್ ಮಾಡಲು ಸಮಯವಿಲ್ಲ: ರಶ್ಮಿಕಾ ಮಂದಣ್ಣ ಯಾಕಿಂಗೆ?
ಕನ್ನಡ ನಟ-ನಟಿಯರು ಹೆಮ್ಮೆಯಿಂದ ಕನ್ನಡದಲ್ಲಿ ಮಾತಾಡದೆ ಹೋದರೆ ಹೇಗೆ? ತುಳಿದ ಹಾದಿಯನ್ನೇ ಮರೆಯಲು ಹೇಗೆ ಸಾಧ್ಯ? ಅದ್ಯಾಕೋ ಗೊತ್ತಿಲ್ಲ. ರಶ್ಮಿಕಾ ಮಂದಣ್ಣ ಕನ್ನಡದ ಬಗ್ಗೆ ತಾತ್ಸಾರ ಮನೋಭಾವ ಹೊಂದಿದ್ದಾರೆ ಅನ್ನುವುದು ಅವರೇ ಆಗಾಗಾ ಸಾಬೀತು ಮಾಡುತ್ತಲೇ ಇದ್ದಾರೆ. ಕನ್ನಡ ಸಿನಿಮಾದಿಂದಲೇ ವೃತ್ತಿ ಬದುಕು ಆರಂಭಿಸಿದ ನಟಿ ಕನ್ನಡದ ಬಗ್ಗೆ ಇಷ್ಟೊಂದು ಅಸಡ್ಡೆ ಯಾಕೆ? ಪ್ರಶ್ನೆ ಸಿನಿಪ್ರಿಯರಲ್ಲಿ ಮನೆ ಮಾಡಿದೆ.
ಇಂದು ( ಡಿಸೆಂಬರ್ 15) 'ಪುಷ್ಪ' ಸಿನಿಮಾದ ಪ್ರಚಾರಕ್ಕೆಂದು ರಶ್ಮಿಕಾ ಮಂದಣ್ಣ ಬೆಂಗಳೂರಿಗೆ ಬಂದಿದ್ದರು. ಕನ್ನಡ ಚಿತ್ರರಂಗವನ್ನು ಬಹುತೇಕ ಮರೆತಿರುವ ನಟಿ ಸಿನಿಮಾದ ಪ್ರಚಾರ ಮಾಡಿ, ಮತ್ತೆ ಹೈದರಾಬಾದಿಗೆ ಹಿಂತಿರುಗಿದ್ದಾರೆ. ಎರಡು ಮೂರು ಭಾಷೆಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಕನ್ನಡ ಮಾತಾಡುವುದಕ್ಕೆ ಯಾಕಿಷ್ಟು ಕಷ್ಟ ಪಡುತ್ತಾರೆ? ಬಾಲಿವುಡ್, ಟಾಲಿವುಡ್‌ಗೆ ಹೋದ ಕೂಡಲೇ ಕನ್ನಡ ಮರೆತು ಹೋಗುತ್ತಾ? ಕನ್ನಡ ಪ್ರೇಮಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡ ಮಾತಾಡಲು ಪರದಾಡಿದ ರಶ್ಮಿಕಾ
ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿದ್ದಕ್ಕೆ ಕನ್ನಡಿಗರು ಹೆಮ್ಮೆ ಪಡುತ್ತಿದ್ದಾರೆ. ಕನ್ನಡ ನಟಿಯೊಬ್ಬರು ಉತ್ತುಂಗಕ್ಕೆ ಏರಿರುವುದು ಕನ್ನಡ ಸಿನಿಪ್ರಿಯರಿಗೂ ಖುಷಿ ಇದೆ. ಅದೇ ರೀತಿ ಟಾಲಿವುಡ್, ಬಾಲಿವುಡ್‌ಗೆ ಹಾರಿದ ಮೇಲೆ ಸ್ಯಾಂಡಲ್‌ವುಡ್ ಅನ್ನೇ ಮರೆತು ಬಿಟ್ಟರು ಅನ್ನೋ ಆರೋಪವೂ ಇದೆ. ಈ ಮಧ್ಯೆ ಬೆಂಗಳೂರಿಗೆ 'ಪುಷ್ಪ' ಸಿನಿಮಾ ಪ್ರಚಾರಕ್ಕೆ ಬಂದಿದ್ದ ರಶ್ಮಿಕಾ ಕನ್ನಡದಲ್ಲೇ ಮಾತು ಆರಂಭಿಸಿದರೂ, ಶೇ.70ರಷ್ಟು ಆಂಗ್ಲ ಭಾಷೆಗಳು ಇದ್ದವು. ತಾಯಿ ನಾಡಿನಿಂದ ಕೊಂಚ ಸಮಯ ದೂರ ಉಳಿದ ಮಾತ್ರಕ್ಕೆ ಕನ್ನಡ ಮರೆತು ಹೋಗುತ್ತದೆಯೇ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ಕನ್ನಡದ ಡೈಲಾಗ್ ಹೇಳಿಲ್ಲ
'ಪುಷ್ಪ' ಸಿನಿಮಾದ ಟ್ರೈಲರ್‌ನಲ್ಲಿರುವ ಒಂದು ಡೈಲಾಗ್ ಹೇಳಿ ಅಂತ ನಿರೂಪಕಿ ಕೇಳಿದ್ದರು. ಹೋಗಲಿ ಅಂತ ಒಂದು ಡೈಲಾಗ್ ಅನ್ನೂ ಹೇಳಿಕೊಟ್ಟರು. ಆದರೂ ರಶ್ಮಿಕಾಗೆ ಆ ಡೈಲಾಗ್ ಹೇಳುವ ಮನಸ್ಸು ಮಾಡಿಲ್ಲ. " ತೆಲುಗಿನಲ್ಲಿ ಡಬ್ ಮಾಡಿ ಮಾಡಿ ನನಗೆ ಕನ್ನಡ ಕಷ್ಟ ಆಗುತ್ತಿದೆ ಅಂತ" ನಗುತ್ತಲೇ ಹೇಳಿದ್ದರು. 'ಪುಷ್ಪ' ಸಿನಿಮಾದ ವಿಲ ವಿಲ ಡೈಲಾಗ್ ಹೇಳಲು ವಿಲ ವಿಲ ಒದ್ದಾಡಿಬಿಟ್ಟರು ರಶ್ಮಿಕಾ ಮಂದಣ್ಣ.

ಸಿನಿಮಾಗೂ ಡಬ್ ಮಾಡಿಲ್ಲ ರಶ್ಮಿಕಾ
ವೇದಿಕೆ ಮೇಲಷ್ಟೇ ಡೈಲಾಗ್ ಹೇಳಲಿಲ್ಲ ಅಂದುಕೊಂಡರೆ ತಪ್ಪು. ರಶ್ಮಿಕಾ ಮಂದಣ್ಣ 'ಪುಷ್ಪ' ಸಿನಿಮಾದ ಕನ್ನಡ ಅವತರಣಿಗೂ ಡಬ್ ಮಾಡಿಲ್ಲ. "ಸಮಯದ ಅಭಾವದಿಂದ ಕನ್ನಡದಲ್ಲಿ ಡಬ್ ಮಾಡಿಲ್ಲ." ಎಂದು ಬೆಂಗಳೂರಿನಲ್ಲಿ ನಡೆದ 'ಪುಷ್ಪ' ಸಿನಿಮಾದ ಪ್ರಚಾರದ ವೇದಿಕೆ ಮೇಲೆ ಹೇಳಿದ್ದಾರೆ. ಹೀಗಾಗಿ ಕನ್ನಡದ ಮೇಲೆ ರಶ್ಮಿಕಾ ಮಂದಣ್ಣ ಇಟ್ಟಿರುವ ಅಭಿಮಾನದ ಬಗ್ಗೆ ಕನ್ನಡ ಸಿನಿಪ್ರಿಯರು ಜೋರಾಗಿ ಮಾತಾಡಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ನಟಿಸುವುದು ಅನುಮಾನ
ರಶ್ಮಿಕಾ ಮಂದಣ್ಣ ಆಸೆ ಬಹಳಷ್ಟಿದೆ. ಟಾಲಿವುಡ್‌ನಲ್ಲಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಬೇಕು. ಬಾಲಿವುಡ್‌ನಲ್ಲಿ ಸಿನಿಮಾಗಳಲ್ಲಿ ನಟಿಸಬೇಕು. ತಮಿಳರ ಮನೆ ಸೊಸೆಯಾಗಬೇಕು ಅಂತಿದೆ. ಹೀಗಾಗಿ ತೆಲುಗು, ತಮಿಳು ಹಾಗೂ ಬಾಲಿವುಡ್ ಸಿನಿಮಾಗಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಕನ್ನಡದ ಕಡೆ ಮುಖ ಮಾಡುವುದು ತೀರಾ ಅನುಮಾನ. ಎಲ್ಲಾ ಚಿತ್ರರಂಗಗಳು ಬಾಗಿಲು ಮುಚ್ಚಿದಾಗ ಸ್ಯಾಂಡಲ್‌ವುಡ್ ನೆನಪಾಗಬಹುದು ಅಂತ ಕನ್ನಡ ಪ್ರೇಮಿಗಳು ಮಾತಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











